ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲ್ಲಗಳ ಮಧ್ಯೆ ಗುಣಾತ್ಮಕ ಶಿಕ್ಷಣದ ಶಾಲೆ

ಕಾರಟಗಿ: ಮರ್ಲಾನಹಳ್ಳಿ ಗ್ರಾಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
Last Updated 15 ಫೆಬ್ರುವರಿ 2017, 9:33 IST
ಅಕ್ಷರ ಗಾತ್ರ

ಕಾರಟಗಿ: ಸರ್ಕಾರಿ ಶಾಲೆಯಾದರೂ ಉತ್ತಮ ಆವರಣ ಇದ್ದು, ವಿದ್ಯಾರ್ಥಿಗಳಿಗೆ ಪಾಠದ ಜೊತೆಗೆ ಆಟಕ್ಕೂ ಅನುಕೂಲ ಕಲ್ಪಿಸಿದೆ. ಉತ್ತಮ ಪರಿಸರ ಹೊಂದಿರುವ  ಮರ್ಲಾನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ  ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುತ್ತಿದೆ.

ಶಾಲೆಯ 166 ವಿದ್ಯಾರ್ಥಿಗಳಿಗೆ ಬೌದ್ಧಿಕ ಬೆಳವಣಿಗೆಗೆ, ಸಂಸ್ಕೃತಿ ಬೋಧನೆಗಾಗಿ ಶಾಲೆಯ 8 ಶಿಕ್ಷಕರು ಮುಖ್ಯಗುರು ವೈ. ವಸಂತಕುಮಾರಿ ಶ್ರಮಿಸುತ್ತಿದ್ದಾರೆ. ಶಾಲಾ ಅವಧಿಯಲ್ಲಿ ಪಠ್ಯ, ಬಳಿಕ ಪಠ್ಯೇತರ ವಿಷಯಗಳಲ್ಲಿ ವಿದ್ಯಾರ್ಥಿಗಳನ್ನು ಪಳಗಿಸಲಾಗುತ್ತಿದೆ.

ವಿವಿಧೆಡೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡು ಎಲ್ಲರಿಂದಲೂ ಸೈ ಎನಿಸಿಕೊಂಡಿದ್ದಾರೆ. ಗಣಿತ ಕಲಿಕೆ, ಪ್ರತಿಭಾ ಕಾರಂಜಿ , ವಿವಿಧ ಸ್ಫರ್ಧೆಗಳಲ್ಲಿ ವಿದ್ಯಾರ್ಥಿಗಳು ಸಾಧನೆಯನ್ನು ಮೆರೆದು ಬಹುಮಾನಗಳನ್ನು ಬಾಚಿಕೊಂಡಿದ್ದಾರೆ.

ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ, ಶಿಕ್ಷಣ ಹಕ್ಕು ಅಭಿಯಾನ, ಆರೋಗ್ಯದ ಅರಿವು ಅಭಿಯಾನ ಮುಂತಾದ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಜಾಥಾ ನಡೆಸಿ ಜಾಗೃತಿ ಮೂಡಿಸುತ್ತಾ, ಸಾಮಾಜಿಕ ಕಳಕಳಿಯನ್ನು ಮೆರೆಯುತ್ತಿದ್ದಾರೆ. ಬಿಡುವಿನ ವೇಳೆಯಲ್ಲಿ ಶಾಲಾ ಆವರಣದ ಸ್ವಚ್ಛತೆ, ಸಸಿಗಳ ನಾಟಿ,  ಪೋಷಣೆ ಮಾಡುತ್ತಾ ತಮ್ಮ ಪರಿಸರ ಕಾಳಜಿ ವಹಿಸುತ್ತಿದ್ದಾರೆ. ತಿಳಿವಳಿಕೆ ಮೂಡಿಸಿಕೊಳ್ಳಲು ವಿದ್ಯಾರ್ಥಿಗಳು ವರ್ಷಕ್ಕೊಮ್ಮೆ ವಿವಿಧೆಡೆ ಪ್ರವಾಸಕ್ಕೆ ತೆರಳುವ ಸಂಪ್ರದಾಯ ಮುಂದುವರೆಸಿದ್ದಾರೆ.

ಸರ್ಕಾರಿ ಶಾಲೆ ಅಂದ ಮೇಲೆ ಸರ್ಕಾರದ ಅನುಕೂಲಗಳು, ಸೌಲಭ್ಯಗಳತ್ತ ನಿರ್ಲಕ್ಷ್ಯ ಇಲ್ಲೂ ಎದ್ದು ಕಾಣುತ್ತಿದೆ. ಇಬ್ಬರು ಅತಿಥಿ ಶಿಕ್ಷಕರನ್ನು ತಗೆದುಕೊಂಡಿದೆಯಾದರೂ, ನಲಿಕಲಿ, ಟಿಜಿಟಿ ಯೋಜನೆ ಶಿಕ್ಷಕರ ಕೊರತೆ ಇದೆ. 2 ಕೊಠಡಿಗಳ ಅವಶ್ಯಕತೆ ಇದ್ದು, ದುರಸ್ತಿ ಆಗಬೇಕಿದೆ.

ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆಗೆ ವಿದ್ಯಾರ್ಥಿಗಳು ಮಾಡಿಕೊಂಡ ಮನವಿಗೆ  ಅಧಿಕಾರಿಗಳು ಇನ್ನೂ ಸ್ಪಂದಿಸಿಲ್ಲ. ‘ಇಲ್ಲ’ಗಳ ಮಧ್ಯೆಯೂ ಶಿಕ್ಷಕರು, ವಿದ್ಯಾರ್ಥಿಗಳು ಉತ್ಸಾಹದಿಂದಲೇ ಕಲಿಕೆಯಲ್ಲಿ, ಜೀವನ ಶಿಕ್ಷಣ ಪಡೆಯುವಲ್ಲಿ ನಿರತರಾಗಿರುವುದು ಈ ಶಾಲೆಯ ವಿಶೇಷ.
- ಕೆ. ಮಲ್ಲಿಕಾರ್ಜುನ

ಎಲ್ಲರ ಸಹಕಾರದೊಂದಿಗೆ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಿ, ಪರಿಸರ ಪ್ರಜ್ಞೆ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಉತ್ತಮ ಸ್ಪಂದನೆ ದೊರೆತು ನಮ್ಮ ಉತ್ಸಾಹ ಹೆಚ್ಚಿಸಿದೆ.

ವೈ. ವಸಂತಕುಮಾರಿ, ಮುಖ್ಯಗುರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT