ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕ ವಜ್ಜಲ ಕಚೇರಿಗೆ ರೈತರ ಮುತ್ತಿಗೆ

ಲಿಂಗಸುಗೂರು: ತೊಗರಿ ಖರೀದಿ ಕೇಂದ್ರ ಬಂದ್‌, ಮತ್ತೆ ಆರಂಭಿಸಲು ಆಗ್ರಹ
Last Updated 15 ಫೆಬ್ರುವರಿ 2017, 9:11 IST
ಅಕ್ಷರ ಗಾತ್ರ
ಲಿಂಗಸುಗೂರು: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದ ತೊಗರಿ ಖರೀದಿ ಕೇಂದ್ರ ಬಂದ್‌ ಮಾಡಿರುವುದನ್ನು ವಿರೋಧಿಸಿ ರೈತರು ಶಾಸಕ ಮಾನಪ್ಪ ವಜ್ಜಲ ಅವರ ಕಚೇರಿಗೆ ಮುತ್ತಿಗೆ ಹಾಕಿ ಮಂಗಳವಾರ ಪ್ರತಿಭಟನೆ ನಡೆಸಿದರು.
 
ಭಾರತೀಯ ಆಹಾರ ನಿಗಮದಿಂದ ಡಿ. 14ರಿಂದ ಆರಂಭಗೊಂಡಿರುವ ತೊಗರಿ ಖರೀದಿ ಕೇಂದ್ರದ ಅಧಿಕಾರಿಗಳು ರೈತರಲ್ಲಿ ಗೊಂದಲ ಮೂಡಿಸುತ್ತಿದ್ದು, ವರ್ತಕರಿಂದ ಹೆಚ್ಚಿನ ಬೆಲೆಗೆ ತೊಗರಿ ಖರೀದಿಸುತ್ತಿದ್ದಾರೆ. ತೊಗರಿ ಮಾರಾಟ ಮಾಡಲು ಬರುವ ರೈತರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದರು.
 
ಕಳೆದ ಎರಡು ತಿಂಗಳಿಂದ ನಿರಂತರ ಹೋರಾಟ ನಡೆಸುತ್ತಿರುವ ರೈತರ ಸಮಸ್ಯೆಗಳಿಗೆ ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ. ಕೇಂದ್ರದಲ್ಲಿ ದಿನಕ್ಕೊಂದು ನೀತಿ, ನಿಯಮ ಹಾಕುವ ಮೂಲಕ ವ್ಯವಸ್ಥಾಪಕರು ರೈತರಿಗೆ ವಂಚನೆ ಮಾಡುತ್ತಿದ್ದಾರೆ. ಬೆಂಬಲ ಬೆಲೆಗೆ ಪ್ರೋತ್ಸಾಹಧನ ಸೇರಿಸಿ ಖರೀದಿ ಮಾಡುವುದರಿಂದ ಹಿಡಿದು ಎಲ್ಲ ಹಂತದಲ್ಲಿ ಸಮಸ್ಯೆ ಸೃಷ್ಟಿಸುತ್ತಿದ್ದಾರೆ. ರೈತರಿಗೆ ಒಂದೂವರೆ ತಿಂಗಳಾದರು ಹಣ ಪಾವತಿಸುತ್ತಿಲ್ಲ. ರೈತರ ಮೇಲೆ ದಬ್ಬಾಳಿಕೆ ನಡೆಸಿದ ಅಧಿಕಾರಿ ಮತ್ತು ಹಮಾಲರ ವಿರುದ್ಧ ಪ್ರಕರಣ ದಾಖಲಾದರೂ ತಾಲ್ಲೂಕು ಆಡಳಿತ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು  ಹೇಳಿದರು. 
 
ರೈತ ಮಹಿಳೆ ಹನುಮಂತಿ ಕನಸಾವಿ ಮಾತನಾಡಿ, ಶಾಸಕರು ಗ್ರಾಮಗಳಿಗೆ ಭೇಟಿ ನೀಡಿ ಭರವಸೆ ನೀಡಿರುತ್ತೀರಿ. ಆದರೆ ಖರೀದಿ ಕೇಂದ್ರ ಬಂದ್‌ ಮಾಡಿದ್ದರೂ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಶಾಸಕರು ಕಚೇರಿಯಿಂದ ಹೊರ ಬಂದು ಕೇಂದ್ರಕ್ಕೆ ಭೇಟಿ ನೀಡಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು. ರೈತ ಮುಖಂಡರಾದ ಅಂದಾನೆಪ್ಪ, ಬಸಲಿಂಗಪ್ಪ, ಬಸಪ್ಪ, ವೆಂಕನಗೌಡ, ಹನುಮಂತ, ಶಿವಪುತ್ರಪ್ಪ, ಹನುಮಗೌಡ ಭಾಗವಹಿಸಿದ್ದರು.
 
‘ಭೇಟಿ ನೀಡುವ ಅಗತ್ಯವಿಲ್ಲ’

ಸಣ್ಣಪುಟ್ಟ ಸಮಸ್ಯೆಗಳನ್ನು ಕೇಳಲು ನಾನು ಶಾಸಕನಾಗಿಲ್ಲ. ಈಗಾಗಲೇ ಖರೀದಿ ಕೇಂದ್ರದ ಬಗ್ಗೆ ಉಪ ವಿಭಾಗಾಧಿಕಾರಿಗೆ ದೂರವಾಣಿ ಮೂಲಕ ಮಾತನಾಡಿದ್ದು, ಸ್ವತಃ ಭೇಟಿ ನೀಡುವ ಅವಶ್ಯಕತೆ ಇಲ್ಲ. ನಿಮಗೆ ನ್ಯಾಯ ಒದಗಿಸಲು ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ಶಾಸಕ ಮಾನಪ್ಪ ವಜ್ಜಲ  ಕಚೇರಿಯಿಂದ ಹೊರನಡೆದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT