ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೌರ್ಜನ್ಯ ತಡೆಯಲು ಹೋರಾಟ ಅಗತ್ಯ

ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಸ್ಥಾಪನಾ ದಿನಾಚರಣೆ
Last Updated 15 ಫೆಬ್ರುವರಿ 2017, 10:48 IST
ಅಕ್ಷರ ಗಾತ್ರ
ಚಿಕ್ಕಬಳ್ಳಾಪುರ: ‘ಸಮಾಜದಲ್ಲಿ ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಯಬೇಕಾದರೆ ಹೋರಾಟ ಅನಿವಾರ್ಯ’ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ದಸಂಸ) ರಾಜ್ಯ ಘಟಕದ ಸಂಘಟನಾ ಸಂಚಾಲಕ ಬಿ.ಎನ್.ಗಂಗಾಧರಪ್ಪ ಅಭಿಪ್ರಾಯಪಟ್ಟರು.
 
ಕದಸಂಸ ತಾಲ್ಲೂಕು ಘಟಕದ ವತಿಯಿಂದ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ 42ನೇ ಸಂಸ್ಥಾಪನಾ ದಿನಾಚರಣೆ ಹಾಗೂ ತಾಲ್ಲೂಕು ಮಟ್ಟದ ಸರ್ವ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು.
 
‘ರಾಜ್ಯದಲ್ಲಿ ದಲಿತರು ಮತ್ತು ದಮನಿತರ ಮೇಲೆ ನಡೆಯುತ್ತಿದ್ದ ದೌರ್ಜನ್ಯ ಪ್ರಕರಣಗಳನ್ನು ತಡೆಯುವ ಉದ್ದೇಶದಿಂದ ಪ್ರೊ.ಬಿ.ಕೃಷ್ಣಪ್ಪ ಅವರು ದಲಿತ ಸಂಘರ್ಷ ಸಮಿತಿಯನ್ನು ಸ್ಥಾಪಿಸಿದರು. ಅಂದಿನಿಂದ ಇಂದಿನವರೆಗೆ ಸಮಿತಿಯು ಶೋಷಿತರ ಪರವಾಗಿ ಹೋರಾಟ ರೂಪಿಸುತ್ತಾ ದೌರ್ಜನ್ಯಗಳಿಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿದೆ’ ಎಂದು ತಿಳಿಸಿದರು.
 
‘ಇಂದಿಗೂ ಕೃಷ್ಣಪ್ಪ ಅವರ ಆದರ್ಶಗಳನ್ನು ಪಾಲಿಸುತ್ತಾ ಅನೇಕ ನಾಯಕರು ಶೋಷಿತ ಸಮುದಾಯದ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಅಂಬೇಡ್ಕರ್‌ ಅವರ ಸಮಾನತೆಯ ಆಶಯಗಳ ಈಡೇರಿಕೆಗಾಗಿ ಹುಟ್ಟಿಕೊಂಡ ಸಂಘವು ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂಬ ಅಸ್ತ್ರಗಳ ಮೂಲಕ ದಮನಿತರನ್ನು ಮೇಲೆತ್ತುವ ಕೆಲಸ ಮಾಡುತ್ತಿದೆ’ ಎಂದರು.
 
ಜಿಲ್ಲಾ ಘಟಕದ ಸಂಚಾಲಕ ಕಡ್ಡೀಲು ವೆಂಕಟರವಣ ಮಾತನಾಡಿ,‘ಒಗ್ಗಟ್ಟಿನಲ್ಲಿ ಬಲವಿದೆ ಎಂಬುದು ಲೋಕ ಸತ್ಯ. ಅದರಂತೆ ಇಂದು ನಾವು ಒಗ್ಗಟ್ಟಿನಿಂದ ಹೋರಾಡಬೇಕಿದೆ. ಹೋರಾಟದ ಜತೆಗೆ ದಲಿತರ ಮಕ್ಕಳು ವಿದ್ಯಾವಂತರಾಗಿ ರೂಪುಗೊಳ್ಳುವಂತೆ ನೋಡಿಕೊಳ್ಳಬೇಕಿದೆ’ ಎಂದು ತಿಳಿಸಿದರು.
 
‘ಇತ್ತೀಚೆಗೆ ಸಮಾಜದಲ್ಲಿ ಶೋಷಿತರ ಹೆಸರಿನಲ್ಲಿ ಹೆಚ್ಚು ಹೆಚ್ಚು ಸಂಘಟನೆಗಳು ಹುಟ್ಟಿಕೊಳ್ಳುತ್ತಿವೆ. ಆದರೂ ಶೋಷಣೆಗಳು ಮಾತ್ರ ಕಡಿಮೆಯಾಗುತ್ತಿಲ್ಲ. ಆದ್ದರಿಂದ ಒಂದೇ ತತ್ವದ ಅಡಿಯಲ್ಲಿ ಕೆಲಸ ಮಾಡುವ ಹಲವು ಸಂಘಟನೆಗಳು ಒಂದುಗೂಡಿ ಶಕ್ತಿಯುತ ಹೋರಾಟ ರೂಪಿಸುವ ಅಗತ್ಯವಿದೆ. ಜಾತಿ, ಮತಗಳಿಗೆ ಕಟ್ಟುಬೀಳದೆ ತುಳಿತಕ್ಕೆ ಒಳಗಾಗಿರುವ ಎಲ್ಲಾ ವರ್ಗದವರ ಪರವಾಗಿ ಸಂಘಟನೆ ಕೆಲಸ ಮಾಡಬೇಕಿದೆ’ ಎಂದು ಹೇಳಿದರು.
 
ಸಮಿತಿಯ ಚಿಕ್ಕಬಳ್ಳಾಪುರ ತಾಲ್ಲೂಕು ಸಂಚಾಲಕ ತಿಪ್ಪೇನಹಳ್ಳಿ ನಾರಾಯಣ ಮಾತನಾಡಿ,ಸರ್ಕಾರ ದಲಿತರನ್ನು ಇಂದಿಗೂ ಕಡೆಗಣಿಸುತ್ತಿದೆ. ಸಮಾಜದಲ್ಲಿ ಸಮಾನ ಅವಕಾಶಗಳು ಸಿಗಬೇಕೆಂದು ಹಲವಾರು ವರ್ಷಗಳಿಂದ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಅದು ಈಡೇರಿಲ್ಲ. ಈ ಕೂಡಲೇ ಸರ್ಕಾರ ದಲಿತರ ಉದ್ದಾರಕ್ಕೆ ಬೇಕಾದ ವಿಶೇಷ ಯೋಜನೆಗಳನ್ನು ಜಾರಿಗೆ ತರಬೇಕು’ ಎಂದು ಒತ್ತಾಯಿಸಿದರು.
 
ದಸಂಸ ಜಿಲ್ಲಾ ಘಟಕದ ಸಂಘಟನಾ ಸಂಚಾಲಕರಾದ ಡಿ.ಎಂ.ನರಸಿಂಹಯ್ಯ, ಎಚ್.ಎಂ.ವೆಂಕಟೇಶ್, ಕಡೇನಹಳ್ಳಿ ಕದಿರಪ್ಪ, ಕೆ.ವಿ.ವೆಂಕಟೇಶ್, ಹುದುಗೂರು ನಂಜುಂಡಪ್ಪ, ಜಿಲ್ಲಾ ಘಟಕದ ಖಜಾಂಚಿ ಚಂದ್ರಣ್ಣ, ಎನ್.ಶ್ರೀನಿವಾಸ್, ಸಿ.ಕೆ.ಮಲ್ಲಪ್ಪ  ಉಪಸ್ಥಿತರಿದ್ದರು.
 
* ಅನೇಕ ದಲಿತ ಮುಖಂಡರು ಸ್ವಹಿತಾಸಕ್ತಿಗಳಿಗಾಗಿ ದಲಿತ ಸಂಘಟನೆಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಇದು ಸಮಾನತೆಯ ತತ್ವದ ಆಶಯಕ್ಕೆ ತೀರಾ ವಿರುದ್ಧವಾದದ್ದು.
ಬಿ.ಎನ್.ಗಂಗಾಧರಪ್ಪ, ದಸಂಸ ರಾಜ್ಯ ಘಟಕದ ಸಂಘಟನಾ ಸಂಚಾಲಕ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT