ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಪಂಚ ಸುತ್ತಲು ಕಾರೇ ಮನೆಯಾಯ್ತು

Last Updated 15 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಇಟಲಿ ಮೂಲದ ಮರಿನಾ ಪಿರೊ, ಲಂಡನ್‌ನಲ್ಲಿ ಕೈ ತುಂಬ ಸಂಬಳ ಪಡೆಯುತ್ತಿದ್ದವರು. ದಿನವಿಡೀ ದುಡಿತ. ಮನೆ, ಕಚೇರಿ ಇವೆರಡೇ ಪ್ರಪಂಚ. ಆದರೆ ಬರಬರುತ್ತಾ ದುಡ್ಡು ಆಕರ್ಷಣೆ ಕಳೆದುಕೊಂಡಿತು. ಜೀವನ ಏಕತಾನತೆ ಅನ್ನಿಸಿತು. ಪ್ರಪಂಚ ಸುತ್ತುವ ಬಯಕೆ ಮನದೊಳಗೆ ಹುಟ್ಟಿತು.

ಮರಿನಾಗೆ ಮೊದಲಿನಿಂದಲೂ ಓಡಾಟ ಎಂದರೆ ತುಂಬಾ ಇಷ್ಟ. ಆದರೆ ತಿಂಗಳು, ವರ್ಷಗಟ್ಟಲೆ ಪ್ರವಾಸ ಹೋದರೆ, ತಾನು ಸಾಕಿದ ನಾಯಿಯ ಪಾಡು? ಎಲ್ಲಾ ಸ್ಥಳಗಳಲ್ಲೂ ಸಾಕುಪ್ರಾಣಿಗಳನ್ನು ಒಳಗೆ ಬಿಡುವುದಿಲ್ಲ. ಹಾಗೆಂದು ಊರು ಸುತ್ತುವ ಆಸೆಯನ್ನು ಹತ್ತಿಕ್ಕಲೂ ಮನಸ್ಸು ಬರಲಿಲ್ಲ. ಇದೇ ವಿಷಯವಾಗಿ ಯೋಚಿಸುತ್ತಿದ್ದ ಮರಿನಾಗೆ ಹೊಳೆದದ್ದು, ತನ್ನದೇ ವಾಹನದಲ್ಲಿ ಪ್ರವಾಸ ಹೋಗುವ ಉಪಾಯ. ಹಿಂದು ಮುಂದು ನೋಡದೆ ಕೆಲಸಕ್ಕೆ ರಾಜೀನಾಮೆ ನೀಡಿದರು.

ಪ್ರವಾಸಕ್ಕೆ ಹೋದ ಮೇಲೆ ಹೋಟೆಲ್‌ನಲ್ಲಿ ಉಳಿಯಲೇಬೇಕಲ್ಲ! ಅಲ್ಲಿ ನಾಯಿಯನ್ನು ಬಿಡದೇ ಇದ್ದರೆ? ಹೀಗೊಂದು ಯೋಚನೆ ತುಂಬಾ ದಿನ ತಲೆಯಲ್ಲಿ ಗುಯ್‌ಗುಡುತ್ತಿತ್ತು. ಆಗ ಕಂಡಿದ್ದೇ ವಾಹನವನ್ನೇ ಪುಟ್ಟ ಕೋಣೆಯಂತೆ ಮಾಡಿಕೊಳ್ಳುವ ಆಲೋಚನೆ. ಅಂದಿನಿಂದ ತಮ್ಮ ರೆನೊ ಕಾಂಗೂ ವ್ಯಾನ್‌ ಅನ್ನೇ ಮೂಲ ಸೌಲಭ್ಯವುಳ್ಳ ಪುಟ್ಟ ಕೋಣೆಯಾಗಿ ನವೀಕರಿಸಲು ಮುಂದಾದರು.

ಕಾರನ್ನು ಕೋಣೆಯಂತೆ ಮಾಡಿಕೊಳ್ಳುವ ತಂತ್ರಗಾರಿಕೆ ತಿಳಿಯಲು ಸಾಕಷ್ಟು ವೆಬ್‌ಸೈಟ್‌ಗಳನ್ನು ಜಾಲಾಡಿದರು. 2 ತಿಂಗಳು  ಈ ಕುರಿತು ವಿಷಯ ಸಂಗ್ರಹಿಸಿದ ಮೇಲೆ ಕೆಲಸ ಶುರುಮಾಡಿದರು. ಮೊದಲು ಸೀಟ್‌ ತೆಗೆದು ಅಡುಗೆ ಮನೆಯಂತೆ ಟೇಬಲ್ ಹಾಕಿ ಗ್ಯಾಸ್ ಅಳವಡಿಸಿದರು. ಬೆಡ್‌ ಅಳವಡಿಸಿ ಎಲ್‌ಇಡಿ ಸ್ಪಾಟ್‌ಲೈಟ್‌, ಪರದೆಗಳು ಹಾಗೂ ಕೆಲವು ಗಿಡಗಳನ್ನೂ ಇಟ್ಟುಕೊಂಡರು. ತಮಗೆ ಹಾಗೂ ನಾಯಿ ‘ಓಡಿ’ಗೆ ಹೊಂದುವಂತೆ ಇಡೀ ಕಾರನ್ನು ಬದಲಾಯಿಸಿದರು. ವ್ಯಾನಿಗೆ ‘ಪಾಮ್‌ ದಿ ವ್ಯಾನ್’ ಎಂದು ಹೆಸರಿಟ್ಟರು.

ಉಳಿತಾಯದ ಹಣದಲ್ಲಿ ಪ್ರವಾಸ ಕೈಗೊಂಡಿರುವ ಮರಿನಾ, “ನನ್ನ ‘ಸರಳ ಜೀವನ’ ಪರಿಕಲ್ಪನೆಯೂ ಇದರಲ್ಲಿ ಅಡಕವಾಗಿದೆ” ಎನ್ನುತ್ತಾರೆ. ‘ಅಲೆಮಾರಿ ಜೀವನ ನನಗಿಷ್ಟ’ ಎಂದು ನಗುತ್ತಾರೆ. ಈಗಾಗಲೇ ಇಂಗ್ಲೆಂಡ್‌ನ ದಕ್ಷಿಣ ಭಾಗ, ಫ್ರಾನ್ಸ್, ವೋಸ್‌ಗೆಸ್‌ ಅಂಡ್ ಲಿಯಾನ್ ಸುತ್ತಿದ್ದು, ಸ್ವಿಟ್ಜರ್ಲೆಂಡ್ ಹಾಗೂ ಇಟಲಿಗೆ ಪ್ರಯಾಣದ ಯೋಜನೆ ಹಾಕಿಕೊಂಡಿದ್ದಾರೆ. ತಮ್ಮ ಪಯಣದ ಅನುಭವವನ್ನು ಫೇಸ್‌ಬುಕ್ ಮೂಲಕ ಹಂಚಿಕೊಳ್ಳುತ್ತಾರೆ.

ಚಾಕು, ಟಾರ್ಚ್, ಎರಡು ಸಂಗೀತ ಸಾಧನಗಳು, ಕಾಂಬಿ ಡ್ರಿಲ್, ಎಮರ್ಜೆನ್ಸಿ ಬ್ಯಾಟರಿ, ನಾಯಿ ಆಟ ಆಡುವ ಬಾಲ್, ಟೇಬಲ್ ಟೆನಿಸ್ ಸೆಟ್, ಮೆಕ್ಯಾನಿಕ್ ಟೂಲ್ ಸೆಟ್, ಅಗ್ನಿ ನಂದಕ, ಯೋಗಾ ಮ್ಯಾಟ್, ಪ್ರಥಮ ಚಿಕಿತ್ಸೆಯ ಕಿಟ್, ಕಾಫಿ ಮೇಕರ್, ಹೊಲಿಗೆ ಯಂತ್ರ, ಹಗ್ಗ, ಮಡಚಬಲ್ಲ ಕ್ಯಾಂಪಿಂಗ್ ಚೇರ್, ಟೆಂಟ್, ಯುಎಸ್‌ಬಿ ಚಾರ್ಜರ್, ಪೋರ್ಟೆಬಲ್ ಸ್ನಾನದ ಸಾಮಗ್ರಿ ಇವಿಷ್ಟು ವಾಹನದಲ್ಲಿ ಅಡಕಗೊಂಡಿರುವ ಸಾಮಗ್ರಿಗಳು.

ವಾಹನದಲ್ಲೇ ಅಡುಗೆ ಮಾಡಿ ತಿನ್ನುತ್ತಾ, ನಿತ್ಯ ಹಲವು ಸುಂದರ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ. ಓದಲು ಸಾಕಷ್ಟು ಪುಸ್ತಕಗಳೂ ವಾಹನದಲ್ಲಿವೆ. ರಾತ್ರಿ ಸುರಕ್ಷಿತ ಜಾಗದಲ್ಲಿ ವಾಹನ ನಿಲ್ಲಿಸಿ ನಿದ್ದೆ ಮಾಡುತ್ತಾರೆ. ‘ಮಹಿಳೆಯರು ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಲು ಮನಸ್ಸು ಮಾಡಬೇಕು’ ಎಂಬ ಸಂದೇಶವನ್ನು ಸಾರುವುದೂ ಈ ಯಾನದ ಉದ್ದೇಶವಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT