ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ಸಮಸ್ಯೆ ಪರಿಹಾರ ಕಷ್ಟ ಸರ್

ಜಿಲ್ಲಾ ಪಂಚಾಯಿತಿ ತಿಂಗಳ ಕೆ.ಡಿ.ಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳ ಅಸಹಾಯಕ ನುಡಿ
Last Updated 15 ಫೆಬ್ರುವರಿ 2017, 10:34 IST
ಅಕ್ಷರ ಗಾತ್ರ
ತುಮಕೂರು: ‘ಜಿಲ್ಲೆಯಲ್ಲಿ ಬರದ ತೀವ್ರತೆ ಹೆಚ್ಚಾದಂತೆ ನೀರಿನ ಸಮಸ್ಯೆ ಪರಿಹರಿಸುವುದು ಕಷ್ಟವಾಗುತ್ತಿದೆ. ಜನರು ಮತ್ತು ಜನಪ್ರತಿನಿಧಿಗಳಿಗೆ ಕಣ್ತಪ್ಪಿಸಿ ಓಡಾಡುವಂತಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಗ್ರಾಮೀಣ ನೀರು ಸರಬರಾಜು ವಿಭಾಗದ ವಿವಿಧ ತಾಲ್ಲೂಕಿನ ಎಂಜಿನಿಯರ್‌ಗಳು ಸಮಸ್ಯೆ ಹೇಳಿಕೊಂಡರು.
 
ಮಂಗಳವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಎಂ.ಲತಾ ರವಿಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆ.ಡಿ.ಪಿ.) ತಿಂಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕುಡಿಯುವ ನೀರು ಪೂರೈಕೆ ವಿಷಯ ಕುರಿತ ಚರ್ಚೆಯಲ್ಲಿ ಹೀಗೆ ತಮ್ಮ ಅಸಹಾಯಕತೆ ತೋಡಿಕೊಂಡರು.
 
‘ಜಿಲ್ಲೆಯಲ್ಲಿ ವಿವಿಧ ಯೋಜನೆಯಡಿ ಕೊರೆದ ಕೊಳವೆ ಬಾವಿಗಳಲ್ಲಿ ಎಷ್ಟು ಸುಸ್ಥಿತಿಯಲ್ಲಿವೆ. ಶೇಕಡಾವಾರು ಎಷ್ಟು ಕೊಳವೆ ಬಾವಿ ಕೆಲಸ ಮಾಡುತ್ತಿಲ್ಲ ಎಂದು ವಿವರ ಕೊಡಿ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಜಿ.ಶಾಂತಾರಾಂ ಸೂಚಿಸಿದರು.
 
‘ಡಿಸೆಂಬರ್‌ ತಿಂಗಳಲ್ಲಿ ಇಲಾಖೆಯು ಸಲ್ಲಿಸಿದ ಅಂಕಿ ಅಂಶಗಳ ಪ್ರಕಾರ 11,225 ಕೊಳವೆ ಬಾವಿ ಸುಸ್ಥಿತಿಯಲ್ಲಿದ್ದವು. ಈಗ ಮೊದಲಿನಷ್ಟು ಇಲ್ಲ. ಈ ಪ್ರಮಾಣ 8 ಸಾವಿರಕ್ಕೆ ಕುಸಿದಿರಬಹುದು. ಇನ್ನೆರಡು ತಿಂಗಳು ಕಳೆದರೆ 6 ಸಾವಿರಕ್ಕೂ ಕುಸಿದರೂ ಅಚ್ಚರಿ ಇಲ್ಲ ’ಎಂದು ಗುಬ್ಬಿ ತಾಲ್ಲೂಕಿನ ಕಾರ್ಯಪಾಲಕ ಎಂಜಿನಿಯರ್ ಹೇಳಿದರು.
 
‘ಹಳೆಯ ಕೊಳವೆ ಬಾವಿ ಬತ್ತಿದ್ದರೆ ಮತ್ತೆ ಕೊರೆದು (ರೀ ಬೋರ್) ಮಾಡಲಾಗಿದೆ. ಭೂಗರ್ಭ ತಜ್ಞರ ಸಲಹೆಯಂತೆ ವಿವಿಧ ಯೋಜನೆಯಡಿ ಹೊಸದಾಗಿ ಕೊಳವೆ ಬಾವಿ ಕೊರೆದು ಸಮಸ್ಯೆ ಹೋಗಲಾಡಿಸುವ ಪ್ರಯತ್ನ ನಡೆಯುತ್ತಿದೆ’ ಎಂದರು.
 
‘ಕೊಳವೆ ಬಾವಿ ಬತ್ತಿದ ಕಡೆ ತಾತ್ಕಾಲಿಕವಾಗಿ ಟ್ಯಾಂಕರ್ ನೀರು ಪೂರೈಸಲಾಗುತ್ತಿದೆ. ಆದರೆ, ನಿರಂತರವಾಗಿ ನೀರು ಪೂರೈಕೆ ಮಾಡುವುದು ಅಸಾಧ್ಯ. ಪರ್ಯಾಯ ಮಾರ್ಗವಾಗಿ ಬೇರೆ ಕಡೆ ಕೊಳವೆ ಬಾವಿ ಕೊರೆದು ಅಲ್ಲಿಂದ ಪೂರೈಸುವ ಪ್ರಯತ್ನ ನಡೆಸಿದ್ದೇವೆ’ ಎಂದು ವಿವರಿಸಿದರು.
 
ಶಾಂತಾರಾಂ ಮಾತನಾಡಿ, ‘ಟ್ಯಾಂಕರ್‌ನಿಂದ ನೀರು ಪೂರೈಕೆ ಎಂಬುದು ತಾತ್ಕಾಲಿಕವಷ್ಟೇ. ದೀರ್ಘ ಕಾಲಿನ ಪರಿಹಾರ ಹುಡುಕಲೇಬೇಕು’ ಎಂದು ಸೂಚಿಸಿದರು. ‘ಕೊಳವೆ ಬಾವಿ ಕೊರೆಯುವಾಗ ಭೂಗರ್ಭ ತಜ್ಞರು ವರದಿ, ಅಂತರ್ಜಲ ಮಟ್ಟ ಗುರುತಿಸುವ ಆಧುನಿಕ ಯಂತ್ರ ಕಡ್ಡಾಯವಾಗಿ ಬಳಸಬೇಕು. ಎಲ್ಲಿ ಕೊಳವೆ ಬಾವಿ ಕೊರೆದರೆ ನೀರು ಸಿಗುತ್ತದೆ ಎಂಬುದೂ ಸ್ಥಳೀಯರಿಗೆ ಗೊತ್ತಿರುತ್ತದೆ. ಸ್ಥಳೀಯರು ಇಂಥಲ್ಲಿ ಕೊಳವೆ ಬಾವಿ ಕೊರೆಯಿರಿ ಎಂದಾಗ ಅವರ ಅಭಿಪ್ರಾಯ ಗೌರವಿಸಬೇಕು. ಸಾಧ್ಯವಾದರೆ ಪರಿಶೀಲಿಸಿ ಮುಂದುವರಿಯಬಹುದು’ ಎಂದು ಆದೇಶಿಸಿದರು.
 
ಜಿಲ್ಲೆಯ 828 ಶುದ್ಧ ಕುಡಿಯುವ ನೀರಿನ ಘಟಕಗಳು ಕಾಗದದ ಮೇಲಷ್ಟೆ ಕೆಲಸ ಮಾಡುತ್ತಿವೆ. ಆದರೆ, ವಾಸ್ತವಿಕವಾಗಿ ಅವು ಕೆಲಸ ಮಾಡುತ್ತಿಲ್ಲ. ಈ ಬಗ್ಗೆ ಸಾರ್ವಜನಿಕರು ದೂರು ನೀಡುತ್ತಿದ್ದಾರೆ. ಕೆಲಸ ಮಾಡದ ಘಟಕಗಳನ್ನು ಕೂಡಲೇ ದುರಸ್ತಿಪಡಿಸಿ ವರದಿ ಕೊಡಬೇಕು ಎಂದು ಶಾಂತಾರಾಂ ಸೂಚಿಸಿದರು.
 
ವಿದ್ಯುದ್ದೀಕರಣಕ್ಕೆ ಬಾಕಿ ಇರುವ ಕುಡಿಯುವ ನೀರು ಪೂರೈಕೆ ಕೊಳವೆ ಬಾವಿ ಪಟ್ಟಿ ಕೊಡಬೇಕು. ಸರ್ಕಾರದಿಂದ ಅನುದಾನ ಬರುತ್ತಿದ್ದಂತೆಯೇ ಬೆಸ್ಕಾಂಗೆ ಪಾವತಿಸಲು ಬಾಕಿ ಇರುವ ₹ 25 ಕೋಟಿ ಪಾವತಿಸಬೇಕು ಎಂದು ಕಾರ್ಯನಿರ್ವಾಹಕ ಎಂಜಿನಿಯರ್ ಮೋಹನ್ ಅವರಿಗೆ ಆದೇಶಿಸಿದರು.
 
ಕೆಎಂಎಫ್‌ಗೆ ಸೂಚನೆ: ಜಿಲ್ಲೆಯ 40 ಕಡೆ ಶುದ್ಧ ಕುಡಿಯುವ ನೀರು ಪೂರೈಕೆ ಸ್ಥಾಪನೆಗೆ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಸ್ಥಳ ಒದಗಿಸಿಕೊಡಲಾಗಿದೆ. ಆದರೆ, ಇನ್ನೂ 16 ಕಡೆ ಸ್ಥಾಪನೆ ಮಾಡಿಲ್ಲ. ತ್ವರಿತವಾಗಿ ಸ್ಥಾಪಿಸಿದರೆ ಜನರಿಗೆ ಅನುಕೂಲವಾಗುತ್ತದೆ. ಬೇಗ ಸ್ಥಾಪನೆ ಮಾಡಬೇಕು ಎಂದು ಸಿಇಒ ಹೇಳಿದರು.
 
ಜಿಲ್ಲೆಯ ಗೋಶಾಲೆಯಲ್ಲಿ 21000 ಹಸುಗಳಿವೆ. ಇದರಲ್ಲಿ ಹಾಲು ಉತ್ಪಾದಕ ಸಹಕಾರ ಸಂಘಕ್ಕೆ ಹಾಲು ಪೂರೈಸುವ ಹಸುಗಳೂ ಇವೆ. ಗೋಶಾಲೆಯಲ್ಲಿ ಒಣ ಮೇವು ತಿನ್ನುತ್ತವೆ. ಹಸಿ ಮೇವಿನ ಕೊರತೆಯಾಗಿ ಹಾಲಿನ ಉತ್ಪಾದನೆ ಕುಸಿದಿದೆ ಎಂದು ಸಿಇಒ ಕೆಎಂಎಫ್ ಅಧಿಕಾರಿ ಪ್ರಶ್ನಿಸಿದರು.
 
ಕೆಎಂಎಫ್ ಅಧಿಕಾರಿ ಮಾತನಾಡಿ, ‘ಕಳೆದ ಎರಡು ತಿಂಗಳಿಂದ ಹಾಲು ಉತ್ಪಾದನೆ ಪ್ರಮಾಣ ಕುಸಿತವಾಗುತ್ತಿದೆ. ಮೇವು ಬೆಳೆದು ಹಸಿ ಮೇವು ಹಾಕಲು 40 ಸಾವಿರ ಕಿಟ್ ಕೊಟ್ಟಿದ್ದೇವೆ. ಆದಾಗ್ಯೂ ಹಸಿ ಮೇವಿನ ಕೊರತೆ ಬಾಧಿಸುತ್ತಿದೆ’ ಎಂದು ವಿವರಿಸಿದರು.
‘ಬೆಳೆ ನಷ್ಟ ಪರಿಹಾರ (ಇನ್‌ಪುಟ್ ಸಬ್ಸಿಡಿ) ರೈತರ ಖಾತೆಗೆ ಜಮೆಯಾಗಲಿದ್ದು, ಜಿಲ್ಲಾ ಮಟ್ಟದ ಕೃಷಿ ಇಲಾಖೆಯದ್ದು ಏನು ಪಾತ್ರ ಇರುವುದಿಲ್ಲ.  ಕೃಷಿ ಮತ್ತು ತೋಟಗಾರಿಕೆ ಸೇರಿ ಜಿಲ್ಲೆಯಲ್ಲಿ 3 ಲಕ್ಷ 75 ಸಾವಿರ ಫಲಾನುಭವಿ ರೈತರ ಪಟ್ಟಿ ಸಿದ್ದಪಡಿಸಲಾಗಿದೆ’ ಎಂದು ಕೃಷಿ ಇಲಾಖೆ ಪ್ರಭಾರ ಜಂಟಿ ನಿರ್ದೇಶಕಿ ರೂಪಾದೇವಿ ತಿಳಿಸಿದರು.
 
ರೈತರ ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆಯನ್ನು ಇಲಾಖೆ ಮುಖ್ಯ ಕಚೇರಿಗೆ ಕಳುಹಿಸಲಾಗುತ್ತಿದೆ ಎಂದು ಹೇಳಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ಗರಂ: ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಪಾಪಣ್ಣ ಮಾತನಾಡಿ, ‘ಬೆಳೆನಷ್ಟ ಪರಿಹಾರಕ್ಕೆ ಗುರುತಿಸಿರುವ ರೈತರ ಪಟ್ಟಿ ಪಂಚಾಯಿತಿ ಮಟ್ಟದಲ್ಲಿ ಪ್ರದರ್ಶಿಸಲು ಅನೇಕ ಬಾರಿ ಸೂಚಿಸಿದ್ದರೂ ಗಮನಹರಿಸಿಲ್ಲ. ಸಿದ್ಧವಾದ ಪಟ್ಟಿ ಪ್ರದರ್ಶಿಸಲು ಏನು ಸಮಸ್ಯೆ’ಎಂದು ಪ್ರಶ್ನಿಸಿದರು.
 
‘ಕುಡಿಯುವ ನೀರು ಪೂರೈಕೆ ಯೋಜನೆ ಕೊಳವೆ ಬಾವಿ ವಿದ್ಯುತ್ ಬಿಲ್ ಪಾವತಿ ವಿಳಂಬವಾಗಿದ್ದಕ್ಕೆ ಬೆಸ್ಕಾಂನವರು ಸಮಸ್ಯೆ ಹೇಳುತ್ತಾರೆ. ಆದರೆ, ಕೊಳವೆ ಬಾವಿ ಹೊಂದಿರುವ ರೈತರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು, ಟಿಸಿ ಕೊಡಲು ಹಣ ಕೇಳುತ್ತಾರೆ. ಮೇಲಧಿಕಾರಿಗಳಿಗೆ ಮೌಖಿಕ ದೂರು ನೀಡಿದರೂ ಪ್ರಯೋಜನವಾಗಿಲ್ಲ’ ಎಂದು ತರಾಟೆಗೆ ತೆಗೆದುಕೊಂಡರು.
 
‘ರೈತರಿಗೆ ಸಾಲದ ಅಗತ್ಯ ಇದ್ದರೂ ಡಿಸಿಸಿ ಬ್ಯಾಂಕ್ ಸಾಲ ಕೊಡುತ್ತಿಲ್ಲ. ಅಧಿಕಾರಿಗಳು ಮಾತ್ರ ಸಾಲ ಕೋರಿದ ಯಾವ ಅರ್ಜಿಗಳು ಬಾಕಿ ಉಳಿಸಿಲ್ಲ ಎಂದು ಸುಳ್ಳು ಹೇಳುತ್ತಾರೆ. ಬರಗಾಲದಲ್ಲಿ ಸಾಲಕ್ಕಾಗಿ ಪರದಾಡುತ್ತಾರೆ. ರೈತರ ಸಮಸ್ಯೆಯೇ ನಿಮಗೆ ಅರ್ಥವಾಗಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 
ಇಬ್ಬರಿಗೆ ನೋಟಿಸ್: ಸಭೆಗೆ ಗೈರಾದ ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಹಾಗೂ ಮಧುಗಿರಿ ಲೋಕೋಪಯೋಗಿ ಕಾರ್ಯಪಾಲಕ ಎಂಜಿನಿಯರ್‌ಗೆ ನೋಟಿಸ್ ಜಾರಿಗೊಳಿಸಲು ಅಧ್ಯಕ್ಷರು ಆದೇಶಿಸಿದರು.
ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಯಶೋದಾ ಗಂಗರಾಜು ಇದ್ದರು.
 
386 ಕಾಮಗಾರಿ

ಬರಪರಿಹಾರ ಯೋಜನೆಯಡಿ 386 ಕಾಮಗಾರಿ ಕೈಗೊಳ್ಳಲಾಗಿದೆ. 2017ರ ಜೂನ್ ತಿಂಗಳವರೆಗೆ ನೀರಿನ ಸಮಸ್ಯೆ ಪರಿಹಾರಕ್ಕೆ ಶಾಸಕರ ಅಧ್ಯಕ್ಷತೆಯ ಕಾರ್ಯಪಡೆಗೆ ಪ್ರತಿ ತಾಲ್ಲೂಕಿಗೆ ₹ 60 ಲಕ್ಷದಂತೆ ₹ 6 ಕೋಟಿ ನೀಡಲಾಗಿದೆ. ಅಲ್ಲದೇ ತುರ್ತು ಕುಡಿಯುವ ನೀರು ಪೂರೈಕೆಗೆ 206 ಕಾಮಗಾರಿ (ಕಾಂಟಿಜೆನ್ಸಿ ಆ್ಯಕ್ಷನ್ ಪ್ಲ್ಯಾನ್) ಅನುಮೋದನೆಗೊಂಡು ಪ್ರಗತಿಯಲ್ಲಿವೆ ಎಂದು ಜಿಲ್ಲಾ ಪಂಚಾಯತ್  ಗ್ರಾಮೀಣ ಕುಡಿಯುವ ನೀರು ಸರಬರಾಜು ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಮೋಹನ್ ವಿವರಿಸಿದರು.
 
* ಕ್ರಿಯಾ ಯೋಜನೆ ಪಟ್ಟಿ ಪ್ರಕಾರ ಕೊಳವೆ ಬಾವಿ ಕೊರೆಸಿದರೆ ಸಾಲದು. ಜನರಿಗೆ ಎಲ್ಲಿ ಅಗತ್ಯವಾಗಿದೆಯೊ ಅಂತಹ ಕಡೆ ಕೊರೆಸಬೇಕು.
ಕೆ.ಜಿ.ಶಾಂತಾರಾಂ,  ಸಿಇಒ, ಜಿಲ್ಲಾ  ಪಂಚಾಯಿತಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT