ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮದ ಮಾರಿಕಾಂಬಾ ಜಾತ್ರೆ ಆರಂಭ

ಸಾಲಂಕೃತಗೊಂಡ 16 ಅಡಿ ಎತ್ತರದ ಮಾರಿಕಾಂಬಾ ದೇವಿಯ ವಿಗ್ರಹ l ಹರಿದು ಬಂದ ಭಕ್ತಸಾಗರ
Last Updated 15 ಫೆಬ್ರುವರಿ 2017, 6:22 IST
ಅಕ್ಷರ ಗಾತ್ರ
ಸಾಗರ: ಒಂಬತ್ತು ದಿನಗಳ ಕಾಲ ನಡೆಯಲಿರುವ ಇಲ್ಲಿನ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ ತವರು ಮನೆ ದೇವಾಲಯದಲ್ಲಿ  ಸಡಗರದಿಂದ ಮಂಗಳವಾರ ಆರಂಭಗೊಂಡಿತು. 
 
16 ಅಡಿ ಎತ್ತರದ ಮಾರಿಕಾಂಬಾ ದೇವಿಯ ವಿಗ್ರಹವನ್ನು ಮಂಗಳವಾರ ಬೆಳಗಿನ ಜಾವ  ಮೂರು ಗಂಟೆಯಿಂದಲೇ ಸಿಂಗರಿಸುವ ಕಾರ್ಯಕ್ರಮಕ್ಕೆ ಚಾಲನೆ ದೊರಕಿತು. ಒಂದಕ್ಕೊಂದು ಜೋಡಿಸಿದ  ಏಳು ಸೀರೆಗಳನ್ನು ಉಡಿಸುವ ಮೂಲಕ ದೇವಿಯನ್ನು ಸಿಂಗರಿಸಿದ ನಂತರ ಪೂಜಾ ವಿಧಿ ವಿಧಾನಗಳು ವಿಧ್ಯುಕ್ತವಾಗಿ ಆರಂಭಗೊಂಡವು. 
 
ಬೆಳಗಿನ ಜಾವ 5 ಗಂಟೆಗೆ ಮಹಾಗಣಪತಿ ದೇವಸ್ಥಾನದಲ್ಲಿ ತಾಳಿ ಪೂಜೆ ನಂತರ ಅದನ್ನು  ಮೆರವಣಿಗೆಯಲ್ಲಿ ದೇವಿಯ ಮನೆಗೆ ತರಲಾಯಿತು.  ಊರಿನ ಬಹುತೇಕ ಮನೆಗಳ ಎದುರು ರಂಗೋಲಿ ಹಾಕಿದ ದೃಶ್ಯ ಎಲ್ಲೆಡೆ ಕಂಡು ಬಂತು.
 
ಬೆಳಗಿನ ಜಾವ ಮೂರು ಗಂಟೆಯ ವೇಳೆಗೆ ಮಹಿಳೆಯರು, ಪುರುಷರು ದೇವಿಗೆ ಪೂಜೆ ಸಲ್ಲಿಸಲು ಹಣ್ಣು ಕಾಯಿಗಳೊಂದಿಗೆ ಸರತಿ ಸಾಲಿನಲ್ಲಿ ನಿಂತಿದ್ದರು.  ಈ ಸರತಿ ಒಂದು ಕಿಲೋ ಮೀಟರ್‌ ವ್ಯಾಪ್ತಿವರೆಗೂ ಸಾಗಿತ್ತು. 
 
ದೇವಸ್ಥಾನದ ಸಮಿತಿ   ಪೂಜೆಗೆ ಪಾಸ್‌ ವ್ಯವಸ್ಥೆ ಕಲ್ಪಿಸಿದ್ದು, ಕೆಲವರು ನಕಲಿ ಪಾಸ್‌ಗಳನ್ನು ಮಾಡಿಸಿಕೊಂಡು ದೇವಿಯ ದರ್ಶನಕ್ಕೆ ಮುಂದಾಗಿದ್ದರು. ಪಾಸ್‌ ಹೊಂದಿರುವವರ ಸಂಖ್ಯೆಯೇ  ಹೆಚ್ಚಿರುವುದರಿಂದ ದೇವರ ದರ್ಶನಕ್ಕೆ ನೂಕುನುಗ್ಗಲು ಉಂಟಾಗಿತ್ತು. ಪೊಲೀಸರು ಭಕ್ತರನ್ನು ನಿಯಂತ್ರಿಸಲು ಹರಸಾಹಸ ಮಾಡಬೇಕಾಯಿತು.
 
ಬಿಸಿಲು ಏರಿದಂತೆ ಭಕ್ತರ ಸಂಖ್ಯೆಯೂ ಹೆಚ್ಚಾಗಿತ್ತು. ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಸರತಿ ಸಾಲಿನಲ್ಲಿ ನಿಂತ ಭಕ್ತರಿಗೆ ಕುಡಿಯುವ ನೀರು, ಪಾನಕದ ವ್ಯವಸ್ಥೆ ಮಾಡಿದ್ದರು. ಸಂಜೆಯವರೆಗೂ ದೇವಿಯ ದರ್ಶನ ಪಡೆಯಲು ಸಾಲಿನಲ್ಲಿ ನಿಂತ ಭಕ್ತರ ಸಂಖ್ಯೆ ಕಡಿಮೆಯಾಗಿರಲಿಲ್ಲ. 
 
ರಾತ್ರಿ ಮಾರಿಕಾಂಬಾ ದೇವಿಯನ್ನು ತವರು ಮನೆಯಿಂದ ಹೊರಡಿಸುವ ಶಾಸ್ತ್ರ ನಡೆಯಿತು.  ಈ ಸಂದರ್ಭದಲ್ಲಿ ಸಂಪ್ರದಾಯದಂತೆ ಅಸಾದಿಯರು ದೇವಿಗೆ ಬೈಯುವ ಶಾಸ್ತ್ರ ಕೂಡ ನಡೆಯಿತು. ನಂತರ ದೇವಿಯ ವಿಗ್ರಹವನ್ನು ಅಲಂಕೃತ ರಥಕ್ಕೆ ಕೂರಿಸಲಾಯಿತು. 
 
ವಿವಿಧ ಜಾನಪದ ಕಲಾ ತಂಡಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ರಾಜಬೀದಿ ಉತ್ಸವ ವೈಭವದಿಂದ ನೆರವೇರಿತು. 
 
ದರ್ಶನ ಪಡೆದ ಯದುವೀರ:
 
ಮೈಸೂರು ಮಹಾರಾಜ ಯದುವೀರ ಅವರು ಪತ್ನಿ ತ್ರಿಷಿಕಾ ಕುಮಾರಿ ಅವರೊಂದಿಗೆ ಮಂಗಳವಾರ ಇಲ್ಲಿನ ಮಾರಿಕಾಂಬಾ ದೇವಸ್ಥಾನದಲ್ಲಿ ದೇವಿಯ ದರ್ಶನ ಪಡೆದರು.

ಜೋಗದಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವರು ಬಂದಿದ್ದ ಸಂದರ್ಭದಲ್ಲಿ ಇಲ್ಲಿನ ಮಾರಿಕಾಂಬಾ ದೇವಸ್ಥಾನಕ್ಕೆ ಭೇಟಿ ಕೊಟ್ಟು, ದೇವಿಗೆ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜಾತ್ರೆಯಂತಹ ಉತ್ಸವಗಳು ಮನುಷ್ಯ ಸೌಹಾರ್ದಯುತವಾಗಿ ಬಾಳಲು ಪ್ರೇರಣೆ ನೀಡುತ್ತವೆ. ಧಾರ್ಮಿಕ ಭಾವನೆಗಳ ಜೊತೆಗೆ ಹಲವು ಸಾಮಾಜಿಕ ಆಯಾಮಗಳು ಕೂಡ ಜಾತ್ರೆಗೆ ಇದ್ದು, ಇದೊಂದು ಸಂಭ್ರಮದ ಸಂದರ್ಭ’ ಎಂದು ಬಣ್ಣಿಸಿದರು.

ಮೂರು ವರ್ಷಗಳಿಗೊಮ್ಮೆ ನಡೆಯುವ ಇಲ್ಲಿನ ಮಾರಿಕಾಂಬಾ ದೇವಿ ಜಾತ್ರೆಯ ಬಗ್ಗೆ ಕೇಳಿ ತಿಳಿದಿದ್ದೆ. ಈ ದಿನ ಸಾವಿರಾರು ಭಕ್ತರ ಜೊತೆಗೆ ಖುದ್ದಾಗಿ ದೇವಿಗೆ ಉಡಿ ತುಂಬಿ ಪೂಜೆ ಸಲ್ಲಿಸುವ ಅವಕಾಶ ದೊರಕಿ ರುವುದು ಹರ್ಷ ತಂದಿದೆ  ಎಂದರು.

ರಾಜಕೀಯ ರಂಗ ಪ್ರವೇಶಿಸಬೇಕೆ ಅಥವಾ ಬೇಡವೆ ಎನ್ನುವ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಪ್ರತಿಕ್ರಿಯೆ ನೀಡಿದರು.

ಇದೇ ಸಂದರ್ಭದಲ್ಲಿ ಮಾರಿಕಾಂಬಾ ವ್ಯವಸ್ಥಾಪಕ ಸಮಿತಿಯು ಮಹಾರಾಜ ಯದುವೀರ ಹಾಗೂ ಅವರ ಪತ್ನಿ ತ್ರಿಷಿಕಾ ಕುಮಾರಿ ಅವರನ್ನು ಗೌರವಿಸಿತು.

ಮಾರಿಕಾಂಬಾ ಸಮಿತಿ ಗೌರವಾಧ್ಯಕ್ಷ ಕಾಗೋಡು ಅಣ್ಣಪ್ಪ, ಅಧ್ಯಕ್ಷ ಕೆ.ಎನ್‌.ನಾಗೇಂದ್ರ, ಉಪಾಧ್ಯಕ್ಷ ಯು.ಎಲ್‌.ಮಂಜಪ್ಪ, ಕಾರ್ಯದರ್ಶಿ ಬಿ.ಗಿರಿಧರ ರಾವ್, ಖಜಾಂಚಿ ನಾಗೇಂದ್ರ ಕುಮಟಾ, ವಿವಿಧ ಸಮಿತಿಗಳ ಸಂಚಾಲಕರಾದ ನವೀನ್‌, ಚಂದ್ರು, ಪುರುಷೋತ್ತಮ್‌ ಇನ್ನಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT