ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಕೃತಿ ಮುನಿಸಿಗೆ ಮಲೆನಾಡಲ್ಲಿ ಬರದ ಛಾಯೆ

ಪರಿಸರನಾಶದಿಂದಾಗಿ ಜಲಮೂಲಕ್ಕೆ ಪೆಟ್ಟು: ರಕ್ಷಣೆ ಮಾಡದಿದ್ದರೆ ಎದುರಾಗಲಿದೆ ಆಪತ್ತು– ತಪ್ಪದ ರೈತರಿಗೆ ಸಂಕಷ್ಟ
Last Updated 15 ಫೆಬ್ರುವರಿ 2017, 13:34 IST
ಅಕ್ಷರ ಗಾತ್ರ

ಖಾನಾಪುರ: ಹಲವು ವರ್ಷಗಳ ಹಿಂದಷ್ಟೇ ಸಮೃದ್ಧ ಮಳೆ, ಉತ್ತಮ ಫಲಸು ನೀಡುವ ಕೃಷಿಭೂಮಿ, ವರ್ಷದ ಹನ್ನೆರಡೂ ತಿಂಗಳು ಸಮೃದ್ಧವಾಗಿ ಹರಿಯುವ ನದಿಗೆ ಖಾನಾಪುರ ತಾಲ್ಲೂಕು ಹೆಸರಾಗಿತ್ತು. ಆದರೆ ಈಗ ಹಿಂದೆಂದೂ ಕಂಡರಿಯದ ಅತಿವೃಷ್ಟಿ, ಅನಾವೃಷ್ಟಿಯಿಂದ ಹನಿ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ತಾಲ್ಲೂಕಿನಲ್ಲಿ ಸತತವಾಗಿ ನಡೆಯುತ್ತಿರುವ ಅರಣ್ಯನಾಶ ಇದಕ್ಕೆ ಮುಖ್ಯ ಕಾರಣ. ಪ್ರಕೃತಿಯ ಮುನಿಸಿ ನಿಂದ ಮಲೆನಾಡಿನಲ್ಲಿ ಹಿಂದೆಂದೂ ಕಂಡರಿಯದ ಬರದ ಛಾಯೆ ಆವರಿಸಿದೆ. ವಿಶಾಲವಾಗಿದ್ದ ಅರಣ್ಯ ಕ್ಷೀಣಿಸುತ್ತಿದೆ. ಅರಣ್ಯದಂಚಿನ ಗ್ರಾಮಗಳ ಜನರು ನೀರಿನ ಸೆಲೆಗಾಗಿ ಅಲೆದಾಡುತ್ತಿದ್ದಾರೆ. ಹನಿ ನೀರು ಈಗ ಮುಖ್ಯವಾಗಿದೆ.

ದಶಕಗಳ ಹಿಂದೆ ತಾಲ್ಲೂಕಿನ ಶೇ 75ರಷ್ಟು ಭೂಭಾಗವನ್ನು ಆವರಿಸಿದ್ದ ಅರಣ್ಯ ಈಗ ಬಹುತೇಕ ಕಡಿಮೆಯಾಗಿದೆ. ಪ್ರಕೃತಿಯಲ್ಲಿ ಅಸಮತೋಲನ ಏರ್ಪಟ್ಟು ಮೋಡಗಳನ್ನು ಆಕರ್ಷಿಸಿ ಮಳೆ ಸುರಿಸುವ ಮರಗಿಡಗಳು ಈಗಿಲ್ಲ. ಅಭಿವೃದ್ಧಿ ಮತ್ತು ನಗರೀಕರಣದ ಭರದಲ್ಲಿ ಬೆಳೆದುನಿಂತ ಮರಗಿಡಗಳನ್ನು ಕಡಿದ ಪರಿಣಾಮ ಅಪಾಯಕ್ಕೆ ಆಹ್ವಾನ ನೀಡಿದಂತಾಗಿದೆ. ಪರಿಣಾಮ ದಟ್ಟ ಅರಣ್ಯದ ಅಂತರಾಳದಿಂದ ಹೊರಬಂದು ಜೀವಜಂತುಗಳ ದಾಹ ಇಂಗಿಸುತ್ತಿದ್ದ ನದಿಮೂಲಗಳು ಸಂಪೂರ್ಣ ಒಣಗಿ ವಿನಾಶದ ಅವಸ್ಥೆ ತಲುಪಿವೆ.

ಬರ ಬಂದರೆ ಮುಂದಿನ ನಾಲ್ಕಾರು ವರ್ಷ ಉತ್ತಮ ಮಳೆ ನಿಶ್ಚಿತ ಎಂಬ ಮಾತು ಇತ್ತು. ಅದರ ಸೂಚನೆಯನ್ನು ಹಿರಿಯರು ಅರಿತು ಒಂದೆರಡು ವರ್ಷಗಳಿಗೆ ಆಗುವಷ್ಟು ಆಹಾರಧಾನ್ಯಗಳನ್ನು ಸಂಗ್ರಹಿಸಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು.

ನೀರು ಸಂಗ್ರಹಿಸಿ ಇಟ್ಟುಕೊಳ್ಳಲು ಅಣೆಕಟ್ಟುಗಳಾಗಲಿ, ಜಲಸಂಗ್ರಹಾಗಾರಗಳಾಗಲಿ, ಟ್ಯಾಂಕ್‌ಗಳಾಗಲಿ ಇರಲಿಲ್ಲ. ವಿದ್ಯುತ್ ಮರೀಚಿಕೆಯಾಗಿತ್ತು. ತಾಲ್ಲೂಕಿನ ಅರಣ್ಯದಲ್ಲಿ ಹುಟ್ಟಿ ಹರಿಯುವ ಮಲಪ್ರಭಾ, ಮಹಾದಾಯಿ, ಪಾಂಡರಿ ನದಿಗಳು, ಹಳ್ಳಗಳು, ಕೆರೆಗಳು, ಬಾವಿಗಳು ಪ್ರಮುಖ ಜಲಮೂಲ ಆಗಿದ್ದವು.

ತಾಲ್ಲೂಕಿನ ಅರಣ್ಯ ಪ್ರದೇಶದಿಂದ ವರ್ಷಪೂರ್ತಿ ಹರಿದುಬರುವ ನೀರಿನಿಂದಾಗಿ ಕೆರೆಗಳು, ಬಾವಿ ಮತ್ತು ನದಿಗಳು ಬತ್ತುತ್ತಿರಲಿಲ್ಲ. ಈಗ ಎಲ್ಲೆಡೆ ಬೋರವೆಲ್ ಕೊರೆಸಲಾಗಿದೆ. ಅವು ನೀರಿನ ಸೆಲೆಗಳನ್ನು ತಮ್ಮತ್ತ ಸೆಳೆದು ಅಂತರ್ಜಲ ಮಟ್ಟವನ್ನು ಆಳಕ್ಕೆ ಇಳಿಸುತ್ತಿವೆ. ಸೆಲೆಗಳು ಕಾಲ ಕ್ರಮೇಣ ಮುಚ್ಚಿಕೊಳ್ಳುತ್ತಿವೆ. ಬಾವಿಗಳು, ಕೆರೆಗಳು ಬೇಸಿಗೆಯ ಸಮಯದಲ್ಲಿ ಬತ್ತುತ್ತಿರುವುದು ರೈತರ ಆತಂಕದ ವಿಷಯವಾಗಿದೆ ಎನ್ನುತ್ತಾರೆ ಕೃಷಿಕ ಅಶೋಕ ಯಮಕನಮರಡಿ.

ಅಭಿವೃದ್ಧಿಯ ಹೆಸರಿನಲ್ಲಿ ಅರಣ್ಯವನ್ನು ಹಾಳು ಮಾಡುತ್ತಿರುವ ಕಾರಣ ತಾಲ್ಲೂಕಿನಲ್ಲಿ ಜಲಮೂಲಗಳಿಗೆ ಕಂಟಕ ಒದಗಿಬಂದಿದೆ. ಅರಣ್ಯ ಇಲಾಖೆ ಪ್ರತಿ ವರ್ಷ ಸಸಿಗಳನ್ನು ನೆಡುತ್ತಿದ್ದರೂ ಸೂಕ್ತ ಪಾಲನೆ ಪೋಷಣೆಯ ಕೊರತೆ ಮತ್ತು ಗ್ರಾಮೀಣ ಭಾಗದ ಜನಸಾಮಾನ್ಯರಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ನಿರಾಸಕ್ತಿಯಿಂದಾಗಿ ನೆಟ್ಟ ಸಸಿಗಳು ಬೆಳವಣಿಗೆ ಕಾಣದೇ ಒಣಗುತ್ತಿವೆ ಎಂಬುದು ಪರಿಸರವಾದಿ ಡಾ. ಗುರುರಾಜ ಮನಗೂಳಿ ಅವರ ಆತಂಕ.

ಬರ, ನೀರಿನ ಬವಣೆ, ಕುಸಿಯುತ್ತಿರುವ ಅಂತರ್ಜಲ ಮಟ್ಟ, ಏರುತ್ತಿರುವ ತಾಪಮಾನ ಈ ಎಲ್ಲ ಸಮಸ್ಯೆಗಳಿಗೆ ವೃಕ್ಷಾರೋಪಣ ಮತ್ತು ಸಸ್ಯ ಸಂಪತ್ತನ್ನು ಉಳಿಸಿ ಬೆಳೆಸುವುದೊಂದೇ ಶಾಶ್ವತ ಪರಿಹಾರವಾಗಿದೆ ಎಂದೂ ಸಲಹೆ ನೀಡುವರು.

ತಾಲ್ಲೂಕಿನ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಪ್ರಜ್ಞಾವಂತ ನಾಗರಿಕರು ಎಚ್ಚೆತ್ತು ಜಲಮೂಲಗಳ ಮತ್ತು ಅರಣ್ಯ ಸಂಪತ್ತಿನ ಸಂರಕ್ಷಣೆಗೆ ಮುಂದಾಗದಿದ್ದರೆ ಮುಂದಿನ ದಿನಗಳು ಇದಕ್ಕಿಂತಲೂ ಭೀಕರವಾಗಿರಲಿವೆ. ಈಗ ಉದ್ಭವಿಸಿರುವ ಕುಡಿಯುವ ನೀರಿನ ಸಮಸ್ಯೆ ಮುಂದೆ ಎದುರಾಗಬಹುದಾದ ಆಪತ್ತಿನ ಮೆನ್ನೆಚ್ಚರಿಕೆಯ ಕರೆಗಂಟೆಯಾಗಿದೆ ಎಂದರೆ ತಪ್ಪಾಗಲಾರದು ಎಂದು ರೈತ ವಿಠ್ಠಲ ಹಿಂಡಲಕರ ಅನುಭವದ ಮಾತನಾಡುವರು.

- ಪ್ರಸನ್ನ ಕುಲಕರ್ಣಿ

* ಈಗಿನ ಇಂಥ ಪರಿಸ್ಥಿತಿಗೆ ನಾವೇ ಕಾರಣ. ಅರಣ್ಯದ ಮೇಲೆ ನಿರಂತರ ದಾಳಿ ನಡೆಸಿ ಸಂಪತ್ತು ಗಳಿಸಿದೆವು. ಈಗ ನೀರಿಗಾಗಿ ಸಂಪತ್ತನ್ನೇ ಮಾರಬೇಕಾಗಿದೆ  

ಅಶೋಕ ಯಮಕನಮರಡಿ, ಕೃಷಿಕ

ಪರಿಸರ ನಾಶ ಆತಂಕಕಾರಿ
ಖಾನಾಪುರ ತಾಲ್ಲೂಕು ಬೆಳಗಾವಿ ಜಿಲ್ಲೆಯಲ್ಲೇ ಹೆಚ್ಚು ಅರಣ್ಯ ಪ್ರದೇಶ ಹೊಂದಿದೆ ಎಂಬುದು ಹೆಮ್ಮೆಯ ವಿಷಯ. ಆದರೆ ದಿನಗಳು ಕಳೆದಂತೆ ತಾಲ್ಲೂಕಿನಲ್ಲಿ ನಗರೀಕರಣ, ಅಭಿವೃದ್ಧಿಯ ಹೆಸರಿನಲ್ಲಿ ಮರಗಿಡಗಳನ್ನು ಕಡಿಯುತ್ತಿರುವುದು ಆತಂಕಕಾರಿ ಸಂಗತಿ.
ಈಗಲಾದರೂ ಅರಣ್ಯ ಸಂರಕ್ಷಣೆಗೆ ಸಂಬಂಧಪಟ್ಟವರು ಮುಂದಾಗಬೇಕು ಎಂಬುದು ಕಳಕಳಿಯ ಆಗ್ರಹವಾಗಿದೆ.
ಮಹಾಂತೇಶ ರಾಹುತ, ಪರಿಸರವಾದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT