ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನುಕುಲದ ಉದ್ಧಾರಕ ಸೇವಾಲಾಲ ಮಹಾರಾಜ

ಪೌರಾದೇವಿ ಶಕ್ತಿಪೀಠದ ಜಗದ್ಗುರು ಡಾ. ರಾಮರಾವ್‌ ಮಹಾರಾಜರ ಅಭಿಮತ
Last Updated 15 ಫೆಬ್ರುವರಿ 2017, 7:33 IST
ಅಕ್ಷರ ಗಾತ್ರ
ಚಿಂಚೋಳಿ:‘ಮಹಾ ತಪಸ್ವಿ ಸಂತ ಸೇವಾಲಾಲ್‌ ಮಹಾರಾಜರ ಆಚಾರ ವಿಚಾರಗಳು ಕೇವಲ ಬಂಜಾರ ಜನರಿಗೆ ಸೀಮಿತವಾಗಿರದೇ ಸಕಲ ಮನುಕುಲದ ಉದ್ಧಾರದ ಆಶಯ ಒಳಗೊಂಡಿದೆ. ವಿಶಾಲ ಮನೋಭಾವನೆಯಿಂದ ಕೂಡಿದ ಅವರ ಸಂದೇಶ ಇಂದಿಗೂ ಪ್ರಸ್ತುತವಾಗಿದೆ ಎಂದು ಪೌರಾದೇವಿ ಶಕ್ತಿಪೀಠದ ಜಗದ್ಗುರು ಡಾ. ರಾಮರಾವ್‌ ಮಹಾರಾಜ ತಿಳಿಸಿದರು.
 
ಆಲ್‌ ಇಂಡಿಯಾ ಬಂಜಾರ ಸೇವಾ ಸಂಘ ತಾಲ್ಲೂಕು ಘಟಕ ಹಾಗೂ ಸೇವಾಲಾಲ ಮಹಾರಾಜರ ಜಯಂತ್ಯುತ್ಸವ ಸ್ವಾಗತ ಸಮಿತಿ ಮಂಗಳವಾರ ಹಮ್ಮಿಕೊಂಡಿದ್ದ ಸೇವಾಲಾಲ ಮಹಾರಾಜರ 278ನೇ ಜಯಂತ್ಯುತ್ಸವದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು.
 
ಬಂಜಾರ ಸಮುದಾಯ ಒಳ್ಳೆಯ ವಿಚಾರ, ನಡೆನುಡಿ ಜೀವನದಲ್ಲಿ ಅಳವಡಿಸಿಕೊಂಡು ದುಶ್ಚಟಗಳನ್ನು ತ್ಯಜಿಸಬೇಕು. ಮದ್ಯ, ಬೀಡಿ ಸಿಗರೇಟ್‌, ಗುಟ್ಕಾ ಸೇವನೆ ಕೈಬಿಟ್ಟು ನೈತಿಕ ಜೀವನ ನಡೆಸಬೇಕು. ಮಹಾತ್ಮರ ಜಯಂತಿ ಆಚರಿಸಿದರೆ ಸಾಲದು ಅವರ ಆದರ್ಶ ಪಾಲಿಸುವುದು ನಮ್ಮ ಕರ್ತವ್ಯವಾಗಬೇಕು. ಈ ಮೂಲಕ ಸಂತ ಸೇವಾಲಾಲ ಮಹಾರಾಜರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು ಎಂದು ಅವರು ಕರೆ ನೀಡಿದರು.
 
ಚಿಂಚೋಳಿ ತಾಲ್ಲೂಕಿನಲ್ಲಿ ಅನಕ್ಷರತೆ ಮತ್ತು ನಿರುದ್ಯೋಗ ಹೆಚ್ಚಾಗಿದೆ. ಎಲ್ಲರೂ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಲು ಮುಂದಾಗಬೇಕು, ನಿರುದ್ಯೋಗ ನಿವಾರಣೆಗೆ ಮುಂದಾಗಬೇಕು ಎಂದರು.
 
ಮಾರ್ಚ್‌ 29ರಿಂದ ಏಪ್ರಿಲ್‌ 5ರವರೆಗೆ  ಮಹಾರಾಷ್ಟ್ರ ಪೌರಾದೇವಿಯಲ್ಲಿ ನಡೆಯುವ ಲಕ್ಷ ಚಂಡಿ ಮಹಾಯಜ್ಞದಲ್ಲಿ ಸುಮಾರು 20ಲಕ್ಷಕ್ಕಿಂತ ಹೆಚ್ಚು ಜನ ಪಾಲ್ಗೊಳ್ಳಲಿದ್ದು, ಚಿಂಚೋಳಿ ತಾಲ್ಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು.
 
ಸಂಸದೀಯ ಕಾರ್ಯದರ್ಶಿ ಡಾ. ಉಮೇಶ ಜಾಧವ್‌ ಮಾತನಾಡಿ, ಡಾ. ರಾಮರಾವ್‌ ಮಹಾರಾಜರಿಗೆ 90 ವರ್ಷ ವಯಸ್ಸಾದರೂ ಅವರು ಒಂದೆಡೆ ಕುಳಿತುಕೊಳ್ಳದೇ ದೇಶ ಸಂಚಾರ ಮಾಡುತ್ತಿದ್ದಾರೆ. ಸೇವಾಲಾಲ ಮಹಾರಾಜರ ಆದರ್ಶ ಪಾಲಿಸುತ್ತ ಸಮಾಜದಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಈಗ ನಾವು ನೋಡುತ್ತಿರುವ ರಾಮರಾವ್‌ ಮಹಾರಾಜರ ಯುಗವಾಗಿದೆ. ಅವರ ಆಶೀರ್ವಾದ ಪಡೆಯಲು ಲಕ್ಷಾಂತರ ಜನರು ಕಾಯುತ್ತಿರುತ್ತಾರೆ. ಪ್ರತಿಯೊಬ್ಬರು ರಾಮರಾವ್‌ ಮಹಾರಾಜರ ಸಂದೇಶ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
 
ಆಲ್‌ ಇಂಡಿಯಾ ಬಂಜಾರ ಸೇವಾ ಸಂಘದ ರಾಜ್ಯ ಅಧ್ಯಕ್ಷ ಸುಭಾಷ್‌ ರಾಠೋಡ್‌ ಮಾತನಾಡಿ, ಡಾ. ರಾಮರಾವ್‌ ಮಹಾರಾಜರಿಗೆ ಚಿಂಚೋಳಿಯ ಮೇಲೆ ಅತ್ಯಂತ ಹೆಚ್ಚಿನ ಪ್ರೀತಿಯಿದೆ. ಅಂತೆಯೇ ಅವರು ಚಿಂಚೋಳಿ ತಾಲ್ಲೂಕಿಗೆ ಭೇಟಿ ನೀಡಿದಷ್ಟು ದೇಶದ ಯಾವ ತಾಲ್ಲೂಕಿಗೂ ಭೇಟಿ ನೀಡಿಲ್ಲ. ಸೇವಾಲಾಲ ಮಹಾರಾಜರು ನಮಗೆ ಎಲ್ಲಾ ಮಹಾತ್ಮರು ಸಾರಿದ ಒಳ್ಳೆಯ ವಿಚಾರವನ್ನು ನಮಗೆ ನೀಡಿದ್ದಾರೆ. ಅವರು ಕೇವಲ ಬಂಜಾರ ಜನರ ಏಳ್ಗೆ ಬಯಸದೇ ಎಲ್ಲಾ ಸಮಾಜಗಳಿಗೂ ಒಳಿತು ಬಯಸಿದ್ದಾರೆ ಎಂದರು.
 
ಸಂಗಾರೆಡ್ಡಿಯ ವಿಠಲ್‌ ಮಹಾರಾಜ, ನಿವೃತ್ತ ಶಿಕ್ಷಕ ಜಗನ್ನಾಥ ರಾಠೋಡ್‌ ಮಾತನಾಡಿದರು. ಗೊಬ್ಬರುವಾಡಿಯ ಬಳಿರಾಮ ಮಹಾರಾಜ, ಪುರಸಭೆ ಅಧ್ಯಕ್ಷೆ ಇಂದುಮತಿ ಮನೋಹರ ದೇಗಲಮಡಿ, ತಾ.ಪಂ. ಅಧ್ಯಕ್ಷೆ ರೇಣುಕಾ ಅಶೋಕ ಚವ್ಹಾಣ, ಮಾಜಿ ಅಧ್ಯಕ್ಷ ಶಾಮರಾವ್‌ ರಾಠೋಡ್‌, ಜಿಪಂ. ಸದಸ್ಯರಾದ ಗೌತಮ ಪಾಟೀಲ, ಹೀರುಬಾಯಿ ರಾಮಚಂದ್ರ, ಬಸವರಾಜ ಮಲಿ, ಬಸವಣ್ಣ ಪಾಟೀಲ, ಮೇಘರಾಜ ರಾಠೋಡ್‌, ವಿಠಲ್‌ ಚವ್ಹಾಣ, ದೇವರಾಜ ನಾಯಕ್‌, ಪ್ರೇಮಸಿಂಗ್‌ ಜಾಧವ್‌, ರಾಮರಾವ್‌ ರಾಠೋಡ್‌, ತುಕಾರಾಮ ಪವಾರ್‌,  ಬನ್ಸಿಲಾಲ್‌, ಅನಿಲ ಜಮಾದಾರ, ರವಿರಾಜ ಕೊರವಿ, ಲಕ್ಷ್ಮ ಆವುಂಟಿ, ಕೆ.ಎಂ.ಬಾರಿ, ಮಲ್ಕಪ್ಪ ಬೀರಾಪುರ, ಬಾಬು ಪವಾರ ಚೇಂಗಟಾ, ಈಶ್ವರ ನಾಯಕ್‌, ವಿಠಲ್‌ ಕಾರಭಾರಿ, ತುಳಸಿರಾಮ ಜಾಧವ್‌, ರಾಮಚಂದ್ರ ಜಾಧವ್‌, ಗೋಪಾಲರಾವ್‌ ಕಟ್ಟಿಮನಿ, ಚಂದ್ರಶೇಖರ ಗುತ್ತೇದಾರ, ಮಲ್ಲಿಕಾರ್ಜುನ ಮಡಿವಾಳ, ಬಸವರಾಜ ಬಿರಾದಾರ ಮೊದಲಾದವರು ಇದ್ದರು.
 
ಸ್ವಾಗತ ಸಮಿತಿ ಅಧ್ಯಕ್ಷ ರಾಮಶೆಟ್ಟಿ ಪವಾರ್‌ ಸ್ವಾಗತಿಸಿದರು. ರಾಮಶೆಟ್ಟಿ ರಾಠೋಡ್‌, ಭೀಮರಾವ್‌ ರಾಠೋಡ್‌ ನಿರೂಪಿಸಿದರು. ಬಾಬು ಪವಾರ್‌ ವಂದಿಸಿದರು.  
 
* ಸೇವಾಲಾಲ ಮಹಾರಾಜರ ರೂಪದಲ್ಲಿ ಬಂಜಾರ ಸಮುದಾಯಕ್ಕೆ ದರ್ಶನ ನೀಡುತ್ತಿರುವ ರಾಮರಾವ್‌ ಮಹಾರಾಜರ ಸರಳತೆ ಮತ್ತು ಸಂದೇಶ ನಾವೆಲ್ಲರೂ ಪಾಲಿಸಬೇಕು
ಡಾ. ಉಮೇಶ ಜಾಧವ್‌, ಸಂಸದೀಯ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT