ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಸ್ಟ್‌ ಫ್ಲೈಟ್‌ ಕವರ್‌ಗಳ ವಿಶಿಷ್ಟ ಲೋಕ

Last Updated 15 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಗಳೂರಿನ ಆಗಸದಲ್ಲಿ ಈಗಾಗಲೇ ವಿವಿಧ ಗಾತ್ರಗಳ ವೈವಿಧ್ಯಮಯ ವಿನ್ಯಾಸಗಳಿರುವ ಲೋಹದ ಹಕ್ಕಿಗಳ ಲಾಸ್ಯ ಮೊದಲಾಗಿದೆ. ಮಾನವ ಆಕಾಶಕ್ಕೆ  ಪಕ್ಷಿಯಂತೆ ಹಾರಲು ಆರಂಭಿಸಿ ಒಂದು ಶತಮಾನವೇ ಕಳೆದಿದೆ. ಜನ ಸಂಚಾರಕ್ಕೆ ಸರಕು ಸಾಗಣೆಗೆ, ರಕ್ಷಣಾ ದಳಗಳ ಉಪಯೋಗಕ್ಕೆ ಬಳಕೆಯಾಗುತ್ತಿರುವ ವಿಮಾನಯಾನದಲ್ಲಿ ಅಂಚೆ ಸಾಗಣೆಗೂ ಅವಕಾಶವುಂಟು.

ಆಧುನಿಕ ಅಂಚೆ ವ್ಯವಸ್ಥೆಯನ್ನು ಇಂಗ್ಲೆಂಡ್‌ ಮೊಟ್ಟ ಮೊದಲಿಗೆ ಪ್ರಾರಂಭಿಸಿತು. ನಮ್ಮ ದೇಶದಲ್ಲಿ ವಿಮಾನದಲ್ಲಿ ಅಂಚೆ ಸಾಗಿಸುವ ಪ್ರಥಮ ಪ್ರಯತ್ನ ನಡೆದದ್ದು18ನೇ ಫೆಬ್ರುವರಿ 1911.

ಅಲಹಾಬಾದ್‌ ಯು.ಪಿ ಎಕ್ಸಿಬಿಷನ್‌ ಮೈದಾನದಿಂದ ಎರಡು ಎಂಜಿನ್‌ಗಳಿದ್ದ ಫ್ರೆಂಚ್‌ ನಿರ್ಮಿತ ವಿಮಾನದಲ್ಲಿ 6,500 ಕಾಗದ ಪತ್ರಗಳನ್ನು ಹೊತ್ತ ವಿಮಾನ ಹಾರಿತು. ಈ ಪತ್ರಗಳಿಗೆ ವಿಶೇಷ ಅಂಚೆ ಠಸ್ಸೆ ಮಾಡಲಾಗಿತ್ತು. ವಿಮಾನದ ಚಾಲಕ ಹೆನ್ರಿ ಪಿಕೆಟ್‌ ವಿಮಾನ ಅಂಚೆಯನ್ನು ನೈನಿತಾಲ್‌ಗೆ ತಲುಪಿಸಿ ಮತ್ತೆ ಅಲಹಾಬಾದ್‌ ನಿಲ್ದಾಣಕ್ಕೆ ಯಶಸ್ವಿಯಾಗಿ ವಾಪಸ್ಸಾದರು.

ಪ್ರಥಮ ವಿಮಾನಯಾನ ಕೈಗೊಂಡ ಪತ್ರಗಳ ಮೇಲೆ ವಿಶೇಷ ಮುದ್ರೆಯೂ ಇತ್ತು. ಅಂತಹ ಪತ್ರಗಳು ಈಗ ಉಳಿದಿರುವುದು ಬೆರಳಿಕೆಯಷ್ಟು ಮಾತ್ರ. ಅವುಗಳ ಸಂಗ್ರಹಕ್ಕೆ ದೊಡ್ಡ ಮೊತ್ತದ ಬೆಲೆಯೇ ಇದೆ. ಬೆಂಗಳೂರಿನ ಹೆಸರಾಂತ ಅಂಚೆಚೀಟಿ ಸಂಗ್ರಹಕಾರ ಎಂ.ಎಸ್‌.ರಾಮು ಅವರ ಸಂಗ್ರಹದಲ್ಲಿ 4 ಪತ್ರಗಳಿದ್ದು ಅದು ಅಪರೂಪ ಮಾತ್ರವಲ್ಲ ಅತಿ ಬೆಲೆ ಬಾಳುವಂಥದ್ದೂ ಹೌದು.

ವಿಮಾನ ಅಂಚೆ ಜನಪ್ರಿಯಗೊಳ್ಳತೊಡಗಿದ ಬಳಿಕ ವಿಮಾನಯಾನ ಸಂಸ್ಥೆಗಳು ತಾವು ಆರಂಭಿಸುವ ಹೊಸ ಮಾರ್ಗಗಳ ವಿಮಾನ ಹಾರಾಟದ ಮೊದಲ ದಿನದಂದು ವಿಶೇಷ ಲಕೋಟೆಗಳನ್ನು ಬಿಡುಗಡೆ ಮಾಡಿ ಪ್ರಥಮ ಪ್ರಯಾಣದ ನೆನಪನ್ನು ಹಸಿರಾಗಿಡುವ ಕಾರ್ಯಕ್ಕೆ ಮೊದಲಿಟ್ಟವು.

ಇಂತಹ ಪ್ರವೃತ್ತಿ ಶುರುವಾಗಿದ್ದು ಅಮೆರಿಕಾದ ಪ್ಯಾನ್‌ ಆ್ಯಮ್‌ ವಿಮಾನ ಸಂಸ್ಥೆಯಿಂದ (1926ರಲ್ಲಿ). ಅಮೆರಿಕಾದ ಪ್ಯಾನ್ಸಾಮ್‌, ಜರ್ಮನಿಯ ಲುಪ್ತಾನ್ಸಾ, ಭಾರತದ ಏರ್‌ ಇಂಡಿಯಾ ಸಂಸ್ಥೆಗಳು ಆಯಾ ಸಂದರ್ಭಕ್ಕೆ ಅನುಸಾರವಾಗಿ ಮೊದಲ ದಿನದ ವಿಮಾನ ಹಾರಾಟದ ಲಕೋಟೆಗಳನ್ನು ಬಿಡುಗಡೆ ಮಾಡಲು ಪ್ರಾರಂಭಿಸಿದವು. ಆರಂಭದಲ್ಲಿ ಸಾಧಾರಣ ಲಕೋಟೆಗಳ ಮೇಲೆ ಒಂದೇ ಬಗೆಯ ವಿನ್ಯಾಸದ ಠಸ್ಸೆಗಳನ್ನು ಮುದ್ರಿಸಲಾಗುತ್ತಿತ್ತು.

ಬಳಿಕ ಏರ್‌ಮೇಲ್‌ ಕವರ್‌ಗಳ ಮೇಲೆ ಪ್ರಥಮ ವಿಮಾನಯಾನದ ಠಸ್ಸೆಗಳನ್ನು ಮುದ್ರಿಸಲಾಯಿತು. ವೈವಿಧ್ಯಮಯ ಬಣ್ಣಗಳಿಂದ ತಯಾರಾದ ಲಕೋಟೆಗಳನ್ನು ಮೊದಲ ವಿಮಾನ ಹಾರಾಟದ ದಿನದಂದು ಬಿಡುಗಡೆ ಮಾಡುವ ಪರಿಪಾಠವೂ ಶುರುವಾಯಿತು.

ಲಕೋಟೆಗಳ ಮೇಲೆ ಮೊದಲ ಹಾರಾಟ ಮಾಡುವ ಮಾರ್ಗವನ್ನು ಮುದ್ರಿಸುವ ಪದ್ಧತಿಯೂ ಬಂತು. ಏರ್‌ ಇಂಡಿಯಾ ಮದ್ರಾಸ್‌–ಕರಾಚಿ–ಹವಾಯಿ ಮಾರ್ಗದಲ್ಲಿ ಮೊದಲ ಹಾರಾಟ ನಡೆಸಿದಾಗ ಪ್ರತ್ಯೇಕ ಲಕೋಟೆಯನ್ನು ಹೊರ ತಂದಿತ್ತು. ಕಲ್ಕತ್ತಾ–ಮುಂಬೈ ಏರ್‌ ಬಸ್‌ ಉದ್ಘಾಟನೆ, ಕೀನ್ಯಾ, ಉಗಾಂಡ ಸೇರಿದಂತೆ ಹಲವು ಮಾರ್ಗಗಳಿಗೆ ಸಂಚಾರ ಆರಂಭಿಸಿದಾಗಲೂ ಏರ್ ಇಂಡಿಯಾ ವಿಶೇಷ ಅಂಚೆ ಲಕೋಟೆಗಳನ್ನು ಹೊರ ತಂದಿತ್ತು.

ಭಾರತದಿಂದ ಆಫ್ರಿಕನ್ ದೇಶಗಳಿಗೆ ಹೋಗಿ ಬರುತ್ತಿದ್ದ ವಿಮಾನಗಳ ಜೊತೆಯಲ್ಲೇ ಮೊದಲ ದಿನ ಅಂಚೆ ಲಕೋಟೆಗಳು ಹೋಗಿ ಬರುತ್ತಿದ್ದವು. ಆ ಲಕೋಟೆಗಳ ಮೇಲೆ ಇರುವ ಠಸ್ಸೆಗಳೂ ಪ್ರಾಮುಖ್ಯತೆ ಪಡೆಯುತ್ತಿದ್ದವು.

ಗ್ರೇಟ್‌ ಬ್ರಿಟನ್‌ ವಸಾಹತುಗಳು, ಆಫ್ರಿಕಾದ ಅನೇಕ ದೇಶಗಳು ಈಗ ಪ್ರತ್ಯೇಕಗೊಂಡಿವೆ. ಆಯಾ ದೇಶದ ಹೆಸರುಗಳು ಬದಲಾವಣೆಗೊಂಡಿವೆ. ಆ ದೇಶಗಳ ಮೊದಲ ವಿಮಾನ ಹಾರಾಟದ ವಿಶೇಷ ಲಕೋಟೆಗಳಿಗೆ ಈಗ ಹೆಚ್ಚಿನ ಬೇಡಿಕೆ.

ಬಹು ವರ್ಣದ, ವಿವಿಧ ವಿನ್ಯಾಸ, ಆಕಾರ ಗಾತ್ರಗಳ ಫಸ್‌್ಟಫ್ಲೈಟ್ ಕವರ್‌ಗಳು ಆರಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೊರಬಿದ್ದವು. ಈಗ ಅಂಥ ಅಂಚೆ ಲಕೋಟೆಗಳ ಭರಾಟೆ ಇಲ್ಲ. ಆರಂಭದ ದಿನಗಳಲ್ಲಿ ವಿಮಾನ ಅಂಚೆ ಲಕೋಟೆಗಳಲ್ಲಿ ವಿಶಿಷ್ಟ ಪ್ರಯೋಗಗಳನ್ನು ಮಾಡಿದ ‘ಲುಫ್ತಾನ್ಸಾ’ ವಿಮಾನ ಸಂಸ್ಥೆ ಮಾತ್ರ ಈಗಲೂ ಇಂಥ ಲಕೋಟೆಗಳನ್ನು ಬಿಡುಗಡೆ ಮಾಡುತ್ತಿದೆ. ಪ್ಯಾನ್ ಅಮೇರಿಕಾ ಸಂಸ್ಥೆ ಈಗಿಲ್ಲ. ಏರ್ ಇಂಡಿಯಾ ಇತ್ತೀಚೆಗೆ ಲಕೋಟೆ ಬಿಡುಗಡೆ ಮಾಡುವ ಆಸಕ್ತಿ ತೋರುತ್ತಿಲ್ಲ.

ಪ್ರಥಮ ಯಾನದ ಮಾಹಿತಿಯನ್ನು ಒಳಗೊಂಡ ಲಕೋಟೆ ಪತ್ರಗಳು ಈಗ ಬರುವುದು ಕಡಿಮೆ. ಆದರೆ ಇದಕ್ಕೆ ಬದಲು ಆಯಾ ಸಂದರ್ಭಕ್ಕೆ ಅನುಗುಣವಾಗಿ ಫಸ್ಟ್ ಫ್ಲೈಟ್‌ ಕಾರ್ಡ್‌ಗಳ  ಬಿಡುಗಡೆ ಹೆಚ್ಚುತ್ತಿದೆ. ಹೊಸ ಥೀಮ್‌ಗಳನ್ನು ಈ ಕಾರ್ಡ್‌ಗಳು ಒಳಗೊಳ್ಳುತ್ತಿವೆ. ಒಂದೇ ಕಾರ್ಡ್‌ನಲ್ಲಿ ಅಂಚೆ ಮುದ್ರೆ ಜೊತೆಗೆ ವಿವಿಧ 3–4 ಕ್ಯಾಸೆಟ್ (ಠಸ್ಸೆ) ಇರುವ ಕಾರ್ಡ್‌ಗಳೂ ಮೊದಲ ವಿಮಾನ ಹಾರಾಟ ಸಂದರ್ಭಕ್ಕೆ ಬರುತ್ತಿವೆ.

ಅಪರೂಪದ ಹವ್ಯಾಸ
ಈಚಿನ ದಿನಗಳಲ್ಲಿ ಆಕರ್ಷಕ ಫಸ್ಟ್ ಫ್ಲೈಟ್ ಕವರ್‌ಗಳನ್ನು ಸಂಗ್ರಹಿಸುವವರ ಸಂಖ್ಯೆ ಕಡಿಮೆಯಾಗಿದೆ. ಇಂಥ ಅಪರೂಪದ ಹವ್ಯಾಸ ರೂಢಿಸಿಕೊಂಡಿರುವವರು ಬಿ.ಎಂ.ಶ್ರೇಯಸ್.

ಬೆಂಗಳೂರು ಗಡಿಯಂಚಿನ ಬಿಡದಿಯವರಾದ ಶ್ರೇಯಸ್ ಚಿಕ್ಕಂದಿನಿಂದಲೂ ಅಂಚೆ ಚೀಟಿ ಸಂಗ್ರಹ ಮಾಡುವ ಹವ್ಯಾಸಿ. ನಾಲ್ಕೈದು ವರ್ಷಗಳ ಹಿಂದೆ ಫಸ್ಟ್ ಫ್ಲೈಟ್ ಕವರ್‌ಗಳ ಸಂಗ್ರಹ ಶುರುವಿಟ್ಟುಕೊಂಡ ಬಿ.ಎಂ.ಶ್ರೇಯಸ್ ಈಗ ದಕ್ಷಿಣ ಭಾರತದಲ್ಲಿಯೇ ಅತಿಹೆಚ್ಚು (410) ಲಕೋಟೆಗಳನ್ನು ಸಂಗ್ರಹಿಸಿರುವ ಖ್ಯಾತಿ ಹೊಂದಿದ್ದಾರೆ.

1926ರಲ್ಲಿ ಮೊದಲ ಫಸ್ಟ್ ಫ್ಲೈಟ್ ಕವರ್ ಹೊರಬಿತ್ತು. 1927 ರಿಂದೀಚೆಗೆ ಜಗತ್ತಿನ ವಿವಿಧ ವಿಮಾನ ಕಂಪನಿಗಳು ಹೊರತಂದ ಲಕೋಟೆಗಳು ಶ್ರೇಯಸ್ ಸಂಗ್ರಹದಲ್ಲಿವೆ. ಇವರು ಕೇವಲ ಲಕೋಟೆಗಳನ್ನು ಸಂಗ್ರಹಿಸಿಲ್ಲ. ಇದರ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಇವರ ಬಳಿ ಇರುವ ಎಲ್ಲಾ 410 ಲಕೋಟೆಗಳ ಇತಿಹಾಸವೂ ಇವರ ಬೆರಳ ತುದಿಯಲ್ಲಿದೆ.

ನಾಲ್ಕೈದು ದೇಶಗಳನ್ನು ಸುತ್ತಿ, ದೇಶ ವಿದೇಶಗಳಲ್ಲಿರುವ ಸಮಾನ ಆಸಕ್ತ ಸಂಗ್ರಹಕರಿಂದ ಫಸ್ಟ್ ಫ್ಲೈಟ್ ಕವರ್‌ಗಳನ್ನು ಸಂಗ್ರಹಿಸಿ ಬೃಹತ್ ಪ್ರದರ್ಶನಕ್ಕೆ ಸಜ್ಜಾಗುತ್ತಿದ್ದಾರೆ. ಇತ್ತೀಚೆಗೆ ರಜನೀಕಾಂತ್ ಅವರ ‘ಕಬಾಲಿ’ ಬಿಡುಗಡೆಯಾದ ಸಂದರ್ಭದಲ್ಲಿ ಏರ್ಪಡಿಸಿದ ಬೆಂಗಳೂರು – ಚೆನ್ನೈ ವಿಮಾನಯಾನ ಸಮಯದಲ್ಲಿ ಬಿಡುಗಡೆ ಮಾಡಲಾದ ಆಕರ್ಷಕ ಲಕೋಟೆಯನ್ನು ಇಟ್ಟುಕೊಂಡಿದ್ದಾರೆ.

ಇದರ ಮೇಲೆ ಎರಡೂ ನಗರಗಳ ವಿಮಾನ ನಿಲ್ದಾಣಗಳ ಅಂಚೆ ಕಚೇರಿಗಳು ಹಾಗೂ ಆಯಾ ಜಿ.ಪಿ.ಒಗಳ ಠಸ್ಸೆಗಳೂ ಇರುವುದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT