ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಸು, ಗುರಿಯೊಂದಿಗಿನ ಹೆಜ್ಜೆ

Last Updated 15 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಲೀ ಜೋರ್ಡನ್
ಎಲ್ಲರಿಗೂ ಒಂದು ಗುರಿ ಮತ್ತು ಕನಸಿರುವಂತೆ ಯುವತಿ ಲೀ ಜೋರ್ಡನ್ (ಲಿಝಿ) ಅವರಿಗೂ ಜೀವನದಲ್ಲಿ ಒಂದು ಗುರಿ ಇತ್ತು. ಬಣ್ಣದ ಲೋಕದ ಫ್ಯಾಶನ್ ಜಗತ್ತಿನಲ್ಲಿ ದೊಡ್ಡ ಹೆಸರು ಮಾಡಬೇಕು ಎಂಬ ಆಕಾಂಕ್ಷೆ ಅವರದಾಗಿತ್ತು. ಸುಂದರವಾಗಿದ್ದ ಲೀ ಜೋರ್ಡನ್ ಅಂದುಕೊಂಡಂತೆಯೇ ಫ್ಯಾಶನ್ ಲೋಕ ಪ್ರವೇಶಿಸಿದರು. ಆಭರಣ, ವಸ್ತ್ರವಿನ್ಯಾಸ ಹಾಗೂ ಕ್ಯಾಟ್ ವಾಕ್‌ನಲ್ಲೂ ಸೈ ಎನಿಸಿಕೊಂಡರು. ಹಲವು ಅಂತರರಾಷ್ಟ್ರೀಯ ಫ್ಯಾಶನ್ ಶೋಗಳಲ್ಲಿ ಭಾಗವಹಿಸುವ ಮೂಲಕ ಯುರೋಪ್ ದೇಶಗಳಲ್ಲಿ ಜನಪ್ರಿಯ ಫ್ಯಾಶನ್ ತಾರೆಯಾದರು.

ಲೀ ಜೋರ್ಡನ್ ತಮ್ಮ 18ನೇ ವಯಸ್ಸಿನಲ್ಲಿ ಫ್ಯಾಶನ್ ಜಗತ್ತು ಪ್ರವೇಶಿಸಿದ್ದರು. ನಂತರ 7 ವರ್ಷಗಳ ಕಾಲ ಜನಪ್ರಿಯ ಫ್ಯಾಶನ್ ತಾರೆ ಎಂದೇ ಗುರುತಿಸಿಕೊಂಡಿದ್ದರು. 25ರ ಹರೆಯದಲ್ಲಿ ಲೀ ಜೋರ್ಡನ್ ಮದುವೆಯಾದರು. ಜನಪ್ರಿಯತೆ, ಕೀರ್ತಿ ಮತ್ತು ಹಣ ಸಂಪಾದನೆ ಮಾಡುತ್ತ ಸಂತೋಷದಿಂದ ಜೀವನ ಸಾಗಿಸುತ್ತಿದ್ದ ಲೀ ಜೋರ್ಡನ್ ಕುಟುಂಬಕ್ಕೆ ಒಂದು ಆಘಾತ ಕಾದಿತ್ತು.

ಗರ್ಭಿಣಿಯಾಗಿದ್ದ ಲೀ ಜೋರ್ಡನ್‌ಗೆ ಮಗು ಜನಿಸುವ ಕೆಲವೇ ದಿನಗಳಲ್ಲಿ ಎಚ್ಐವಿ ಸೋಂಕು ಇರುವುದಾಗಿ ತಿಳಿಯಿತು. ಮಗು ಹುಟ್ಟಿದ 6 ತಿಂಗಳಲ್ಲೇ ಪತಿ ಎಚ್ಐವಿಗೆ ಬಲಿಯಾದರು. ಹೀಗೆ ಸಂಕಷ್ಟಗಳ ಸರಮಾಲೆಯಲ್ಲಿ ಹೈರಾಣಾಗಿದ್ದ ಲೀ ಜೋರ್ಡನ್ ಫ್ಯಾಶನ್ ಲೋಕಕ್ಕೆ ಗುಡ್‌ಬೈ ಹೇಳಿ ಮಗುವಿನೊಂದಿಗೆ ಲಂಡನ್ ಬಿಟ್ಟು ತಮ್ಮ ಸ್ವಗ್ರಾಮ ಲಿಂಕನ್‌ಶೈರ್‌ಗೆ ಮರಳಿದರು.

ಬದುಕಿನ ಆಸೆ ಕಳೆದುಕೊಂಡಿದ್ದ ಲೀ ಜೋರ್ಡನ್ ಮಗುವಿನೊಟ್ಟಿಗೆ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೂ ಬಂದಿದ್ದರು. ಈ ಹಂತದಲ್ಲಿ ಮನಸ್ಸಿನ ನೆಮ್ಮದಿಗಾಗಿ ದಾರ್ಶನಿಕರ ಕೃತಿಗಳನ್ನು ಓದತೊಡಗಿದರು. ನಂತರದ ದಿನಗಳಲ್ಲಿ ಆತ್ಮಹತ್ಯೆ ನಿರ್ಧಾರವನ್ನು ಕೈಬಿಟ್ಟು ಬದುಕನ್ನು ಸಾರ್ಥಕ್ಯಗೊಳಿಸಲು ನಿರ್ಧರಿಸಿದರು.

ಮುಂದೆ ಸ್ಥಳೀಯವಾಗಿ ಸಣ್ಣ ಆಭರಣ ಉದ್ಯಮ ಹಾಗೂ ಸ್ವಯಂ ಸೇವಾ ಸಂಸ್ಥೆಯ ಆರಂಭಿಸಿದರು. ನೂರಾರು ಜನರಿಗೆ ಕೆಲಸ ಕೊಟ್ಟು, ಮಹಿಳೆಯರು ಮತ್ತು ಮಕ್ಕಳ ಅಭ್ಯುದಯಕ್ಕಾಗಿ ಇಂದು, ಲೀ ಜೋರ್ಡನ್ ದುಡಿಯುತ್ತಿದ್ದಾರೆ. https://www.yellowstory.org

*


ಲಾಲ್ ಚುಂಗ್ ನುಂಗ್ವಾ
ಭಾರತದಲ್ಲಿ ಕ್ರಿಕೆಟ್ ಜನಪ್ರಿಯ ಆಟ. ಈಶಾನ್ಯ ಭಾರತದ ಎರಡು ಮೂರು ರಾಜ್ಯಗಳನ್ನು ಹೊರತುಪಡಿಸಿದರೆ ದೇಶದ ಮೂಲೆಮೂಲೆಯಲ್ಲೂ ಕ್ರಿಕೆಟ್ ಅಬ್ಬರ ಮಾರ್ದನಿಸುತ್ತದೆ. ಆದರೆ ಮಣಿಪುರ, ಮಿಜೋರಾಂ, ಅಸ್ಸಾಂ ರಾಜ್ಯಗಳಲ್ಲಿ ಫುಟ್ಬಾಲ್ ಆಟದ್ದೇ ಮೇನಿಯಾ! 2022ರ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ ಭಾಗವಹಿಸಲು ಭಾರತ ಮಾಸ್ಟರ್ ಪ್ಲಾನ್ ಮಾಡಿದ್ದು, ಯುವ ಪ್ರತಿಭಾವಂತ ಫುಟ್ಬಾಲ್ ಆಟಗಾರರಿಗೆ ನುರಿತ ತರಬೇತುದಾರರಿಂದ ವಿದೇಶಗಳಲ್ಲಿ ತರಬೇತಿ ಕೊಡಿಸುತ್ತಿದೆ.

ಇದಕ್ಕಾಗಿ 50ಕ್ಕೂ ಹೆಚ್ಚು ಪ್ರತಿಭಾವಂತ ಆಟಗಾರರನ್ನು ಆಯ್ಕೆ ಮಾಡಿ ವಿದೇಶಗಳಿಗೆ ಕಳುಹಿಸಿಕೊಟ್ಟಿದೆ. ಇವರಲ್ಲಿ ಗಲ್ಲಿ ಹುಡುಗ ಎಂದೇ ಖ್ಯಾತಿ ಪಡೆದಿರುವ ಲಾಲ್ ಚುಂಗ್ ನುಂಗ್ವಾ ತರಬೇತಿಗೆ ಆಯ್ಕೆಯಾಗಿ ಜರ್ಮನಿಗೆ ತೆರಳಿದ್ದಾರೆ.

15 ವರ್ಷದ ಲಾಲ್ ಚುಂಗ್ ನುಂಗ್ವಾ ಮಿಜೋರಾಂ ರಾಜ್ಯದವರು. ಲಾಲ್ ಚುಂಗ್ ಕುಟುಂಬ ಐಜ್ವಾಲ್ ನಗರದ ಕೊಳೆಗೇರಿಯಲ್ಲಿ ವಾಸವಿದೆ. ಇವರ ತಂದೆ ತಾಯಿ ಚಿಂದಿ ಆಯುತ್ತಾರೆ. ಮಗನನ್ನು ಚೆನ್ನಾಗಿ ಓದಿಸಬೇಕು ಎಂಬ ಹಂಬಲ ಅವರದ್ದು. ಆದರೆ ಲಾಲ್ ಚುಂಗ್‌ಗೆ ಮೆಸ್ಸಿಯಂತೆ ತಾನೊಬ್ಬ ಖ್ಯಾತ ಫುಟ್ಬಾಲ್ ಪಟು ಆಗಬೇಕು ಎಂಬ ಕನಸು! ಕೊಳೆಗೇರಿಯ ಗಲ್ಲಿಗಲ್ಲಿಗಳಲ್ಲಿ ವಾರಗೆಯ ಹುಡುಗರೊಟ್ಟಿಗೆ ಫುಟ್ಬಾಲ್ ಆಡುವ ಮೂಲಕ ಲಾಲ್ ಚುಂಗ್ ಫುಟ್ಬಾಲ್ ಮೇಲೆ ಪ್ರೀತಿ ಬೆಳೆಸಿಕೊಂಡವರು.

ಲಾಲ್ ಚುಂಗ್ ತನ್ನ 9ನೇ ವಯಸ್ಸಿನಲ್ಲಿ ಕ್ರಮಬದ್ಧವಾಗಿ ಫುಟ್ಬಾಲ್ ಆಡುವುದನ್ನು ಆರಂಭಿಸುತ್ತಾರೆ. ಶಾಲಾ ಟೂರ್ನಿಗಳಲ್ಲಿ ಭಾಗವಹಿಸುವ ಮೂಲಕ ಲಾಲ್ ಚುಂಗ್ ಗಮನ ಸೆಳೆಯುತ್ತಾರೆ. ನಂತರ ವಲಯ ಮಟ್ಟ ಮತ್ತು ಐಲೀಗ್ ಟೂರ್ನಿಗಳಿಗೆ ಆಯ್ಕೆಯಾಗಿ ಉತ್ತಮ ಪ್ರದರ್ಶನ ನೀಡುತ್ತಾರೆ. 15 ವರ್ಷಕ್ಕೆ ಮಿಜೋರಾಂ ಫುಟ್ಬಾಲ್ ತಂಡವನ್ನು ಸೇರಿ ಉತ್ತಮ ಪ್ರದರ್ಶನ ನೀಡಿ ‘ಮಿಜೋ ಮೆಸ್ಸಿ’ ಎಂದು ಕರೆಸಿಕೊಳ್ಳುತ್ತಾರೆ.

ರಾಷ್ಟ್ರೀಯ ಫುಟ್ಬಾಲ್ ಆಯ್ಕೆ ಸಮಿತಿ ಲಾಲ್ ಚುಂಗ್ ಅವರ ಪ್ರತಿಭೆಯನ್ನು ಗುರುತಿಸಿ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಿಕೊಂಡು ಹೆಚ್ಚಿನ ತರಬೇತಿಗಾಗಿ ಜರ್ಮನಿಗೆ ಕಳುಹಿಸಿಕೊಟ್ಟಿದೆ. ಅಲ್ಲಿ 5 ವರ್ಷ ಲಾಲ್ ಚುಂಗ್ ತರಬೇತಿ ಪಡೆಯಲಿದ್ದಾರೆ. ಯಾವತ್ತಿದ್ದರೂ ಪ್ರತಿಭೆಗೆ ಮನ್ನಣೆ ದೊರೆತೇ ದೊರೆಯುತ್ತದೆ ಎಂಬುದಕ್ಕೆ ಲಾಲ್ ಚುಂಗ್ ಉದಾಹರಣೆಯಾಗಿದ್ದಾರೆ.­

*


ಹರೀಶ್ ದಾಂಡೇವ್
ಕೆಲವು ಸಲ ನಾವು ಯಾವುದೋ ಒತ್ತಡ ಮತ್ತು ಅನಿವಾರ್ಯತೆಗೆ ಸಿಲುಕಿ ಇಷ್ಟವಿಲ್ಲದ ವೃತ್ತಿಯನ್ನು ಅಪ್ಪಿಕೊಂಡಿರುತ್ತೇವೆ. ಆ ಕೆಲಸ ಖುಷಿ ಕೊಡದಿದ್ದರೂ ಅದರೊಟ್ಟಿಗೆ ಕಾಲವನ್ನು ದೂಡಬೇಕಾಗುತ್ತದೆ! ಹೀಗೆ ಎಂಜಿನಿಯರಿಂಗ್ ವೃತ್ತಿ ಇಷ್ಟವಿಲ್ಲದಿದ್ದರೂ ಐದಾರು ವರ್ಷ ದುಡಿದು ನಂತರ ಕೆಲಸಕ್ಕೆ ರಾಜೀನಾಮೆ ಕೊಟ್ಟು ಇಷ್ಟದ ಕೃಷಿ ಕಾಯಕದಲ್ಲಿ ತೊಡಗಿರುವ ಯುವ ಸಾಧಕನ ಕಥೆ ಇದು.

ಹರೀಶ್ ದಾಂಡೇವ್ ರಾಜಸ್ತಾನದ ಜೈಸಲ್ಮರ್ ಪಟ್ಟಣದವರು. ಎಂಜಿನಿಯರಿಂಗ್ ಪದವಿ ಪಡೆದಿದ್ದ ಹರೀಶ್‌ಗೆ ಜೈಸಲ್ಮರ್ ಪಟ್ಟಣ ಪಂಚಾಯ್ತಿಯಲ್ಲಿ ಸರ್ಕಾರಿ ನೌಕರಿ ಸಿಕ್ಕಿತ್ತು. ಅಲ್ಲಿ ಜೂನಿಯರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಅದ್ಯಾಕೋ ಆ ಕೆಲಸ ಹರೀಶ್‌ಗೆ ತೃಪ್ತಿಕೊಟ್ಟಿರಲಿಲ್ಲ. ಹಳ್ಳಿಗೆ ಮರಳಿ ಕೃಷಿ ಮಾಡಬೇಕು ಎಂಬ ಹಂಬಲ ಅವರಲ್ಲಿ ಬಲವಾಗಿತ್ತು. ಅಂದುಕೊಂಡಂತೆ ಕೆಲಸಕ್ಕೆ ರಾಜೀನಾಮೆ ಕೊಟ್ಟು ಹುಟ್ಟೂರಿಗೆ ಮರಳಿದರು.

ಥಾರ್ ಮರುಭೂಮಿಗೆ ಹೊಂದಿಕೊಂಡಿರುವ ತಮ್ಮ ಪಾಳುಬಿದ್ದ ಜಮೀನನ್ನು ಹಸನು ಮಾಡಿ ಕೃಷಿ ಮಾಡಲು ಮುಂದಾದರು. ಜಮೀನಿನಲ್ಲಿ ಕೊಳವೆಬಾವಿಗಳನ್ನು ಕೊರೆಸಿದರು. ಹರೀಶ್ ಅದೃಷ್ಟಕ್ಕೆ ನೀರು ಸಿಕ್ಕಿತು! ಸಾಂಪ್ರದಾಯಿಕ ಕೃಷಿ ಮಾಡುವ  ಬದಲು ಪರ್ಯಾಯ ಬೆಳೆಗೆ ಆದ್ಯತೆ ನೀಡಿದರು. ಗೋಧಿ, ಜೋಳ ಬಿತ್ತನೆ ಮಾಡುವ ಬದಲು ಅಲೋವೆರಾ (ಲೋಳೆಸರ) ಬೆಳೆದರು. ಕೃಷಿ ಹರೀಶ್ ಅವರ ಕೈ ಹಿಡಿಯಿತು. ಪ್ರಸ್ತುತ ಲೋಳೆಸರ ಕೃಷಿಯಲ್ಲಿ ವಾರ್ಷಿಕ 2 ಕೋಟಿ ರೂಪಾಯಿ ವರಮಾನ ಪಡೆಯುತ್ತಿದ್ದಾರೆ.

ಹರೀಶ್ ಬೆಳೆಯುವ ಗುಣಮಟ್ಟದ ಅಲೋವೆರಾ ಎಲೆಗಳು ಅಮೆರಿಕ ಮತ್ತು ಫ್ರಾನ್ಸ್ ದೇಶಕ್ಕೆ ರಫ್ತಾಗುತ್ತಿವೆ. ಪತಂಜಲಿ ಕಂಪೆನಿಯವರು ಹರೀಶ್ ಬೆಳೆಯುತ್ತಿರುವ ಲೋಳೆಸರವನ್ನು ಖರೀದಿಸುತ್ತಿರುವುದು ವಿಶೇಷ. ಹರೀಶ್ ಸಾಧನೆಗೆ ರಾಜಸ್ತಾನ ಸರ್ಕಾರ 2015ರಲ್ಲಿ ‘ಯುವ ಕೃಷಿ ಸಾಧಕ’ ಪ್ರಶಸ್ತಿ ನೀಡಿ ಗೌರವಿಸಿದೆ. ಹರೀಶ್ ಅವರ ಪರ್ಯಾಯ ಕೃಷಿ ಕಾಯಕ ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದೆ.
www.facebook.com/harish.dhandev

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT