ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮರ್ಪಣಾ ಮನೋಭಾವದಿಂದ ಕೆಲಸ ಮಾಡಿ

‘ಸಮರ್ಪಣಾ ದಿನ’ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್‌ ಪ್ರಚಾರಕ ಗಣಪತಿ ಹೆಗಡೆ ಅಭಿಮತ
Last Updated 15 ಫೆಬ್ರುವರಿ 2017, 10:57 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಸಮಾಜ ಜಾಗೃತಗೊಳಿಸುವ ನಿಟ್ಟಿನಲ್ಲಿ ಸ್ವಹಿತ ತ್ಯಾಗ ಮಾಡಿ ದೇಶಕ್ಕಾಗಿ ಸಮರ್ಪಣಾ ಮನೋಭಾವದಿಂದ ಕೆಲಸ ಮಾಡಿದ ಪಂಡಿತ್‌ ದೀನ್‌ ದಯಾಳ್‌ ಉಪಾಧ್ಯಾಯ ಅವರ ಬದುಕು ನಮ್ಮೆಲ್ಲರಿಗೂ ಮಾದರಿಯಾಗಬೇಕು’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಪ್ರಚಾರಕ ಗಣಪತಿ ಹೆಗಡೆ ಅಭಿಪ್ರಾಯಪಟ್ಟರು.

ಪಂಡಿತ್‌ ದೀನ್‌ ದಯಾಳ್‌ ಉಪಾಧ್ಯಾಯ ಅವರ ಸ್ಮರಣಾರ್ಥವಾಗಿ  ನಗರದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ‘ಸಮರ್ಪಣಾ ದಿನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕಡುಬಡತನದ ಕುಟುಂಬದಲ್ಲಿ ಜನಿಸಿ, ಚಿಕ್ಕಂದಿನಲ್ಲಿಯೇ ತಂದೆ ತಾಯಿಯನ್ನು ಕಳೆದುಕೊಂಡು ಸೋದರ ಮಾವನ ಆಶ್ರಯದಲ್ಲಿ ಬೆಳೆದ ದೀನ್‌ ದಯಾಳ್‌ ಅವರು ತಾವು ಪಡೆದ ಶಿಕ್ಷಣದ ಆಧಾರದಲ್ಲಿ ಉತ್ತಮ ರೀತಿಯ ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳಬಹುದಿತ್ತು ಆದರೆ, ಆರ್‌ಎಸ್‌ಎಸ್‌ ಸಂಪರ್ಕಕ್ಕೆ ಬರುತ್ತಿದ್ದಂತೆ ಅವರ ಬದುಕಿನ ದಿಕ್ಕೇ ಬದಲಾಯಿತು. ಸಮಾಜ ಗಟ್ಟಿಗೊಳಿಸುವ, ಜಾಗೃತಿ ಮತ್ತು ಸಂಘಟನೆ ಮಾಡುವ ಸಂಕಲ್ಪದಿಂದ ಅವರು ಬ್ರಹ್ಮಚಾರಿಯಾಗಿಯೇ ಬಾಳಿದರು’ ಎಂದರು.

‘ದೊಡ್ಡಸ್ತಿಕೆ ಬಯಸದೆ ಸ್ವಭಾತಃ ಸರಳತೆ ಬದುಕನ್ನು ಮೈಗೂಡಿಸಿಕೊಂಡಿದ್ದ ದೀನ್‌ ದಯಾಳ್‌ ಅವರು ಸಂಘದ ಪೂರ್ಣಾವಧಿ ಕಾರ್ಯಕರ್ತರಾಗಿ ದುಡಿಯುವ ಜತೆಗೆ ಶ್ಯಾಮಪ್ರಕಾಶ್‌ ಮುಖರ್ಜಿ ಅವರು ಭಾರತೀಯ ಜನಸಂಘದ ಕಟ್ಟಿದ ಬಳಿಕ ಆರ್‌ಎಸ್‌ಎಸ್‌ ಸರಸಂಘಚಾಲಕ ಮಾಧವ ಸದಾಶಿವ ಗೋಳವಲ್ಕರ್‌ ಅವರ ನಿರ್ದೇಶನದಂತೆ ಉತ್ತರಪ್ರದೇಶದ ಸಹ ಪ್ರಾಂತ್ಯ ಪ್ರಚಾರಕರಾಗಿ ಸಂಘಟನೆಯಲ್ಲಿ ತೊಡಗಿಕೊಂಡು ಸಂಘಟನೆಯಲ್ಲಿಯೂ ಸರಳತೆ ತಂದರು’ ಎಂದು ತಿಳಿಸಿದರು.

‘ತನ್ನ ಬಗ್ಗೆ ಏನೇನು ಯೋಚಿಸದ, ಏನನ್ನೂ ಬಯಸದ ಸಂಪೂರ್ಣವಾಗಿ ದೇಶಕ್ಕೆ ಸಮರ್ಪಿಸಿಕೊಂಡ ಆ ಮಹನೀಯರ ನೆನಪಿಗಾಗಿ ನಾವು ಇವತ್ತು ಸಮರ್ಪಣಾ ದಿನ ಆಚರಿಸುತ್ತಿದ್ದೇವೆ. ಇದು ಕೇವಲ ಒಂದು ಕಾರ್ಯಕ್ರಮವಾದರೆ ಸಾಲದು. ದೀನ್‌ ದಯಾಳ್‌ ಅವರು ಸಾಕಷ್ಟು ಅಧ್ಯಯನ ಮಾಡಿ ಪ್ರಸ್ತುತಪಡಿಸಿದ ಏಕಾತ್ಮ ಮಾನವ ತತ್ವವನ್ನು ನಾವು ಬಾಳಿನಲ್ಲಿ ಅಳವಡಿಸುವಕೊಳ್ಳುವ ಅಗತ್ಯವಿದೆ’ ಎಂದರು.

‘ಸ್ವಾತಂತ್ರ್ಯೋತ್ತರ ಕಾಲಘಟ್ಟದಲ್ಲಿ ದೇಶ ಕಮ್ಯೂನಿಷ್ಟ್‌ ವಿಚಾರಧಾರೆಯ ಮಾರ್ಗದಲ್ಲಿ ಸಾಗಬೇಕೇ ಅಥವಾ ಬಂಡವಾಳಶಾಹಿ ಮಾರ್ಗದಲ್ಲಿ ಮುನ್ನಡೆಯಬೇಕೇ ಎಂಬ ಚರ್ಚೆ ಆರಂಭಗೊಂಡ ಹೊತ್ತಿನಲ್ಲಿಯೇ ನೆಹರೂ ಅವರು ಮಧ್ಯಮ ಮಾರ್ಗ ಅಳಡಿಸಿಕೊಂಡರು. ಇದೇ ವೇಳೆ ದೀನ್‌ ದಯಾಳ್‌ ಅವರು ಸಾವಿರಾರು ಗ್ರಂಥಗಳನ್ನು ಅಧ್ಯಯನ ಮಾಡಿ, ಭಾರತೀಯ ತತ್ತ್ವಶಾಸ್ತ್ರದ ಶಾಶ್ವತ ಮೌಲ್ಯಗಳನ್ನು ಆಧರಿಸಿದ ಮತ್ತು ದೇಶದಲ್ಲಿ ಸಾಮಾನ್ಯರಲ್ಲಿ ಸಾಮಾನ್ಯರು ಬದುಕಿದ ರೀತಿಯನ್ನು ಸೂತ್ರಬದ್ಧಗೊಳಿಸಿದ ಮತ್ತು ಅನುಸರಿಸಲು ಯೋಗ್ಯವಾದ ದರ್ಶನ ಸಿದ್ಧಾಂತವನ್ನು ರೂಪಿಸಿದರು’ ಎಂದರು.

‘ವ್ಯಕ್ತಿ, ಕುಟುಂಬ, ಸಮಾಜ, ರಾಷ್ಟ್ರ ಮತ್ತು ಸೃಷ್ಟಿಗೆ ಹಿತಕರವಾದ ತತ್ವ ಪ್ರತಿಪಾದಿಸುವ ಮೂಲಕ ಧರ್ಮಾತೀತ, ಜಾತ್ಯತೀತ ಸುಖೀ ರಾಷ್ಟ್ರ ನಿರ್ಮಾಣದ ಅಗತ್ಯ ಬಗ್ಗೆ ಸಾರಿದರು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅಧಿಕಾರದಲ್ಲಿರುವವರು ಜನಹಿತದ ಕೆಲಸಗಳನ್ನು ಮಾಡಬೇಕು ಎಂದು ಒತ್ತಿ ಹೇಳಿದರು. ಅವರ ಆ ತತ್ವವನ್ನು ನಾವು ಬದುಕಿನಲ್ಲಿ ಅಳವಡಿಸಿಕೊಂಡು ಸಮಾಜಮುಖಿ ಕೆಲಸಗಳಲ್ಲಿ ನಮ್ಮನ್ನು ಹೆಚ್ಚೆಚ್ಚು ತೊಡಗಿಸಿಕೊಳ್ಳಬೇಕು’ ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಜಿ.ವಿ.ಮಂಜುನಾಥ್, ತಾಲ್ಲೂಕು ಘಟಕದ ಅಧ್ಯಕ್ಷ ಅಗಲಗುರ್ಕಿ ಚಂದ್ರಶೇಖರ್, ರೈತ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ರಾಮಪ್ಪ, ಎಸ್‌ಸಿ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಹನುಮಂತಪ್ಪ, ಮುಖಂಡರಾದ ಲಕ್ಷ್ಮಿನಾರಾಯಣ ಗುಪ್ತಾ, ಕೃಷ್ಣಮೂರ್ತಿ, ಮುನಿರಾಜು, ಬಾಲು ಉಪಸ್ಥಿತರಿದ್ದರು.

* ತಮಗಾಗಿ ಏನೊಂದು ಮಾಡಿಕೊಳ್ಳದ ವಿವೇಕಾನಂದ, ಅಂಬೇಡ್ಕರ್‌, ದೀನ್‌ ದಯಾಳ್‌ ಉಪಾಧ್ಯಾಯ ಅವರಂತಹ ಮಹನೀಯರ ಜಯಂತಿ ಮಾಡಿದರೆ ಸಾಲದು. ಅವರ ಆದರ್ಶವನ್ನು ಅಳವಡಿಸಿಕೊಳ್ಳಬೇಕು.
ಗಣಪತಿ ಹೆಗಡೆ, ಆರ್‌ಎಸ್‌ಎಸ್‌ ಪ್ರಚಾರಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT