ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೋಭಾಯಾತ್ರೆಗೆ ವಿದ್ಯಾರ್ಥಿನಿಯರ ಮೆರುಗು

ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಸುವರ್ಣಸಿರಿ ಸಂಭ್ರಮೋತ್ಸವ
Last Updated 15 ಫೆಬ್ರುವರಿ 2017, 7:29 IST
ಅಕ್ಷರ ಗಾತ್ರ
ಕಲಬುರ್ಗಿ: ಪ್ರತಿ ವಿದ್ಯಾರ್ಥಿನಿಯ ಮೊಗ­­ದಲ್ಲೂ ಮನೆಹಬ್ಬದಲ್ಲಿ ಪಾಲ್ಗೊಂಡ ಸಂಭ್ರಮವಿತ್ತು. ಕೆಲವರು ಕೋಲಾಟದಲ್ಲಿ ಪಾಲ್ಗೊಂಡು ಸಂತೋಷಪಟ್ಟರೆ, ಇನ್ನೂ ಕೆಲವರು ಡೊಳ್ಳು ಬಾರಿಸುವುದರಲ್ಲಿ ಖುಷಿಪಟ್ಟರು. ಎಲ್ಲರಿಂದ ಮೊಳಗಿದ್ದು ಒಂದೇ ಘೋಷಣೆ–‘ನಾವು ಸಬಲರು. ನಾವು ಯಾರಿಗೂ ಕಡಿಮೆಯಿಲ್ಲ’. 
 
ಜನಪದ ಗೀತೆಗಳ ರಿಂಗಣ, ಎನ್‌ಸಿಸಿ ಪಥಸಂಚಲನದ ಶಿಸ್ತು,  ಪಂಜಾಬಿ ಬಾಂಗ್ರಾ ಕುಣಿತದ ಅಬ್ಬರ, ರಾಜಸ್ತಾನ ನೃತ್ಯ ಶೈಲಿಯ ಸೊಬಗು, ದೇಶದ ಮಹನೀಯರ ಭಾವಚಿತ್ರ ಹಿಡಿದವರು ಹಾಗೂ ವಿವಿಧ ಕ್ಷೇತ್ರಗಳ ಸಾಧಕರ ವೇಷಭೂಷಣದಲ್ಲಿ ಕಂಗೊಳಿಸಿದ ವಿದ್ಯಾರ್ಥಿನಿಯರು ಗಮನ ಸೆಳೆದರು.
 
ಇಷ್ಟೆಲ್ಲ ವೈವಿಧ್ಯತೆಗೆ ಕಾರಣವಾಗಿದ್ದು ನಗರದ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಸುವರ್ಣಸಿರಿ ಸಂಭ್ರಮೋತ್ಸವ.
ಮಹಾವಿದ್ಯಾಲಯವು 50 ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ  ‘ಭವಿಷ್ಯದೆಡೆಗೆ ಬಂಗಾರದ ನಡೆ’ ಶೋಭಾಯಾತ್ರೆಯಲ್ಲಿ ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
 
ಕಾಲೇಜು ಆವರಣದಿಂದ ನೆಹರೂ ಗಂಜ್‌ವರೆಗೆ ಐದು ಕಿಲೊಮೀಟರ್‌ ಅಂತರದ ಮೆರವಣಿಗೆಯಲ್ಲಿ ಮಹಾ­ವಿದ್ಯಾಲಯದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ನೆತ್ತಿ ಸುಡುತ್ತಿದ್ದ ಬಿಸಿಲನ್ನೂ ಲೆಕ್ಕಿಸದೇ, ಆಯಾಸಕ್ಕೆ ಒಳಗಾಗದೇ ಉತ್ಸಾಹದಿಂದ ಹೆಜ್ಜೆ ಹಾಕಿದರು. 
 
ಬೆಳಿಗ್ಗೆ 10ಕ್ಕೆ ಕಾಲೇಜು ಆವರಣ­ದಿಂದ ಆರಂಭಗೊಂಡ ಮೆರವಣಿಗೆಯು ಪಿಡಿಎ ಕಾಲೇಜು ರಸ್ತೆ, ರೈಲ್ವೆ ನಿಲ್ದಾಣ ರಸ್ತೆ, ಜಗತ್‌ ವೃತ್ತ, ಸೂಪರ್‌ ಮಾರ್ಕೆಟ್‌ ಮೂಲಕ ಸಾಗಿ ಮಧ್ಯಾಹ್ನ 1.30ಕ್ಕೆ ನೆಹರೂ ಗಂಜ್‌ ತಲುಪಿತು. ದಾರಿ­ಯುದ್ದಕ್ಕೂ ವಿದ್ಯಾರ್ಥಿನಿಯರ ಪ್ರತಿಭಾ ಪ್ರದರ್ಶನ ಕಂಡ ಸಾರ್ವಜನಿಕರು ಶ್ಲಾಘಿಸಿದರು.
 
ಮೊಬೈಲ್‌ ಫೋನ್‌ನಲ್ಲಿ ಚಿತ್ರೀಕರಣ: ಬಹುಕೇತಕರು ಪ್ರಮುಖ ವೃತ್ತಗಳಲ್ಲಿ, ರಸ್ತೆಬದಿಯಲ್ಲಿ, ಕಟ್ಟಡಗಳ ಮೇಲೆ ನಿಂತು ಮೆರವಣಿಗೆ ವೀಕ್ಷಿಸಿ ಮೊಬೈಲ್ ಫೋನ್‌ನಲ್ಲಿ ದೃಶ್ಯಗಳನ್ನು ಸೆರೆ ಹಿಡಿದರು.
 
ವಿದ್ಯಾರ್ಥಿನಿಯರು ಕೂಡ ಆಗಾಗ್ಗೆ ಮೊಬೈಲ್ ಫೋನ್‌ನಲ್ಲಿ ‘ಸೆಲ್ಫಿ’ಗಳನ್ನು ಕ್ಲಿಕ್ಕಿಸಿಕೊಂಡರು. ವೇದಿಕೆ ಕಾರ್ಯ­ಕ್ರಮದ ಬಳಿಯಂತೂ ವಿದ್ಯಾರ್ಥಿನಿ­ಯರು ಗುಂಪುಗೂಡಿ ಮತ್ತು ಪ್ರಾಧ್ಯಾಪ­ಕ­ರೊಡನೆ ‘ಸೆಲ್ಫಿ’ ಕ್ಲಿಕ್ಕಿಸಿಕೊಂಡರು.
 
ಹೆಮ್ಮೆ  ಮೂಡಿದೆ: ಭೀಮಳ್ಳಿ
 
ವಾಹನ ದಟ್ಟಣೆ: ಮೆರವಣಿಗೆಯಿಂದ ಸೂಪರ್ ಮಾರ್ಕೆಟ್‌, ನೆಹರೂ ಗಂಜ್‌ ಅಲ್ಲದೇ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾಯಿತು. 
 ಕೆಲ ಕಡೆ ವಾಹನಗಳು ನಿಧಾನಗತಿಯಲ್ಲಿ ಸಾಗಿ­ದರೆ, ಕೆಲ ಕಡೆ ಸಂಚಾರ ಸ್ತಬ್ಧವಾಗಿತ್ತು. ವಾಹನಗಳ ಸಂಚಾರ ಸುಗಮಗೊಳಿ­ಸಲು ಪೊಲೀಸರು ಹರಸಾಹಸಪಟ್ಟರು. ಹಲವು ಸವಾರರು ಸಂಚಾರ ದಟ್ಟಣೆಯಲ್ಲಿ ಸಿಲುಕಿದರು.
 
ಕಲಬುರ್ಗಿ: ‘ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಮೊದಲನೇ ಬಾರಿ ಎರಡು ಸಾವಿರು ವಿದ್ಯಾರ್ಥಿ­ನಿಯರು ಶೋಭಾಯಾತ್ರೆ ಕೈಗೊಂ ಡಿದ್ದು ಸಂತಸ ತಂದಿದೆ. ಮಹಾ ವಿದ್ಯಾಲಯಕ್ಕೆ ವಿದ್ಯಾರ್ಥಿ­ನಿಯರು ಹೆಮ್ಮೆ ಉಂಟು ಮಾಡಿ­ದ್ದಾರೆ’ ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಸವರಾಜ ಭೀಮಳ್ಳಿ  ಪ್ರಶಂಸಿಸಿದರು.

ನಗರದ ನೆಹರೂ ಗಂಜ್‌ ಬಳಿ ನಡೆದ ಶೋಭಾಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು ‘1965ರಲ್ಲಿ ಮಹಿಳಾ ಮಹಾವಿದ್ಯಾಲಯ ಆರಂಭಿಸಿದಾಗ 35 ವಿದ್ಯಾರ್ಥಿನಿ­ಯರು ಇದ್ದರು. ಈಗ ಸಂಖ್ಯೆ ಎರಡು ಸಾವಿರ ದಾಟಿದೆ. ಇಲ್ಲಿ ಕಲಿತ ಬಹುತೇಕ ವಿದ್ಯಾರ್ಥಿನಿಯರು ವಿವಿಧ ಕ್ಷೇತ್ರಗಳಲ್ಲಿ ಉನ್ನತ ಮಟ್ಟದ ಸಾಧನೆ ಮಾಡಿದ್ದಾರೆ’ ಎಂದರು.

ಹಿರಿಯ ಪ್ರಾಧ್ಯಾಪಕಿ ಡಾ. ಮೀನಾಕ್ಷಿ ಬಾಳಿ ಮಾತನಾಡಿ ‘ಶೋಭಾಯಾತ್ರೆ ಮೂಲಕ ವಿದ್ಯಾರ್ಥಿನಿಯರು ಉತ್ತಮ ಭವಿಷ್ಯದ ಕುರಿತು ಭರವಸೆ ಮೂಡಿಸಿ­ದ್ದಾರೆ. ಭ್ರಷ್ಟಾಚಾರ ಮುಕ್ತ ದೇಶವಾಗಿಸುವಲ್ಲಿ ಮತ್ತು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವಲ್ಲಿ ಅವರು ಪ್ರಮುಖ ಪಾತ್ರವಹಿಸುವರು ಎಂಬ ವಿಶ್ವಾಸವಿದೆ’ ಎಂದು ಅವರು ಹೇಳಿದರು.

ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಆರ್.ಎಸ್‌.ಹೊಸಗೌಡ, ಆಡಳಿತ ಮಂಡಳಿ ಸದಸ್ಯರಾದ ಎ.ವಿ.­ದೇಶಮುಖ್‌, ಉದಯಕುಮಾರ ಚಿಂಚೋಳಿ, ಪದವಿ ಮಹಾ­ವಿದ್ಯಾಲಯ ಪ್ರಾಂಶುಪಾಲ ಅಶೋಕ ಜೀವಣಗಿ, ಪದವಿಪೂರ್ವ ಮಹಾ ವಿದ್ಯಾಲಯ ಪ್ರಾಂಶುಪಾಲ ಬಿ.ಎಸ್. ಮೇಟೆಕಾರ, ಪ್ರಾಧ್ಯಾಪಕಿಯರಾದ ಉಮಾ, ಶಾಂತಾ, ವೀಣಾ ಇದ್ದರು.

* ಕಲಬುರ್ಗಿಯಲ್ಲಿ ಈವರೆಗೆ ರಾಜಕೀಯ, ಧಾರ್ಮಿಕ, ಪ್ರತಿಭಟನಾ ಮೆರವಣಿಗೆ ನಡೆದಿದ್ದವು. ಇದೇ ಮೊದಲ ಬಾರಿಗೆ ವಿದ್ಯಾರ್ಥಿನಿಯರ ಮೂಲಕ ಶೈಕ್ಷಣಿಕ ಮೆರವಣಿಗೆ ನಡೆದಿದೆ.
- ಡಾ. ಮೀನಾಕ್ಷಿ ಬಾಳಿ, ಹಿರಿಯ ಪ್ರಾಧ್ಯಾಪಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT