ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳು ದಂಧೆ: 47 ಎಕರೆ ಜಮೀನು ವಶ

Last Updated 15 ಫೆಬ್ರುವರಿ 2017, 10:44 IST
ಅಕ್ಷರ ಗಾತ್ರ

ಕೋಲಾರ: ‘ಕೃಷಿ ಜಮೀನಿನಲ್ಲಿ ಅನಧಿಕೃತವಾಗಿ ಮರಳು ದಂಧೆ ನಡೆಸುತ್ತಿದ್ದ ಆರೋಪದ ಮೇಲೆ 47 ಎಕರೆ 38 ಗುಂಟೆ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯಲಾಗಿದೆ’ ಎಂದು ತಹಶೀಲ್ದಾರ್ ವಿಜಯಣ್ಣ ತಿಳಿಸಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತಾಲ್ಲೂಕಿನ ಗುಟ್ಟಹಳ್ಳಿ, ದಾನವಹಳ್ಳಿ, ಕುರ್ಕಿ, ಸೊಣ್ಣೇನಹಳ್ಳಿ, ಚಾಕರಸನಹಳ್ಳಿ, ಲಕ್ಷ್ಮಿಸಾಗರ, ಮಲ್ಲಸಂದ್ರ ಗ್ರಾಮದಲ್ಲಿ ರೈತರ ಕೃಷಿ ಜಮೀನಿನಲ್ಲಿ ಅಕ್ರಮವಾಗಿ ಫಿಲ್ಟರ್ ಮರಳು ದಂಧೆ ನಡೆಸಲಾಗುತ್ತಿತ್ತು. ಈ ಜಮೀನುಗಳನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳಲಾಗಿದೆ. ಅಲ್ಲದೇ ಈ ಅಕ್ರಮದಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುತ್ತೇವೆ’ ಎಂದರು.

‘ವ್ಯವಸಾಯದ ಉದ್ದೇಶಕ್ಕಾಗಿ ಸರ್ಕಾರದಿಂದ ಮಂಜೂರಾದ ಜಮೀನನ್ನು ರೈತರು ಕೃಷಿಗೆ ಬಳಕೆ ಮಾಡದೆ ಮರಳು ದಂಧೆಕೋರರಿಗೆ ನೀಡಿದ್ದಾರೆ. ಈ ದಂಧೆಕೋರರು ಜಮೀನುಗಳ ಮೂಲ ಸ್ವರೂಪ ವಿರೂಪಗೊಳಿಸಿ ದೊಡ್ಡ ಹಳ್ಳಗಳನ್ನು ತೋಡಿ ಅಕ್ರಮವಾಗಿ ಫಿಲ್ಟರ್ ಮರಳು ತಯಾರಿಸುತ್ತಿದ್ದರು. ದಂಧೆಕೋರರು ರಾಜ್ಯ ಭೂ ಕಂದಾಯ ಕಾಯ್ದೆ 1964ರ 94(ಎ) ಮತ್ತು (ಬಿ) ನಿಯಮಗಳನ್ನು ಉಲ್ಲಂಘಿಸಿರುವುದು ದೃಢಪಟ್ಟಿದ್ದು, ಜಮೀನುಗಳ ಖಾತೆದಾರರು ಮತ್ತು ಫಿಲ್ಟರ್ ಮರಳು ದಂಧೆಕೋರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ವಿವರಿಸಿದರು.

‘ಈಗಾಗಲೇ 47 ಎಕರೆ 38 ಗುಂಟೆ ಜಮೀನು ವಶಪಡಿಸಿಕೊಳ್ಳಲಾಗಿದೆ. ಈ ಪೈಕಿ ಚಾಕರಸಾನಹಳ್ಳಿಯ 6.14, ಗುಟ್ಟಹಳ್ಳಿಯ 11.8, ಸೊಣ್ಣೇನಹಳ್ಳಿಯ 4.34, ಲಕ್ಷ್ಮಿಸಾಗರದ 1.37, ಕೆ.ಬಿ.ಹೊಸಹಳ್ಳಿಯ 12.33, ದಾನಹಳ್ಳಿಯ 5.36 ಮತ್ತು ಕುರ್ಕಿಯ 4.36 ಜಮೀನು ಸೇರಿದೆ’ ಎಂದು ಅವರು ಮಾಹಿತಿ ನೀಡಿದರು.

ಗಡಿಪಾರಿಗೆ ಪ್ರಸ್ತಾವ: ‘ಮರಳು ದಂಧೆಯಲ್ಲಿ ಭಾಗಿಯಾಗಿರುವ 40 ಮಂದಿ ವಿರುದ್ಧ ವಿವಿಧ ರೀತಿಯ ಪ್ರಕರಣಗಳು ದಾಖಲಾಗಿದ್ದು, ಇವರ ಮೇಲೆ ಗೂಂಡಾ ಕಾಯ್ದೆಯಡಿ ಕ್ರಿಮಿನಲ್ ಪ್ರಕರಣ ದಾಖಲಿಸಿ ತಾಲ್ಲೂಕಿನಿಂದ ಗಡಿಪಾರು ಮಾಡುವಂತೆ ಉಪ ವಿಭಾಗಾಧಿಕಾರಿಗೆ ಪ್ರಸ್ತಾವ ಕಳುಹಿಸಲಾಗುವುದು’ ಎಂದು ಸ್ಪಷ್ಟಪಡಿಸಿದರು.

ವಶಪಡಿಸಿಕೊಳ್ಳಲಾದ ಜಮೀನುಗಳ ಪಹಣಿಯಲ್ಲಿನ ಆರ್‌ಟಿಸಿ ನಂಬರ್ ಬದಲಿಸಿದ್ದು, ಕಾನೂನುಬಾಹಿರ ಚಟುವಟಿಕೆ ನಡೆಸುತ್ತಿದ್ದ ಕಾರಣ ಭೂಮಿಯನ್ನು ಸರ್ಕಾರದ ವಶಕ್ಕೆ ಪಡೆಯಲಾಗಿದೆ ಎಂದು ನಮೂದಿಸಲಾಗಿದೆ. ಈ ಜಮೀನನ್ನು ಕೃಷಿ ಮಾಡಲು ಇಚ್ಛಿಸುವ ರೈತರಿಗೆ ಗುತ್ತಿಗೆ ಆಧಾರದಲ್ಲಿ 5 ವರ್ಷಗಳ ಅವಧಿಗೆ ನೀಡಲಾಗುವುದು ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT