ಶಕ್ತಿಶಾಲಿ ಬ್ಯಾಟರಿಯೇ ಪ್ಲಸ್ ಪಾಯಿಂಟ್

ಪವರ್ ಬ್ಯಾಂಕ್ ಆಗಿಯೂ ಕೆಲಸ ಮಾಡಬಹುದಾದ, ಆದರೆ ಗುಣಮಟ್ಟಕ್ಕೆ ಹೋಲಿಸಿದರೆ ಸ್ವಲ್ಪ ದುಬಾರಿಯಾದ ಫೋನ್

ಶಕ್ತಿಶಾಲಿ ಬ್ಯಾಟರಿಯೇ ಪ್ಲಸ್ ಪಾಯಿಂಟ್

ಥೈವಾನ್ ದೇಶದ ಏಸುಸ್ ಕಂಪೆನಿ ಭಾರತದ ಗಣಕ, ಲ್ಯಾಪ್‌ಟಾಪ್, ಟ್ಯಾಬ್ಲೆಟ್ ಮತ್ತು ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಒಂದು ಗಮನಾರ್ಹ ಹೆಸರು. ಈ ಕಂಪೆನಿಯ ಹಲವು ಫೋನ್‌ಗಳನ್ನು ಇದೇ ಅಂಕಣದಲ್ಲಿ ವಿಮರ್ಶಿಸಲಾಗಿತ್ತು.

ಅವುಗಳಲ್ಲಿ ಒಂದನ್ನು ಇಲ್ಲಿ ನೆನಪಿಸಬಹುದು –ಏಸುಸ್ ಝೆನ್‌ಫೋನ್ 3 ಮ್ಯಾಕ್ಸ್. ಈ ಫೋನಿನ ಪ್ರಮುಖ ಗುಣವೈಶಿಷ್ಟ್ಯವೆಂದರೆ ಶಕ್ತಿಶಾಲಿಯಾದ ಬ್ಯಾಟರಿ. ಈಗ ಅದರದೇ ಸ್ವಲ್ಪ ಬದಲಾಯಿಸಿದ ಆವೃತ್ತಿ ಬಂದಿದೆ. ಅದುವೇ ಏಸುಸ್ ಝೆನ್‌ಫೋನ್ 3 ಎಸ್ ಮ್ಯಾಕ್ಸ್ (Asus Zenfone 3S Max). ಇದು ನಮ್ಮ ಈ ವಾರದ ಗ್ಯಾಜೆಟ್.

ಗುಣವೈಶಿಷ್ಟ್ಯಗಳು
1.51 ಗಿಗಾಹರ್ಟ್ಸ್ ವೇಗದ 8 ಹೃದಯಗಳ ಪ್ರೊಸೆಸರ್ (Mediatek MT 6750), ಗ್ರಾಫಿಕ್ಸ್ ಪ್ರೊಸೆಸರ್, 3 ಗಿಗಾಬೈಟ್ ಪ್ರಾಥಮಿಕ ಮೆಮೊರಿ, 32 ಗಿಗಾಬೈಟ್ ಸಂಗ್ರಹ ಮೆಮೊರಿ, ಅಧಿಕ ಮೆಮೊರಿಗೆ ಮೈಕ್ರೊಎಸ್‌ಡಿ ಕಾರ್ಡ್ ಹಾಕುವ ಸೌಲಭ್ಯ, 2ಜಿ/3ಜಿ/4ಜಿ ಎರಡು ಸಿಮ್, 5.2 ಇಂಚು ಗಾತ್ರದ 720x 1280 ಪಿಕ್ಸೆಲ್ ರೆಸೊಲೂಶನ್‌ನ ಐಪಿಎಸ್ ಸ್ಪರ್ಶಸಂವೇದಿ ಪರದೆ, ಗೊರಿಲ್ಲ ಗಾಜು, 13  ಮೆಗಾಪಿಕ್ಸೆಲ್ ರೆಸೊಲೂಶನ್‌ನ ಪ್ರಾಥಮಿಕ ಮತ್ತು 8 ಮೆಗಾಪಿಕ್ಸೆಲ್‌ನ ಇನ್ನೊಂದು (ಸ್ವಂತೀ) ಕ್ಯಾಮೆರಾಗಳು, ಪ್ರಾಥಮಿಕ ಕ್ಯಾಮೆರಾಕ್ಕೆ ಫ್ಲಾಶ್, 73.7x 149.5 x 8.85 ಮಿ.ಮೀ. ಗಾತ್ರ, 175 ಗ್ರಾಂ ತೂಕ, 5000 mAh ಶಕ್ತಿಯ ತೆಗೆಯಲಸಾಧ್ಯವಾದ ಬ್ಯಾಟರಿ, ಎಫ್‌ಎಂ ರೇಡಿಯೊ, ಬೆರಳಚ್ಚು ಸ್ಕ್ಯಾನರ್, ಆಂಡ್ರಾಯ್ಡ್‌ 7.0+ ಝೆನ್ ಯೂಸರ್ ಇಂಟರ್‌ಫೇಸ್ 3, ಇತ್ಯಾದಿ. ನಾಲ್ಕು ಬಣ್ಣಗಳಲ್ಲಿ ಲಭ್ಯ. 3+32 ಗಿಗಾಬೈಟ್ ಮಾದರಿಯ ನಿಗದಿತ ಬೆಲೆ ₹15,999. ಮಾರುಕಟ್ಟೆಯಲ್ಲಿ (ಅಮೆಝಾನ್) ₹14,999ಕ್ಕೆ ಲಭ್ಯ.

ಇತರೆ ಝೆನ್‌ಫೋನ್ 3 ಫೋನ್‌ಗಳಿಗೂ ಇದಕ್ಕೂ ಕೆಲವು ವ್ಯತ್ಯಾಸಗಳಿವೆ. ಮೊದಲನೆಯದಾಗಿ ಬೇರೆ ಪ್ರೊಸೆಸರ್.  ಹಳೆಯ ವಿನ್ಯಾಸವನ್ನು ಏಸುಸ್‌ನವರು ಕೈಬಿಟ್ಟಿದ್ದಾರೆ. ಇದು ಉತ್ತಮ ಬೆಳವಣಿಗೆ. ಲೋಹದ ದೇಹದಂತೆ ಕಾಣುತ್ತದೆ. ಹಿಂಭಾಗ ಸ್ವಲ್ಪ ದೊರಗಾಗಿದೆ. ಬಲಭಾಗದಲ್ಲಿ ಆನ್/ಆಫ್ ಮತ್ತು ವಾಲ್ಯೂಮ್ ಬಟನ್‌ಗಳಿವೆ. ಮೇಲ್ಭಾಗದಲ್ಲಿ 3.5 ಮಿ.ಮೀ. ಇಯರ್‌ಫೋನ್ ಕಿಂಡಿಯಿದೆ. ಕೆಳಭಾಗದಲ್ಲಿ ಯುಎಸ್‌ಬಿ ಕಿಂಡಿಯಿದೆ. ಎಡಭಾಗದಲ್ಲಿ ಸಿಮ್ ಕಾರ್ಡ್ ಮತ್ತು ಮೆಮೊರಿ ಕಾರ್ಡ್‌ಗಳನ್ನು ಹಾಕುವ ಟ್ರೇ ಇದೆ.

ಅದನ್ನು ಹೊರತೆಗೆಯಲು ಚಿಕ್ಕ ಪಿನ್‌ ಬಳಸಿ ಚುಚ್ಚಬೇಕು. ಈ ಟ್ರೇಯಲ್ಲಿ ಎರಡು ಮೈಕ್ರೊ ಸಿಮ್ ಅಥವಾ ಒಂದು ಮೈಕ್ರೊ ಸಿಮ್ ಮತ್ತು ಒಂದು ಮೆಮೊರಿ ಕಾರ್ಡ್ ಹಾಕಬಹುದು. ಹಿಂಭಾಗದಲ್ಲಿ ಒಂದು ಮೂಲೆಯಲ್ಲಿ ಕ್ಯಾಮೆರಾ ಇದೆ. ಕ್ಯಾಮೆರಾದ ಸ್ಥಳ ನನಗೆ ಹಿಡಿಸಲಿಲ್ಲ. ಫೋಟೊ ತೆಗೆಯುವಾಗ ಎಚ್ಚರಿಕೆ ವಹಿಸದಿದ್ದರೆ ಎಡಗೈಯ ಬೆರಳು ಕ್ಯಾಮೆರಾವನ್ನು ಮುಚ್ಚುವ ಸಾಧ್ಯತೆಯಿದೆ.

ಈ ವಿನ್ಯಾಸ ಐಫೋನ್‌ನದ್ದು. ನನಗೆ ಅದು ಸುತರಾಂ ಇಷ್ಟವಿಲ್ಲ. ಕ್ಯಾಮೆರಾ ಯಾವತ್ತೂ ಹಿಂಭಾಗದ ಮಧ್ಯಭಾಗದಲ್ಲಿದ್ದರೇ ಉತ್ತಮ. ಕ್ಯಾಮೆರಾದ ಪಕ್ಕದಲ್ಲಿ ಫ್ಲಾಶ್ ಇದೆ. ಮುಂಭಾಗದ ಕೆಳಭಾಗದಲ್ಲಿ ಬೆರಳಚ್ಚು ಸ್ಕ್ಯಾನರ್ ಇದೆ. ಇದರ ಬೆರಳಚ್ಚು ಸ್ಕ್ಯಾನರ್‌ನ ಸಂವೇದನೆ ಚೆನ್ನಾಗಿದೆ. ಕೈಯಲ್ಲಿ ಹಿಡಿದಾಗ ಒಂದು ಮೇಲ್ದರ್ಜೆ ಫೋನನ್ನು ಹಿಡಿದುಕೊಂಡ ಭಾವನೆ ಬರುತ್ತದೆ. ಒಟ್ಟಿನಲ್ಲಿ ರಚನೆ ಮತ್ತು ವಿನ್ಯಾಸಕ್ಕೆ ಪೂರ್ತಿ ಮಾರ್ಕು ನೀಡಬಹುದು.

ಇದರಲ್ಲಿ ಮುಂಭಾಗದಲ್ಲಿ ಮೂರು ಬಟನ್‌ಗಳಿಲ್ಲ. ಪರದೆಯಲ್ಲೇ ಬೇಕಾದಾಗ ಬಟನ್‌ಗಳು ಗೋಚರಿಸುತ್ತವೆ. ಇದು ಗೂಗಲ್‌ನವರ ಶುದ್ಧ ಆಂಡ್ರಾಯ್ಡ್ ವಿಧಾನ. ನನಗೆ ಮಾತ್ರ ಈ ವಿಧಾನ ಇಷ್ಟವಿಲ್ಲ.

ಇದರ ಕೆಲಸದ ವೇಗ ಹೇಳಿಕೊಳ್ಳುವಂತೇನೂ ಇಲ್ಲ. ವಿಡಿಯೊ ಪ್ಲೇ ಮತ್ತು ಬಹುತೇಕ ಆಟಗಳನ್ನು ಆಡುವ ಅನುಭವ ತೃಪ್ತಿದಾಯಕವಾಗಿದೆ ಎನ್ನಬಹುದು. ಇದರಲ್ಲಿರುವುದು ಅಧಿಕ ಶಕ್ತಿಯ ಪ್ರೊಸೆಸರ್ ಅಲ್ಲ ಎನ್ನುವುದನ್ನು ನೆನಪಿನಲ್ಲಿಡಬೇಕು. ತುಂಬ ಶಕ್ತಿಶಾಲಿಯಾದ ಪ್ರೊಸೆಸರ್ ಬೇಕು ಎನ್ನುವವರಿಗೆ ಈ ಫೋನ್ ಹೇಳಿದ್ದಲ್ಲ. ಹಾಗೆಂದು ಹೇಳಿ ಇದು ತುಂಬ ನಿಧಾನ ಕೆಲಸ ಮಾಡುತ್ತದೆ ಎಂದುಕೊಳ್ಳಬೇಕಾಗಿಲ್ಲ.

ದಿನನಿತ್ಯದ ಕೆಲಸಗಳಲ್ಲಿ ಅಷ್ಟೇನೂ ವ್ಯತ್ಯಾಸ ಗೊತ್ತಾಗುವುದಿಲ್ಲ. ವಿಡಿಯೊ ವೀಕ್ಷಣೆಯ ಅನುಭವ ಪರವಾಗಿಲ್ಲ. ಇದು ಹೈಡೆಫಿನಿಶನ್ ವಿಡಿಯೊ ಪ್ಲೇ ಮಾಡುತ್ತದೆ. ಆದರೆ 4k ವಿಡಿಯೊ ಪ್ಲೇ  ಮಾಡುವುದಿಲ್ಲ. ಈ ಫೋನಿನ ಆಡಿಯೊ ಇಂಜಿನ್ ತಕ್ಕಮಟ್ಟಿಗೆ ಚೆನ್ನಾಗಿದೆ.

ಕಡಿಮೆ ಕಂಪನಾಂಕ (bass) ಮತ್ತು ಹೆಚ್ಚು ಕಂಪನಾಂಕಗಳ (treble) ಧ್ವನಿಯ ಪುನರುತ್ಪತ್ತಿ ಪರವಾಗಿಲ್ಲ. ಆದರೆ ಮಾನವ ಧ್ವನಿಯ ಪುನರುತ್ಪತ್ತಿಯಲ್ಲಿ ನಿಖರತೆ ಸಾಲದು. ಫೋನಿನ ಜೊತೆ ಇಯರ್‌ಬಡ್ ಹಾಗೂ ಮೂರು ಜೊತೆ ಕುಶನ್ ನೀಡಿದ್ದಾರೆ. ಈ ಇಯರ್‌ಬಡ್‌ನ ಗುಣಮಟ್ಟ ಪರವಾಗಿಲ್ಲ. ಇನ್ನೂ ಉತ್ತಮ ಇಯರ್‌ಫೋನ್ ಅಥವಾ ಹೆಡ್‌ಫೋನ್ ಬಳಸಿದರೆ ಉತ್ತಮ ಸಂಗೀತವನ್ನು ಆಲಿಸುವ ಅನುಭವ ಪಡೆಯಬಹುದು.

ಇದರಲ್ಲಿರುವುದು 13 ಮೆಗಾಪಿಕ್ಸೆಲ್‌ನ ಕ್ಯಾಮೆರಾ. ಎಲ್ಲ ಏಸುಸ್ ಫೋನ್‌ಗಳಲ್ಲಿರುವ ಕ್ಯಾಮೆರಾ ಕಿರುತಂತ್ರಾಂಶ ಇದರಲ್ಲೂ ಇದೆ. ಅದೇ ಸೌಲಭ್ಯಗಳು ಇಲ್ಲೂ ಇವೆ. ಕ್ಯಾಮೆರಾದ ಗುಣಮಟ್ಟ ಅಂತಹ ಹೇಳಿಕೊಳ್ಳುವಂತೇನೂ ಇಲ್ಲ. ಚೆನ್ನಾಗಿ ಬೆಳಕಿದ್ದಲ್ಲಿ ಉತ್ತಮ ಫೋಟೊ ತೆಗೆಯುತ್ತದೆ.

ವಸ್ತು ಅಲುಗಾಡುತ್ತಿದ್ದರೆ ಅಥವಾ ವೇಗವಾಗಿ ಫೋಟೊ ತೆಗೆಯಬೇಕಾಗಿದ್ದರೆ ಇದು ತಡವರಿಸುತ್ತದೆ. ಕಡಿಮೆ ಬೆಳಕಿನಲ್ಲಿ ಅಷ್ಟೇನೂ ಉತ್ತಮ ಫೋಟೊ ತೆಗೆಯುವುದಿಲ್ಲ. ಅತ್ಯುತ್ತಮ ಕ್ಯಾಮೆರಾ ಫೋನ್‌ ಬೇಕು ಎನ್ನುವವರಿಗೆ ಇದು ಹೇಳಿದ್ದಲ್ಲ.

ಇದರಲ್ಲಿರುವುದು ಆಂಡ್ರಾಯ್ಡ್ 7.0 ಕಾರ್ಯಾಚರಣ ವ್ಯವಸ್ಥೆ. ಜೊತೆಗೆ ಏಸುಸ್‌ನವರದೇ ಆದ ಝೆನ್ ಯುಐ 3.0 ಇದೆ. ಕನ್ನಡದ ತೋರುವಿಕೆ (ರೆಂಡರಿಂಗ್) ಸರಿಯಾಗಿದೆ. ಕನ್ನಡದ ಸಂಪೂರ್ಣ ಯೂಸರ್ ಇಂಟರ್‌ಫೇಸ್ ಮತ್ತು ಕೀಲಿಮಣೆ ಇವೆ. ಇತರೆ ಏಸುಸ್ ಫೋನ್‌ಗಳಂತೆ ಇಲ್ಲೂ ಕೆಲವು ಅನಗತ್ಯ ಅಧಿಕ ಕಿರುತಂತ್ರಾಂಶಗಳಿವೆ. ಇದಕ್ಕೆ ಬ್ಲೋಟ್‌ವೇರ್ ಹಾವಳಿ ಎನ್ನುತ್ತಾರೆ. ಅವುಗಳಲ್ಲಿ ಅತೀ ಅಗತ್ಯವಿಲ್ಲದವುಗಳನ್ನು ಕಿತ್ತುಹಾಕಿದರೆ ಉತ್ತಮ.
ಈ ಫೋನಿನ ಹೆಚ್ಚುಗಾರಿಕೆಯಿರುವುದು ಇದರ ಬ್ಯಾಟರಿಯಲ್ಲಿ. 5000 mAh ಎಂದರೆ ತುಂಬ ಶಕ್ತಿಶಾಲಿ ಎನ್ನಬಹುದು.

ಬ್ಯಾಟರಿ ಸುಮಾರು ಎರಡೂವರೆ ದಿನಗಳಿಗೆ ಬಾಳಿಕೆ ಬರುತ್ತದೆ. ಇದರಿಂದ ಇತರೆ ಫೋನ್‌ಗಳಿಗೆ ಚಾರ್ಜ್ ಕೂಡ ಮಾಡಬಹುದು. ಅದಕ್ಕೆ ಯುಎಸ್‌ಬಿ ಓಟಿಜಿ ಕೇಬಲ್ ಬೇಕು. ಏಸುಸ್‌ನವರು ಅದನ್ನು ನೀಡಿಲ್ಲ. ಹೀಗೆ ಚಾರ್ಜ್ ಮಾಡುವಾಗ ಒಂದು ವಿಷಯ ನೆನಪಿಟ್ಟುಕೊಳ್ಳಬೇಕು.

ಇದು ಅರ್ಧ ಆಂಪಿಯರ್ ವಿದ್ಯುತ್ ಪ್ರವಾಹ ಮಾತ್ರ ನೀಡಬಲ್ಲುದು. ಬಹುತೇಕ ಫೋನ್‌ಗಳಿಗೆ ಚಾರ್ಜ್ ಮಾಡಲು 2 ಆಂಪಿಯರ್ ವಿದ್ಯುತ್ ಪ್ರವಾಹ ಬೇಕು. ಕಡಿಮೆ ವಿದ್ಯುತ್ ಪ್ರವಾಹ ಎಂದರೆ ಚಾರ್ಜ್ ಆಗುವುದಿಲ್ಲ ಎಂದು ಅರ್ಥವಲ್ಲ, ತುಂಬ ನಿಧಾನವಾಗಿ ಚಾರ್ಜ್ ಆಗುತ್ತದೆ ಎಂದು.

ಶಕ್ತಿಶಾಲಿ ಬ್ಯಾಟರಿ ಎನ್ನುವುದನ್ನು ಬಿಟ್ಟರೆ ಈ ಫೋನ್‌ನಲ್ಲಿ ಬೇರೆ ಯಾವುದೇ ಹೆಚ್ಚುಗಾರಿಕೆಯಿಲ್ಲ. ಗುಣಮಟ್ಟಕ್ಕೆ ಹೋಲಿಸಿದರೆ ಬೆಲೆ ಸ್ವಲ್ಪ ಜಾಸ್ತಿಯಾಯಿತು ಎನ್ನಬಹುದು.

*
ವಾರದ ಆ್ಯಪ್ –  ಭಾರತೀಯ ಸಂಜ್ಞಾ ಭಾಷೆ
ಕಿವಿ ಕೇಳದವರು ಸಹಜವಾಗಿಯೇ ಮೂಗರಾಗಿರುತ್ತಾರೆ. ಇಂತಹವರು ಸಂವಹನಕ್ಕೆ ಸಂಜ್ಞಾ ಭಾಷೆ ಬಳಸುತ್ತಾರೆ. ಈ ಭಾಷೆಗಳಲ್ಲಿ ಹಲವು ವಿಧಗಳಿವೆ –ಅಮೆರಿಕನ್ ಸೈನ್ ಲಾಂಗ್ವೇಜ್, ಚೀನಾ ಸಂಜ್ಞಾ ಭಾಷೆ, ಭಾರತೀಯ ಸಂಜ್ಞಾ ಭಾಷೆ, ಇತ್ಯಾದಿ. ದೂರದರ್ಶನದವರು ವಾರದಲ್ಲಿ ಒಂದು ದಿನ ಈ ಭಾಷೆಯಲ್ಲಿ ವಾರ್ತೆ ಪ್ರಸಾರ ಮಾಡುತ್ತಾರೆ. 


ಭಾರತೀಯ ಸಂಜ್ಞಾ ಭಾಷೆಗೆ ಕಿರುತಂತ್ರಾಂಶ (ಆ್ಯಪ್) ಲಭ್ಯವಿದೆ. ಅದು ಬೇಕಿದ್ದಲ್ಲಿ ನೀವು ಗೂಗಲ್‌ ಪ್ಲೇ ಸ್ಟೋರಿನಲ್ಲಿ Indian Sign Language ಎಂದು ಹುಡುಕಬೇಕು ಅಥವಾ bit.ly/gadgetloka266 ಜಾಲತಾಣಕ್ಕೆ ಭೇಟಿ ನೀಡಬೇಕು. ಭಾರತೀಯ ಸಂಜ್ಞಾ ಭಾಷೆಯಲ್ಲಿ ಬಳಕೆಯಲ್ಲಿರುವ ಹಲವು ಪ್ರಮುಖ ಪದಗಳ ವಿಡಿಯೊಗಳು ಇದರಲ್ಲಿವೆ. ಒಂದು ಉಪಯುಕ್ತ ಕಿರುತಂತ್ರಾಂಶ.

*
ಗ್ಯಾಜೆಟ್‌ ಸುದ್ದಿ– ಸ್ಯಾಮ್‌ಸಂಗ್ ಮತ್ತು ಸ್ಫೋಟಗಳು
ಸ್ಯಾಮ್‌ಸಂಗ್ ನೋಟ್ 7 ಫೋನ್‌ನ ಬ್ಯಾಟರಿ ಸ್ಫೋಟಗೊಂಡ ಸುದ್ದಿ ಜಗತ್ತಿನ ಹಲವು ಕಡೆಗಳಿಂದ ಬರುತ್ತಿತ್ತು. ಸ್ಯಾಮ್‌ಸಂಗ್ ಕಂಪೆನಿ ಈ ಫೋನ್‌ಗಳನ್ನು ಮಾರುಕಟ್ಟೆಯಿಂದ ವಾಪಸ್ಸು ಪಡೆದುಕೊಂಡಿದೆ. ಕೆಲವು ಫೋನ್‌ಗಳು ಇನ್ನೂ ಜನರ ಕೈಯಲ್ಲಿ ಉಳಿದುಕೊಂಡಿವೆ. ವಿಮಾನಗಳಲ್ಲಿ ಈ ಫೋನ್‌ಗೆ ಸಂಪೂರ್ಣ ನಿಷೇಧ ಹೇರಲಾಗಿದೆ.

ಸ್ಯಾಮ್‌ಸಂಗ್‌ನ ಸಮಸ್ಯೆ ಇಲ್ಲಿಗೇ ಮುಗಿಯಲಿಲ್ಲ. ಇತ್ತೀಚೆಗೆ ಸ್ಯಾಮ್‌ಸಂಗ್ ಕಂಪೆನಿ ಬ್ಯಾಟರಿ ತಯಾರಿಸುವ ಫ್ಯಾಕ್ಟರಿಗೇ ಬೆಂಕಿ ಹಚ್ಚಿಕೊಂಡಿತ್ತು. ಉತ್ತರ ಚೀನಾದಲ್ಲಿ ಸಂಭವಿಸಿದ ಈ ಘಟನೆಯಲ್ಲಿ ಯಾವುದೇ ಜೀವಹಾನಿಯಾಗಿಲ್ಲ. ಬೆಂಕಿ ಹಿಡಿದಿದ್ದು ಪ್ರಮುಖ ಫ್ಯಾಕ್ಟರಿಯಲ್ಲಿ ಅಲ್ಲ, ಅದರ ಪಕ್ಕದ ಸಂಗ್ರಹಾಲಯದಲ್ಲಿ ಎಂದು ಸ್ಯಾಮ್‌ಸಂಗ್ ಕಂಪೆನಿ ಹೇಳಿಕೊಂಡಿದೆ.

*
ಗ್ಯಾಜೆಟ್‌ ಸಲಹೆ –ಕುಮಾರ್ ಅವರ ಪ್ರಶ್ನೆ: ನಾನು ಶಿಯೋಮಿ ಎಂಐ 4 ಐ (Xiaomi Mi4i) ಮೊಬೈಲನ್ನು ಬಳಸುತ್ತಿದ್ದು, ಜಿಯೊ ಸಿಮ್ ಅನ್ನು ಬಳಸಿ ಎಚ್‌ಡಿ ಕರೆಗಳನ್ನು ಮಾಡಬಹುದೇ? ನನ್ನ ಮೊಬೈಲ್‌ನಲ್ಲಿ ವಿಓಎಲ್‌ಟಿಇ (VoLTE) ಇಲ್ಲದಿರುವುದರಿಂದ ನಾನು ಯಾವ ತಂತ್ರಾಂಶವನ್ನು ಬಳಸುವುದು ಸೂಕ್ತ ದಯವಿಟ್ಟು ತಿಳಿಸಿ.
ಉ: ನೀವು Jio4GVoice ಎಂಬ ಕಿರುತಂತ್ರಾಂಶವನ್ನು ಹಾಕಿಕೊಂಡು ಕರೆ ಮಾಡಬಹುದು. ಆದರೆ ಅದು ಎಚ್‌ಡಿ ಕರೆ ಆಗಿರುವುದಿಲ್ಲ.

*
ಗ್ಯಾಜೆಟ್‌ ತರ್ಲೆ– ಫೇಸ್‌ಬುಕ್‌ನಲ್ಲಿ ಲೈಕಿಗೆ ಬಾಯಿ ಬಿಡುವವರಿಗೆ- ಲೈಕ್ ಲೈಕ್ ಎಂದೇಕೆ ಬಾಯಿ ಬಿಡುವಿರಿ? ಲೈಕಿಂದೇನಾಗಲಿಹುದು?

Comments
ಈ ವಿಭಾಗದಿಂದ ಇನ್ನಷ್ಟು
ಕಡಿಮೆ ಬೆಲೆಯ ಫೋನ್‌ಗಳ ಸಾಲಿಗೆ ಮತ್ತೊಂದು ಸೇರ್ಪಡೆ

ಗ್ಯಾಜೆಟ್ ಲೋಕ
ಕಡಿಮೆ ಬೆಲೆಯ ಫೋನ್‌ಗಳ ಸಾಲಿಗೆ ಮತ್ತೊಂದು ಸೇರ್ಪಡೆ

15 Mar, 2018
ಕಡಿಮೆ ಬೆಲೆಯ ಸಾಧನಗಳು

ಗ್ಯಾಜೆಟ್ ಲೋಕ
ಕಡಿಮೆ ಬೆಲೆಯ ಸಾಧನಗಳು

8 Mar, 2018
ನೋಟ್ 4ನ ಉತ್ತರಾಧಿಕಾರಿ

ಗ್ಯಾಜೆಟ್ ಲೋಕ
ನೋಟ್ 4ನ ಉತ್ತರಾಧಿಕಾರಿ

1 Mar, 2018
ಒಂದು ಉತ್ತಮ ಫೋನ್

ಗ್ಯಾಜೆಟ್ ಲೋಕ
ಒಂದು ಉತ್ತಮ ಫೋನ್

22 Feb, 2018
ಟಿ.ವಿ.ಯನ್ನು  ಸ್ಮಾರ್ಟ್ ಮಾಡಿ

ಗ್ಯಾಜೆಟ್ ಲೋಕ
ಟಿ.ವಿ.ಯನ್ನು ಸ್ಮಾರ್ಟ್ ಮಾಡಿ

15 Feb, 2018