ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ ಯೋಜನೆ ನಿರ್ಲಕ್ಷಿಸಿದರೆ ಆಪತ್ತು

ಬಂಗಾರಪೇಟೆ: 6ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ
Last Updated 15 ಫೆಬ್ರುವರಿ 2017, 10:21 IST
ಅಕ್ಷರ ಗಾತ್ರ

ಬಂಗಾರಪೇಟೆ: ‘ಕೃಷಿ ಮತ್ತು ರೈತರ ಅಭಿವೃದ್ಧಿಗೆ ಯೋಜನೆಗಳನ್ನು ಪರಿಣಾ ಮಕಾರಿಯಾಗಿ ಜಾರಿಮಾಡದೆ ಹೋದರೆ ದೇಶಕ್ಕೆ ದೊಡ್ಡ ಗಂಡಾಂತರ ಎದುರಾಗಲಿದೆ’ ಎಂದು ಸಾಹಿತಿ ಬೈರಮಂಗಲ ಡಾ.ರಾಮೇಗೌಡ ಎಚ್ಚರಿಕೆ ನೀಡಿದರು.

ಪಟ್ಟಣದಲ್ಲಿ ಮಂಗಳವಾರ ನಡೆದ 6ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ , ‘ರೈತರ ಹೆಸರಲ್ಲಿ ಅಧಿಕಾರ ಹಿಡಿಯುವ ಸರ್ಕಾರಗಳು ರೈತರನ್ನು ಕಡೆಗಣಿಸುತ್ತಿರುವುದು ವಿಷಾದದ ಸಂಗತಿ’ ಎಂದರು.

‘ಮನುಷ್ಯನ ದುರಾಸೆಯಿಂದಾಗಿ ಖನಿಜ ಸಂಪತ್ತು ಬರಿದಾಗುತ್ತಿದೆ. ವನ ಸಂಪತ್ತು ವಿನಾಶದತ್ತ ಸಾಗಿದೆ. ಪರಿಣಾಮ  ಇನ್ನುಮುಂದೆ ಕನಿಷ್ಠ ಮೂಲ ಸೌಲಭ್ಯ ಸಿಗುವ ಖಾತರಿ ಇಲ್ಲವಾಗಿದೆ. ಸ್ವಾರ್ಥ ತೊರೆದು ಪರಿಸರ ರಕ್ಷಣೆ ಮಾಡದಿದ್ದರೆ ಆಪತ್ತು ನಿಶ್ಚಿತ’ ಎಂದು ಆತಂಕ ವ್ಯಕ್ತಪಡಿಸಿದರು.

‘ಸಾಹಿತ್ಯ ಸಮ್ಮೇಳನಗಳು ಹೆಸರಿಗೆ ಮಾತ್ರ ಹಮ್ಮಿಕೊಳ್ಳದೆ ಸಾಹಿತ್ಯ ಅಭಿವೃದ್ಧಿ ಹಾಗೂ ಸಮಾಜದ ತಪ್ಪುಗಳನ್ನು ತಿದ್ದುವ ಕೆಲಸ ಮಾಡಿದರೆ ಮಾತ್ರ ಸಮ್ಮೇಳನ ಗಳಿಗೆ ನಿಜವಾದ ಅರ್ಥ ಸಿಗಲಿದೆ’ ಎಂದು ಹೇಳಿದರು.

ಸಮಾರೋಪದ ಅಧ್ಯಕ್ಷತೆ ವಹಿಸಿದ್ದ  ಶಾಸಕಿ ವೈ.ರಾಮಕ್ಕ ಮಾತನಾಡಿ, ‘ಪೋಷಕರ ಆಂಗ್ಲ ಭಾಷೆಯ ಮೇಲಿನ ವ್ಯಾಮೋಹದಿಂದಾಗಿ ಕನ್ನಡ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿದೆ. ಶಾಲೆಗಳನ್ನು ಮುಚ್ಚುವ ಅನಿವಾರ್ಯ ಪರಿಸ್ಥಿತಿ ಒದಗಿದೆ’ ಎಂದು ವಿಷಾದಿಸಿದರು.
‘ಮಾತೃ ಭಾಷೆಗೆ ಮೊದಲ ಆದ್ಯತೆ ನೀಡಿ, ಕನ್ನಡ ಭಾಷೆ, ನೆಲೆ,ಸಂಸ್ಕೃತಿ ಬೆಳೆಸುವ ಕೆಲಸ ಮಾಡಿದವರು ಮಾತ್ರ ಕರುನಾಡಿನಲ್ಲಿ ಜೀವಿಸಲು ಅರ್ಹರು ಎಂಬ ವಾತಾವರಣವನ್ನು ಸಮ್ಮೇಳನಗಳು ಸೃಷ್ಟಿಸಬೇಕು’ಎಂದು ಹೇಳಿದರು.

ಸಮ್ಮೇಳನದ ಅಧ್ಯಕ್ಷೆ ಸರಿತಾ ಜ್ಞಾನಾನಂದ, ಕಸಾಪ ಜಿಲ್ಲಾ ಘಟಕ ಅಧ್ಯಕ್ಷ ನಾಗಾನಂದ ಕೆಂಪರಾಜು, ತಾಲ್ಲೂಕು ಘಟಕ ಅಧ್ಯಕ್ಷ ಬದರಿ ನಾಥ್,  ನಟ ಬ್ಯಾಂಕ್ ಜನಾರ್ದನ್, ಸಬ್‌ ಇನ್‌ ಸ್ಪೆಕ್ಟರ್‌ ರವಿಕುಮಾರ್, ಡಾ.ನರೇಂದ್ರ ರಂಗಪ್ಪ ಮತ್ತಿತರರು ಇದ್ದರು.

ಕವಿಗೋಷ್ಠಿಯ ಗಮ್ಮತ್ತು, 13 ಮಂದಿ ಕವನ ವಾಚನ

ಬಂಗಾರಪೇಟೆ: ನುಡಿಯಲಿ ಮುತ್ತು ನಡೆಯಲಿ ಗತ್ತುಕಾಲದಿ ಗಮ್ಮತ್ತು ಕನ್ನಡ ಪದಗಳ ಕಿಮ್ಮತ್ತು ಕಲಿತರೆ ಜ್ಞಾನದ ಸಂಪತ್ತು ಕನ್ನಡ ಜನತೆಗೆ ತಾಕತ್ತು ಮರೆತರೆ ಮಿಗಲದು ಈ ಸ್ವತ್ತು ಮೈಗೂಡಿಸಿಕೊಳ್ಳಿ ಈವತ್ತು. ಉಳಿಸಿ ಬೆಳಸಿ ಯಾವತ್ತೂ...

ಪಟ್ಟಣದಲ್ಲಿ 2ನೇ ದಿನದ ಕನ್ನಡ ಸಾಹಿತ್ಯ ಸಮ್ಮೇಳದ ಕವಿಗೋಷ್ಠಿಯಲ್ಲಿ  ಹೀಗೆ ಹಲ ಚುಟುಕು. ಕವನಗಳು ಅನುರಣಿಸಿದವು. ಸಮಾಜದಲ್ಲಿ ಉಳ್ಳುವರು ಹಾಗೂ ಇಲ್ಲದವರ ಮಧ್ಯದ ಕಂದಕ, ಇವರಿಬ್ಬರ ಬಗ್ಗೆ ಸರ್ಕಾರ ತೋರುತ್ತಿರುವ ಕಾಳಜಿ ಬಗ್ಗೆ ಕವಿ ಎಂ.ಆರ್‌.ದೇವರಾಜ್‌ ಅವರು ತಮ್ಮ ‘ನಿಯತ್ತಿಗೆ ಎಲ್ಲಿ ಕಾಲ’ ಎನ್ನುವ ಕವನದ ಮೂಲಕ ಸೂಕ್ಷ್ಮವಾಗಿ ಬಿಚ್ಚಿಟ್ಟರು.

ಕೈಕೊಟ್ಟು ಹೋದ್ಯಾಕೊ ಕೋಲಾರ ಜಿಲ್ಲೇಗೆ ಕನಿಕರ ಇಲ್ಲದಮಳೆರಾಯನೇ, ರೈತರ ಕಣ್ಣಲ್ಲಿ ಕಣ್ಣೀರುತಂದ್ಯಾಕೊ ಮುಂಗಾರುಮಳೆ ಸುರಿಸದೆಮಳೆರಾಯನೆ ಮುಂಗಾರಿನ ಸಿಂಗಾರ ರೈತರಿಗೆ ಬಂಗಾರ, ಮಳೆರಾಯನ ಸಹಕಾರ ಬೇಕಯ್ಯ ಮಹರಾಯ, 
ಹತ್ತಾರು ನದಿಗಳು ಇಲ್ಲಿ ಹರಿಯಲ್ಲ. ಸುತ್ತೆಲ್ಲೂ ಸಾಗರ ಇಲ್ಲವೇ ಇಲ್ಲ. ಪಾತಾಳ ಗಂಗೆಯೂ ಕೈಗೆಟುಕುತ್ತಿಲ್ಲ  ನೀನಿಲ್ಲದೆ ನಮ್ಮ ಬದುಕು ಉಳಿಯೋದೆ ಇಲ್ಲ. ಅತಿಯಾಗಿ ಆರ್ಭಟಿಸದೆ ಹಿತವಾಗಿ ಸುರಿಸು, ಈ ನನ್ನ ಜಿಲ್ಲೆಗೆ ನಿನ್ನಂದಲೇ ಸೊಗುಸು. ಇನ್ನೆಂದು ಮಾಡಬ್ಯಾಡ ನಮ್ಮ ಮೇಲೆ ಮುನಿಸು, ಶರಣೆಂದು ಬೇಡುವೆನು ನನ ಜಿಲ್ಲೆಯ ಉಳಿಸು ಹೀಗೆ ಜಿಲ್ಲೆಯ ಪ್ರಸ್ತುತ ಪರಿಸ್ಥಿತಿಯ ಚಿತ್ರಣವನ್ನು ಗೋಷ್ಠಿಯ ಅಧ್ಯಕ್ಷ ಎಎಸ್ಐ ವಿಕ್ರಮ್‌ ಶ್ರೀನಿವಾಸ್‌ ತಮ್ಮ ಪದ ಪುಂಜದಲ್ಲಿ ಕಟ್ಟಿಟ್ಟರು. 

ಹೀಗೆ ನಿರ್ಮಲ ಅವರ ‘ಜೀವನದ ಹೋರಾಟ’, ಲಕ್ಷ್ಮಯ್ಯ ಅವರ ಚಹದಂಗಡಿ, ಗಿರಿಯಪ್ಪ ಅವರ ಕವಿಯ ಕಲ್ಪನೆ, ಮಧುಚಂದ್ರ ಅವರ ಮಾನವನ ಜೀವನ,  ಮಂಜುನಾಥ್‌ ಅವರ ಮಳೆರಾಯ, ನಾಗರಾಜ್‌ ಅವರ ಭಯೋತ್ಪಾದನೆ, ಶಾಂತಿ , ಶ್ರೀನಿವಾಸ್‌ ಅವರ ಮಾತು  ಗೋಪಾಲ್‌ ಅವರ ಕರುಣೆ, ಸೂರಿ ಅವರ ಭ್ರೂಣಹತ್ಯೆ  ಸಮಾಜದ ಅಂಕು ಡೊಂಕುಗಳ ಬಗ್ಗೆ ಬೆಳಕು ಚೆಲ್ಲಿದವು.

13ಕ್ಕೂ ಹೆಚ್ಚು ಕವಿಗಳು  ಚುಟುಕು, ಕವನಗಳನ್ನು ವಾಚಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ವಿ.ಮಹೇಶ್‌, ತಾಲ್ಲೂಕುಪಂಚಾಯಿತಿ ಸದಸ್ಯ ಮಾರ್ಕಂಡೇಗೌಡ ಇತರರನ್ನು ಸನ್ಮಾನಿಸಲಾಯಿತು. ಸಮ್ಮೇಳನದ ಸರ್ವಾಧ್ಯಕ್ಷೆ ಸರಿತಾ ಜ್ಞಾನಾನಂದ, ಕವಿಗಳಾದ ಸುನಿಲ್‌, ಉಮಾದೇವಿ, ಮಲ್ಲಿಕಾರ್ಜುನ,  ಜಯದೇವ್‌ ಭಾಗವಹಿಸಿದ್ದರು.  ನಿರ್ಮಲಾ ನಾಗರಾಜ್‌ ಅವರು ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT