ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಹಕಾರ ಬ್ಯಾಂಕ್‌ಗಳಿಂದ ಅಭಿವೃದ್ಧಿ’

ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಬಸವರಾಜ ಸುಲ್ತಾನಪುರಿ ಅಭಿಮತ
Last Updated 15 ಫೆಬ್ರುವರಿ 2017, 13:29 IST
ಅಕ್ಷರ ಗಾತ್ರ

ಬೆಳಗಾವಿ:  ರಾಷ್ಟ್ರೀಕೃತ ಬ್ಯಾಂಕು ಗಳಿಗಿಂತ ಪಟ್ಟಣ ಸಹಕಾರ ಬ್ಯಾಂಕುಗಳು ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಆದ್ಯತೆ ನೀಡಿ ಕಾರ್ಯ ನಿರ್ವಹಿಸುತ್ತಿವೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಬಸವರಾಜ ಸುಲ್ತಾನಪುರಿ ಹೇಳಿದರು.

ರಾಜ್ಯ ಸಹಕಾರ ಮಹಾಮಂಡಳ, ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳ ಹಾಗೂ ಜಿಲ್ಲಾ ಸಹಕಾರ ಒಕ್ಕೂಟದ ವತಿಯಿಂದ ಜಿಲ್ಲೆಯ ಪಟ್ಟಣ ಸಹಕಾರ ಬ್ಯಾಂಕುಗಳ ಅಧ್ಯಕ್ಷರು, ಮುಖ್ಯಕಾರ್ಯನಿರ್ವಾಹಕರು ಹಾಗೂ ಹಿರಿಯ ಅಧಿಕಾರಿಗಳಿಗೆ ಮಂಗಳವಾರ ಆಯೋಜಿಸಿದ್ದ ಒಂದು ದಿನದ ರಾಜ್ಯ ಮಟ್ಟದ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

‘ಬೆಳಗಾವಿ ಜಿಲ್ಲೆ ಅತಿ ಹೆಚ್ಚು ಪಟ್ಟಣ ಸಹಕಾರ ಬ್ಯಾಂಕುಗಳನ್ನು ಹೊಂದಿದ ಜಿಲ್ಲೆ. ಈ ಬ್ಯಾಂಕ್‌ಗಳು ಉತ್ತಮ ಗುಣಮಟ್ಟದಿಂದ ಗ್ರಾಹಕರಿಗೆ ಸೇವೆ ಒದಗಿಸುತ್ತಿವೆ. ಅದರಂತೆ ಪ್ರಸ್ತುತ ಬದಲಾದ ಆರ್ಥಿಕ ವ್ಯವಸ್ಥೆಯಲ್ಲಿ ಆಡಳಿತ ಮಂಡಳಿ ಸದಸ್ಯರು ಜವಾಬ್ದಾರಿಯಿಂದ ಕಾರ್ಯ ನಿರ್ವ ಹಿಸಬೇಕಾಗುತ್ತದೆ’ ಎಂದು ತಿಳಿಸಿದರು.

ನಿಯಮಗಳಲ್ಲಿ ಬದಲಾವಣೆ:  ಸಹಕಾರಿ ಇಲಾಖೆಯ ಉಪನಿಬಂಧಕ ಕಲ್ಲಪ್ಪ ಓಬಣ್ಣಗೋಳ ಮಾತನಾಡಿ, ‘ಪಟ್ಟಣ ಸಹಕಾರ ಬ್ಯಾಂಕುಗಳ ಸರ್ವತೋಮುಖ ಅಭಿವೃದ್ಧಿಗೆ ತರಬೇತಿ ಅಗತ್ಯವಾಗಿದೆ. ಆರ್ಥಿಕ ವ್ಯವಸ್ಥೆಯಲ್ಲಿ ಪ್ರತಿದಿನವೂ ಆಗುವ ಬದಲಾವಣೆಗಳಿಗೆ ತಕ್ಕಂತೆ ಕೇಂದ್ರ, ರಾಜ್ಯ ಸರ್ಕಾರಗಳ ಆಶಯಕ್ಕೆ ತಕ್ಕಂತೆ ಪರಿಣಾಮಕಾರಿ ಆಡಳಿತ ಮಾಡಬೇಕಾಗಿದೆ’ ಎಂದು ಅವರು ಹೇಳಿದರು.

‘ಚುನಾವಣೆ ಪ್ರಕ್ರಿಯೆಗೆ ಸಂಬಂಧಿಸಿ ನಿಯಮಗಳಲ್ಲಿ ಬದಲಾವಣೆಗಳಾಗಿದ್ದು ಮುಖ್ಯಕಾರ್ಯನಿರ್ವಾಹಕರು ಇದನ್ನು ಗಮನಿಸಬೇಕು. ಸಹಕಾರ ಇಲಾಖೆ ಯಿಂದ ಬ್ಯಾಂಕುಗಳಿಗೆ ಸಂಬಂಧಿಸಿದಂತೆ ಅನೇಕ ತಂತ್ರಾಂಶಗಳನ್ನು ಬಿಡುಗಡೆ ಮಾಡಿದ್ದು, ಅವುಗಳನ್ನು ಕಟ್ಟು ನಿಟ್ಟಿನಿಂದ ಕಾರ್ಯರೂಪಕ್ಕೆ ತರಬೇಕು’ ಎಂದು ಸೂಚಿಸಿದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾ ಮಂಡಳದ ಅಧ್ಯಕ್ಷ ಡಿ.ಟಿ. ಪಾಟೀಲ, ‘ರಾಜ್ಯ ಸರ್ಕಾರವು ಸಹಕಾರ ಕಾನೂನಿಗೆ ತಿದ್ದುಪಡಿ ತರಲು ನಿರ್ಣಯಿಸಿದೆ. ಹೀಗಾಗಿ, ಪಟ್ಟಣ ಸಹಕಾರ ಬ್ಯಾಂಕು ಗಳಿಗೆ ತೊಂದರೆ ಆಗುವುದರಿಂದ ಈ ಕಾನೂನು ತಿದ್ದುಪಡಿ ತಿರಸ್ಕರಿಸಲು ರಾಜ್ಯ ಮಟ್ಟದ ಎಲ್ಲ ಸಹಕಾರ ಸಂಸ್ಥೆಗಳ ಪ್ರಮುಖರು ಕೋರಿದ್ದೇವೆ. ಈ ಕಾನೂನು ಮೊದಲಿನಂತೆ ಮುಂದುವರಿಯತ್ತದೆ’ ಎಂದು ತಿಳಿಸಿದರು.

ಸ್ವಾಯತ್ತತೆಯಿಂದ ಇರಲು ಬಿಡಿ: ‘ಪಟ್ಟಣ ಸಹಕಾರ ಬ್ಯಾಂಕುಗಳಲ್ಲಿ ಉತ್ತಮ ಅರ್ಥ ವ್ಯವಸ್ಥೆ ಇದೆ. ಆದರೆ, ಸರ್ಕಾರ ಹಾಗೂ ಆರ್.ಬಿ.ಐ. ನಿರ್ಬಂಧಗಳಿಂದ ಕಾರ್ಯ ಚಟುವಟಿಕೆಯಲ್ಲಿ ಅಡಚಣೆಯಾಗುತ್ತಿದೆ. ಇದರಿಂದ ಸಹಕಾರಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸ್ವಾಯತ್ತತೆಯಿಂದ ನಿರ್ವಹಿಸಲು ಸಹಕರಿಸಬೇಕು’ ಎಂದು ಕೋರಿದರು.

ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಬಸಗೌಡ ಪಾಟೀಲ, ನಿರ್ದೇಶಕರಾದ ಎಸ್.ಎಫ್. ದೊಡ್ಡಗೌಡರ, ಕೆ.ಎಂ. ಬಡಗಾವಿ, ಬಿ.ಎನ್. ಉಳ್ಳಾಗಡ್ಡಿ, ಮಹಾ ಮಂಡಳದ ನಿರ್ದೇಶಕ ಶಿವನಗೌಡ ಬಿರಾದರ ಹಾಗೂ ಪುಂಡಲಿಕ ಕೆರೂರೆ ಉಪಸ್ಥಿತರಿದ್ದರು.

ಪಟ್ಟಣ ಸಹಕಾರ ಬ್ಯಾಂಕುಗಳು ಡಿಜಿಟಲ್ ಬ್ಯಾಂಕಿಂಗ್ ಆಗಿ ಪರಿವರ್ತನೆ ಗೊಳ್ಳುವುದು ಹೇಗೆ ಎನ್ನುವ ವಿಷಯದ ಕುರಿತು ಮುಂಬೈನ ಮಣಿಪಾಲ್ ಟೆಕ್ನಾಲಜೀಸ್‌ ಹಿರಿಯ ವ್ಯವಸ್ಥಾಪಕ ರಾಜನ್ ನರ್ವೇಕರ ಹಾಗೂ ಪಟ್ಟಣ ಸಹಕಾರ ಬ್ಯಾಂಕುಗಳಿಗೆ ಸಂಬಂಧಿಸಿ ದಂತೆ ತೆರಿಗೆ ವಿಷಯ ಕುರಿತು ಲೆಕ್ಕಪರಿಶೋಧಕ ಆರ್.ವಿ. ರವಿಂದ್ರ ನಾಥ ಮಾಹಿತಿ ನೀಡಿದರು.

ಜಿಲ್ಲಾ ಸಹಕಾರ ಯೂನಿಯನ್‌ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಎಸ್.ವಿ. ಹಿರೇಮಠ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT