ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೃಗಾಲಯದ ಸುತ್ತಮುತ್ತ

Last Updated 15 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಆಡುಮಾತಿನಲ್ಲಿ ‘ಜೂ’ ಎಂದೇ ಕರೆಯಲಾಗುತ್ತಿರುವ ಮೃಗಾಲಯ, ಈಗ ಬಹುತೇಕ ಎಲ್ಲರ ನೆಚ್ಚಿನ ಪ್ರವಾಸಿ ತಾಣ. ಕಾಡಿನಲ್ಲಿರುವ ಪ್ರಾಣಿಗಳನ್ನು ತಂದು ನಿರ್ದಿಷ್ಟ ಜಾಗದಲ್ಲಿ ಇರಿಸಿ ಜನರ ಮುಂದೆ ಅವುಗಳನ್ನು ಪ್ರದರ್ಶಿಸುವ ವೇದಿಕೆ ಅದು.

ಮೃಗಾಲಯಗಳ ಸ್ಥಾಪನೆಯ ಹಿಂದೆ ಪ್ರಾಣಿಗಳ ಅಧ್ಯಯನ ಹಾಗೂ ಅವುಗಳ ಸಂತತಿಯನ್ನು ರಕ್ಷಿಸಿ ಬೆಳೆಸುವ ಉದ್ದೇಶವೂ ಇದೆ. ವಾಣಿಜ್ಯ ಉದ್ದೇಶದ ನಡುವೆಯೇ ಕಾಡು ಪ್ರಾಣಿಗಳ ಜೀವನ ಶೈಲಿಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸವನ್ನೂ ಇವು ಮಾಡುತ್ತಿವೆ.

ಮೃಗಾಲಯಕ್ಕೆ ‘ಜೂ’ ಎಂಬ ಹೆಸರು ಬಂದಿದ್ದು ಎರಡು ಶತಮಾನಗಳ ಹಿಂದೆ. ಅದರ ಮೂಲ ಪದ ಜೂಯ(ಅ)ಲಜಿ (ಪ್ರಾಣಿ ವಿಜ್ಞಾನ). ಅದಕ್ಕೂ ಮುನ್ನ ಇದನ್ನು ಮೃಗೋದ್ಯಾನ (ಜೂವಜಿಕಲ್‌ ಫಾರೆಸ್ಟ್‌) ಅಥವಾ ‘ಮಿನ್ಯಾಜರಿ’ (ಪ್ರಾಣಿ ಸಂಗ್ರಹಾಲಯ) ಎಂದು ಕರೆಯುತ್ತಿದ್ದರು. 1847ರಲ್ಲಿ ಮೊತ್ತಮೊದಲ ಬಾರಿಗೆ ‘ಜೂ’ ಎಂಬ ಪದವನ್ನು ಬ್ರಿಟನ್ನಿನಲ್ಲಿ ಬಳಸಲಾಯಿತು.

ಮೃಗಾಲಯದ ಕಲ್ಪನೆ ಇತ್ತೀಚಿನದ್ದಲ್ಲ. ಅಲೆಮಾರಿಯಾಗಿದ್ದ ಮಾನವ ಒಂದು ಕಡೆ ನೆಲೆ ನಿಂತು ಜೀವಿಸಲು ಯಾವಾಗ ಆರಂಭಿಸಿದನೋ ಅಂದಿನಿಂದಲೇ ತನ್ನ ಆಹಾರ, ದಿನ ನಿತ್ಯದ ಉಪಯೋಗಕ್ಕಾಗಿ ಸಾಧು ಪ್ರಾಣಿಗಳನ್ನು ಸಾಕಲು ಆರಂಭಿಸಿದ್ದ. ನಾಗರಿಕತೆ ಬೆಳೆಯುತ್ತಿದ್ದಂತೆ, ಜನ ಸಿರಿವಂತರಾದರು. ಒಂದೊಂದು ಪ್ರದೇಶಕ್ಕೆ ಒಬ್ಬ ರಾಜ ಎಂಬ ಕಲ್ಪನೆ ಮೊಳಕೆಯೊಡೆಯಿತು.

ರಾಜ ಮನೆತನದವರು ತಮ್ಮ ಪ್ರತಿಷ್ಠೆ, ವೈಭೋಗ, ಮನರಂಜನೆಗಾಗಿ ಬೇರೆ ಬೇರೆ ದಾರಿ ಕಂಡುಕೊಂಡರು. ಕಾಡಿನಲ್ಲಿ ಜೀವಿಸುತ್ತಿದ್ದ ಮೃಗಗಳನ್ನು ಹಿಡಿದು ನಾಡಿಗೆ ತಂದು ಅವುಗಳನ್ನು ಭದ್ರತೆ ಹೊಂದಿದ್ದ ನಿರ್ದಿಷ್ಟ ಸ್ಥಳದಲ್ಲಿ ಸಂಗ್ರಹಿಸಿಡುವ ಪದ್ಧತಿ, ಆ ಕಾಲದ ರಾಜ ಮರ್ಯಾದೆಯ ಭಾಗವಾಗಿತ್ತು.

ಲಭ್ಯವಿರುವ ಸಾಕ್ಷ್ಯಗಳನ್ನು ಆಧರಿಸಿ ಹೇಳುವುದಾರೆ, ಕ್ರಿ.ಪೂ 3500ರಲ್ಲಿ ಈಜಿಪ್ಟ್‌ನ ಹಿರಾಕೊನ್‌ಪೊಲಿಸ್‌ನಲ್ಲಿ ರಾಜರು ವನ್ಯಮೃಗಗಳನ್ನು ಸಂಗ್ರಹಿಸಿಟ್ಟಿದ್ದರು. ಇತ್ತೀಚೆಗೆ ನಡೆಸಲಾಗಿರುವ ಉತ್ಖನನದ ಸಂದರ್ಭದಲ್ಲಿ ನೀರಾನೆ, ಆನೆ, ಕಾಡು ಬೆಕ್ಕು ಸೇರಿದಂತೆ ವಿವಿಧ ಪ್ರಾಣಿಗಳ ಮೂಳೆಗಳು ಪತ್ತೆಯಾಗಿವೆ. ಕ್ರಿ.ಪೂ 1500ರಲ್ಲಿ ಈಜಿಪ್ಟ್‌ನ ರಾಣಿ ಹಟ್ಶೆಪ್‌ಸುಟ್‌ ಪ್ರಾಣಿ ಸಂಗ್ರಹಾಲಯವೊಂದನ್ನು ನಿರ್ವಹಿಸುತ್ತಿದ್ದಳಂತೆ.

ಈಜಿಪ್ಟ್‌ ಮಾತ್ರ ಅಲ್ಲ, ಆ ಕಾಲದಲ್ಲಿ ಜಗತ್ತಿನ ವಿವಿಧ ಕಡೆಗಳಲ್ಲಿ ಕಂಡು ಬಂದಿದ್ದ ಬಹುತೇಕ ಎಲ್ಲ ನಾಗರಿಕತೆಗಳಲ್ಲೂ ಪ್ರಾಣಿ ಸಂಗ್ರಹಾಲಯಗಳಿದ್ದವು ಎಂದು ಹೇಳುತ್ತಾರೆ ಇತಿಹಾಸ ತಜ್ಞರು. ಕ್ರಿ.ಪೂ 11ನೇ ಶತಮಾನದಲ್ಲಿ ಮಧ್ಯ ಅಸ್ಸೀರಿಯಾದ ಚಕ್ರವರ್ತಿ ಅಶರ್‌-ಬೆಲ್‌-ಕಲ ಎಂಬುವವರು ಮೃಗಗಳ ಮತ್ತು ಸಸ್ಯಗಳ ಉದ್ಯಾನ ನಿರ್ಮಿಸಿದ್ದರು.

ಇತ್ತ ಚೀನಾದ ಜೌ ಪ್ರಾಂತ್ಯದ ರಾಜನೊಬ್ಬ ಒಂದೂವರೆ ಸಾವಿರ ಎಕರೆಗಳಷ್ಟು ವಿಸ್ತಾರದ ಮೃಗಾಲಯ ನಿರ್ಮಿಸಿದ್ದ! ಕ್ರಿ.ಪೂ 4ನೇ ಶತಮಾನದ ವೇಳೆಗೆ ಗ್ರೀಸ್‌ನ ಬಹುತೇಕ ನಗರಗಳಲ್ಲಿ ಪ್ರಾಣಿ ಸಂಗ್ರಹಾಲಯವಿತ್ತು.

ನಂತರದ ಕಾಲಘಟ್ಟದಲ್ಲಿ ವಿವಿಧ ದೇಶದ ಅಥವಾ ಪ್ರಾಂತ್ಯದ ರಾಜರು ಬೇರೆ ರಾಜರಿಗೆ ವನ್ಯಮೃಗಗಳನ್ನು ಉಡುಗೊರೆಯಾಗಿ ನೀಡುವ ಸಂಪ್ರದಾಯ ಬೆಳೆದು ಬಂತು. ಕೊಡುಗೆಯಾಗಿ ಸಿಕ್ಕ ಪ್ರಾಣಿಗಳನ್ನು ಅವರು ತಮ್ಮ ಪ್ರಾಣಿ ಸಂಗ್ರಹಾಲಯದಲ್ಲಿ ಇಡುತ್ತಿದ್ದರು. ರಾಜರು ಬೇರೆ ರಾಜರ ವಿರುದ್ಧ ದಂಡೆತ್ತಿ ಹೋದ ಸಂದರ್ಭದಲ್ಲಿ, ಬೇರೆ ರಾಜ್ಯಗಳ ರಾಜರ ಸಂಗ್ರಹದಲ್ಲಿದ್ದ ಪ್ರಾಣಿಗಳನ್ನು ತಮ್ಮ ದೇಶಕ್ಕೆ ತರುತ್ತಿದ್ದರು.

ಬಂಧನದಲ್ಲಿದ್ದ ಪ್ರಾಣಿಗಳ ನಡುವೆ ಸ್ಪರ್ಧೆ ಏರ್ಪಡಿಸಿ ಅಥವಾ ಅವುಗಳ ನಡುವೆ ಕಾಳಗ ಆಯೋಜಿಸಿ ಖುಷಿಪಡುತ್ತಿದ್ದ ರಾಜರೂ ಆ ಕಾಲದಲ್ಲಿ ಇದ್ದರು. ಬ್ರಿಟನ್ನಿನ ರಾಜಮನೆತನ ತಮ್ಮ ಅರಮನೆಯಲ್ಲೇ ಸಾಕಷ್ಟು ವನ್ಯಜೀವಿಗಳನ್ನು ಸಂಗ್ರಹಿಸಿಟ್ಟಿತ್ತು. ಅತಿಥಿ ರಾಜರಿಗೆ ಪ್ರಾಣಿಗಳನ್ನು ಉಡುಗೊರೆಯಾಗಿ ಕೊಡುವ ಪದ್ಧತಿ ಬ್ರಿಟನ್‌ ರಾಜರ ಕಾಲದಲ್ಲಿ ಜನಪ್ರಿಯಗಳಿಸಿತು.

ಇಲ್ಲಿ ಒಂದು ಗಮನಿಸಬೇಕಾದ ಪ್ರಮುಖ ಅಂಶ ಎಂದರೆ, ಈ ಸಂಗ್ರಹಾಲಯಗಳಿಗೆ ಸಾರ್ವಜನಿಕರಿಗೆ ಪ್ರವೇಶ ಇರಲಿಲ್ಲ. ಅವುಗಳು ರಾಜಮನೆತನದ ಮೋಜಿಗಾಗಿ ಮಾತ್ರ ಮೀಸಲಾಗಿದ್ದವು.

ಸಾರ್ವಜನಿಕರು ಪ್ರಾಣಿ ಸಂಗ್ರಹಾಲಯಗಳಿಗೆ ಪ್ರವೇಶ ಪಡೆಯಲು 16ನೇ ಶತಮಾನದವರೆಗೆ ಕಾಯಬೇಕಾಯಿತು. ಬ್ರಿಟನ್‌ ರಾಣಿ ಒಂದನೇ ಎಲಿಜಬೆತ್‌ ಅವರ ಆಡಳಿತದ ಅವಧಿಯಲ್ಲಿ ಜನರಿಗೆ ಈ ಮೃಗಾಲಯಗಳಿಗೆ ಪ್ರವೇಶಿಸಲು ಅವಕಾಶ ನೀಡಲಾಯಿತು.

ಪುನರುಜ್ಜೀವನದ ಅವಧಿಯಲ್ಲಿ (14ರಿಂದ 17ನೇ ಶತಮಾನ) ಪ್ರಾಣಿ ಸಂಗ್ರಹಾಲಯದ ಕಲ್ಪನೆ ಇನ್ನಷ್ಟು ವಿಸ್ತಾರಗೊಂಡಿತು. ಪ್ರಾಣಿಗಳ ಅಧ್ಯಯನಕ್ಕೂ ಅವುಗಳನ್ನು ಬಳಸಲು ವಿಜ್ಞಾನಿಗಳು ಆರಂಭಿಸಿದರು. ಆಧುನಿಕ ಮೃಗಾಲಯದ ಕಲ್ಪನೆ ಮೊಳೆತಿದ್ದು ಈ ಅವಧಿಯಲ್ಲಿ. ಅದು ಪ್ರವರ್ಧಮಾನಕ್ಕೆ ಬಂದಿದ್ದು 18ನೇ ಶತಮಾನದಲ್ಲಿ.

ಆಸ್ಟ್ರಿಯಾದ ವಿಯೆನ್ನಾದಲ್ಲಿರುವ ಟಯರ್‌ಗಾರ್ಟನ್‌ ಶೊನ್‌ಬ್ರುನ್‌ ಮೃಗಾಲಯವು ಈಗಲೂ ಅಸ್ತಿತ್ವದಲ್ಲಿರುವ ಜಗತ್ತಿನ ಅತ್ಯಂತ ಹಳೆಯ ಮೃಗಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 1752ರಲ್ಲಿ ರೋಮನ್‌ ಚಕ್ರವರ್ತಿ, ಒಂದನೇ ಫ್ರಾನ್ಸಿಸ್‌ ಕಾಲದಲ್ಲಿ ಈ ಮೃಗಾಲಯ ನಿರ್ಮಿಸಲಾಗಿತ್ತು. ಆರಂಭದಲ್ಲಿ ಇದು ರಾಜಮನೆತನ ಮತ್ತು ನ್ಯಾಯದಾನ ಮಾಡುವವರಿಗೆ (ಕೋರ್ಟ್‌) ಮಾತ್ರ ಮೀಸಲಾಗಿತ್ತು. 1765ರಲ್ಲಿ ಇದನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿತ್ತು.

19ನೇ ಶತಮಾನದ ಆರಂಭದಲ್ಲಿ ಲಂಡನ್‌, ಪ್ಯಾರಿಸ್‌ ಮತ್ತು ಡಬ್ಲಿನ್‌ಗಳಲ್ಲಿ ಆಧುನಿಕ ಮೃಗಾಲಯಗಳು ತಲೆ ಎತ್ತಿದವು. ಲಂಡನ್‌ ನಗರೀಕರಣಗೊಂಡಿದ್ದರಿಂದ ಸಾರ್ವಜನಿಕರಿಗೆ ಮನರಂಜನೆ ನೀಡುವ ತಾಣಗಳ ಅಭಿವೃದ್ಧಿಗೆ ಹೆಚ್ಚು ಬೇಡಿಕೆ ಬಂತು. ಜೊತೆಗೆ ಪರಿಸರ ವ್ಯವಸ್ಥೆ ಮತ್ತು ಜೀವಜಗತ್ತಿನ ಬಗ್ಗೆ ಜನರಿಗಿದ್ದ, ಅದರಲ್ಲೂ ವಿಜ್ಞಾನಿಗಳಿಗಿದ್ದ ಕುತೂಹಲ ಮೃಗಾಲಯದ ಸ್ಥಾಪನೆಗೆ ನಾಂದಿ ಹಾಡಿತು.

ಮೃಗಾಲಯ ಸ್ಥಾಪಿಸುವುದಕ್ಕಾಗಿಯೇ 1826ರಲ್ಲಿ ಲಂಡನ್‌ ಜೂಯಾಲಜಿ ಸೊಸೈಟಿ ಆಫ್‌ ಲಂಡನ್‌ ಅಸ್ತಿತ್ವಕ್ಕೆ ಬಂತು. ಎರಡು ವರ್ಷಗಳ ತರುವಾಯ ಅಂದರೆ 1828ರಲ್ಲಿ ಲಂಡನ್‌ನ ರೆಜೆಂಟ್‌ ಉದ್ಯಾನದಲ್ಲಿ ಲಂಡನ್ ಮೃಗಾಲಯ ಸ್ಥಾಪನೆಗೊಂಡಿತು. ಇದು ಜಗತ್ತಿನ ಮೊತ್ತ ಮೊದಲ ವೈಜ್ಞಾನಿಕ ಮೃಗಾಲಯ. ಅಮೆರಿಕ ಸೇರಿದಂತೆ ವಿವಿಧ ದೇಶಗಳು ಲಂಡನ್‌ ಮಾದರಿಯನ್ನೇ ಅನುಸರಿಸಿ ತಮ್ಮ ಪ್ರಮುಖ ನಗರಗಳಲ್ಲಿ ಮೃಗಾಲಯಗಳನ್ನು ನಿರ್ಮಿಸಿದವು.

20ನೇ ಶತಮಾನದ ಆರಂಭದಲ್ಲಿ ಮೃಗಾಲಯಗಳ ವಿನ್ಯಾಸದಲ್ಲಿ ಭಾರಿ ಬದಲಾವಣೆಗಳಾದವು. ಅದುವರೆಗೆ ಪ್ರಾಣಿಗಳನ್ನು ಕೂಡಿಹಾಕಲು ಪಂಜರಗಳನ್ನು ಬಳಸಲಾಗುತ್ತಿತ್ತು. ಅವುಗಳಲ್ಲಿ ಹೆಚ್ಚು ಸ್ಥಳಾವಕಾಶ ಇರಲಿಲ್ಲ. 1907ರಲ್ಲಿ ಜರ್ಮನಿಯ ಹಮ್‌ಬರ್ಗ್‌ನಲ್ಲಿ ಕಾರ್ಲ್‌ ಹ್ಯಾಗೆನ್‌ಬೆಕ್‌ ಎಂಬ ಉದ್ಯಮಿ ವಿನೂತನ ಶೈಲಿಯಲ್ಲಿ ಹೊಸ ಮೃಗಾಲಯವನ್ನು ನಿರ್ಮಿಸಿದರು. ವನ್ಯಪ್ರಾಣಿಗಳಿಗೆ ಓಡಾಡಲು ಸಾಕಷ್ಟು ಜಾಗ ಬಿಟ್ಟು ಸುತ್ತಲೂ ಬೃಹತ್‌ ಕಂದಕಗಳನ್ನು ಅವರು ನಿರ್ಮಿಸಿದ್ದರು (ಈಗಿನ ಬಹುತೇಕ ಮೃಗಾಲಯಗಳು ಇದೇ ಮಾದರಿಯಲ್ಲೇ ಇವೆ).

ಸಫಾರಿ ಉದ್ಯಾನ, ಬೃಹತ್‌ ಜೈವಿಕ ಉದ್ಯಾನಗಳೆಲ್ಲ ನಂತರದ ಪರಿಕಲ್ಪನೆಗಳು. 1931ರಲ್ಲಿ ಇಂಗ್ಲೆಂಡ್‌ನಲ್ಲಿ ಮೊದಲ ಸಫಾರಿ ಉದ್ಯಾನ ಆರಂಭವಾಯಿತು. 1970ರ ದಶಕದಲ್ಲಿ ಜಗತ್ತಿನ ಹಲವು ಮೃಗಾಲಯಗಳ ಆಡಳಿತ ಮಂಡಳಿಗಳು ಪ್ರಾಣಿಗಳ ಸಂರಕ್ಷಣೆ ಮತ್ತು ಅವುಗಳ ಸಂತತಿ ಅಭಿವೃದ್ಧಿಯ ಕಡೆಗೂ ಗಮನ ಕೊಡಲು ಆರಂಭಿಸಿದವು.

ಅಭಿವೃದ್ಧಿ ನೆಪದಲ್ಲಿ ಅರಣ್ಯನಾಶ ಅವ್ಯಾಹತವಾಗಿ ನಡೆಯುತ್ತಿರುವ ಈ ಕಾಲಘಟ್ಟದಲ್ಲಿ ಮೃಗಾಲಯಗಳು, ಜೈವಿಕ ಉದ್ಯಾನವನಗಳು ವನ್ಯಜೀವಿಗಳಿಗೆ ಸುರಕ್ಷಿತ ನೆಲೆಯಾಗಿವೆ ಎಂದು ಹೇಳಿದರೆ, ಅದು ಉತ್ಪ್ರೇಕ್ಷೆಯ ಮಾತಾಗದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT