ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಲಭ ಕಲಿಕೆಗೆ ಅಕ್ಷರದ ಸಖ್ಯ

Last Updated 15 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಪ್ರತಿಯೊಂದು ಮಗುವಿಗೂ ಪ್ರಾಥಮಿಕ ಹಂತದಲ್ಲಿ ಉತ್ತಮ ಶಿಕ್ಷಣ ದೊರೆತರೆ, ಮುಂದಿನ ವಿದ್ಯಾಭ್ಯಾಸಕ್ಕೆ ಅದೇ ಭದ್ರಬುನಾದಿಯಾಗಿರುತ್ತದೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು, ಮುಂದೊಂದು ದಿನ ನಮ್ಮ ಮಕ್ಕಳೂ ಈ ಪೈಪೋಟಿ ಯುಗದಲ್ಲಿ ಈಸಿ ಜೈಸಬೇಕು ಎಂಬ ಉದ್ದೇಶ ಹೆತ್ತವರಿಗೆ ಇದ್ದೇ ಇರುತ್ತದೆ. ಅದಕ್ಕಾಗಿ ದುಬಾರಿ ಶುಲ್ಕವನ್ನು ತೆತ್ತು ಪ್ರತಿಷ್ಠಿತ ಶಾಲೆಗಳಲ್ಲಿ ಮಕ್ಕಳನ್ನು ಓದಿಸುವ ವರ್ಗ ಒಂದೆಡೆಯಾದರೆ, ಸರ್ಕಾರಿ ಶಾಲೆಗಳನ್ನೇ ನೆಚ್ಚಿಕೊಂಡು ಮಕ್ಕಳನ್ನು ಓದಿಸುವ ಬಡ ಮತ್ತು ಮಧ್ಯಮ ವರ್ಗದವರು ಇನ್ನೊಂದೆಡೆ.  

ಹೀಗಿರುವಾಗ, ರಾಜ್ಯದಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ  ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸಬೇಕೆಂಬ ಉದ್ದೇಶದಿಂದ ಅಕ್ಷರ ಫೌಂಡೇಶನ್ ಎಂಬ ಸಾರ್ವಜನಿಕ ದತ್ತಿ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ.

ಬೆಂಗಳೂರಿನಲ್ಲಿರುವ ಅಕ್ಷರ ಸಂಸ್ಥೆ ಆರಂಭಗೊಂಡಿದ್ದು 2000ರಲ್ಲಿ. ಕರ್ನಾಟಕದೆಲ್ಲೆಡೆ ಇರುವ ಸರ್ಕಾರಿ ಪ್ರಾಥಮಿಕ ಶಾಲೆಗಳ ಮಕ್ಕಳ ಶಿಕ್ಷಣಕ್ಕೆ ಪೂರಕವಾಗುವ ಕೆಲಸಗಳನ್ನು ಮಾಡುವ ನಿಟ್ಟಿನೊಂದಿಗೆ ಹುಟ್ಟಿಕೊಂಡಿದ್ದು ಈ ಸಂಸ್ಥೆ. ಶೈಕ್ಷಣಿಕ ಅಭಿವೃದ್ಧಿಯೇ ಸಮಾಜದ ಏಳಿಗೆಗೆ ಪೂರಕವಾದ ಅಂಶ ಎಂಬುದನ್ನು ನಂಬಿ ಅದಕ್ಕೆ ಅವಶ್ಯಕ ದಾರಿಯಲ್ಲಿ ಹೆಜ್ಜೆ ಇಡಲು ಆರಂಭಿಸಿತು. ಇದಕ್ಕೆ ಸಹಾಯವಾಗುವಂತೆ ಕಾರ್ಯ ಯೋಜನೆಗಳನ್ನೂ ರೂಪಿಸಿತು.
ಅಕ್ಷರ ಗಣಿತ- ಗಣಿತಕ್ಕೆ ಕಿಟ್

ಗಣಿತ ಕಠಿಣ ವಿಷಯ ಎಂಬುದು ಮಕ್ಕಳಲ್ಲಿರುವ ಸಹಜ ಅಭಿಪ್ರಾಯ. ಆದರೆ ಗಣಿತವನ್ನು ಸರಳವಾಗಿಸುವ ಮೂಲಕ ಮಕ್ಕಳನ್ನು ಆ ವಿಷಯದೆಡೆಗೆ ಆಸಕ್ತಿ ವಹಿಸುವಂತೆ ಮಾಡುವುದು ಸಂಸ್ಥೆಯ ಮುಂದಿದ್ದ ಮೊದಲ ಸವಾಲಾಗಿತ್ತು. ಆದ್ದರಿಂದ ಚಟುವಟಿಕೆ ಆಧಾರಿತ ಕಲಿಕೆಯನ್ನು ಉತ್ತೇಜಿಸುವ ಮತ್ತು ಗಣಿತ ಕೌಶಲ್ಯವನ್ನು ಬೆಳೆಸಲು ಸಹಕಾರಿಯಾಗುವ ಸಾಮಗ್ರಿಗಳನ್ನು ರೂಪಿಸಿ ಮಕ್ಕಳಿಗೆ ನೀಡಲು ಸಂಸ್ಥೆಯ ಸದಸ್ಯರು ಮುಂದಾದರು.

ಇದರ ಮೊದಲ ಹೆಜ್ಜೆಯಾಗಿ 1ನೇ ತರಗತಿಯಿಂದ 5ನೇ ತರಗತಿವರೆಗಿನ ಮಕ್ಕಳಿಗೆ ಗಣಿತವನ್ನು ಪರಿಣಾಮಕಾರಿಯಾಗಿ ಬೋಧಿಸಲು ಅವಶ್ಯಕವಿರುವ ಸಾಮಗ್ರಿಗಳ ಕಿಟ್ ನೀಡಲು ಆರಂಭಿಸಿದರು.

ಗಣಿತದೆಡೆಗಿನ ಮಕ್ಕಳ ಭೀತಿಯನ್ನು ಹೋಗಲಾಡಿಸಿ ಗಣಿತವನ್ನು ಸುಲಲಿತವಾಗಿ ಕಲಿಯುವುದಕ್ಕೆ ಪೂರಕವಾಗಿ ವೈಜ್ಞಾನಿಕವಾಗಿ ಕಿಟ್ ರೂಪಿತಗೊಂಡಿದೆ. ಈ ಕಿಟ್‌ನಲ್ಲಿರುವ ಕಲಿಕಾ ಸಾಮಗ್ರಿಗಳನ್ನು ಪ್ರಾರಂಭಿಕ ಹಂತದಲ್ಲಿ ಲೆಕ್ಕಗಳನ್ನು ಮಾಡಲು ಬಳಸಲಾಗುತ್ತದೆ.

ಈ ರೀತಿ ಲೆಕ್ಕ ಮಾಡಿದ ನಂತರ ಅದನ್ನೇ ಪುಸ್ತಕದಲ್ಲಿ ಬರೆಯಲಾಗುತ್ತದೆ. ಪಠ್ಯಕ್ಕಷ್ಟೇ ಅಲ್ಲ, ಆಡಾಡುತ್ತಲೇ ಕಲಿಯುವ ಗಣಿತ ಸಂಬಂಧಿತ ಆಟ ಮತ್ತು ದೈನಂದಿನ ಜೀವನದಲ್ಲಿ ಅನ್ವಯಿಸುವ ಲೆಕ್ಕದ ಸಮಸ್ಯೆಗಳನ್ನು ನೀಡಿ ಮಕ್ಕಳಿಗೆ ಗಣಿತ ಹೇಳಿಕೊಡಲಾಗುತ್ತದೆ.

ಗಣಿತ ಕಲಿಕಾ ಆಂದೋಲನ: 2014ರಲ್ಲಿ ಅಕ್ಷರ ಫೌಂಡೇಶನ್ ಆರಂಭಿಸಿದ ಮಹತ್ತರವಾದ ಯೋಜನೆ ಗಣಿತ ಕಲಿಕಾ ಆಂದೋಲನ. ಗಣಿತ ಕಲಿಕೆಯನ್ನು ಸುಲಭವಾಗಿಸಲು ಪ್ರತಿಯೊಂದು ಶಾಲೆಗೂ ಗಣಿತ ಕಲಿಕಾ ಸಾಮಗ್ರಿಗಳನ್ನು ನೀಡಲಾಗುತ್ತಿದೆ. ಮಕ್ಕಳಿಗೆ ಕಲಿಸುವ ಮೊದಲು ಶಿಕ್ಷಕರಿಗೆ ಅಕ್ಷರ ಗಣಿತದ ಬೋಧನಾ ರೀತಿ, ಕಲಿಕಾ ವಿಧಾನ ಮತ್ತು ಕಿಟ್‌ನಲ್ಲಿರುವ ಸಾಮಗ್ರಿಗಳನ್ನು ಬಳಸುವ ವಿಧಾನದ ಕುರಿತು ತರಬೇತಿ ನೀಡಲಾಗುತ್ತದೆ.ನಂತರ ಅವರು ಮಕ್ಕಳಿಗೆ ಹೇಳಿಕೊಡುತ್ತಾರೆ.

ಈಗಾಗಲೇ ಸಾಕಷ್ಟು ಶಾಲೆಗಳಿಗೆ ಕಿಟ್‌ಗಳನ್ನು ವಿತರಿಸಿದ್ದು, ಮುಂದಿನ ದಿನಗಳಲ್ಲಿ ಕರ್ನಾಟಕದ ಎಲ್ಲಾ 46,000 ಪ್ರಾಥಮಿಕ ಶಾಲೆಗಳನ್ನು ಈ ಆಂದೋಲನದ ಕಾರ್ಯವ್ಯಾಪ್ತಿಗೆ ಒಳಪಡುವಂತೆ ಮಾಡುವ ಉದ್ದೇಶವನ್ನು ಅಕ್ಷರ ಫೌಂಡೇಷನ್ ಹೊಂದಿದೆ. ಕಳೆದ 15 ವರ್ಷಗಳಲ್ಲಿ  1 ಲಕ್ಷ ಮಕ್ಕಳು ಈ ಕಾರ್ಯಕ್ರಮದ ಫಲಾನುಭವಿಗಳಾಗಿದ್ದಾರೆ.

‘ಅಕ್ಷರ ಗಣಿತ’ ಕಾರ್ಯಕ್ರಮವಲ್ಲದೇ ಮಕ್ಕಳ ಶೈಕ್ಷಣಿಕ ಪ್ರಗತಿಗೆ ನೆರವಾಗುವ ಇನ್ನಷ್ಟು ಯೋಜನೆಗಳನ್ನೂ ಸಂಸ್ಥೆ ಕೈಗೊಂಡಿದೆ. ಓದುವ ಅಭ್ಯಾಸವನ್ನು ಪಕ್ವಗೊಳಿಸುವ ‘ಓದುವೆ ನಾನು’ ಯೋಜನೆ, ಇಂಗ್ಲಿಷ್ ಭಾಷಾ ಕಲಿಕೆಯನ್ನು ರೂಢಿಸಿಕೊಳ್ಳಲು ನೆರವಾಗುವ ‘ಸ್ವಲ್ಪ ಇಂಗ್ಲಿಷ್ ತುಂಬಾ ಫನ್’ ಪರಿಕಲ್ಪನೆ, ಮಕ್ಕಳಲ್ಲಿ ಪುಸ್ತಕಗಳನ್ನು ಓದುವ ಅಭ್ಯಾಸವನ್ನು ಮೂಡಿಸುವ ಉದ್ದೇಶದಿಂದ ‘ಕ್ಲಾಸ್‌ರೂಂ ಲೈಬ್ರರಿ’ ಹೀಗೆ ಸಾಕಷ್ಟು ಯೋಜನೆಗಳೊಂದಿಗೆ ಸಂಸ್ಥೆ ಕೆಲಸ ಮಾಡುತ್ತಿದೆ. ರಾಜ್ಯದ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯೊಂದಿಗೆ ಸಹಭಾಗಿತ್ವದಲ್ಲಿ ಕೆಲಸ ನಿರ್ವಹಿಸುತ್ತಿದೆ ಅಕ್ಷರ ಫೌಂಡೇಷನ್.

ಗಣಿತ ಕಲಿಕಾ ವಿಧಾನ
‘ಆಡಿ ಕಲಿ, ಮಾಡಿ ತಿಳಿ’ ಎಂಬ  ತತ್ವ ಆಧಾರಿತ ಕಾರ್ಯಕ್ರಮ ಇದಾಗಿದ್ದು ಇಲ್ಲಿ ಮಕ್ಕಳಿಗೆ ಗಣಿತ ಪರಿಕಲ್ಪನೆಗಳ ಸಹಾಯ ಮಾಡಲು ಸಿಆರ್ ಎ Concrete, Representational, and Abstract ( ಮೂರ್ತ- ಪ್ರಾತಿನಿಧ್ಯಾತ್ಮಕ- ಅಮೂರ್ತ) ವಿಧಾನವನ್ನು ಬಳಸಿಕೊಳ್ಳಲಾಗಿದೆ.
ಮೊದಲ ಹಂತದಲ್ಲಿ ಮಕ್ಕಳು ಮೂರ್ತ ಕಲಿಕಾ ಉಪಕರಣಗಳನ್ನು ಬಳಸಿಕೊಂಡು ಕಲಿಯುತ್ತಾರೆ. ಹೀಗೆ ಕಲಿಯುವುದರಿಂದ ಅವರಿಗೆ ಪರಿಕಲ್ಪನೆಗಳ ಸ್ಪಷ್ಟತೆ ಮೂಡುತ್ತದೆ. ನಂತರದ ಹಂತ ಪ್ರಾತಿನಿಧ್ಯಾತ್ಮಕ ಹಂತ.

ಇದರಲ್ಲಿ ಚೌಕಳಿ ಪುಸ್ತಕಗಳ ಬಳಕೆಯ ಮೂಲಕ ಪ್ರಾತಿನಿಧ್ಯಾತ್ಮಕತೆಗೆ ಒತ್ತು ನೀಡಲಾಗುತ್ತದೆ. ಪ್ರತಿಯೊಂದು ಪರಿಕಲ್ಪನೆಯನ್ನು ಚೌಕಳಿ ಪುಸ್ತಕದಲ್ಲಿ ಕಾರ್ಯ ವಿಧಾನದ ಮೂಲಕ ಸ್ಪಷ್ಟಪಡಿಸಲಾಗುತ್ತದೆ. ಅಮೂರ್ತ ಹಂತದಲ್ಲಿ ಪಠ್ಯಪುಸ್ತಕದ ಬಳಕೆಯನ್ನು ಪರಿಣಾಮಕಾರಿಯಾಗಿಸಲು ವಾಕ್ಯ ರೂಪದ ಸಮಸ್ಯೆಗಳನ್ನು ಅರ್ಥೈಸಿಕೊಂಡು ಗಣಿತ ಚಿಹ್ನೆಯ ಬಳಕೆಯೊಂದಿಗೆ ದೈನಂದಿನ ಜೀವನಕ್ಕೆ ಅನ್ವಯಿಸುವಂತೆ ಗಣಿತವನ್ನು ಬಳಸಿ ಕಲಿಯುವುದಾಗಿದೆ.

ತರಗತಿಯಲ್ಲಿ ಮಕ್ಕಳನ್ನು ಹಲವು ಗುಂಪುಗಳಾಗಿ ವಿಭಜನೆ ಮಾಡಲಾಗುತ್ತದೆ. ಇಲ್ಲಿ ಗುಂಪು ಕಲಿಕಾ ವಿಧಾನವನ್ನು ಅನುಸರಿಸಲಾಗುತ್ತಿದ್ದು, ಗುಂಪಿನಲ್ಲಿರುವ ಮಕ್ಕಳು ಪರಸ್ಪರ ಅರಿತು- ಕಲಿತು ಗಣಿತದ ಸಮಸ್ಯೆಗಳನ್ನು ಬಿಡಿಸುತ್ತಾರೆ. ಗಣಿತ ಕಲಿಕಾ ಆಂದೋಲನದಲ್ಲಿರುವ ಪರಿಕಲ್ಪನೆಗಳು ಪ್ರಸ್ತುತ ಕರ್ನಾಟಕ ಸರ್ಕಾರ 4 ಮತ್ತು 5ನೇ ತರಗತಿಗೆ ರೂಪಿಸಿರುವ ಪ್ರಾಥಮಿಕ ಶಾಲಾ ಗಣಿತ ಪಠ್ಯಕ್ರಮದೊಡನೆ ನೇರವಾಗಿ ಸಾಮ್ಯ ಹೊಂದಿದೆ.

ಮೌಲ್ಯಮಾಪನ ಹಂತ: ಕಲಿಕೆ ಫಲಿತಾಂಶ ಕಾಣಬೇಕಾದರೆ ಮೌಲ್ಯಮಾಪನವೂ ತುಂಬಾ ಮುಖ್ಯ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯ ಅರಿವನ್ನು ಮೌಲ್ಯ ಮಾಪನ ಮಾಡಲಾಗುತ್ತದೆ. ಹೀಗೆ ಮೌಲ್ಯಮಾಪನ ಮಾಡುವಾಗ ಯಾವುದಾದರೂ ವಿದ್ಯಾರ್ಥಿಯ ಕಲಿಕಾ ಮಟ್ಟ ಉತ್ತಮವಾಗಿಲ್ಲ ಎಂದಾದರೆ ಆ ವಿದ್ಯಾರ್ಥಿಗೆ ಹೆಚ್ಚಿನ ಆದ್ಯತೆ ನೀಡಿ, ಮತ್ತೊಮ್ಮೆ ಕಲಿಸಿಕೊಡಲಾಗುತ್ತಿದೆ. ಸಂಪರ್ಕಕ್ಕೆ ಅಕ್ಷರ ಫೌಂಡೇಷನ್ ವೆಬ್‌ಸೈಟ್‌: http://akshara.org.in/ 

ವಿಡಿಯೊ ನೋಡಲು ಲಿಂಕ್‌: https://www.youtube.com/watch?v=GYk62ypVHK4

*
ಕಿಟ್ ಬಳಕೆಯಿಂದ ನಮ್ಮ ಶಾಲೆಯಲ್ಲಿ ಶೈಕ್ಷಣಿಕ ಅಭಿವೃದ್ಧಿಯಾಗಿದೆ. ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳಿಗೆ ವಿಶೇಷ ತರಗತಿ ನೀಡಲಾಗುತ್ತದೆ. ವಿದ್ಯಾರ್ಥಿಗಳ ಪೋಷಕರಿಂದಲೂ ಕಲಿಕಾ ವಿಧಾನಕ್ಕೆ ಉತ್ತಮ ಪ್ರತಿಕ್ರಿಯೆ ಲಭಿಸಿದೆ. ಅಕ್ಷರ ಫೌಂಡೇಷನ್ ನಡೆಸುವ ಗಣಿತ ಸ್ಪರ್ಧೆಯಲ್ಲಿ ನಮ್ಮ ಶಾಲೆ ವಿದ್ಯಾರ್ಥಿಗಳೇ ಬಹುಮಾನ ಗಳಿಸಿರುವುದು ಹೆಮ್ಮೆ ವಿಚಾರ.
-ಡಿ.ಕೆ. ನಾಗರಾಜ್,
(ಮುಖ್ಯೋಪಾಧ್ಯಾಯರು -ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತಾವರೆಕೆರೆ, ಹೊಸಕೋಟೆ)

*
ಗಣಿತ ಕಿಟ್ ಉಪಯೋಗಿಸಿ ಸಮಸ್ಯೆಯನ್ನು ಬಿಡಿಸುವಾಗ ಮಕ್ಕಳು ಸುಲಭವಾಗಿ ಎಲ್ಲವನ್ನೂ ಕಲಿತುಕೊಳ್ಳುತ್ತಾರೆ. ಗುಂಪು ಕಲಿಕೆಯಿಂದಾಗಿ ಮಕ್ಕಳು ಮಕ್ಕಳಿಗೇ ಕಲಿಸಿಕೊಡುತ್ತಾರೆ. ಈ ಮೂಲಕ ಪ್ರತಿಯೊಬ್ಬ ವಿದ್ಯಾರ್ಥಿಯೂ ಮುಕ್ತವಾಗಿ ಬೆರೆಯುವಂತೆ ಮಾಡಲಾಗುತ್ತದೆ.
-ಸುಬ್ರಮಣ್ಯ
(ಗಣಿತ ಅಧ್ಯಾಪಕರು- ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತಾವರೆಕೆರೆ, ಹೊಸಕೋಟೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT