ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಬೂಬು ಬೇಡ, ನಮಗೆ ಹಣ ಕೊಡಿ’

ಬೆಳೆವಿಮೆ ಪರಿಹಾರದ ಮೊತ್ತ ವಿತರಣೆಯಲ್ಲಿ ವಿಳಂಬ: ಬ್ಯಾಂಕ್ ಅಧಿಕಾರಿಗಳಿಗೆ ರೈತರ ಒತ್ತಾಯ
Last Updated 15 ಫೆಬ್ರುವರಿ 2017, 13:25 IST
ಅಕ್ಷರ ಗಾತ್ರ

ಹಾನಗಲ್: ಕಳೆದ ಸಾಲಿನ ಮುಂಗಾರು ಹಂಗಾಮಿನ ಬೆಳೆವಿಮೆ ಪರಿಹಾರದ ಮೊತ್ತ ವಿತರಣೆಯಲ್ಲಿ ವಿಳಂಬವಾಗುತ್ತಿರುವ ಕಾರಣ ಮಂಗಳವಾರ ಇಲ್ಲಿನ ತಹಶೀಲ್ದಾರ್‌ ಕಚೇರಿಯ ಸಭಾಂಗಣದಲ್ಲಿ ರೈತ ಮುಖಂಡರು ಮತ್ತು ರಾಷ್ಟ್ರೀಕೃತ ಬ್ಯಾಂಕ್‌, ವಿವಿಧ ಕೃಷಿ ಪತ್ತಿನ ಸಹಕಾರಿ ಸಂಘಗಳ ವ್ಯವಸ್ಥಾಪಕರ ಸಭೆ ನಡೆಯಿತು.

ತಹಶೀಲ್ದಾರ್‌ ಶಕುಂತಲಾ ಚೌಗಲಾ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹಾವೇರಿ ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ ಕದರಪ್ಪ ಹಾಜರಿದ್ದರು.

‘ಈಗಾಗಲೇ ಎರಡು ಹಂತಗಳಲ್ಲಿ ರೈತರಿಗೆ ಬೆಳೆವಿಮೆ ಪರಿಹಾರ ವಿತರಣೆಯಾಗಿ 3ನೇ ಯಾದಿಯ ರೈತರ ಪರಿಹಾರ ಮೊತ್ತ ಬಿಡುಗಡೆಗೊಂಡು 8 ತಿಂಗಳಾಗಿದೆ. ಆದರೂ ವಿತರಣೆಯಲ್ಲಿ ಬ್ಯಾಂಕ್‌ನವರು ವಿಳಂಬ ಮಾಡುತ್ತಿದ್ದಾರೆ’ ಎಂದು ಸಭೆಯಲ್ಲಿ ರೈತ ಮುಖಂಡರು ದೂರಿದರು.

‘ನಿಯಮಾವಳಿ ಮತ್ತಿತರ ಸಬೂಬು ನಮಗೆ ಬೇಡ. ವಿಮಾ ಕಂತು ಕಟ್ಟಿದ ರೈತರ ಹೆಸರಿಗೆ ಪರಿಹಾರ ಮೊತ್ತ ಜಮೆ ಆಗಿದೆ. ರೈತರಿಗೆ ತಕ್ಷಣ ಅದನ್ನು ವಿತರಿಸಬೇಕು. ವಿಮೆ ಪರಿಹಾರ ಬಿಡುಗಡೆಯಲ್ಲೂ ತಪ್ಪು ಲೆಕ್ಕಾಚಾರ ಆಗಿದೆ’ ಎಂದು ಸಭೆಯಲ್ಲಿದ್ದ ರೈತರು ಆರೋಪಿಸಿದರು.

‘ವಿಮಾ ಬಿಡುಗಡೆಯ ಲೆಕ್ಕಾಚಾರವು ವಿಮೆ ಕಂಪೆನಿಗೆ ಸೇರಿದ್ದು, ಪರಿಹಾರ ಧನವನ್ನು ವ್ಯವಸ್ಥಿತವಾಗಿ ವಿತರಿಸುವ ಕೆಲಸವಷ್ಟೆ ನಮ್ಮದು’ ಎಂದು ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ ಕದರಪ್ಪ ಉತ್ತರಿಸಿದರು.

‘ಹಾಗಿದ್ದಲ್ಲಿ ವಿತರಣೆಯಲ್ಲಿ ವಿಳಂಬವೇಕೆ, ಇನ್ನೆಷ್ಟು ದಿನ ಬ್ಯಾಂಕ್‌ಗಳಲ್ಲಿ ರೈತರ ಹಣ ಇಟ್ಟುಕೊಳ್ಳುವ ಮನಸ್ಸಿದೆ ಎಂಬುದನ್ನು ಸ್ಪಷ್ಟಪಡಿಸಬೇಕು’ ಎಂದು ರೈತಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ ಮತ್ತು ತಾಲ್ಲೂಕು ಘಟಕದ ಅಧ್ಯಕ್ಷ ಮರಿಗೌಡ ಪಾಟೀಲ ತಿರುಗೇಟು ನೀಡಿದರು.

ಕೆಲವು ರೈತರ ವಿಮಾ ಕಂತು ಎರಡೆರಡು ಬ್ಯಾಂಕ್‌ಗಳಲ್ಲಿ ಭರಣೆಯಾದ ಗೊಂದಲದಿಂದ ಈಗ ವಿತರಣೆಯಲ್ಲಿ ವಿಳಂಬವಾಗುತ್ತಿದೆ ಎಂಬ ಕದರಪ್ಪ ಹೇಳಿಕೆಯಿಂದ ಕೆರಳಿದ ರೈತರು, ‘ಗೊಂದಲ ಸರಿ ಮಾಡಿಕೊಳ್ಳಲು 8 ತಿಂಗಳು ಸಾಕಾಗಲಿಲ್ಲವೇ’ ಎಂದು ಪ್ರಶ್ನಿಸಿದರು.

‘ಈಗ ಬಂದಿರುವ ಒಟ್ಟು ಹಣವನ್ನು ಯಾದಿಯಲ್ಲಿರುವ ರೈತರಿಗೆ ಹಂಚುವ ಕೆಲಸವಾಗಬೇಕು, ವಿಮೆ ಪರಿಹಾರ ಹಣವನ್ನು ಬೆಳೆ ಸಾಲಕ್ಕೆ ಜಮೆ ಮಾಡಿಕೊಳ್ಳುವುದು ಬೇಡ. ಬರದಿಂದಾಗಿ ರೈತರು ಸಂಕಷ್ಟದಲ್ಲಿದ್ದಾರೆ. ವಿಮೆ ಮೊತ್ತವನ್ನು ಸಾಲಕ್ಕೆ ಜಮೆ ಮಾಡಿಕೊಂಡು ಹೊಸ ಸಾಲವನ್ನೂ ನೀಡದೇ ರೈತರು ಪೆಚ್ಚುಮೋರೆ ಹಾಕಿಕೊಂಡು ಬ್ಯಾಂಕ್‌ನಿಂದ ಹಿಂತಿರುಗುವ ದುಸ್ಥಿತಿಗೆ ರೈತರನ್ನು ತಳ್ಳಲಾಗಿದೆ’ ಎಂದು ಮಲ್ಲೇಶಪ್ಪ ಪರಪ್ಪನವರ ದೂರಿದರು.

‘ಬ್ಯಾಂಕ್‌ಗಳಿಗೆ ಕೀಲಿ ಜಡಿದು ಪ್ರತಿಭಟಿಸಿದ ಸಂದರ್ಭದಲ್ಲಿ ವಿಮೆ ಮೊತ್ತ ಸಾಲಕ್ಕೆ ಜಮೆ ಮಾಡಿಕೊಳ್ಳುವುದಿಲ್ಲ ಎಂದು ಭರವಸೆ ನೀಡುವ ಬ್ಯಾಂಕರ್ಸ್‌ ನಂತರ ತಮ್ಮ ಚಾಳಿಯನ್ನೂ ಮುಂದುವರೆಸುತ್ತಿದ್ದಾರೆ’ ಎಂದು  ಮರಿಗೌಡ ಪಾಟೀಲ ಆರೋಪಿಸಿದರು.

ಬ್ಯಾಂಕರ್ಸ್‌ ಮತ್ತು ರೈತರನ್ನು ಸಮಾಧಾನಪಡಿಸಿ ಮಾತನಾಡಿದ ತಹಶೀಲ್ದಾರ್‌ ಶಕುಂತಲಾ ಚೌಗಲಾ, ‘ಕೃಷಿ ಪತ್ತಿನ ಸಹಕಾರಿ ಸಂಘಗಳು ಮತ್ತು ರಾಷ್ಟ್ರೀಕೃತ ಬ್ಯಾಂಕ್‌ನವರು ಸಮನ್ವತೆಯಿಂದ ಬೆಳೆವಿಮೆ ಪರಿಹಾರದ ಮೊತ್ತ ಎಲ್ಲಿಯೂ ದ್ವಿಗುಣವಾಗದಂತೆ ಇದೇ 18 ಒಳಗಾಗಿ ಯಾದಿ ಸಿದ್ಧಪಡಿಸಿಕೊಳ್ಳಬೇಕು. ಂತರದ ದಿನಗಳಲ್ಲಿ ವ್ಯವಸ್ಥಿತವಾಗಿ ವಿತರಣೆ ಮಾಡಬೇಕು’ ಎಂದು ಸೂಚಿಸಿದರು.

‘ಪರಿಹಾರ ಮೊತ್ತದ 3ನೇ ಯಾದಿಯಲ್ಲಿಯೂ ಕೆಲ ರೈತರ ಹೆಸರು ಬಿಟ್ಟು ಹೋಗಿವೆ. ಅಂತಹ ರೈತರ ಹೆಸರುಗಳನ್ನು ಹೋಬಳಿ ಮಟ್ಟದ ಪರಿಶೀಲನಾ ತಂಡಕ್ಕೆ ಬ್ಯಾಂಕ್‌ ಮತ್ತು ಕೃಷಿ ಪತ್ತಿನ ಸಂಘದವರು ಒದಗಿಸಬೇಕು’ ಎಂದು ಅವರು ಸಲಹೆ ನೀಡಿದರು.

ಸಭೆಯಲ್ಲಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬಸವರಾಜ, ಅಧಿಕಾರಿ ಸಂಗಮೇಶ ಹಕ್ಲಣ್ಣನವರ, ಸಹಕಾರಿ ಸಂಘಗಳ ತಾಲ್ಲೂಕು ಅಧಿಕಾರಿ ರಾಘವೇಂದ್ರ ಗುಡಿಕೇರಿ ಮತ್ತು ರೈತ ಸಂಘದ ಪದಾಧಿಕಾರಿಗಳು, ವಿವಿಧ ಬ್ಯಾಂಕ್‌ಗಳ ವ್ಯವಸ್ಥಾಪಕರಿದ್ದರು.

* ವಿಮೆ ಪರಿಹಾರದ ಮೊತ್ತ ಬಂದಿದೆ. ಫಲಾನುಭವಿ ರೈತರ ಯಾದಿಯೂ ಸಿದ್ಧವಿದೆ. ಇಷ್ಟಿದ್ದೂ ರೈತರಿಗೆ ತಿಂಗಳುಗಟ್ಟಲೇ ಸತಾಯಿಸುವ ಬ್ಯಾಂಕ್‌ ವ್ಯವಸ್ಥೆಗೆ ಧಿಕ್ಕಾರ
- ಮರಿಗೌಡ ಪಾಟೀಲ, ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT