ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ಎನ್‌ಎಲ್‌ ಕಾರ್ಯವೈಖರಿಗೆ ಅಸಮಾಧಾನ

ಬೀದರ್ ಟೆಲಿಕಾಂ ಸಲಹಾ ಸಮಿತಿ ಸಭೆ
Last Updated 15 ಫೆಬ್ರುವರಿ 2017, 8:50 IST
ಅಕ್ಷರ ಗಾತ್ರ

ಬೀದರ್: ಹನ್ನೆರಡು ವರ್ಷಗಳಿಂದ ತುಂಡಾದ ಕೇಬಲ್‌ ಜೋಡಿಸದ ಬಿಎಸ್‌ಎನ್‌ಎಲ್ ಸಿಬ್ಬಂದಿ, ಕಾಮಗಾರಿಯ ಟೆಂಡರ್‌ ಕರೆಯುವಲ್ಲಿಯೇ ಒಂದೂವರೆ ವರ್ಷ ಕಾಲ ಹರಣ, ನಗರದ ಕೇಂದ್ರ ಸ್ಥಾನದಲ್ಲಿ ದೊರೆಯದ ಮೊಬೈಲ್‌ ಸಿಗ್ನಲ್, ರೈಲ್ವೆ ಹಳಿ ಕೆಳಗೆ ಬಿಎಸ್‌ಎನ್‌ಎಲ್ ಕೇಬಲ್‌ ಹಾಕಲು ಒಂದು ವರ್ಷದಿಂದ ವಿಳಂಬ, ಪತ್ರ ವ್ಯವಹಾರದಲ್ಲೇ ಕಾಲಹರಣ ಮಾಡುತ್ತಿರುವ ಅಧಿಕಾರಿಗಳು...

ಈ ಅಂಶಗಳು ನಗರದ ಬಿಎಸ್‌ಎನ್‌ಎಲ್‌ ಕಚೇರಿಯಲ್ಲಿ ಮಂಗಳವಾರ ಸಂಸದ ಭಗವಂತ ಖೂಬಾ ಅಧ್ಯಕ್ಷತೆಯಲ್ಲಿ ನಡೆದ ಟೆಲಿಕಾಂ ಸಲಹಾ ಸಮಿತಿ ಸಭೆಯಲ್ಲಿ ಬೆಳಕಿಗೆ ಬಂದವು. ಸಭೆಯಲ್ಲಿ ಸಲಹಾ ಸಮಿತಿ ಸದಸ್ಯರು ಬಿಎಸ್‌ಎನ್‌ಎಲ್‌ ಅಧಿಕಾರಿಗಳ ಕಾರ್ಯವೈಖರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಖಾಸಗಿ ಕಂಪೆನಿಗಳು ಕಡಿಮೆ ಅವಧಿಯಲ್ಲಿಯೇ ಗ್ರಾಹಕರಿಗೆ ಉತ್ತಮ ಸೇವೆ ಕೊಡುತ್ತಿವೆ. ಆದರೆ, ಬಿಎಸ್‌ಎನ್‌ಎಲ್‌ಗೆ ಎಲ್ಲ ಸೌಲಭ್ಯ ಇದ್ದರೂ ಗ್ರಾಹಕರಿಗೆ ಏಕೆ ಒಳ್ಳೆಯ ಸೇವೆ ಕೊಡಲು ಸಾಧ್ಯವಾಗುತ್ತಿಲ್ಲ. ಕೇವಲ ಟೆಂಡರ್‌ ಪ್ರಕ್ರಿಯೆಗೇ ಎರಡು ವರ್ಷ ಕಳೆದರೆ ಹೇಗೆ? ಟೆಂಡರ್‌ ವಿಳಂಬದಿಂದ ಕಾಮಗಾರಿ ವೆಚ್ಚ ಹೆಚ್ಚಾಗುತ್ತಿದೆಯೇ ಹೊರತು ದರ ಕಡಿಮೆ ಆಗುತ್ತಿಲ್ಲ. ನಿಮ್ಮ ಅಧಿಕಾರದ ಇತಿಮಿತಿಯಲ್ಲೇ ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಲು ಯತ್ನಿಸಬೇಕು ಎಂದು ಸಂಸದ ಭಗವಂತ ಖೂಬಾ ಸೂಚಿಸಿದರು.

ಅಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡದ ಕಾರಣ ಅಭಿವೃದ್ಧಿ ಕಾರ್ಯಗಳು ವೇಗ ಪಡೆದುಕೊಳ್ಳುತ್ತಿಲ್ಲ. ಸಭೆ ಎಂದಾಕ್ಷಣ ಬಿಸ್ಕತ್ತು ಚಹಾ ಸೇವಿಸಿ ಹೋಗುತ್ತಿದ್ದಾರೆ. ಕಾಲಮಿತಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸುತ್ತಿಲ್ಲ ಎಂದರು.

ತಾಂತ್ರಿಕ ಅಡಚಣೆಗಳಿದ್ದರೆ ತಕ್ಷಣ ನನ್ನ ಗಮನಕ್ಕೆ ತರಬೇಕು. ಅನುಮತಿ ಪಡೆಯಲು ಬೇರೆ ಇಲಾಖೆಗಳಿಗೆ ಪತ್ರ ಕಳಿಸಿ ಕಚೇರಿಯಲ್ಲೇ ಕುಳಿತರೆ ಪ್ರಯೋಜನವಿಲ್ಲ. ಒಂದು ವಾರದಲ್ಲಿ ಟೆಲಿಕಾಂ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಕಾಲಮಿತಿಯಲ್ಲಿ ಕೆಲಸ ಮಾಡಲು ಆಗದಿದ್ದರೆ ಇಲ್ಲಿಂದ ಜಾಗ ಖಾಲಿ ಮಾಡಬೇಕು ಎಂದು ಎಚ್ಚರಿಕೆ ನೀಡಿದರು.

ಕೇಂದ್ರ ಸರ್ಕಾರ, ಡಿಜಿಟಲ್‌ ಇಂಡಿಯಾ ಯೋಜನೆಗೆ ಒತ್ತು ಕೊಡುತ್ತಿದೆ. ಆದರೆ ಜಿಲ್ಲಾ ಮಟ್ಟದಲ್ಲಿ ಅದರ ಪರಿಜ್ಞಾನವೂ ಇಲ್ಲವಾಗಿದೆ. ಜಿಲ್ಲೆಯ 186 ಗ್ರಾಮ ಪಂಚಾಯಿತಿಗಳಿಗೆ ಬ್ರಾಂಡ್‌ಬ್ಯಾಂಡ್‌ ಕನೆಕ್ಷನ್‌ ಕೊಡಬೇಕು. ಅಭಿವೃದ್ಧಿಯ ವೇಗ ಹೆಚ್ಚಿಸಲು ನೆರವಾಗಬೇಕು. ನಿಮ್ಮ ನಿಧಾನಗತಿ ಕಾಮಗಾರಿಯಿಂದ ಇನ್ನುಳಿದ ಇಲಾಖೆಗಳ ಮೇಲೂ ದುಷ್ಪರಿಣಾಮ ಉಂಟಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

2005ರಲ್ಲಿ ಕೊಹಿನೂರು –ಲಾಡವಂತಿ ವರೆಗೆ ರಸ್ತೆ ನಿರ್ಮಾಣ ಮಾಡುವಾಗ ಲಾಡವಂತಿ, ಚಿತ್ತಕೋಟಾ, ಭಕನಾಳ, ಲಾಡವಂತಿವಾಡಿ ಗ್ರಾಮದ ಮನೆಗಳಿಗೆ ಇದ್ದ ನೂರಾರು ಟೆಲಿಫೋನ್‌ ಸಂಪರ್ಕ ಕಡಿತಗೊಂಡಿವೆ. ಬಿಎಸ್ಎನ್‌ಎಲ್‌ ಅಧಿಕಾರಿಗಳು ಈವರೆಗೂ ಲೈನ್‌ ದುರಸ್ತಿ ಮಾಡಿಲ್ಲ. ಹೊಸ ಕನೆಕ್ಷನ್‌ ಆದರೂ ಕೊಡಿ ಎಂದು ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ ಎಂದು ಸದಸ್ಯ ಜೈಹಿಂದ ಶಿಂದೆ ದೂರಿದರು.

ಲೈನ್‌ಗಳು ತುಂಡಾಗಿರುವುದನ್ನು ಪತ್ತೆ ಮಾಡಲು ಕಷ್ಟವಾಗಲಿದೆ. ತಾಂತ್ರಿಕ ಕಾರಣಗಳಿಂದಾಗಿ 2005ರಲ್ಲಿ ತುಂಡಾದ ಹಳೆಯ ಕೇಬಲ್‌ ದುರಸ್ತಿ ಮಾಡಿಲ್ಲ. ಹೊಸದಾಗಿ 7 ಕಿ.ಮೀ ಉದ್ದದ ಲೈನ್‌ ಹಾಕಬೇಕಿದೆ ಎಂದು ಅಧಿಕಾರಿಯೊಬ್ಬರು ಉತ್ತರಿಸಿದರು. 12 ವರ್ಷಗಳ ನಂತರವೂ ಲೈನ್‌ ದುರಸ್ತಿ ಮಾಡಿ ದೂರವಾಣಿ ಸಂಪರ್ಕ ಕಲ್ಪಿಸದ್ದಕ್ಕೆ ಸಂಸದರು ಅಸಮಾಧಾನ ವ್ಯಕ್ತಪಡಿಸಿದರು.

ನಿರ್ಲಕ್ಷ್ಯ ಸಲ್ಲ: ನಾಸಿಗಾರ

ಟೆಲಿಕಾಂ ಗ್ರಾಹಕರಿಗೆ ಉತ್ತಮ ಸೇವೆ ಕೊಡುವಲ್ಲಿ ಬೀದರ್‌ ಜಿಲ್ಲೆ ರಾಜ್ಯದಲ್ಲಿಯೇ ಹಿಂದುಳಿದಿದೆ ಎಂದು ಸಲಹಾ ಸಮಿತಿ ಸದಸ್ಯ ಸಂಗಮೇಶ ನಾಸಿಗಾರ ಸಭೆಯಲ್ಲಿ ಆರೋಪಿಸಿದರು.

ಕಳೆದ ವರ್ಷ ತಾಂತ್ರಿಕ ಕಾರಣಗಳಿಂದಾಗಿ ಆರು ತಿಂಗಳ ಕಾಲ ಬಿಎಸ್‌ಎನ್‌ಎಲ್ ಸ್ಥಿರ ದೂರವಾಣಿಯಿಂದ ರಿಲಯನ್ಸ್‌ ಮೊಬೈಲ್‌ಗಳಿಗೆ ಕರೆ ಮಾಡಲು ಸಾಧ್ಯವಾಗಲಿಲ್ಲ. ಈಗ ಮತ್ತೆ ಮೂರು ತಿಂಗಳಿಂದ ಸ್ಥಿರ ದೂರವಾಣಿಯಿಂದ ರಿಲಯನ್ಸ್‌ ನಂಬರ್‌ಗೆ ಒಳಬರುವ ಹಾಗೂ ಹೊರ ಹೋಗುವ ಕರೆಗಳು ಹೋಗುತ್ತಿಲ್ಲ ಎಂದು ತಿಳಿಸಿದರು.

ನಗರದ ಜ್ಯೋತಿ ಕಾಲೊನಿ, ಅಕ್ಕ ಮಹಾದೇವಿ ಕಾಲೇಜು, ಗುರುದ್ವಾರ, ನರಸಿಂಹ ಝರಣಾ ಪ್ರದೇಶದಲ್ಲಿ ಮೊಬೈಲ್ ನೆಟ್‌ವರ್ಕ್‌ ದುರ್ಬಲವಾಗಿದೆ. ಎರಡು ವರ್ಷಗಳ ಹಿಂದೆಯೇ ಟಿಡಿಎಂ ಅವರಿಗೆ ಲಿಖಿತ ಮನವಿ ಕೊಡಲಾಗಿದೆ. ತಾಂತ್ರಿಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಈ ಪ್ರದೇಶದಲ್ಲಿ ಲೋಪ ಇರುವುದನ್ನು ಖಾತ್ರಿ ಪಡಿಸಿದ್ದಾರೆ. ಆದರೂ ಗ್ರಾಹಕರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ದೂರಿದರು.

ಜಿಲ್ಲೆಯ ಗಡಿಯಲ್ಲಿರುವ ಔರಾದ್‌ ತಾಲ್ಲೂಕಿನ ಕರಂಜಿ, ಬೀದರ್ ತಾಲ್ಲೂಕಿನ ಚಿಲ್ಲರ್ಗಿ, ಮನ್ನಳ್ಳಿ ಗ್ರಾಮದಲ್ಲಿ ತೆಲಂಗಾಣದ ನೆಟ್‌ವರ್ಕ್‌ ಇದೆ. ಈ ಗ್ರಾಮಗಳು ಕರ್ನಾಟಕದಲ್ಲಿದ್ದರೂ ಎಸ್‌ಟಿಡಿ ದರದಲ್ಲಿ ಮಾತನಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಬಸವಕಲ್ಯಾಣ ತಾಲ್ಲೂಕಿನ ಹುಲಸೂರು, ಭಾಲ್ಕಿ ತಾಲ್ಲೂಕಿನ ಡೊಣಗಾಪುರ ವ್ಯಾಪ್ತಿಯಲ್ಲಿ ಪ್ರವೇಶ ಮಾಡಿದ ತಕ್ಷಣ ನಮ್ಮ ಮೊಬೈಲ್‌ಗೆ ‘ವೆಲ್‌ಕಮ್‌ ಟು ಮಹಾರಾಷ್ಟ್ರ’ ಎನ್ನುವ ಸಂದೇಶ ಬರುತ್ತಿದೆ. ಜಿಲ್ಲಾ ಕೇಂದ್ರದಲ್ಲೇ ಮೊಬೈಲ್‌ ನೆಟ್‌ವರ್ಕ್‌ ದುರ್ಬಲವಾಗಿದೆ ಎಂದು ಹೇಳಿದರು.

ಐತಿಹಾಸಿಕ ತಾಣಗಳು ನಗರದಲ್ಲಿವೆ. ಮೊಬೈಲ್‌ ನೆಟ್‌ವರ್ಕ್‌ನಿಂದ ಪ್ರವಾಸಿಗರೂ ತೊಂದರೆ ಅನುಭವಿಸುತ್ತಿದ್ದಾರೆ. ಒಂದು ಕಡೆ ಮಹಾರಾಷ್ಟ್ರ ಹಾಗೂ ಇನ್ನೊಂದು ಕಡೆ ತೆಲಂಗಾಣ ಇದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಅಧಿಕಾರಿಗಳು ಉತ್ತಮ ಸೇವೆ ನೀಡಬೇಕು ಎಂದು ಮನವಿ ಮಾಡಿದರು.

* ಅಧಿಕಾರಿಗಳು ಕಾನೂನು ಪುಸ್ತಕ ಒಂದೇ ಓದಿದರೆ ಸಾಲದು, ಇನ್ನುಳಿದ ಪ್ರಗತಿಪರ ವಿಚಾರಧಾರೆಯ ಪುಸ್ತಕ ಓದುವುದು ಅಗತ್ಯ.
ಭಗವಂತ ಖೂಬಾ, ಸಂಸದ

ಆದಾಯ ಮತ್ತು ವಿವರ:

₹11 ಕೋಟಿ  - 2014–2015ರಲ್ಲಿ ಆದಾಯ ಬಂದಿದೆ

ಶೀಘ್ರ ಇಂಟರ್‌ನೆಟ್‌ 140 ಗ್ರಾಮ ಪಂಚಾಯಿತಿಗಳಿಗೆ ಶೀಘ್ರ ಇಂಟರ್‌ನೆಟ್‌ ಸಂಪರ್ಕ ₹9.56

ಕೋಟಿ 2015–2016ರಲ್ಲಿ ಬಂದ ಆದಾಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT