ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾಧಿಕಾರಿ ಭರವಸೆ; ರೈತರ ಪ್ರತಿಭಟನೆ ಹಿಂದಕ್ಕೆ

ಬೆಳೆಹಾನಿಗೆ ಪರಿಹಾರ ನೀಡಲು ಆಗ್ರಹ; ಪಾಲಿಕೆ, ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮಲಗಿ ಧರಣಿ
Last Updated 15 ಫೆಬ್ರುವರಿ 2017, 11:30 IST
ಅಕ್ಷರ ಗಾತ್ರ

ಮೈಸೂರು: ರೈತರ ಸಮಸ್ಯೆಗಳನ್ನು ಚರ್ಚಿಸಲು ಬುಧವಾರ ಸಭೆ ಕರೆಯುವುದಾಗಿ ಜಿಲ್ಲಾಧಿಕಾರಿ ರಂದೀಪ್ ಇಲ್ಲಿ ಧರಣಿನಿರತ ರೈತರಿಗೆ ಭರವಸೆ ನೀಡುವ ಮೂಲಕ ರೈತರ ಪ್ರತಿಭಟನೆಗೆ ತೆರೆ ಎಳೆದರು.

ರಾಜ್ಯ ರೈತ ಸಂಘಗಳ ಒಕ್ಕೂಟ ಹಾಗೂ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ನೂರಕ್ಕೂ ಹೆಚ್ಚಿನ ರೈತರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಪೊಲೀಸರೊಂದಿಗೆ ಜಟಾಪಟಿ: ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ರೈತರನ್ನು ಪೊಲೀಸರು ತಡೆದರು. ರಸ್ತೆಯಲ್ಲಿಯೇ ಅಡುಗೆ ಮಾಡಿ ಧರಣಿ ಮುಂದುವರಿಸುವುದಾಗಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಬೆದರಿಕೆ ಹಾಕಿದರು. ಇದರಿಂದ ಡಿಸಿಪಿ ಶೇಖರ್ ಹಾಗೂ ಶಾಂತಕುಮಾರ್ ಮಧ್ಯೆ ಮಾತಿನ ಚಕಮಕಿ ನಡೆಯಿತು. ಬ್ಯಾರಿಕೇಡ್‌ ಗಳನ್ನು ಬೇಧಿಸಲು ಮುಂದಾದರೆ ಬಂಧಿಸುವುದಾಗಿ ಶೇಖರ್ ಎಚ್ಚರಿಕೆ ನೀಡಿದರು. ನಂತರ, ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ಸಮಸ್ಯೆಗಳನ್ನು ಕುರಿತು ಚರ್ಚಿಸಲು ಪ್ರಮುಖರ ಸಭೆಯನ್ನು ಬುಧವಾರವೇ ಕರೆಯುವುದಾಗಿ ಭರವಸೆ ನೀಡಿದರು.

ರಸ್ತೆಯಲ್ಲಿ ಮಲಗಿ ಪ್ರತಿಭಟನೆ: ಇದಕ್ಕೂ ಮುನ್ನ ರೈತರು ಗನ್‌ಹೌಸ್‌ ವೃತ್ತದಿಂದ ಮೆರವಣಿಗೆ ಹೊರಟು ಪಾಲಿಕೆ ಕಚೇರಿ ಮುಂದಿನ ರಸ್ತೆಯಲ್ಲಿ ಮಲಗಿ ಪ್ರತಿಭಟನೆ ನಡೆಸಿದರು. ಇದೇ ವೇಳೆ ರೈತನೊಬ್ಬ ಮರವೊಂದನ್ನು ಏರಿ ಆತಂಕ ಸೃಷ್ಟಿಸಿದ. ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳಕ್ಕೆ ಬಂದ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿ ರೈತರನ್ನು ತಡೆದರು.

ಸಂಚಾರ ಅಸ್ತವ್ಯಸ್ತ: ರಸ್ತೆಯಲ್ಲೇ ಮಲಗಿ ಪ್ರತಿಭಟನೆ ನಡೆಸಿದ್ದರಿಂದ ಸಯ್ಯಾಜಿ ರಾವ್ ರಸ್ತೆಯಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ಜಯಚಾಮರಾಜ ಒಡೆಯರ್ ವೃತ್ತ (ಹಾರ್ಡಿಂಚ್ ವೃತ್ತ)ದ ಕಡೆ ಹೋಗುವ ಮಾರ್ಗವನ್ನು ಸಂಚಾರಕ್ಕೆ ಮುಚ್ಚಲಾಗಿರುವುದರಿಂದ ನಗರ ಬಸ್‌ ನಿಲ್ದಾಣಕ್ಕೆ ಹೋಗುವ ಏಕೈಕ ಪ್ರಮುಖ ಮಾರ್ಗವಾದ ಈ ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತವು.

ಪೊಲೀಸರು ರೈತರನ್ನು ಸ್ಥಳದಿಂದ ನಿರ್ಗಮಿಸುವಂತೆ ಸೂಚಿಸಿದರು. ನಂತರ, ಜಿಲ್ಲಾಧಿಕಾರಿ ಕಚೇರಿಯತ್ತ ಮೆರವಣಿಗೆ ಹೊರಟರು.
ಮುಖಂಡರಾದ ಅತ್ತಹಳ್ಳಿ ದೇವರಾಜು, ಕಿರಗಸೂರು ಶಂಕರ್, ಸುರೇಶ್, ಸಿದ್ದೇಶ್, ಬಸವರಾಜು, ವಿಶ್ವನಾಥ್, ಪುಟ್ಟರಾಜು ಇದ್ದರು.

ಪ್ರಮುಖ ಬೇಡಿಕೆಗಳು

- ಬೆಳೆ ಪರಿಹಾರವಾಗಿ ಎಕರೆಗೆ ₹ 25 ಸಾವಿರ ನೀಡಬೇಕು
- ಸಕ್ಕರೆ ಕಾರ್ಖಾನೆಗಳಿಂದ ಅಂತಿಮ ಕಂತು, ಉಪ ಉತ್ಪನ್ನ ಲಾಭ, ‘ಎಫ್‌ಎಪಿ’ ದರ ಪ್ರತಿ ಟನ್‌ಗೆ ₹ 250ನ್ನು ಕೊಡಿಸಬೇಕು
- ರೈತರ ಸಾಲ ಮನ್ನಾ ಮಾಡಬೇಕು
- ಹೋರಾಟದಲ್ಲಿ ಭಾಗಿಯಾದ ರೈತರ ಮೇಲಿನ ಪ್ರಕರಣಗಳನ್ನು ಕೈಬಿಡಬೇಕು
- ಕೃಷಿ ಪಂಪ್‌ಸೆಟ್‌ಗಳಿಗೆ 10 ಗಂಟೆ ವಿದ್ಯುತ್ ಪೂರೈಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT