ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇತ್ರದಲ್ಲಿ ಕಾಂಗ್ರೆಸ್‌ ಇದೆಯೋ– ಇಲ್ಲವೋ

ಜಾತ್ಯತೀತ ಜನತಾದಳ ಪಕ್ಷದ ಮುಖಂಡ ಕೆ.ಶ್ರೀನಿವಾಸಗೌಡ ಲೇವಡಿ
Last Updated 15 ಫೆಬ್ರುವರಿ 2017, 10:08 IST
ಅಕ್ಷರ ಗಾತ್ರ
ಕೋಲಾರ: ‘ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷ ಇದೆಯೋ ಅಥವಾ ಇಲ್ಲವೋ ಎಂಬ ಪ್ರಶ್ನೆ ಕಾಡುತ್ತಿದೆ’ ಎಂದು ಮಾಜಿ ಸಚಿವ ಕೆ.ಶ್ರೀನಿವಾಸಗೌಡ ಲೇವಡಿ ಮಾಡಿದರು.

ನಗರದಲ್ಲಿ ಮಂಗಳವಾರ ನಡೆದ ಎಪಿಎಂಸಿ ಅಧ್ಯಕ್ಷ ಮತ್ತು ಉಪಾಧ್ಯಕ್ಷಗಾದಿ ಚುನಾವಣೆಯಲ್ಲಿ ಜೆಡಿಎಸ್‌ ಬೆಂಬಲಿತ ನೂತನ ಅಧ್ಯಕ್ಷ ವೆಂಕಟೇಶ್‌ ಮತ್ತು ಉಪಾಧ್ಯಕ್ಷೆ ಬಿಜೆಪಿ ಬೆಂಬಲಿತ ಭಾಗ್ಯಮ್ಮ ಅವರನ್ನು ಅಭಿನಂದಿಸಿ ಅವರು ಮಾತನಾಡಿದರು.
 
‘ಕಾಂಗ್ರೆಸ್‌ ರಾಷ್ಟ್ರೀಯ ಪಕ್ಷವಾಗಿದೆ. ಚುನಾವಣೆಯಲ್ಲಿ ಪಕ್ಷೇತರರಾಗಿ ಆಯ್ಕೆಯಾದವರು ರಾಷ್ಟ್ರೀಯ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದನ್ನು ನೋಡಿದ್ದೇವೆ. ಆದರೆ, ಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಂಡರು ಚುನಾವಣೆ ಸಂದರ್ಭದಲ್ಲಿ ಪಕ್ಷೇತರ ಶಾಸಕ ವರ್ತೂರು ಪ್ರಕಾಶ್‌ ಜತೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ಚುನಾವಣೆ ಮುಗಿಯುತ್ತಿದ್ದಂತೆ ಶಾಸಕರಿಂದ ದೂರವಾಗಿ ಪಕ್ಷ ರಾಜಕೀಯ ಮಾಡುತ್ತಾರೆ’ ಎಂದು ಟೀಕಿಸಿದರು.
 
‘ಬೈರೇಗೌಡ, ವೆಂಕಟಗಿರಿಯಪ್ಪ ಅವರಥ ರಾಜಕೀಯ ಮುತ್ಸದಿಗಳು ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿ ಸಚಿವರಾಗಿದ್ದಾರೆ. ಆದರೆ, ಅವರ್‌್ಯಾರು ಈ ಶಾಸಕರಂತೆ ಹೊಲಸು ರಾಜಕೀಯ ಮಾಡಿಲ್ಲ. ಈ ಶಾಸಕರು ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ಜತೆ ಗುರುತಿಸಿಕೊಳ್ಳುತ್ತಾರೆ. ಇವರು ಕಾಂಗ್ರೆಸ್‌ನಲ್ಲಿ ಇದ್ದಾರೋ ಅಥವಾ ಪಕ್ಷೇತರರೂ ಎಂಬುದು ಗೊತ್ತಾಗುತ್ತಿಲ್ಲ. ಇವರಿಗೆ ಜನರು ತಕ್ಕಪಾಠ ಕಲಿಸುವ ಸಮಯ ಸಮೀಪಿಸುತ್ತಿದೆ’ ಎಂದು ಶಾಸಕ ವರ್ತೂರು ಪ್ರಕಾಶ್‌ ವಿರುದ್ಧ ವಾಗ್ದಾಳಿ ನಡೆಸಿದರು.
 
ಫಲಿತಾಂಶವೇ ಸಾಕ್ಷಿ: ‘ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆ ಎಂಬುದಕ್ಕೆ ಆಗ್ನೇಯ ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ ಫಲಿತಾಂಶವೇ ಸಾಕ್ಷಿ. ಪಕ್ಷವು ಸತತ ಮೂರನೇ ಬಾರಿಗೆ ಎಪಿಎಂಸಿ ಆಡಳಿತದ ಚುಕ್ಕಾಣಿ ಹಿಡಿದಿದೆ. ಮಾರುಕಟ್ಟೆಯ ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತ ಭವನ ನಿರ್ಮಿಸುತ್ತೇವೆ ಎಂದು ಶಾಸಕರು ಭರವಸೆ ನೀಡಿದ್ದರು. ಈ ಹಿಂದೆ ಜೆಡಿಎಸ್‌ ಆಡಳಿತಾವಧಿಯಲ್ಲಿ ರೈತ ಭವನ ನಿರ್ಮಿಸಿರುವ ಸಂಗತಿ ಪಾಪ ಅವರಿಗೆ ಗೊತ್ತಿಲ್ಲ’ ಎಂದು ವ್ಯಂಗ್ಯವಾಡಿದರು.
 
‘ಕೋಲಾರ ಎಪಿಎಂಸಿಯಲ್ಲಿ ಜಾಗದ ಸಮಸ್ಯೆ ಇರುವ ಕಾರಣ 28 ಎಕರೆ ಭೂಸ್ವಾಧೀನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಆದರೆ, ಸ್ಥಳೀಯ ಶಾಸಕರು ಭೂಸ್ವಾಧೀನಕ್ಕೆ ಅಡ್ಡಿಪಡಿಸಿ ಅದಕ್ಕೆ ಸಂಬಂಧಪಟ್ಟ ಕಡತವನ್ನೇ ನಾಪತ್ತೆ ಮಾಡಿಸಿದ್ದಾರೆ’ ಎಂದು ಆರೋಪಿಸಿದರು.
 
ಪ್ರತಿಭಟನೆ: ‘ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ನೀರಿನ ಸಮಸ್ಯೆ ತೀವ್ರಗೊಂಡಿದೆ. ಅಧಿಕಾರಿಗಳನ್ನು ಕೇಳಿದರೆ ಶಾಸಕರು ಅನುಮತಿ ನೀಡುವವರೆಗೆ ಕೊಳವೆ ಬಾವಿ ಕೊರೆಸುವುದಿಲ್ಲ ಎಂದು ಸಬೂಬು ಹೇಳುತ್ತಾರೆ. ನೀರಿನ ವಿಚಾರದಲ್ಲಿ ರಾಜಕೀಯ ಮಾಡುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಜಿಲ್ಲಾ ಪಂಚಾಯಿತಿ ಎದುರು ಬುಧವಾರ (ಫೆ.15) ಬೆಳಿಗ್ಗೆ 11ಕ್ಕೆ ಬೃಹತ್‌ ಪ್ರತಿಭಟನೆ ಮಾಡುತ್ತೇವೆ. ಪ್ರತಿ ಗ್ರಾಮದಿಂದಲೂ ಸಾರ್ವಜನಿಕರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು’ ಎಂದು ಮನವಿ ಮಾಡಿದರು.
ಜೆಡಿಎಸ್ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ನಟರಾಜ್, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಮುರಳೀಧರ್, ಗೋಪಾಲಗೌಡ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಸೋಮಣ್ಣ, ಎಪಿಎಂಸಿ ನಿರ್ದೇಶಕರು ಹಾಜರಿದ್ದರು.
 
ಭಂಡ ಶಾಸಕ, ಸ್ವಾರ್ಥ ರಾಜಕೀಯ
 
ಕೋಲಾರ: ‘ಕ್ಷೇತ್ರದಲ್ಲಿ ಕಾಂಗ್ರೆಸ್‌ ಸ್ಥಿತಿ ದಯನೀಯವಾಗಿದೆ. ಕಾಂಗ್ರೆಸ್‌ ಮುಖಂಡರಿಗೆ ಮಾನ ಮರ್ಯಾದೆ ಇಲ್ಲ. ಸ್ಥಳೀಯ ಶಾಸಕ ದೊಡ್ಡ ಭಂಡ. ಜನರ ಹಿತ ಕಾಯುವಲ್ಲಿ ವಿಫಲರಾಗಿರುವ ಅವರು ಸ್ವಾರ್ಥಕ್ಕಾಗಿ ರಾಜಕೀಯ ಮಾಡುತ್ತಿದ್ದಾರೆ’ ಎಂದು ಶ್ರೀನಿವಾಸಗೌಡ ಲೇವಡಿ ಮಾಡಿದರು.

ಕುಡಿಯಲು ನೀರು ಕೊಡಿ ಎಂದು ಅಧಿಕಾರಿಗಳನ್ನು ಕೇಳಿದರೆ ಶಾಸಕರತ್ತ ಬೆರಳು ತೋರಿಸುತ್ತಾರೆ. ಅಧಿಕಾರಿಗಳು ಜನರ ಕೆಲಸ ಮಾಡಲು ಸಂಬಳ ತೆಗೆದುಕೊಳ್ಳುತ್ತಾರೋ ಅಥವಾ ಶಾಸಕರ ಗುಲಾಮಗಾರಿ ಮಾಡುತ್ತಿದ್ದಾರೋ’ ಎಂದ ಪ್ರಶ್ನಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT