ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಿಂಕೆ ಮರಿ’ಯ ಹೊಸ ರೂಪ

Last Updated 15 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

‘ಜಿಂಕೆ ಮರೀನಾ ನೀ ಜಿಂಕೆ ಮರೀನಾ’ ಹಾಡಿನ ಮೂಲಕವೇ ಹೆಚ್ಚು ಪರಿಚಿತರಾದವರು ನಟಿ ನಂದಿತಾ ಶ್ವೇತಾ. ‘ನಂದ ನಂದಿತಾ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟು ಇದೀಗ ತಮಿಳು, ತೆಲುಗು ಭಾಷೆಗಳಲ್ಲಿ ಸಾಲುಸಾಲು ಸಿನಿಮಾಗಳ ಅವಕಾಶವನ್ನು ಬಾಚಿಕೊಂಡಿದ್ದಾರೆ. ಹೊಸ ಗೆಟಪ್‌ನಲ್ಲಿ ಮಿಂಚುತ್ತಿರುವ ನಂದಿತಾ ಶ್ವೇತಾ ‘ಕಾಮನಬಿಲ್ಲು’ ಜೊತೆ ಹರಟಿದ್ದು ಹೀಗೆ...

* ಕೆಲವರು ಶ್ವೇತಾ ಎನ್ನುತ್ತಾರೆ, ಕೆಲವರು ನಂದಿತಾ ಎಂದು ಕರೆಯುತ್ತಾರೆ. ನಿಮ್ಮ ನಿಜ ನಾಮ ಯಾವುದು?
ನನ್ನ ಹೆಸರು ಶ್ವೇತಾ. ಆದರೆ ಕನ್ನಡದಲ್ಲಿ ನಂದ ನಂದಿತಾ ಸಿನಿಮಾದಲ್ಲಿ ನಟಿಸಿದ ನಂತರ ನಂದಿತಾ ಶ್ವೇತಾ ಎಂದು ಕರೆಯಲು ಶುರು ಮಾಡಿದರು. ಅದೇ ನನ್ನ ಹೆಸರೂ ಆಯಿತು. ಆದರೆ ನನ್ನನ್ನು ನೋಡಿದಾಕ್ಷಣ ‘ಜಿಂಕೆ ಮರೀನಾ’ ಅನ್ನೋರೇ ಹೆಚ್ಚು. 

*ಸಿನಿಮಾಗೆ ಬರುವ ಮುನ್ನ ರ‍್ಯಾಂಪ್ ಮೇಲೂ ಮಿಂಚಿದ್ದಿರಂತೆ?
ಹೌದು. ಚಿತ್ರರಂಗಕ್ಕೆ ಬರುವ ಮುನ್ನ ಮಾಡೆಲಿಂಗ್‌ ಕ್ಷೇತ್ರದಲ್ಲಿದ್ದೆ. ಮಾಡೆಲಿಂಗ್ ಜೊತೆ ನಟನೆ ಕಡೆಗೂ ಮನಸ್ಸಿತ್ತು. ಹವ್ಯಾಸವಾಗಿ ನಟಿಸುವುದಕ್ಕೆ ಬಂದೆ. ಅದೇ ನನಗೆ ವೃತ್ತಿಯೂ ಆಯಿತು.

* ಮೊದಲ ಬಾರಿಯೇ ಪಟಪಟ ಡೈಲಾಗ್ ಹೇಳಿದ್ದಿರಲ್ಲ?
ಮೊದಲು ಟಿ.ವಿ ವಾಹಿನಿಯೊಂದರ ಕಾರ್ಯಕ್ರಮಕ್ಕೆ ಆಡಿಷನ್‌ಗೆ ಹೋಗಿದ್ದೆ. ಇಷ್ಟುದ್ದದ ಡೈಲಾಗ್‌ ಹೇಳಲು ಕೊಟ್ಟರು. ಒಂದೇ ಟೇಕ್‌ಗೆ ಹೇಳಿ ಮುಗಿಸಿದೆ. ಓಕೆ ಆಯ್ತು. ಆಗ ಆಡಿಷನ್‌ ತೆಗೆದುಕೊಂಡ ಮಹೇಶ್‌ ಹೇಳಿದ್ದರು, ‘ನಿನಗೆ ಈ ಚಿತ್ರರಂಗದಲ್ಲಿ ಭವಿಷ್ಯ ಇದೆ’ ಅಂತ.

*‘ಗಂಡುಬೀರಿ ನಂದಿತಾ’ ಅನ್ನೋ ಹೆಸರಿದೆಯಂತೆ ನಿಮಗೆ?
ಶಾಲೆಯಲ್ಲಿದ್ದಾಗ ತುಂಬ ಸೌಮ್ಯ ಸ್ವಭಾವದ ಹುಡುಗಿ ಆಗಿದ್ದೆ. ಶಾಯಿರಿ ಬರೆದು ಓದುತ್ತಿದ್ದೆ. ಕಾಲೇಜಿಗೆ ಬಂದಿದ್ದೇ ಅದೇನಾಯಿತೋ ಗಂಡುಬೀರಿಯಂತಾದೆ. ಹುಡುಗರೊಂದಿಗೆ ಸಾಕಷ್ಟು ಜಗಳ ಮಾಡಿಕೊಳ್ಳುತ್ತಿದ್ದೆ.

*ತಮಿಳು –ತೆಲುಗು ಸಿನಿಮಾಗಳಲ್ಲಿನ ನಿಮ್ಮ ಹಾದಿಯ ಬಗ್ಗೆ ಹೇಳಿ.
ತೆಲುಗಿನಲ್ಲಿ ಎರಡು ಸಿನಿಮಾಗಳನ್ನು ಮಾಡಿದ್ದೇನೆ. ತಮಿಳಿನಲ್ಲಿ ಹದಿಮೂರು ಸಿನಿಮಾಗಳಲ್ಲಿ ನಟಿಸಿದ್ದೇನೆ. ತಮಿಳಿನಲ್ಲಿ ನಾಲ್ಕು ಸಿನಿಮಾಗಳು ಸೂಪರ್‌ ಹಿಟ್‌ ಆಗಿವೆ. ಸದ್ಯ ನಾಲ್ಕು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ.

*ಕ್ಯಾಮೆರಾ ಒಂದು ಕಡೆ ಇದ್ದರೆ, ನೀವೇ ಒಂದು ಕಡೆ ನಿಲ್ಲುತ್ತೀರಂತಲ್ಲ...
ತಮಿಳಿನಲ್ಲಿ ಮೊದಲು ಸಿನಿಮಾ ಮಾಡುವಾಗ ಕ್ಯಾಮೆರಾ ಒಂದು ಕಡೆ ಇದ್ದರೆ ನಾನು ಮತ್ತೊಂದು ಕಡೆ ತಿರುಗಿ ಸಂಭಾಷಣೆ ಹೇಳುತ್ತಿದ್ದೆ. ಆಗ ಸೆಟ್‌ನಲ್ಲಿ ಎಲ್ಲರೂ ನಕ್ಕಿದ್ದರು. ಈಗಲೂ ಆ ರೀತಿ ಆಗುವುದು ನಿಂತಿಲ್ಲ.

*ನಿಮ್ಮ ಬಗ್ಗೆ ನಿಮಗಾಗುವ ಖುಷಿ...
ಕನ್ನಡದ ಒಂದಿಬ್ಬರು ಹಿರಿಯ ನಟಿಯರು ನನ್ನ ಸಿನಿಮಾಗಳ ಬಗ್ಗೆ, ನಟನೆಯ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಆಗ ಬಹಳ ಖುಷಿ ಆಯ್ತು. ಅದೇ ನನ್ನ ಬಗ್ಗೆ ನನಗಾಗುವ ಸಂತೋಷ.

* ರವಿಚಂದ್ರನ್ ಅವರೆಂದರೆ ತುಂಬಾ ಇಷ್ಟವಂತೆ?
ಹೌದು. ರವಿಚಂದ್ರನ್‌ ಅವರೆಂದರೆ ತುಂಬಾ ಇಷ್ಟ. ಅವರೇ ನನ್ನ ಫಸ್ಟ್‌ ಕ್ರಶ್‌. ಫಸ್ಟ್‌ ಈಸ್‌ ದಿ ಬೆಸ್ಟ್‌ ಅಂತಾರಲ್ಲ ಹಾಗೆ. ಈವತ್ತಿಗೂ ಅವರನ್ನು ಮೀರಿಸಿದವರಿಲ್ಲ.

*ನಿಮ್ಮ ನೆಚ್ಚಿನ ನಟ ಇನ್ಯಾರಿದ್ದಾರೆ?
ಪುನೀತ್‌ ರಾಜಕುಮಾರ್. ಅವರ ಜೊತೆ ಸಿನಿಮಾ ಮಾಡಲು ಅವಕಾಶ ಸಿಕ್ಕರೆ ಏನೇ ಕೆಲಸ ಇದ್ದರೂ ಬಿಟ್ಟು ಬರುತ್ತೇನೆ.

* ನಿಮ್ಮನ್ನು ಪ್ರೇರೇಪಿಸುವ ಸಂಗತಿಗಳು?
ಬದುಕಿನಲ್ಲಿ ನಾವು ಗೌರವದಿಂದ ಸ್ವೀಕರಿಸುವ ವೃತ್ತಿ ಎಂದಿಗೂ ನಮ್ಮ ಕೈ ಹಿಡಿಯುತ್ತದೆ.

* ದೀಪಿಕಾ ಪಡುಕೋಣೆ ಫ್ಯಾನ್ ಅಂತಲ್ಲ ನೀವು?
ಯಾವ ಟೀಕೆಗೂ ಕೇರ್‌ ಮಾಡದಂಥ ದೀಪಿಕಾ ಅವರ ಸ್ವಭಾವ ನನಗೆ ಇಷ್ಟ. ಅವರು ಬೇರೆ ಮಾಡೆಲ್‌ಗಳು ತೊಟ್ಟ ಉಡುಗೆ ತೊಡುತ್ತಾರೆಂಬ ಟೀಕೆ ಇದೆ. ಆದರೆ ನಾವು ಯಾವುದೇ ಉಡುಗೆಯಲ್ಲಿ ಹೇಗೆ ಕಾಣುತ್ತೇವೆಂಬುದು ಮುಖ್ಯ.

* ಕನ್ನಡ ಸಿನಿಮಾರಂಗಕ್ಕೆ ವಾಪಸ್ಸು ಬರುವ ಯೋಚನೆ?
ಯಾಕಿಲ್ಲ? ಇದೆ. ಕನ್ನಡ ನನ್ನ ಭಾಷೆ ಕನ್ನಡ ಸಿನಿಮಾ ಮಾಡೋಲ್ಲ ಅನ್ನೋದುಂಟೆ? ತಮಿಳಿನಲ್ಲಿ ಸೂಪರ್‌ ಹಿಟ್‌ ಆದ ನನ್ನ ಕೆಲವು ಸಿನಿಮಾಗಳು ಕನ್ನಡಕ್ಕೆ ರೀಮೇಕ್‌ ಆಗಿವೆ.

* ಕನ್ನಡದ ಅಭಿಮಾನಿಗಳು ಏನ್‌ ಅಂತಾರೆ?
ಫೇಸ್‌ಬುಕ್‌ ಮೂಲಕ ಸಂದೇಶ ಕಳುಹಿಸುತ್ತಾರೆ.  ಕನ್ನಡದಲ್ಲಿ ಯಾವಾಗ ಸಿನಿಮಾ ಮಾಡುವಿರಿ ಎಂದು ಕೇಳುತ್ತಿರುತ್ತಾರೆ. 

* ನಟನೆಯಲ್ಲಿನ ನಿಮ್ಮ ಪ್ಲಸ್ ಪಾಯಿಂಟ್?
ಪ್ರತಿ ಸಿನಿಮಾ ಮಾಡುವಾಗ ಇದು ನನ್ನ ಮೊದಲ ಸಿನಿಮಾ ಎಂದೇ ಭಾವಿಸಿ ನಟಿಸುತ್ತೇನೆ. 

* ಸಿನಿಮಾ ಬಿಟ್ಟು ಬೇರೆ ಹವ್ಯಾಸ?
ಪುಸ್ತಕ ಓದುವುದು ಇಷ್ಟ. ರೊಮ್ಯಾಂಟಿಕ್‌ ಪುಸ್ತಕಗಳೆಂದರೆ ಅಚ್ಚುಮೆಚ್ಚು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT