ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲಾಖೆಯ ಕಡತಕ್ಕೆ ‘ಮಕ್ಕಳ ಗ್ರಾಮಸಭೆ’ ಸೀಮಿತ!

2006ರಲ್ಲಿ ಹೊರಬಿದ್ದ ಸರ್ಕಾರದ ಆದೇಶ; ಜಿಲ್ಲಾ ಪಂಚಾಯಿತಿ ಸಿಇಒಗಳ ನಿರ್ಲಕ್ಷ್ಯ
Last Updated 15 ಫೆಬ್ರುವರಿ 2017, 9:50 IST
ಅಕ್ಷರ ಗಾತ್ರ
ಯಾದಗಿರಿ: ಮಕ್ಕಳ ಮೇಲಿನ ದೌರ್ಜನ್ಯ, ಶೋಷಣೆ, ಕಿರುಕುಳ ತಡೆಗಟ್ಟಿ ಮಕ್ಕಳ ಹಕ್ಕುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಸರ್ಕಾರ ಜಾರಿಗೊಳಿಸಿರುವ ‘ಮಕ್ಕಳ ಗ್ರಾಮಸಭೆ’ಗಳಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರುಗಳ ಗೈರು ಹಾಜರಿಯೇ ಸವಾಲಾಗಿ ಪರಿಣಮಿಸಿದೆ.
 
ಪ್ರತಿವರ್ಷ ನವೆಂಬರ್‌13ರಿಂದ ನ.30ರವರೆಗೆ ಮಕ್ಕಳ ಹಕ್ಕುಗಳ ಸಪ್ತಾಹ ಹಮ್ಮಿಕೊಳ್ಳುವಂತೆ ಅದೇ ದಿನಗಳಲ್ಲಿ ಶಾಲಾ ಹಂತದಲ್ಲಿ ಮಕ್ಕಳ ಗ್ರಾಮಸಭೆಗಳನ್ನು ಕಡ್ಡಾಯವಾಗಿ ನಡೆಸುವಂತೆ ಸರ್ಕಾರ ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಆದೇಶಿಸಿದೆ. ಆದರೆ, ಸರ್ಕಾರದ ಆದೇಶ ಹೊರಬಿದ್ದು ದಶಕ ಕಳೆದರೂ ರಾಜ್ಯದಲ್ಲಿ ಮಕ್ಕಳ ಗ್ರಾಮಸಭೆಗಳು ನಡೆಯುತ್ತಿಲ್ಲ. ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳ ಅಧಿಕಾರಿಗಳು ಅಲ್ಲಲ್ಲಿ ನಡೆಸಿರುವ ಮಕ್ಕಳ ಗ್ರಾಮಸಭೆಗಳಿಗೆ ಗ್ರಾಮ ಪಂಚಾಯಿತಿಗಳ ಒಬ್ಬ ಅಧ್ಯಕ್ಷರೂ ಸಹ ಹಾಜರಾಗಿ ಮಕ್ಕಳ ಸಮಸ್ಯೆ ಆಲಿಸಿರುವ ವರದಿಯಾಗಿಲ್ಲ.
 
ಅಚ್ಚರಿ ಅಂದರೆ ತೀರಾ ಹಿಂದುಳಿದಿರುವ ಯಾದಗಿರಿ ಜಿಲ್ಲೆಯಲ್ಲಿ ಎಂಟು ವರ್ಷಗಳವರೆಗೆ ಸರ್ಕಾರದ ಆದೇಶ ಪಾಲನೆಯಾಗಿಲ್ಲ ಎಂಬ ಸಂಗತಿ ಬೆಳಕಿಗೆ ಬಂದಿದೆ. 2014ರಿಂದ ಜಿಲ್ಲೆಯಲ್ಲಿ ಮಕ್ಕಳ ಗ್ರಾಮಸಭೆಗಳನ್ನು ಹಮ್ಮಿಕೊಳ್ಳುತ್ತಾ ಬರಲಾಗಿದೆ.
 
ಆದೇಶದಲ್ಲಿ ಸೂಚಿಸಿದಂತೆ ‘ಮಕ್ಕಳ ಗ್ರಾಮಸಭೆ’ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿಗದಿಪಡಿಸಿದ ಶಾಲೆಯಲ್ಲಿ ನಡೆಸಲಾಗುತ್ತದೆ. ಈ ಗ್ರಾಮಸಭೆಗೆ ಶಿಕ್ಷಕರು ಸೇರಿದಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷ, ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ, ಗ್ರಾಮ ಪಂಚಾಯಿತಿ ಸದಸ್ಯರು ಕಡ್ಡಾಯವಾಗಿ ಹಾಜರಾಗಬೇಕು. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಯ್ದ ಶಾಲೆಗಳ ಮಕ್ಕಳು ಸೇರಿದಂತೆ ಸಭೆಯಲ್ಲಿ ಮಕ್ಕಳ ಹಕ್ಕುಗಳ ಸಾಧಕ–ಬಾಧಕಗಳ ಬಗ್ಗೆ ಚರ್ಚೆ ನಡೆಸಬೇಕು. ನಂತರ ಸಭೆ ನಿರ್ಣಯಗಳನ್ನು ಕೈಗೊಳ್ಳಬೇಕು. ಆದರೆ, ಮಕ್ಕಳ ಗ್ರಾಮಸಭೆಗಳು ಕಾಟಾಚಾರಕ್ಕೆ ನಡೆಯುತ್ತಿದ್ದು, ಶಿಕ್ಷಕರು, ಮಕ್ಕಳು, ಅಧಿಕಾರಿಗಳು ಮಾತ್ರ ಸಭೆ ನಡೆಸುತ್ತಿದ್ದಾರೆ. ಮಕ್ಕಳ ಗ್ರಾಮಸಭೆ ಇಲಾಖೆಯ ಕಡತಕ್ಕೆ ಸೀಮಿತಗೊಂಡಿದೆ. ಜಿಲ್ಲಾ ಪಂಚಾಯಿತಿ ಸಿಇಒಗಳ ನಿರ್ಲಕ್ಷ್ಯ ಕೂಡ ಇದಕ್ಕೆ ಕಾರಣ ಎನ್ನಲಾಗಿದೆ.
 
1989ರಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆ ಪರವಾಗಿ ವಿಶ್ವಸಂಸ್ಥೆ ಮಕ್ಕಳ ಹಕ್ಕುಗಳ ಒಡಂಬಡಿಕೆ ಜಾರಿಗೊಳಿಸಿದೆ. ಈ ಒಡಂಬಡಿಕೆ ಒಪ್ಪಿಕೊಂಡು ಭಾರತ ಕೂಡ ಸಹಿ ಹಾಕಿದ್ದು, ಮಕ್ಕಳ ಹಕ್ಕುಗಳ ರಕ್ಷಣೆಗೆ ವಿಶೇಷ ಒತ್ತು ನೀಡುವಂತೆ ಎಲ್ಲಾ ರಾಜ್ಯಗಳಿಗೆ ಆದೇಶಿಸಿದೆ. ಆದರೆ, ಸಕಾಲಕ್ಕೆ ಸಮರ್ಪಕವಾಗಿ ಗ್ರಾಮಸಭೆ ನಡೆಯದೇ ಇರುವುದರಿಂದ ಮಕ್ಕಳ ಹಕ್ಕುಗಳ ಉಲ್ಲಂಘನೆ ನಿಂತಿಲ್ಲ. ಸ್ವಚ್ಛಂದವಾಗಿ ಜೀವಿಸುವ, ರಕ್ಷಣೆ ಹೊಂದುವ, ಅಭಿವೃದ್ಧಿ ಹೊಂದುವ, ಭಾಗವಹಿಸುವ ಹೀಗೆ ಅನೇಕ ಹಕ್ಕುಗಳಿಂದ ಮಕ್ಕಳು ವಂಚಿತರಾಗುತ್ತಿದ್ದಾರೆ.
 
ರಚನೆಯಾಗದ ಕಾವಲು ಸಮಿತಿ:ಮಕ್ಕಳ ಹಕ್ಕು ರಕ್ಷಿಸುವ ಉದ್ದೇಶದಿಂದ ಮಕ್ಕಳ ಕಾವಲು ಸಮಿತಿ ರಚಿಸುವಂತೆ ಗ್ರಾಮ ಪಂಚಾಯಿತಿಗಳಿಗೆ ಸರ್ಕಾರ ನಿರ್ದೇಶನ ನೀಡಿದೆ. ಜಿಲ್ಲೆಯ ಒಟ್ಟು 123 ಗ್ರಾಮ ಪಂಚಾಯಿತಿಗಳಿವೆ. ಆದರೆ, ಒಂದೂ ಗ್ರಾಮ ಪಂಚಾಯಿತಿಗಳಲ್ಲಿ ಮಕ್ಕಳ ಕಾವಲು ಸಮಿತಿ ರಚನೆಯಾಗಿಲ್ಲ. ಕಾವಲು ಸಮಿತಿ ರಚನೆಗೆ ಗ್ರಾಮ ಪಂಚಾಯಿತಿ ಪ್ರತಿನಿಧಿಗಳು ಸಹಕಾರ ನೀಡಿಲ್ಲ ಎಂಬ ದೂರು ವ್ಯಾಪಕವಾಗಿದೆ ಎನ್ನುತ್ತಾರೆ ಮಕ್ಕಳ  ರಕ್ಷಣಾ ಘಟಕದ ಅಧಿಕಾರಿಗಳು.
 
* ಜಿಲ್ಲಾ ಪಂಚಾಯಿತಿ ಸಿಇಒ ಮಕ್ಕಳ ಗ್ರಾಮಸಭೆ ನಡೆಯುತ್ತಿರುವ ಬಗ್ಗೆ ನಿಗಾ ಇರಿಸಿದರೆ ಆದೇಶ ಕನಿಷ್ಠವಾದರೂ ಪಾಲನೆಯಾಗಬಹುದು.
ಶರಣಪ್ಪ ಪಿ.ಅಮರಾಪುರ, ಮಕ್ಕಳ ಹಕ್ಕುಗಳ ಯೋಜನೆ ಸಂಯೋಜಕ
 
* ಮಕ್ಕಳ ಗ್ರಾಮಸಭೆ ಶಾಲಾ ಹಂತ ಹೊರತುಪಡಿಸಿ ಗ್ರಾಮ ಪಂಚಾಯಿತಿ ಹಂತದಲ್ಲಿ ಮಾಡುವುದರಿಂದ ಸಮಸ್ಯೆಗಳಿಗೆ ಪರಿಹಾರ ಸಿಗಬಹುದು
ಮಾಳಪ್ಪ, ಅಧ್ಯಕ್ಷ, ಜಿಲ್ಲಾ ಮಕ್ಕಳ ಹಕ್ಕುಗಳ ಒಕ್ಕೂಟ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT