ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮಸ್ಥರಿಂದ ಎಂಜಿನಿಯರ್‌ಗೆ ದಿಗ್ಬಂಧನ

ಜಗಳೂರು: ಕಾಮಗಾರಿ ಹಣ ದುರುಪಯೋಗ ಆರೋಪ
Last Updated 15 ಫೆಬ್ರುವರಿ 2017, 6:04 IST
ಅಕ್ಷರ ಗಾತ್ರ
ಜಗಳೂರು: ಕುಡಿಯುವ ನೀರು ಸರಬರಾಜು ಕಾಮಗಾರಿಯ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ತಾಲ್ಲೂಕಿನ ತಮಲೇಹಳ್ಳಿ ಗ್ರಾಮಸ್ಥರು ಗ್ರಾಮೀಣ ನೀರು ಸರಬರಾಜು ಇಲಾಖೆಯ ಎಂಜಿನಿಯರ್‌ ಮಹಾಂತೇಶ್‌ ನಾಯ್ಕ ಅವರನ್ನು ಕಚೇರಿಯಲ್ಲಿ ಕೂಡಿಹಾಕಿದ ಘಟನೆ ಮಂಗಳವಾರ ನಡೆದಿದೆ.
 
ಮಹಾಂತೇಶ್‌ ನಾಯ್ಕ ಅವರು ಗುತ್ತಿಗೆದಾರರೊಂದಿಗೆ ಶಾಮೀಲಾಗಿ ₹ 5 ಲಕ್ಷವನ್ನು ಅಕ್ರಮವಾಗಿ ಬಿಡುಗಡೆ ಮಾಡಿ ವಂಚಿಸಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
 
ತಮಲೇಹಳ್ಳಿ ಗ್ರಾಮದಲ್ಲಿ 2014–15ನೇ ಸಾಲಿನಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕಿರು ನೀರು ಸರಬರಾಜು ಯೋಜನೆಯಡಿ ₹ 5 ಲಕ್ಷ ವೆಚ್ಚದಲ್ಲಿ ಪೈಪ್‌ಲೈನ್‌ ಕಾಮಗಾರಿ ಕೈಗೊಳ್ಳಲಾಗಿತ್ತು. ಮಹಾಂತೇಶ್‌ ನಾಯ್ಕ ಅವರು ಗ್ರಾಮದ ಹನುಮಂತಪ್ಪ, ರಮೇಶ ಹಾಗೂ ರವಿ ಅವರಿಗೆ ಕಾಮಗಾರಿ ಕೈಗೊಳ್ಳುವಂತೆ ಸೂಚಿಸಿದ್ದರು.
 
ಅದರಂತೆ ಸಾಲ ಮಾಡಿ ಹಣ ತಂದು ಕಾಮಗಾರಿ ಕೈಗೊಳ್ಳಲಾಗಿತ್ತು. ಆದರೆ, ಮಹಾಂತೇಶ್‌ ಅವರು ಬಳಿಕ ತಮ್ಮ ಆಪ್ತ ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಅವರಿಗೆ ಹಣ ಬಿಡುಗಡೆ ಮಾಡಿದ್ದಾರೆ. ಕಾಮಗಾರಿ ಸಂಪೂರ್ಣವಾಗಿದ್ದು, ಇಡೀ ಗ್ರಾಮಕ್ಕೆ ನೀರು ಸರಬರಾಜು ಆಗುತ್ತಿದೆ. ಕಾಮಗಾರಿಗೆ ಖರ್ಚು ಮಾಡಿದ ಹಣ ವಾಪಾಸ್‌ ಕೊಡಿ ಎಂದು ಕೇಳಿದರೆ ಮೂರು ವರ್ಷಗಳಿಂದ ಸಬೂಬು ಹೇಳುತ್ತಿದ್ದಾರೆ. ಹಣ ಕೊಡುವವರೆಗೂ ಕಚೇರಿಯಿಂದ ಹೊರಗೆ ಹೋಗಲು ಬಿಡುವುದಿಲ್ಲ’ ಎಂದು ಗ್ರಾಮಸ್ಥರು ಪಟ್ಟುಹಿಡಿದಿದ್ದರು. 
 
‘ಕಳೆದ ಆರೇಳು ವರ್ಷಗಳಿಂದ ತಾಲ್ಲೂಕಿನಲ್ಲಿ ಬೇರು ಬಿಟ್ಟಿರುವ ಮಹಾಂತೇಶ್‌ ಅವರು ಈ ಹಿಂದೆ ಉದ್ಯೋಗ ಖಾತ್ರಿ ಯೋಜನೆಯಡಿ ಅವ್ಯವಹಾರ ನಡೆಸಿದ್ದರು. ತಮ್ಮ ಸಂಬಂಧಿ ಗುತ್ತಿಗೆದಾರರೊಂದಿಗೆ ಸೇರಿ ಐದಾರು ವರ್ಷಗಳಲ್ಲಿ ಭಾರಿ ಪ್ರಮಾಣದಲ್ಲಿ ಅವ್ಯವಹಾರ ಎಸಗಿರುವ ದೂರಿನ ಬಗ್ಗೆ ತನಿಖೆ ನಡೆಸಬೇಕು. ಹೀಗಾಗಿ ಇಲ್ಲಿಂದ ಅವರನ್ನು ವರ್ಗಾವಣೆ ಮಾಡಬೇಕು’ ಎಂದು ಒತ್ತಾಯಿಸಿದರು. 
ಎಸ್‌.ಎಫ್‌.ಐ ಜಿಲ್ಲಾ ಘಟಕದ ಅಧ್ಯಕ್ಷ ಮಹಾಲಿಂಗಪ್ಪ, ರವಿ, ಹನುಮಂತಪ್ಪ, ಸತೀಶ್‌, ರಂಗಪ್ಪ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT