ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ

ಗಣಿತ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರತಿಭೆ ಮೆರೆದ ಗ್ರಾಮೀಣ ವಿದ್ಯಾರ್ಥಿಗಳು
Last Updated 15 ಫೆಬ್ರುವರಿ 2017, 9:04 IST
ಅಕ್ಷರ ಗಾತ್ರ

ಲಿಂಗಸುಗೂರು: ತಾಲ್ಲೂಕಿನ ಸರ್ಜಾಪುರ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರ ಪರಿಶ್ರಮದಿಂದ ರಾಷ್ಟ್ರಮಟ್ಟಕ್ಕೆ ಗ್ರಾಮೀಣ ಪ್ರತಿಭೆಗಳನ್ನು ಕಳುಹಿಸುವ ಮೂಲಕ ಜಿಲ್ಲೆಯ ಶಾಲೆಗಳಿಗೆ ಮಾದರಿಯಾಗಿದೆ.

ಶಾಲೆಯ ಗಣಿತ ಶಿಕ್ಷಕಿ ವಿಜಯಲಕ್ಷ್ಮಿ ಪರಿಶ್ರಮದಿಂದ ಈಚೆಗೆ ಪುದುಚೆರಿಯಲ್ಲಿ ನಡೆದ 2016– 17ನೇ ಸಾಲಿನ ದಕ್ಷಿಣ ವಲಯ ರಾಜ್ಯಗಳ ಪ್ರೌಢಶಾಲೆಗಳ ವಿಜ್ಞಾನ ವಸ್ತುಪ್ರದರ್ಶನದ ಗಣಿತ ವಿಭಾಗದಲ್ಲಿ ಸರ್ಜಾಪುರ ಸರ್ಕಾರಿ ಪ್ರೌಢಶಾಲೆಯ ಶ್ವೇತಾ ಅಮರೇಶ ಮತ್ತು ಪದ್ಮಾ ಯಲ್ಲಪ್ಪ ದ್ವಿತೀಯ ಸ್ಥಾನ ಗಳಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ.

ತಾಲ್ಲೂಕು ಕೇಂದ್ರದಿಂದ 7 ಕಿ.ಮೀ. ಅಂತರದಲ್ಲಿರುವ ಸರ್ಜಾಪುರದಲ್ಲಿ 1998– 99ರಲ್ಲಿ ಆರಂಭಗೊಂಡ ಸರ್ಕಾರಿ ಪ್ರೌಢಶಾಲೆ 2016– 17ರ ಅವಧಿಯಲ್ಲಿ 171 ಮಕ್ಕಳ ದಾಖಲಾತಿ ಹೊಂದಿದೆ. ಪ್ರಸಕ್ತ ವರ್ಷ ಎಸ್‌ಎಸ್‌ಎಲ್‌ಸಿ ಗೆ 57 ಮಕ್ಕಳು ಇದ್ದು, ನೂರರಷ್ಟು ಫಲಿತಾಂಶ ತರಲು ಪಯತ್ನಿಸುತ್ತಿರುವುದಾಗಿ ಶಿಕ್ಷಕರು ಹೇಳಿದರು.

ಗ್ರಾಮದ ಹೊರವಲಯದಲ್ಲಿ 5.20 ಎಕರೆ ಪ್ರದೇಶದಲ್ಲಿ ವಿಶಾಲವಾದ ಮೈದಾನದಲ್ಲಿ ಸುಸಜ್ಜಿತ 9ಕ್ಕೂ ಹೆಚ್ಚು ಕೊಠಡಿ ನಿರ್ಮಾಣ ಮಾಡಲಾಗಿದೆ. ಸುತ್ತಲು ಕಾಂಪೌಂಡ್‌, ಶುದ್ಧ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ಸಮರ್ಪಕ ವಿದ್ಯುತ್‌, ರ್‍್ಯಾಂಪ್‌, ಅಚ್ಚುಕಟ್ಟಾದ ಬಿಸಿಯೂಟ ಕೊಠಡಿ, ವಿಷಯವಾರು ಶಿಕ್ಷಕರನ್ನು ಹೊಂದಿದ್ದು, ಶಾಲೆಯ ಹಿರಿಮೆಯನ್ನು ಹೆಚ್ಚಿಸಿದೆ.

ಗಣಿತ, ಸಮಾಜ ವಿಜ್ಞಾನ, ವಿಜ್ಞಾನ ಪ್ರಯೋಗಾಲಯ ಇದೆ. ಕಂಪ್ಯೂಟರ್‌ ಲ್ಯಾಬ್‌, 1463 ಪುಸ್ತಕಗಳಿರುವ ಗ್ರಂಥಾಲಯ, ಕಂಪ್ಯೂಟರ್‌ ಶಿಕ್ಷಣದ ಜೊತೆ ಇಂಗ್ಲಿಷ್‌, ಗಣಿತ, ವಿಜ್ಞಾಣ ವಿಷಯಗಳನ್ನು ಸೆಟ್‌ಲೈಟ್‌ ಮೂಲಕ ಬೋಧನೆ ಮಾಡುತ್ತಿರುವುದು ಇಲ್ಲಿನ ವಿಶೇಷ. ಅಲ್ಲದೆ ಇಲ್ಲಿನ ಮಕ್ಕಳು ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ವಿಭಾಗ ಮತ್ತು ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.

ಶಾಲಾ ಮುಖ್ಯ ಗುರುಗಳ ನೇತೃತ್ವದಲ್ಲಿ ಫಲಿತಾಂಶ ಹೆಚ್ಚಿನ ಮಟ್ಟದಲ್ಲಿ ತರುವ ಉದ್ದೇಶದಿಂದ ಓದು ಮನೆ ಕಾರ್ಯಕ್ರಮದ ಮೂಲಕ ಮಕ್ಕಳನ್ನು ಬೆಳಿಗ್ಗೆ 5 ಗಂಟೆಗೆ ಎಬ್ಬಿಸಿ ಓದಿಸಲು ವಿಶೇಷ ಆಸಕ್ತಿ ವಹಿಸಲಾಗಿದೆ. ಪ್ರತಿ ನಿತ್ಯ ಬೆಳಿಗ್ಗೆ 5ರಿಂದ 7 ಸಂಜೆ 6ರಿಂದ 8ರ ಅವಧಿಯಲ್ಲಿ ಒಬ್ಬ ಶಿಕ್ಷಕರು ಭೇಟಿ ನೀಡಿ ಕಲಿಸುತ್ತಿರುವ ಬಗ್ಗೆ ಗ್ರಾಮಸ್ಥರಾದ ಗುಂಡಪ್ಪ ನಾಯಕ, ಮಲ್ಲಪ್ಪ ಸರ್ಜಾಪುರ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಕಳೆದ ಹಲವು ವರ್ಷಗಳಲ್ಲಿ ಸರ್ಕಾರಿ ಪ್ರೌಢಶಾಲೆ ಮಕ್ಕಳ ಸಾಧನೆ ಹಿಂದೆ ಸ್ಥಳೀಯ ಮುಖಂಡರ, ಈ ಹಿಂದಿನ ಮುಖ್ಯ ಗುರುಗಳ ಹಾಗೂ ಶಿಕ್ಷಕರ ನಿರಂತರ ಪರಿಶ್ರಮವಿದೆ. ಈಗಲು ಕೂಡ ಶಿಕ್ಷಕ ಸಮೂಹ ಶಾಲಾ ಅವಧಿ ಮೀರಿ ಕೆಲಸ ಮಾಡುವ ಜೊತೆಗೆ ಭವಿಷ್ಯದಲ್ಲಿ ಶಾಲೆ ಕೀರ್ತಿ ಹೆಚ್ಚಿಸಲು ಹಲವು ಪ್ರಯತ್ನ ನಡೆಸಿದ್ದಾರೆ ಎಂದು ಮುಖ್ಯಗುರು ಎಂ.ವಿ.ಕಂಬಾರ ತಿಳಿಸಿದ್ದಾರೆ.
ಬಿ.ಎ. ನಂದಿಕೋಲಮಠ

* ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 95ರಷ್ಟು ಅಂಕ ಪಡೆದವರಿಗೆ  ₹30 ಸಾವಿರ ಬಹುಮಾನ ಮತ್ತು ಡಿಪ್ಲೊಮಾ ಕಲಿಕೆಗೆ ಪ್ರೋತ್ಸಾಹ ನೀಡಲು ಗ್ರಾಮಸ್ಥರು ಮುಂದಾಗಿದ್ದಾರೆ.
ಎಂ.ವಿ.ಕಂಬಾರ, ಪ್ರೌಢಶಾಲೆ ಮುಖ್ಯಗುರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT