ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆಗಳ ಮಧ್ಯೆ ಶೈಕ್ಷಣಿಕ ಪ್ರಗತಿಗೆ ಸಿಬ್ಬಂದಿ ಶ್ರಮ

ಭಾಲ್ಕಿ ಪ್ರೌಢ ಶಾಲೆ: ಗ್ರಂಥಾಲಯ, ಕಂಪ್ಯೂಟರ್‌ ಶಿಕ್ಷಕರ ಕೊರತೆ– ವಿದ್ಯಾರ್ಥಿಗಳಿಗೆ ತೊಂದರೆ
Last Updated 15 ಫೆಬ್ರುವರಿ 2017, 8:39 IST
ಅಕ್ಷರ ಗಾತ್ರ
ಭಾಲ್ಕಿ: ಮುರಿದ ಗೇಟ್‌, ಕುಸಿದಿರುವ ಶಾಲೆ ಕಾಂಪೌಂಡ್‌, ಕಂಪ್ಯೂಟರ್‌ ಶಿಕ್ಷಕರ ಕೊರತೆ, ಗ್ರಂಥಾಲಯ, ಶೌಚಾಲಯ ಸಮಸ್ಯೆ... ಹೀಗೆ ಇಲ್ಲಿ ಅನೇಕ ಸಮಸ್ಯೆಗಳಿದ್ದರೂ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗದಂತೆ ಪರಿಶ್ರಮದಿಂದ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರು. ಇದು ಪಟ್ಟಣದಲ್ಲಿರುವ ಸುಮಾರು ಏಳು ದಶಕಗಳಷ್ಟು ಹಳೆಯದಾದ ಸರ್ಕಾರಿ ಪ್ರೌಢ ಶಾಲೆಯ ವಾಸ್ತವ ಚಿತ್ರಣ.
 
ಶಾಲೆಯ 8ರಿಂದ 10 ತರಗತಿ ವರೆಗಿನ ಕನ್ನಡ ಮಾಧ್ಯಮದಲ್ಲಿ 77, ಮರಾಠಿ ಮಾಧ್ಯಮದಲ್ಲಿ 71 ಮತ್ತು ಉರ್ದು ಮಾಧ್ಯಮದಲ್ಲಿ 140 ಸೇರಿದಂತೆ ಒಟ್ಟು 288 ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದಾರೆ. 
 
ಹೆಚ್ಚಿನ ಸಂಖ್ಯೆ ಒಳಗೊಂಡಿರುವ ಉರ್ದು ಮಾಧ್ಯಮದಲ್ಲಿ ಉರ್ದು ಕಲಾ, ಪಂಡಿತ, ಪಿಸಿಎಂ ಒಳಗೊಂಡಂತೆ ಮೂವರು ಶಿಕ್ಷಕರ ಕೊರತೆ ಇದೆ. ಇದು ಮಕ್ಕಳ ಶೈಕ್ಷಣಿಕ ಏಳಿಗೆ ಮೇಲೆ ತುಂಬಾ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಕಳವಳ ವ್ಯಕ್ತಪಡಿಸುತ್ತಾರೆ ಶಿಕ್ಷಕ ಪೈಜುನ್ನಬಿ.
 
ಶಿಕ್ಷಕರ ಕೊರತೆ ನೀಗಿಸುವಂತೆ ಡಿಡಿಪಿಐ ಗಮನಕ್ಕೆ ತರಲಾಗಿದೆ. ಆದರೆ, ಇನ್ನು ಖಾಲಿ ಶಿಕ್ಷಕರ ಹುದ್ದೆ ಭರ್ತಿ ಆಗಿಲ್ಲ ಎನ್ನುತ್ತಾರೆ ಸಿಬ್ಬಂದಿ.
ಪ್ರಸ್ತುತ ಅತ್ಯಂತ ಅವಶ್ಯಕವಾಗಿರುವ ಕಂಪ್ಯೂಟರ್‌ ಜ್ಞಾನ ನೀಡಲು ಶಿಕ್ಷಕರೇ ಇಲ್ಲ. ಶಾಲೆ ಕಟ್ಟಡ ತುಂಬಾ ಹಳೆಯದಾಗಿರುವುದರಿಂದ ಮಳೆ ಬಂದಾಗ ಕೋಣೆಗಳು ಸೋರುತ್ತವೆ. ಹಾಗಾಗಿ, ಈ ಮುಂಚೆ ಶಾಲೆಗೆ ನೀಡಿದ್ದ ಗಣಕಯಂತ್ರಗಳು ಬಳಕೆ ಆಗದೆ ಹಾಳಾಗಿವೆ.

ಮಕ್ಕಳ ಜ್ಞಾನದ ಹರಿವು ಹೆಚ್ಚಿಸಲು ಸಹಕಾರಿ ಆಗಬೇಕಿದ್ದ ಗ್ರಂಥಾಲಯ ಇಲ್ಲದೆ ಇರುವುದರಿಂದ ಮಕ್ಕಳ ಜ್ಞಾನ ಸಂಗ್ರಹಕ್ಕೆ ಪೆಟ್ಟು ಬೀಳುತ್ತಿದೆ. ವಿದ್ಯಾರ್ಥಿಗಳ ಮೂಲ ಅಗತ್ಯತೆಗಳಲ್ಲಿ ಒಂದಾದ ಶೌಚಾಲಯ ಹಾಳಾಗಿರುವುದರಿಂದ ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಪಾಲಕರು.
 
ಮಕ್ಕಳ ಪ್ರಗತಿಯಲ್ಲಿ ಮಹತ್ವದ ಪಾತ್ರ ವಹಿಸುವ ಸ್ಕೌಟ್ಸ್‌ ಮತ್ತು ಗೈಡ್ಸ್‌ ಶಾಖೆ ಕಾರ್ಯ ನಿರ್ವಹಿಸುತ್ತಿದೆ. ಈಚೆಗೆ 5 ವಿದ್ಯಾರ್ಥಿನಿಯರು ಮೈಸೂರಿನ ಜಾಂಬೂರಿಯಲ್ಲಿ ನಡೆದ 17ನೇ ರಾಷ್ಟ್ರೀಯ ಭಾರತ ಸ್ಕೌಟ್ಸ್‌ ಮತ್ತು ಗೈಡ್ಸ್‌ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಶಾಲೆಯ ವಿದ್ಯಾರ್ಥಿಗಳಾಗಿದ್ದ ಸಭಾ ಮಜರಲಿ, ಅಫ್ರೋಜ್‌ ಮಸ್ತಾನಸಾಬ್‌ ಈ ಹಿಂದೆ ರಾಜ್ಯಮಟ್ಟದ ಅಥ್ಲೇಟಿಕ್ಸ್‌, ಟ್ರಿಪಲ್‌ ಮತ್ತು ಲಾಂಗ್‌ಜಂಪ್‌ನಲ್ಲಿ ಮೂರು ಬಾರಿ ಪಾಲ್ಗೊಂಡಿದ್ದಾರೆ ಎಂದು ತಿಳಿಸುತ್ತಾರೆ ದೈಹಿಕ ಶಿಕ್ಷಣ ಶಿಕ್ಷಕರಾದ ಚನ್ನವೀರ ಚಕ್ರಸಾಲಿ, ಜೈಶೀಲಾ.
 
ಶಾಲೆಯ ಗೇಟ್‌, ಕಾಂಪೌಂಡ್‌ ಕುಸಿದಿರುವುದರಿಂದ ನಾಯಿ, ಹಂದಿ, ದನಗಳ ಕಾಟ ವಿಪರೀತವಾಗಿದೆ. ಕೆಲ ಜನರು ಶಾಲೆ ಆವರಣದಲ್ಲೇ ಶೌಚ ಕೂರುತ್ತಾರೆ. ಇದರಿಂದ ಪಾಠ, ಪ್ರವಚನ ತೊಡಕಾಗಿದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಶಿಕ್ಷಕರು. 
 
ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಪಾಠ ತಿಳಿಸಿಕೊಡಲು ಶಾಲೆ ಒಳ ಭಾಗದಲ್ಲಿ ತರಕಾರಿ ಸೊಪ್ಪು ಮೆಂತೆಪಲ್ಯ, ಪಾಲಕ್‌ ಬೆಳೆಯಲಾಗಿದೆ. ವಿಜ್ಞಾನ ಪ್ರಯೋಗಾಲಯವಿದೆ.
 
ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮಕ್ಕಳ ಸಂಖ್ಯೆ 500ರ ಗಡಿ ದಾಟಿಸಬೇಕು ಎಂಬ ಗುರಿ ಹೊಂದಲಾಗಿದೆ. ಅದಕ್ಕೆ ಪೂರಕವಾಗಿ ಮಾರ್ಚ್‌ ತಿಂಗಳಿನಲ್ಲಿ ಪ್ರಾಥಮಿಕ ಶಾಲೆಗಳಿಗೆ ಭೇಟಿ, ಕರಪತ್ರ ವಿತರಣೆಗೆ ಯೋಜನೆ ರೂಪಿಸಲಾಗಿದೆ. ಹೊಸದಾಗಿ ನಿರ್ಮಿಸುತ್ತಿರುವ ಶಾಲೆ ಕಟ್ಟಡ ಜೂನ್‌ ತಿಂಗಳಿನಲ್ಲಿ ಹಸ್ತಾಂತರಿಸಲಾಗುವುದು ಎಂದು ಗುತ್ತಿಗೆದಾರರು ತಿಳಿಸಿದ್ದಾರೆ.

ಹೊಸ ಕಟ್ಟಡ ನಮ್ಮ ಸುಪರ್ದಿಗೆ ಬಂದರೆ ಶೌಚಾಲಯ, ಕೋಣೆ ಸೋರುವ ಸಮಸ್ಯೆ ತಪ್ಪಲಿದೆ. ಹಿರಿಯ ಅಧಿಕಾರಿಗಳು ಗಣಕಯಂತ್ರ ಶಿಕ್ಷಕರ, ಉರ್ದು ಮಾಧ್ಯಮದಲ್ಲಿ ಕೊರತೆ ಇರುವ ಶಿಕ್ಷಕರ ಭರ್ತಿಗೆ ಕ್ರಮ ಕೈಗೊಂಡಲ್ಲಿ ಇನ್ನೂ ಹೆಚ್ಚಿನ ಶೈಕ್ಷಣಿಕ ಸಾಧನೆ ಮಾಡಬಹುದು ಎನ್ನುತ್ತಾರೆ ಮುಖ್ಯಶಿಕ್ಷಕ ಎಸ್‌. ಮೇತ್ರೆ.
–ಬಸವರಾಜ್‌ ಎಸ್‌.ಪ್ರಭಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT