ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲೂರಿನಲ್ಲಿ ರಾಚಯ್ಯ ಸ್ಮಾರಕಕ್ಕೆ ನಿರ್ಧಾರ

ಮಾಜಿ ರಾಜ್ಯಪಾಲ ದಿ.ಬಿ. ರಾಚಯ್ಯ ಪುಣ್ಯಸ್ಮರಣೆ; ₹ 1 ಕೋಟಿ ಅನುದಾನ
Last Updated 15 ಫೆಬ್ರುವರಿ 2017, 12:02 IST
ಅಕ್ಷರ ಗಾತ್ರ

ಚಾಮರಾಜನಗರ: ತಾಲ್ಲೂಕಿನ ಆಲೂರು ಗ್ರಾಮದ ಚಿರಶಾಂತಿಧಾಮದಲ್ಲಿ ಮಂಗಳವಾರ ಮಾಜಿ ರಾಜ್ಯಪಾಲ ದಿ.ಬಿ. ರಾಚಯ್ಯ ಅವರ 17ನೇ ಪುಣ್ಯಸ್ಮರಣೆ ನಡೆಯಿತು.

ರಾಚಯ್ಯ ಅವರ ಹಿರಿಯ ಪುತ್ರರಾದ ಮಾಜಿ ಶಾಸಕ ಎ.ಆರ್. ಕೃಷ್ಣಮೂರ್ತಿ ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯ ಆರ್. ಬಾಲರಾಜು ಸೇರಿದಂತೆ ಕುಟುಂಬದ ಸದಸ್ಯರು ಸಮಾಧಿಗೆ ಪುಷ್ಪನಮನ ಸಲ್ಲಿಸಿದರು. ದಡದಹಳ್ಳಿಯ ಶಿವಯೋಗಿ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ ನಡೆಯಿತು.

ಆಲೂರಿನಲ್ಲಿ ಸ್ಮಾರಕ ನಿರ್ಮಾಣ:

ಎ.ಆರ್. ಕೃಷ್ಣಮೂರ್ತಿ ಮಾತನಾಡಿ, ‘ಸರ್ಕಾರ ನನ್ನ ತಂದೆಯವರ ಸ್ಮಾರಕ ನಿರ್ಮಾಣಕ್ಕೆ ಪ್ರಾರಂಭಿಕವಾಗಿ ₹ 1 ಕೋಟಿ ಅನುದಾನ ಬಿಡುಗಡೆಗೊಳಿಸಿದೆ. ನಗರ ಹೊರವಲಯದ ಸರ್ಕಾರಿ ಜಾಗದಲ್ಲಿ ಸ್ಮಾರಕ ನಿರ್ಮಿಸುವುದು ಸೂಕ್ತವಲ್ಲ. ರಾಚಯ್ಯ ಅವರ ಚಿರಶಾಂತಿಧಾಮದಲ್ಲಿಯೇ ನಿರ್ಮಾಣ ಮಾಡುವುದು ಒಳಿತು. ಹಾಗಾಗಿ, ಜಮೀನು ಹಸ್ತಾಂತರಕ್ಕೆ ನಮ್ಮ ಕುಟುಂಬ ನಿರ್ಧರಿಸಿದೆ’ ಎಂದು ತಿಳಿಸಿದರು.

ಮಾಜಿ ಶಾಸಕ ಸಿ. ಗುರುಸ್ವಾಮಿ ಮಾತನಾಡಿ, ‘ರಾಚಯ್ಯ ಅವರು ಗೃಹ, ಅರಣ್ಯ, ಕಂದಾಯ ಸಚಿವ ಸೇರಿದಂತೆ ರಾಜ್ಯಪಾಲರಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಭೂರಹಿತರಿಗೆ ಭೂಮಿ ನೀಡಿದ್ದಾರೆ. ಚಿಕ್ಕಹೊಳೆ, ಸುವರ್ಣಾವತಿ ಜಲಾಶಯ ನಿರ್ಮಿಸಿ ಆ ಭಾಗದ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ’ ಎಂದು ಸ್ಮರಿಸಿದರು.

‘ರಾಚಯ್ಯ ತಮ್ಮ ರಾಜಕೀಯದ ಜೀವನದುದ್ದಕ್ಕೂ ಡಾ.ಬಿ.ಆರ್. ಅಂಬೇಡ್ಕರ್ ಅವರ ಆದರ್ಶ ಪಾಲಿಸಿದರು.  ಪ್ರಾಮಾಣಿಕತೆಯಿಂದ ಬದುಕಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ’ ಎಂದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ ಮಾತನಾಡಿ, ‘ಸಾತ್ವಿಕತೆ ಮೇಲೆ ಉದಾತ್ತವಾದ ನಂಬಿಕೆ ಇಟ್ಟುಕೊಂಡು ಸಾಮಾಜಿಕ ನ್ಯಾಯ ಒದಗಿಸಿದ ಕೀರ್ತಿ ರಾಚಯ್ಯ ಅವರಿಗೆ ಸಲ್ಲುತ್ತದೆ’ ಎಂದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯ ಮಹದೇವಸ್ವಾಮಿ, ಮುಖಂಡರಾದ ಕೆ.ಎಸ್. ನಾಗರಾಜಪ್ಪ, ಪ್ರವೀಣ್, ನಿಜಗುಣರಾಜು, ಸಮಾಜ ಕಲ್ಯಾಣ ಇಲಾಖೆಯ ನಿವೃತ್ತ ವಿಸ್ತರಣಾಧಿಕಾರಿ ಶಿವಯ್ಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT