ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷಮಿಸಿಬಿಡು ಗೆಳತಿ, ಕನಸುಗಳು ನನ್ನ ಗಲ್ಲಿಗೇರಿಸುವ ಮುನ್ನ!

ಪ್ರಜಾವಾಣಿ ಪ್ರೇಮಪತ್ರ ಸ್ಪರ್ಧೆ–2017
Last Updated 15 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಪ್ರಿಯ ಗೆಳತಿ, ಸೂರ್ಯ ರಶ್ಮಿಯ ಕುಂಚವ ಆಕಾಶದ ನೀಲಿಯಲಿ ಅದ್ದಿ, ಹೃದಯಾಲಾಪಕೆ ಕಿವಿಗೊಟ್ಟು, ಮಿನುಗುವ ತಾರೆಗಳನ್ನು ಮೆಲ್ಲನೆ ಎಣಿಸಿ ಪೋಣಿಸಿ ಹೆಣೆದ ಪತ್ರವಿದು. ಆಡಂಬರಗಳ ಶೃಂಗಾರ ಲೇಪನವಿಲ್ಲದ ತಾರುಣ್ಯದ ಹಸಿ ಹಸಿ ಆಲಾಪನೆಯ ಪ್ರಲಾಪವಿದು. ಕೊರೆಯುವ ಚಳಿಯಲಿ ಬೆಂಕಿಗೂಡಿನ ಮುಂದೆ ಕುಳಿತು, ನಡುಗುವ ತುಟಿಗಳಿಗೆ ಚಹಾ ಹೀರುವಾಗ ಆಗುತ್ತಲ್ಲ, ಅಂತಹದೇ ಥ್ರಿಲ್ ಇದು.

ಜಾತ್ರೆಯಲಿ ಅವ್ವನಿಂದ ತಪ್ಪಿಸಿಕೊಂಡ ಮಗು ಜೀವವಿಲ್ಲದ ಗೊಂಬೆಯನ್ನು ಎದೆಗವುಚಿಕೊಂಡು, ಅವ್ವ ಅವ್ವ ಎಂದು  ಅಳುತ್ತಾ ದಿಕ್ಕು ದಿಕ್ಕಿಗೂ ಅಲೆಯುವ ಅಲೆದಾಟವಿದು. ಇದೊಂದು ಶುದ್ಧ ತಹತಹ ತರಹೇವಾರಿ ಅನುಭವ.

ಒಮ್ಮೊಮ್ಮೆ ಕಚಗುಳಿ ಇಡುತ್ತೆ, ಮತ್ತೊಮ್ಮೆ ಬಿರುಬಿಸಿಲ ಧಗೆಗೆ ದೂಡಿದರೆ, ಮಗದೊಮ್ಮೆ ಸುರಿಯುವ ಮಳೆಯಲಿ ತೋಯಿಸುತ್ತೆ. ನಿನ್ನ ನೆನಪಲಿ ಗೀಚಿದ ಪದ್ಯಗಳನ್ನು ಹರಾಜಿಗಿಟ್ಟು, ಕವಿತೆಗಳನ್ನು ರದ್ದಿಗೆ ಹಾಕಿ ಪಡೆದ ಎಂಟಾಣೆಯನ್ನು ಅಂಗೈಯಲ್ಲಿಟ್ಟುಕೊಂಡು ಕಾಮನಬಿಲ್ಲ ಬಳಿ ಓಡಿ ಹೋಗಿ ಕಾಡಿ ಬೇಡಿ ತಂದ ಒಂದು ತುಂಡು ಬೊಂಬೆ ಮಿಠಾಯಿಯನ್ನು ನಿನ್ನ ಬಾಯಿಗೆ ತುರುಕಬೇಕು ಅನ್ನಿಸುತ್ತೆ.

ತೀರ ಇತ್ತೀಚೆಗೆ ಕನ್ನಡಿಯ ಮುಂದೆ ನಿಂತು ಏಕಪಾತ್ರಾಭಿನಯವ ಸೊಗಸಾಗಿ ಮಾಡುತ್ತಿರುತ್ತೇನೆ. ಪ್ರತಿ ಬಾರಿಯು ನನಗೆ ನಾನೇ ಬೆನ್ನು ತಟ್ಟಿಕೊಂಡು ಶಹಬ್ಬಾಸ್‌ಗಿರಿ ಕೊಟ್ಟುಕೊಳ್ಳುತ್ತೇನೆ. ಹಲವು ಸಲ ನಾನೇ ಬರೆದ ಕಾಗದಗಳನ್ನು ನನ್ನ ವಿಳಾಸಕ್ಕೆ ನಾನೇ ಪೋಸ್ಟ್ ಮಾಡಿ ನಾನೇ ಓದಿ ನಕ್ಕಿದ್ದೇನೆ ನೀನಾಗಿ, ವಿಷಾದ ವ್ಯಕ್ತಪಡಿಸಿದ್ದೇನೆ ನಾನಾಗಿ.

ನನ್ನ ಕನಸಲಿ ನಡೆಯುವ ಕಾಯಿಲೆಗೆ ಔಷಧಿ ಕೊಟ್ಟ ಡಾಕ್ಟರ್, ಹುಚ್ಚನಾಗಿ ಚಿಕಿತ್ಸೆ ಪಡೆಯುತ್ತಿರುವುದು ಆಶ್ಚರ್ಯವೇನಲ್ಲಾ ಬಿಡು. ಏನೆಂದು ಹೆಸರಿಡಲಿ ಈ ಚಂದ ಅನುಭವಕ್ಕೆ? ಸ್ನೇಹವೆನ್ನಲೇ? ಪ್ರೇಮ ಸಾಂಕ್ರಾಮಿಕವೆನ್ನಲೇ? ಅಥವಾ ಭಾವನೆಗಳ ಹುಚ್ಚಾಟದ ಅತಿರೇಕವೆನ್ನಲೇ? ಯಾವ ಹೋಲಿಕೆಗೂ ಸಿಗದ ಅದನ್ನು ಬಂಧಿಸಲು ‘ಪ್ರೀತಿ’ ಎಂಬ ಎರಡಕ್ಷರದ ಬಂದೀಖಾನೆ ಸಾಕಾಗದು.

ಇಲ್ಲಿ ಜಿಟಿ ಜಿಟಿ ಮಳೆ. ಸೂರಿಂದ ಜಾರುವ ಮಳೆಹನಿಗಳನ್ನು ಬೊಗಸೆಯಲ್ಲಿಡಿದು ಅಲ್ಲೇ ಪ್ರೇಮದೋಣಿಯನ್ನು ತೇಲಿಬಿಟ್ಟಿದ್ದೇನೆ. ಕನಸುಗಳ ಒಳಸುಳಿಗೆ ದೋಣಿ ಮುಳುಗಬಹುದು ಅನ್ನುವ ಸಣ್ಣ ಆಲೋಚನೆಯೂ ಇಲ್ಲದೆ. ಒತ್ತಿಬರುವ ಅಸಂಖ್ಯ ಭಾವನೆಗಳು ಅಕ್ಷರದ ಅಂಗಿಯುಟ್ಟಿವೆ. ಈ ಹುಚ್ಚಾಟದ ಭಾವನೆಗಳೇ ಹೀಗೆ, ಜಡಿಮಳೆಯಂತೆ. ಹಿಡಿದರೆ ಮುಗಿಯಿತು ವಿರಾಮದ ಮಾತೇ ಇಲ್ಲ.

ಈ ಸುರಿಯುವ ಮಳೆ ನಮ್ಮನ್ನು ಕಾಡಿಸಬಲ್ಲದು, ಕ್ರೋದಿಸಬಲ್ಲದು, ವಿರಹದ ಮಧುರ ಕಾವ್ಯ ಬರೆಸಬಲ್ಲದು. ಸಾಧ್ಯವಾದ್ರೆ ಕಾವಿ ತೊಡಿಸಿ ಮುಖವಾಡದ ರಂಗಮಂಚಕೆ ನೂಕಬಲ್ಲದು. ಇಂತಹ ಸುರಿಯುವ ಮಳೆಯಲ್ಲೂ ಹರಿದ ನನ್ನ ಚಡ್ಡಿಗೆ ಪಿನ್ನು ಹಾಕಿ ನಿನ್ನ ತರಗತಿಗೆ ತಪ್ಪದೆ ಬರುವ ವಿಧೇಯ ವಿದ್ಯಾರ್ಥಿ ನಾನು. ನೀನು ಬೋಧಿಸುವ ಯಾವ ಪಾಠಗಳು ತಲೆಗೆ ಹತ್ತದಂತೆ ಮಾಯಾವಿ ನಿನ್ನ ಕಣ್ಣುಗಳು ಮಾಟ ಮಾಡಿಸಿವೆ. ಸಾವಿರಸಲ ಪರೀಕ್ಷೆ ಬರೆದರೂ ನಪಾಸಾಗುವ ಕೊನೆಯ ಬೆಂಚಿನ ಶಾಶ್ವತ ವಾರಸುದಾರ ನಾನು.

‘ತೂಕಡಿಸಿ, ಆಕಳಿಸುವ ಇಳೆ
ಸೂರ್ಯ ಸುರಿಸುವ ಕಂಬನಿಗಳ ಸಾಲೇ ಮಳೆ,
ಸೀಳಿಸುತ್ತಾ ಕಿವಿಗಪ್ಪಳಿಸುವ ಬರಸಿಡಿಲು,
ಕಾದಿಟ್ಟ ಪ್ರೇಮಾಗ್ನಿಯಾ ಅಹವಾಲು’


ಪ್ರೇಮವೆಂಬುದು ಹುಚ್ಚುತನವೋ ಅಥವಾ ಹುಚ್ಚುತನವೆಂಬುದಕ್ಕೆ ಪ್ರೇಮವೆನ್ನುವರೋ? ಗೊತ್ತಿಲ್ಲ ನನಗೆ. ಗೆಳತಿ ಸೂರ್ಯನ ಪ್ರೇಮ, ವಿರಹಾಲಾಪಗಳ ಕಂಬನಿಯ ಹನಿಗಳು ಮಳೆಯ ಮುಖವಾಡ ತೊಟ್ಟಿವೆ. ಪ್ರೇಮವೆಂಬುದು ಸುಳ್ಳು, ಅದೊಂದು ನಾಟಕೀಯ ಸೋಗಲಾಡಿತನ ಅನ್ನುವ ನಿನಗ್ಯಾಕೆ ಅರ್ಥವಾದೀತು! ಪ್ರಚಂಡಾಗ್ನಿಯ ಸೂರ್ಯ ಮತ್ತು ಪ್ರೇಮ ಜೀವಜಲಧಾರೆ ಮೌನ ಧರಿತ್ರಿಯ ನಡುವಣ ಯುಗಯುಗಗಳ ಕಾಮಾತೀತ ಪ್ರೇಮಕಾವ್ಯ.

ಚೆಂದುಳ್ಳಿ ಚೆಲುವೆ ಶುಕ್ರ, ಬಳುಕುವ ಸೊಂಟದ ಮಂಗಳ, ಲೆಕ್ಕವಿಲ್ಲದಷ್ಟು ಅಗಣಿತ ತಾರೆಗಳೂ ಸೂರ್ಯನ ಸುತ್ತ ಗಿರಕಿ ಹೊಡೆದರು, ಸೂರ್ಯನ ಪ್ರೀತಿ ಭೂಮಿಗೆ ಮಾತ್ರ. ಮೌನವಾಗಿಯೇ ಸೂರ್ಯನ ಪ್ರೀತಿ ತಿರಸ್ಕರಿಸುವ ಚಂಚಲತೆಯ ಧರಣಿ ಅಚಲತೆಯ ಮುಖವಾಡ ತೊಟ್ಟು ಸೂರ್ಯನ ಸುತ್ತು ತಿರುಗುತ್ತಿದ್ದಾಳೆ. ತಿರಸ್ಕೃತ ಸೂರ್ಯನ ಪ್ರೀತಿ ನಿಂತಿಲ್ಲ. ಅದೊಂದು ಕಾಲಾತೀತ, ಕಾಮಾತೀತ. ಇದಕ್ಕೇನು ಹೇಳುತ್ತೀಯಾ? ಹುಚ್ಚುತನವೆಂದು ಕರೆಯುತ್ತೀಯಾ? ಈ ಪೆದ್ದುತನದ ಹುಚ್ಚುತನವೇ ನಿಸರ್ಗದ ಕೌತುಕವೆನ್ನುವ ಸತ್ಯ ನಿನಗ್ಯಾಕೆ ತಿಳಿಯುತ್ತಿಲ್ಲ.

ಅಕ್ಷರಗಳು ಸೋತವು ಗೆಳತಿ
ನನ್ನ ಎದೆಯ ಒಲವ ಬಣ್ಣಿಸಲು
ಭೂಕಂಪನವಾಗಿದೆ ನನ್ನಲ್ಲು
ರಿಕ್ಟರ್ ಮಾಪಕಕ್ಕೂ ಸಾಧ್ಯವಾಗದು
ತೀವ್ರತೆಯ ಅಳೆಯಲು


ಏಯ್ ಹುಡುಗಿ ಹೆಚ್ಚು ಕಡಿಮೆ ನೀನು ಕೂಡ ಈ ಭೂಮಿಯಂತೆ ಸದಾ ಮೌನಗೌರಿ. ನನ್ನ ನೂರಾರು ಆಲಾಪಗಳಿಗೆ ನಿನ್ನದೊಂದು ಮೌನ, ಉತ್ತರ. ನನ್ನೆದೆಯ ಸಾವಿರಾರು ಕಂಪನಗಳ ಸ್ವರಸಂಯೋಜಕಿ ನೀನು. ನೀ ಹಾಡದೆ ಪ್ರೀತಿಯ ಆಲ್ಬಂ ಹೊರಬಾರದು. ನಮ್ಮನ್ನು ಸಲಹುವ ಭೂಮಿಯಾದ್ರೂ ಕೊನೆಪಕ್ಷ ತಾನೇ ತಿರಸ್ಕರಿಸುವ ಸೂರ್ಯನ ಮೇಲೆ ರೇಗಿದ್ದಾಳೆ, ಸಿಡುಕಿದ್ದಾಳೆ, ಪ್ರೀತಿ ತೋರದಿದ್ದರೂ ಕರುಣೆಯಂತೂ ತೋರಿದ್ದಾಳೆ.

ಮೌನವಾಗಿ ಕೊಲ್ಲಬೇಡ! ಸಾವಿಗಿಂತ ಕ್ರೂರ ಈ ನಿನ್ನ ಮೌನ. ಕೊಲ್ಲದೆ ಕಾಡುವ ಅವ ಬಲು ಬಲಹೀನ. ಹೇಳಿಬಿಡು ಥೂ ಚಂಡಾಲ ಅಂತನಾದ್ರು ಬೈದುಬಿಡು. ನಿನ್ನ ನೋಡಿದ ದಿನದಿಂದಲೂ ಭೂಕಂಪನವಾಗುತಿದೆ ಗೆಳತಿ.

ನಾನೊಂದು ಕಲ್ಲು, ನನ್ನಲ್ಲಿ ಪ್ರೀತಿ ಕರುಣೆಗೆ ಜಾಗವಿಲ್ಲ, ಹುಡುಗರೆಂದರೆ ಹಾಗಲಕಾಯಿ ಎನ್ನುವ ನಿನ್ನ ಹಳೆಯ ಸಾಹಿತ್ಯಲಹರಿಯಲಿ ಎಳ್ಳಷ್ಟು ಅರ್ಥವಿಲ್ಲ. ಅದೊಂದು ಕದ್ದ ಮಾಮೂಲಿ ಸರಕು. ಕುಡಿದಷ್ಟು ಕಿಕ್ ಕೊಡುವ ಕ್ಷಣಿಕ ಸುಖದ ಲೋಕಲ್ ಸಾರಾಯಿ. ಬೇವರ್ಸಿ ಭೂತಕಾಲದ ಬದುಕೇ ಹೀಗೆ ಸದಾ ನಾರುವ ಬಚ್ಚಲು ಮನೆಯ ಹಾಗೆ.

ನಿನ್ನ  ಬದುಕ ಬಂಡಿಯ ಪೂರ್ವಾಪರಗಳನ್ನು ಬದಿಗೊತ್ತಿ ಮಾತಾಡು. ಬೆಂಕಿಯಿಡು ಅವುಗಳಿಗೆ. ಈ ಜಗದ ತುಂಬೆಲ್ಲಾ ಪ್ರೀತಿಯ ಸೌಧಗಳಿಗೆ ಬರವಿಲ್ಲ. ಬಡಫಕೀರರ ಪ್ರೀತಿಯ ಗೋರಿಗಳಿಗಂತೂ ಲೆಕ್ಕವಿಲ್ಲ. ಕಣ್ಣಿದ್ದು ಕುರುಡಿಯಾಗಿ ಅಥವಾ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಈ ಮೂರು ದಿನದ ಬದುಕನ್ನು ಮೂರಾಬಟ್ಟೆಯಾಗಿಸಬೇಡ. ಹೆಣ್ಣು ಕ್ಷಮಯಾ ಧರಿತ್ರಿ, ಕರುಣಾಮಯಿ ಅನ್ನುವ ಪುಟಗೋಸಿ ಅಡ್ಡಕಸಬಿ ಡೈಲಾಗುಗಳು ನಂಗೆ ಗೊತ್ತಿಲ್ಲ. ನೀನೊಬ್ಬಳು ಸುರಸುಂದರಿ ಎಂದು ಹೊಗಳುವ ಯಾವ ಉಪಮಾನ ಉಪಮೆಗಳ ಹಂಗೂ ನನಗೆ ಬೇಡ. ನೀ ನನ್ನ ರಂಭೆ ಮಾತಾಡದ ಬೊಂಬೆ.

ಬುದ್ಧಂ ಶರಣಂ ಗಚ್ಚಾಮಿ
ಪ್ರೇಮಂ ಶರಣಂ ಗಚ್ಚಾಮಿ


ಭವತೀ ಭಿಕ್ಷಾಮ್ ದೇಹಿ ಎಂದು ನಿನ್ನ ಪ್ರೇಮದರಮನೆಯ ಮುಂದೆ ಕೈ ಚಾಚುವ ಬಡಫಕೀರ ಇವ ಅಂತ ಅಂದುಕೊಂಡರೂ ಪರವಾಗಿಲ್ಲ. ನೀ ಭಿಕ್ಷೆ ಹಾಕದಿದ್ದರೂ ಸರಿ. ಅಯ್ಯೋ ಪಾಪ ಅಂತ ನನ್ನ ಸ್ಥಿತಿಗೆ ಮರುಕಪಡು. ಆ ಕ್ಷಣದಿದ ನಿನ್ನ ಬದುಕಿಗೊಂದು ಹೊಸ ದಿಗ್‌ದಿಗಂತ ಗೋಚರಿಸುವುದು.

ಬದುಕಿನ ಬಟಾಬಯಲು ಜಾತ್ರೆಯಲಿ
ಪ್ರೀತಿ ಹುಡುಕುವ ಅಲೆಮಾರಿ ನಾನು
ಭೂತಕಾಲದ ಕಹಿ ಟೆಂಟ್‌ನಲಿ
ವರ್ತಮಾನದ ಹರುಷ ಮರೆತ ಪೋರಿ ನೀನು


ಹೇಳು ಗೆಳತಿ, ನಾ ನಿನ್ನ ಪ್ರೀತಿಗೆ ಅರ್ಹನೇ? ಅಸ್ಪೃಶ್ಯನೇ? ಮೂಡಣದ ರವಿಯಾಣೆ ಈ ಉಸಿರು ನಿಲ್ಲುವವರೆಗೂ ಉಸಿರಾಗಿ ಬರುತ್ತೇನೆ. ಕನಸಲ್ಲಾದರೂ ಸರಿ ನೀ ನನ್ನ ಪ್ರೀತಿಸು ಅದು ಸುಳ್ಳಾದರೂ ಸರಿ.

ನೀನಡೆವ ಹಾದಿಯಲ್ಲಿ
ಕನಸುಗಳನ್ನು ಚೆಲ್ಲಿರುವೆ
ನಡೆ ಮೆಲ್ಲಗೆ ನುಡಿ ಮೆಲ್ಲಗೆ
ನಿನ್ನ ಬೆಳದಿಂಗಳ ನಗು ಚೆಲ್ಲಿ


ಹುಡುಗಿ ಈ ಕನಸುಗಳು ಮಹಾನ್‌ ಸುಳ್ಳುಗಾರರು. ಕೈ ಕಾಲುಗಳಿಲ್ಲದ ಹೆಳವರು. ಯಾವ ವೆಪನ್ ಇಲ್ಲದೆ ನಮ್ಮನ್ನು ಕೊಲ್ಲುವ ಸುಪಾರಿ ಕಿಲ್ಲರ್ಸ್‌. ಈ ಹಂತಕರು ಭಾವನೆಗಳನ್ನೇ ಬಂಡವಾಳವಾಗಿಸಿಕೊಂಡು ನಮ್ಮನ್ನು ಕೊಂದು ತಿಂದು ತೇಗುವ ಮಹಾನ್ ನರಭಕ್ಷಕರಿವರು.

ನಿನ್ನ ನೋಡಿದ ತಪ್ಪಿಗೆ ಎಫ್‌ಐಆರ್ ಹಾಕಿ, ನಿನ್ನ ಪ್ರೀತಿಸಿದ್ದಕ್ಕೆ ಗಲ್ಲಿಗೇರಿಸಲು ತೀರ್ಪುಕೊಟ್ಟ ಹಂತಕ ನ್ಯಾಯಮೂರ್ತಿಗಳಿವು. ಆದರೂ ಈ ಮಹಾನ್ ಸುಳ್ಳು ಕನಸುಗಳು ನನ್ನ ಬದುಕಿನ ಭಾಗವಾಗಿಬಿಟ್ಟಿವೆ. ಅವು ನನ್ನ ಮೂರು ದಿನದ ಬದುಕನ್ನು ಚಂದವಾಗಿಸಿಬಿಟ್ಟಿವೆ. ನಿನಗೆ ಗೊತ್ತ? ನನ್ನ ಕನಸುಗಳಲ್ಲಿ ನೀನು ನನ್ನನ್ನು ತಿರಸ್ಕರಿಸಲೇ ಇಲ್ಲ.

ವಾಸ್ತವದಲಿ ಮೌನಗೌರಿಯಾದ ನೀನು ಕನಸುಗಳಲ್ಲಿ, ಕಾಡುವ ಗೈಯಾಳಿ. ನನ್ನ ಕಂಡ್ರೆ ಪ್ರೀತಿಸುತ್ತೀಯಾ, ರೇಗುತ್ತೀಯ, ಮುದ್ದಿಸುತ್ತೀಯಾ... ಇನ್ನೂ ಏನೇನೋ ಮಾಡ್ತೀಯ. ಎಲ್ಲವೂ ಖಾಲಿಪೀಲಿ ಕನಸುಗಳಲ್ಲಿ. ಅದೊಂದು ಪ್ರೀತಿ ತುಂಬಿದ ಅದ್ಭುತ ಲೋಕ.

ಪ್ರಿಯ ಗೆಳತಿ, ನನ್ನ ಬದುಕಿಗಿಂದು ಕೊನೆಯ ದಿನ. ಬಾಳ ಪಯಣಕೆ ಕೊನೆಯ ನಮಸ್ಕಾರ ಹಾಕುವ ಗಳಿಗೆ. ನಿನ್ನ ಮುದ್ದಿಸಿದ ಕನಸುಗಳು ನನ್ನ ಎರಡು ಕೈಗಳನ್ನು ಹಿಂದಕ್ಕೆ ಕಟ್ಟಿವೆ. ಮುಖಕ್ಕೆ ಕಪ್ಪು ಬಟ್ಟೆ ತೊಡಿಸಿವೆ ನಿನ್ನ ಪ್ರೀತಿಯ ಕಣ್ಣೀರು ಒರೆಸಿದ ಕನಸುಗಳು. ಇನ್ನೇನು ಕೆಲ ನಿಮಿಷಗಳಲ್ಲಿ ಈ ಪ್ರಾಣಪಕ್ಷಿ ಹಾರಿಹೋಗಲಿದೆ. ಕೊಲೆ ಮಾಡಿದ ಅಪರಾಧಕ್ಕೂ ಕ್ಷಮಾದಾನವಿದೆ. ಪ್ರೇಮಾಪರಾಧಕ್ಕೆ ಕ್ಷಮೆ ಇಲ್ಲವೇ? ಕ್ಷಮಿಸಿಬಿಡು ಗೆಳತಿ ಕನಸುಗಳು ಗಲ್ಲಿಗೇರಿಸುವ ಮುನ್ನ. ನನ್ನ ಕೊನೆಯ ಆಸೆ ಏನು ಗೊತ್ತಾ?

ಮನ್ನಿಸೊಮ್ಮೆ ಗೆಳತಿ
ಈ ಉಸಿರು ಇನ್ನೇನು ಹೋಗುತೈತಿ
ತಿರುಗಿ ನೋಡು ಒಂದೇ ಒಂದು ಸರತಿ
ಚಿತೆ ಮೇಲೆ ಈ ಜೀವ ಕಾಯುತೈತಿ
                                –ಬರಲೇ ಗೆಳತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT