ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಶಕದೊಳಗೆ ದಕ್ಷಿಣ ಕರ್ನಾಟಕಕ್ಕೆ ಕೃಷ್ಣಾ ನೀರು!

‘ಜಲ ಕ್ರಾಂತಿ ಅಭಿಯಾನ’ದಲ್ಲಿ ನಿವೃತ್ತ ಐಎಎಸ್‌ ಅಧಿಕಾರಿ ಎಸ್.ಎಂ.ಜಾಮದಾರ ಭವಿಷ್ಯ
Last Updated 15 ಫೆಬ್ರುವರಿ 2017, 12:53 IST
ಅಕ್ಷರ ಗಾತ್ರ

ಧಾರವಾಡ: ‘ರಾಜ್ಯದಲ್ಲಿ ಜಲಕ್ಷಾಮ ತೀವ್ರವಾಗಿದ್ದು, ಮುಂದಿನ ಹತ್ತು ವರ್ಷಗಳ ಒಳಗಾಗಿ ದಕ್ಷಿಣ ಕರ್ನಾಟಕಕ್ಕೆ ಆಲಮಟ್ಟಿಯಿಂದ ಕುಡಿಯುವ ನೀರು ಪೂರೈಕೆಯಾದರೂ ಆಶ್ಚರ್ಯಪಡಬೇಕಾಗಿಲ್ಲ’ ಎಂದು ನಿವೃತ್ತ ಐ.ಐ.ಎಸ್‌ ಅಧಿಕಾರಿ ಡಾ.ಎಸ್‌.ಎಂ.ಜಾಮದಾರ ಅಭಿಪ್ರಾಯಪಟ್ಟರು.

ಕೇಂದ್ರ ಜಲ ಆಯೋಗ ಹಾಗೂ ಧಾರವಾಡ ಕೃಷಿ ವಿಶ್ವವಿದ್ಯಾಲಯ ಜಂಟಿಯಾಗಿ ಸೋಮವಾರ ಇಲ್ಲಿ ಆಯೋಜಿಸಿದ್ದ ‘ಜಲಕ್ರಾಂತಿ ಅಭಿಯಾನ’ ಉದ್ಘಾಟಿಸಿ ಅವರು ಮಾತನಾಡಿದರು.

‘ಕೃಷ್ಣಾ ಹಾಗೂ ಕಾವೇರಿ ಕೊಳ್ಳಗಳಲ್ಲಿ ಕೃಷ್ಣಾ ಕೊಳ್ಳದಲ್ಲಿ ಅತಿ ದೊಡ್ಡ ಜಲ ಸಂಗ್ರಹಾಗಾರವಿದೆ. 2011ರ ಜನಗಣತಿ ಪ್ರಕಾರ ಬೆಂಗಳೂರಿನ ಜನಸಂಖ್ಯೆ 88 ಲಕ್ಷ ಇತ್ತು. ಅದು 2021ರ ಹೊತ್ತಿಗೆ ಇದು 1.80 ಕೋಟಿ ದಾಟಲಿದೆ. ಆ ನಗರಕ್ಕೆ ಸದ್ಯಕ್ಕೆ ಕುಡಿಯುವ ನೀರಿಗೆ 8 ಟಿಎಂಸಿ ಅಡಿ ನೀರು ನಿಗದಿಯಾಗಿದೆ. ಆದರೆ ಅಧಿಕೃತವಾಗಿ ಬಳಸಲಾಗುತ್ತಿರುವುದು 18 ಟಿಎಂಸಿ ಅಡಿ. ಹೆಚ್ಚುತ್ತಿರುವ ಕೈಗಾರಿಕೆ ಹಾಗೂ ಜನಸಂಖ್ಯೆಯಿಂದಾಗಿ ಇನ್ನು ಒಂದೆರಡು ದಶಕದಲ್ಲಿ ಕಾವೇರಿಯ ಕರ್ನಾಟಕದ ಪಾಲು ಬೆಂಗಳೂರು ನಗರಕ್ಕೇ ಬೇಕಾಗಲಿದೆ. ಹೀಗಾಗಿ ಕೃಷ್ಣಾ ನದಿಯ ನೀರನ್ನು ಬೆಂಗಳೂರು ಸೇರಿದಂತೆ ದಕ್ಷಿಣದ ಊರುಗಳಿಗೆ ಹಾಯಿಸಿದರೂ ಆಶ್ಚರ್ಯಪಡಬೇಕಾಗಿಲ್ಲ’ ಎಂದರು.

‘ಸರ್ಕಾರದ ನೀತಿ ನಿರ್ವಹಣೆಯಲ್ಲೇ ಗಂಭೀರ ಸ್ವರೂಪದ ನಿರ್ಲಕ್ಷ್ಯ ಕಾಣುತ್ತಿದೆ. ಭತ್ತ ಹಾಗೂ ಕಬ್ಬು ಬೆಳೆಗೆ ಒಂದು ಎಕರೆಗೆ ಬೇಕಾಗುವಷ್ಟು ನೀರಿನಲ್ಲಿ ಇತರ ಬೆಳೆಗಳನ್ನು ನಾಲ್ಕು ಎಕರೆಯಲ್ಲಿ ಬೆಳೆಯಬಹುದು. ಹೆಚ್ಚು ನೀರು ಬೇಡುವ ಕಬ್ಬು ಬೆಳೆಯುವುದನ್ನು ನಿಯಂತ್ರಿಸಬೇಕು ಎನ್ನುವ ಸರ್ಕಾರ, ಮತ್ತೊಂದೆಡೆ ಕಬ್ಬು ಬೆಳೆಯುವ ಪ್ರದೇಶದ ಮಿತಿಯನ್ನು ಮೀರಿ ಸಕ್ಕರೆ ಕಾರ್ಖಾನೆಗಳಿಗೆ ಅನುಮತಿ ನೀಡುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರ ಜಲ ಆಯೋಗದ ಮುಖ್ಯ ಎಂಜಿನಿಯರ್‌ ಆರ್‌.ಕೆ.ಜೈನ್‌ ಮಾತನಾಡಿ, ‘ಜಲಕ್ರಾಂತಿ ಅಭಿಯಾನದ ಅಡಿಯಲ್ಲಿ ಕರ್ನಾಟಕದ ಯಾದಗಿರಿ ಹಾಗೂ ಕೋಲಾರ ಸಮೀಪದ ಎರಡು ಗ್ರಾಮ ಮಾದರಿ ಗ್ರಾಮಗಳು ಎಂದು ಗುರುತಿಸಿ, ಅಲ್ಲಿ ಜಲ ಸಂರಕ್ಷಣೆಗೆ ಸಂಬಂಧಿಸಿದ ಮಾದರಿಗಳನ್ನು ಸಿದ್ಧಪಡಿಸಲಾಗುವುದು. ಜತೆಗೆ  ನೀರು ಸಂರಕ್ಷಣೆ, ನೀರಿನ ಹಂಚಿಕೆ, ಸೌರಶಕ್ತಿ ಬಳಕೆಯನ್ನೂ ಈ ಅಭಿಯಾನ ಒಳಗೊಂಡಿದೆ’ ಎಂದರು.

ಕೃಷಿ ವಿ.ವಿ ಕುಲಪತಿ ಡಾ.ಡಿ.ಪಿ. ಬಿರಾದಾರ ಅಧ್ಯಕ್ಷತೆ ವಹಿಸಿದ್ದರು.  ಡಾ.ಆರ್‌.ಎಸ್‌.ಪೊದ್ದಾರ್‌, ಜಲಕ್ರಾಂತಿ ಅಭಿಯಾನದ ನಿರ್ದೇಶಕ ಪಂಕಜ್‌ ಕುಮಾರ್‌ ಶರ್ಮಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT