ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇಮಿಗಳ ದಿನಕ್ಕೆ ‘ಗರುಡ ಸಂತೆ’ ಸವಲತ್ತು

Last Updated 15 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಅಲ್ಲಿ ಸಂತೆಯ ವಾತಾವರಣ ನಿರ್ಮಾಣವಾಗಿತ್ತು. ಸಂತೆಯಲ್ಲಿ ಖರೀದಿಗೆ ಬಂದಿದ್ದವರಲ್ಲಿ ಕೆಂಪು ಬಣ್ಣದ ಉಡುಗೆ ತೊಟ್ಟ ಪ್ರೇಮಿಗಳು, ಪ್ರೀತಿಸಿ ಮದುವೆಯಾದ ದಂಪತಿಗಳು ಪರಸ್ಪರ ಉಡುಗೊರೆ ಕೊಳ್ಳುವ ಮೂಡ್‌ನಲ್ಲಿದ್ದರು. ಸಂಗಾತಿ ಕೊಟ್ಟ ಗಿಫ್ಟ್‌ ಬ್ಯಾಗ್‌ ಕೈಯಲ್ಲಿ ಹಿಡಿದು   ಓಡಾಡುತ್ತಿದ್ದವರ ಖುಷಿಗೆ ಪಾರವೇ ಇರಲಿಲ್ಲ.

ಪಕ್ಕದಲ್ಲಿಯೇ ಹಾಕಿದ್ದ ವೇದಿಕೆಯಲ್ಲಿ  ಬಿಡುಗಡೆಗೆ ಕಾದಿರುವ ‘ಆಪರೇಷನ್‌ ಅಲಮೇಲಮ್ಮ’ ಕನ್ನಡ ಸಿನಿಮಾದ  ‘ಅಲೆಮಾರಿ ನನ್ನ ಮನಕೆ ಅಲೆದಾಟ ಮರೆತು ಹೋಗಿದೆ... ಅಲಗ ಅಲಗ ಅಲಗ... ನಾನೇ ನಿನ್ನ ಗಮಕ...’ ಹಾಡಿಗೆ ಚಿತ್ರದ ನಾಯಕ ರಿಷಿ ಮತ್ತು ನಾಯಕಿ ಶ್ರದ್ಧಾ ಶ್ರೀನಾಥ್‌ ಹೆಜ್ಜೆ ಹಾಕುತ್ತಿದ್ದರು.  ಹಾಡಿನ ಮೋಡಿಗೆ ಒಳಗಾದ ಕೆಲ ಜೋಡಿಗಳು ವೇದಿಕೆಯೇರಿ ಹೆಜ್ಜೆ ಹಾಕಿ ಸಂಜೆಯ ರಾಗಕೆ ಇನ್ನಷ್ಟು ಮೆರುಗು ತುಂಬಿದರು.
ಗರುಡಾ ಮಾಲ್‌ನ  ಹೊರಗೆ ಪ್ರೇಮಿಗಳ ದಿನದ ಅಂಗವಾಗಿ ಆಯೋಜಿಸಿದ್ದ  ಸಂತೆಯ ದೃಶ್ಯವಿದು.

ಮಾಲ್‌ನಲ್ಲಿ ಸಾಕಷ್ಟು ಮಳಿಗೆಗಳಿದ್ದರೂ ಮಾಲ್‌ನ ಆವರಣದಲ್ಲಿಯೇ ಉಚಿತ ಜಾಗ ಕಲ್ಪಿಸಿ  ಸಣ್ಣ ವ್ಯಾಪಾರಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಆಭರಣ, ಚಪ್ಪಲಿ, ಕುರ್ತಾ, ದುಪಟ್ಟಾ, ಜಾಕೆಟ್‌, ಟೀಶರ್ಟ್‌, ಆಲಂಕಾರಿಕ ವಸ್ತುಗಳು, ವಾಚ್‌ನ ಮಳಿಗೆಗಳಲ್ಲಿ ಜನಸಂದಣಿ ಇತ್ತು.  ಕೊಡಗಿನ ಹೋಮ್‌ ಮೇಡ್‌ ಚಾಕೊಲೆಟ್ ಮಳಿಗೆಯಲ್ಲಿ ವ್ಯಾಪಾರ ಜೋರಾಗಿತ್ತು. ಸಂತೆಗೆ ಬಂದಿದ್ದ ನಟಿ ಶ್ರದ್ಧಾ ಶ್ರೀನಾಥ್‌, ನಟ ರಿಷಿ, ನಿರ್ದೇಶಕ ಸಂತು ಶಾಪಿಂಗ್‌ ಮಾಡಿ ಸಂಭ್ರಮಿಸಿದರು.

‘ನಾನು ಹೆಚ್ಚು ಶಾಪಿಂಗ್‌ ಮಾಡುವುದು ಆನ್‌ಲೈನ್‌ನಲ್ಲಿ. ಆಗೀಗ  ಸಿಗುವ ಇಂಥಾ ಸಂತೆಯಲ್ಲಿ ಮ್ಯಾಚಿಂಗ್‌ ಆಭರಣಗಳನ್ನು ಕೊಳ್ಳುತ್ತೇನೆ’ ಎಂದ ಶ್ರದ್ಧಾ ಕಿವಿಯೋಲೆಯೊಂದನ್ನು ಖರೀದಿಸಿದರು.

‘ಮಾಲ್‌ಗಳಲ್ಲಿ ಶಾಪಿಂಗ್‌ ಮಾಡುವುದು ಇದ್ದೇ ಇರುತ್ತದೆ. ಆದರೆ ಇಂಥ ಚಿಕ್ಕಪುಟ್ಟ ಮಳಿಗೆಗಳಲ್ಲಿ ಸಿಗುವ ವಸ್ತುಗಳು ಇದೇ ಬೆಲೆಗೆ ದೊಡ್ಡ ಮಳಿಗೆಗಳಲ್ಲಿ  ಸಿಗುವುದಿಲ್ಲ.  ಚಿಕ್ಕ ವ್ಯಾಪಾರಿಗಳಿಗೆ ಇಲ್ಲಿ ಅವಕಾಶ ಕಲ್ಪಿಸಿದ್ದು  ಉತ್ತಮ ಬೆಳವಣಿಗೆ’ ಎಂದು ನಟ ರಿಷಿ ಸಂತಸ ಹಂಚಿಕೊಂಡರು. ಗುರುವಾರ ಕೊನೆಯ ದಿನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT