ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜೀನಾಮೆಗೆ ಆಗ್ರಹಿಸಿ ಧರಣಿ 17ರಂದು

ರಮೇಶ ಜಾರಕಿಹೊಳಿ ಅಕ್ರಮ ಆಸ್ತಿ ಸಂಪಾದನೆ; ಬಿಜೆಪಿಯಿಂದ ಪ್ರತಿಭಟನೆ
Last Updated 15 ಫೆಬ್ರುವರಿ 2017, 13:27 IST
ಅಕ್ಷರ ಗಾತ್ರ

ಗೋಕಾಕ: ಇತ್ತೀಚೆಗೆ ನಗರದಲ್ಲಿ ನಡೆಸಿದ ಐಟಿ ದಾಳಿಯಲ್ಲಿ ಸುಮಾರು ₹162 ಕೋಟಿ  ಅಘೋಷಿತ ಆಸ್ತಿ, 12.8 ಕೆ.ಜಿ. ಚಿನ್ನಾಭರಣ ಹಾಗೂ ₹ 41 ಲಕ್ಷ ನಗದು ವಶಪಡಿಸಿಕೊಂಡಿರುವ ಪ್ರಕರಣದಲ್ಲಿ ಅಘೋಷಿತ ಆಸ್ತಿಯ ಒಡೆಯರೂ ಆಗಿರುವ ಸಣ್ಣ ಕೈಗಾರಿಕೆ  ಸಚಿವ ರಮೇಶ ಜಾರಕಿಹೊಳಿ ಅವರ ರಾಜೀನಾಮೆಗೆ ಒತ್ತಾಯಿಸಿ ಇದೇ  17ರಂದು ಬೆಳಿಗ್ಗೆ  11ಕ್ಕೆ  ನಗರದ ಬಸವೇಶ್ವರ ವೃತ್ತದಲ್ಲಿ ಗೋಕಾಕ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ಬಿಜೆಪಿ ಹಾಗೂ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ಹಾಗೂ ಸಾಂಕೇತಿಕ ಧರಣಿ ಸತ್ಯಾಗ್ರಹ ನಡೆಸಲಿವೆ ಎಂದು ಬಿಜೆಪಿ  ಮುಖಂಡ ಅಶೋಕ ಪೂಜಾರಿ ತಿಳಿಸಿದರು.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಚಿವರ ಮನೆ ಮೇಲೆ ನಡೆದ ಐಟಿ ದಾಳಿ ದೇಶದ ಅತೀ ದೊಡ್ಡ ಐಟಿ ದಾಳಿ ಎಂದರು.

ಈ ದಾಳಿಯಲ್ಲಿ ಮುಟ್ಟುಗೋಲು ಹಾಕಿಕೊಂಡ  ₹ 162 ಕೋಟಿ ಮೊತ್ತದ ಆಸ್ತಿಯಲ್ಲಿ ಸಚಿವರ ಪಾಲು ಸುಮಾರು 115 ಕೋಟಿ ಮೌಲ್ಯದ್ದು ಆಗಿದೆ ಎನ್ನಲಾಗುತ್ತಿದ್ದು, ಸಚಿವ ಜಾರಕಿಹೊಳಿ ಅವರೆ ಈ ಹೆಚ್ಚುವರಿ ಆಸ್ತಿ ತಮ್ಮದೆಂದು  ಐಟಿ ಅಧಿಕಾರಿಗಳ ಮುಂದೆ ದಾಳಿ ವೇಳೆ ಒಪ್ಪಿಕೊಂಡಿದ್ದಾರೆ.

ಹೀಗಾಗಿ ಸಚಿವರು ನೈತಿಕ ಜವಾಬ್ದಾರಿ ಹೊತ್ತು  ಸಚಿವ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡ ಬೇಕಾಗಿತ್ತು. ಅದರೆ ಸಚಿವರು ಐಟಿ ದಾಳಿಯ ಮೂಲ ಕೆಣಕುತ್ತ ಪ್ರಧಾನ ಮಂತ್ರಿಗಳ ಮೇಲೆಯೇ ಮಾತಿನ ದಾಳಿ  ಮೂಲಕ ಸೌಜನ್ಯತೆ ಮೀರಿ ವರ್ತಿಸುತ್ತಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. 

ಈ ಹಿಂದೆ  ಸಹ ರಾಜ್ಯ ಸರ್ಕಾರದ ಸಚಿವರುಗಳ ಮೇಲೆ ಆಪಾದನೆ ಕೇಳಿಬಂದಾಗ ಅವರನ್ನು ಸಮರ್ಥಿಸಿ ಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು, ಸಾರ್ವಜನಿಕ ಮತ್ತು ರಾಜಕೀಯ ಒತ್ತಡ ಬಂದಾಗ ರಾಜೀನಾಮೆ ಪಡೆದಿದ್ದಾರೆ ಎಂದು ಅವರು ಹೇಳಿದರು.

ಈಗಲೂ ಸಹ ಮುಖ್ಯಮಂತ್ರಿಗಳು ಸಚಿವ ರಮೇಶ ಜಾರಕಿಹೊಳಿ ಅವರ ರಕ್ಷಣೆಗೆ ಟೊಂಕಕಟ್ಟಿ ನಿಂತಿದ್ದಾರೆ. ಆದರೆ ಈ ಹಿಂದೆ ತಮ್ಮದೇ ಆದ ವ್ಯಕ್ತಿತ್ವ ಹೊಂದಿದ್ದ ಮುಖ್ಯಮಂತ್ರಿಗಳು ತಮ್ಮ ನಿಷ್ಪಕ್ಷಪಾತ ಹಾಗೂ ಪ್ರಾಮಾಣಿಕತೆಯ ಘನತೆಯನ್ನು ಕಾಯ್ದುಕೊಳ್ಳಲು ಕೂಡಲೇ ಸಚಿವ ರಮೇಶ ಜಾರಕಿಹೊಳಿ ಅವರ ರಾಜೀನಾಮೆ ಪಡೆಯಬೇಕು. ಇಲ್ಲವೇ ಅವರನ್ನು ಮಂತ್ರಿ ಮಂಡಳದಿಂದ ಕೈಬಿಡಬೇಕೆಂದು ಒತ್ತಾಯಿಸಿದರು.

ಪಕ್ಷದ ನಗರ   ಘಟಕ ಅಧ್ಯಕ್ಷ ವಕೀಲ ಶಶಿಧರ ದೇಮಶಟ್ಟಿ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಶ್ರೀದೇವಿ ತಡಕೋಡ, ಶ್ರೀರಾಮ ಸೇನೆ ಮುಖಂಡ ಸುನೀಲ ಮುರ್ಕಿಭಾಂವಿ, ಆನಂದ ಗೋಟಡಕಿ, ನಗರ ಘಟಕದ ಕಾರ್ಯದರ್ಶಿ ಲಕ್ಕಪ್ಪ ತಹಶೀಲ್ದಾರ್‌, ಜಗದೀಶ ಸದರಜೋಷಿ, ಕಾಡಣ್ಣ ಗಣಾಚಾರಿ, ಮಹಿಳಾ ಘಟಕದ ಕಾರ್ಯದರ್ಶಿ ಪ್ರೇಮಾ ಚಿಕ್ಕೋಡಿ, ವಕೀಲರಾದ ಸಿ.ಬಿ.ಗಿಡ್ಡನವರ ಮತ್ತು ಸಂತೋಷ ಪೂಜಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT