ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿತನುಡಿಗೆ ‘ಬ್ರ್ಯಾಂಡ್‌’ ಮೊಹರು!

Last Updated 15 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಏಕವ್ಯಕ್ತಿ ಸಾಹಸದ ರೂಪಕವಾಗಿ ಮೂಡಿಬಂದಿರುವ ಚಿತ್ರ ‘ಬ್ರ್ಯಾಂಡ್‌’. ಶೀರ್ಷಿಕೆಯನ್ನು ಬದುಕಿಗೂ ಅಳವಡಿಸಿ ವಿಭಿನ್ನವಾಗಿ ನೋಡುವ ಪ್ರಯತ್ನ ಮಾಡಿದ್ದಾರೆ ನಟ ಮತ್ತು ನಿರ್ದೇಶಕ ಪ್ರಶಾಂತ್ ಕೆ. ಶೆಟ್ಟಿ. ತಮ್ಮ ನಿರ್ದೇಶನದ ಎರಡನೇ ಚಿತ್ರದ ಆಡಿಯೊ ಬಿಡುಗಡೆಯ ಸಂಭ್ರಮದಲ್ಲಿದ್ದ ಅವರ ಮಾತುಗಳಲ್ಲಿ ಸಂತಸದ ಪನ್ನೀರು ಇತ್ತು.

ಸಿನಿಮಾ ಹುಳುವನ್ನು ತಲೆಗೆ ಬಿಟ್ಟುಕೊಂಡು ಬೆಂಗಳೂರಿಗೆ ಬಂದವರು ಪ್ರಶಾಂತ್. ಹಲವರ ಬಳಿ ನಿರ್ದೇಶನದ ಕಲೆಗಳನ್ನು ಕಲಿತು ನಾಲ್ಕು ವರ್ಷದ ಹಿಂದೆ ‘ಮನಸಿನ ಪುಟದಲ್ಲಿ’ ಎಂಬ ಚಿತ್ರ ನಿರ್ಮಿಸಿದ್ದರು. ಆ ಸೋಲಿನಿಂದ ಹೊರಬರಲು ಅವರಿಗೆ ನಾಲ್ಕು ವರ್ಷ ಬೇಕಾಯಿತು. ಮರಳಿ ಯತ್ನವ ಮಾಡು ಎಂಬ ಮಾತಿನಂತೆ, ಸೋಲಿನಿಂದ ಸುಧಾರಿಸಿಕೊಂಡ ಅವರ ಮರುಯತ್ನವೇ ಈ ‘ಬ್ರ್ಯಾಂಡ್‌’.

‘ಬ್ರ್ಯಾಂಡ್‌ ಶೋಕಿ ಇರುವ ಎಷ್ಟೋ ಮಂದಿಯನ್ನು ನಾವು ನೋಡಿದ್ದೇವೆ. ನನ್ನ ಚಿತ್ರವೂ ವಸ್ತುಗಳಿಂದ ಹಿಡಿದು ಹುಡುಗಿಯರವರೆಗೆ ಬ್ರ್ಯಾಂಡ್‌ ಕನಸು ಹೊತ್ತ ಕಾರು ಡೀಲರ್‌ ಒಬ್ಬನ ಕಥೆಯಾಗಿದೆ. ಬ್ರ್ಯಾಂಡ್ ಹಿಂದೆ ಬಿದ್ದರೆ ಏನಾಗುತ್ತದೆ ಎಂಬ ಸಂದೇಶವೂ ಚಿತ್ರದಲ್ಲಿದೆ’ ಎಂದು ಕಥೆಯ ಎಳೆಯನ್ನು ಪ್ರಶಾಂತ್‌ ಬಿಡಿಸಿಟ್ಟರು.

ಚಿತ್ರದ ಸಂಗೀತ ನಿರ್ದೇಶಕ ವಿನು ಮನಸು ಮಾತನಾಡಿ, ‘ಕಥೆಯಷ್ಟೇ ಹಾಡುಗಳೂ ಹ್ಯೂಮರಸ್ ಆಗಿವೆ. ಡ್ಯುಯೆಟ್ ಮತ್ತು ಐಟಂ ಹಾಡು ಸೇರಿದಂತೆ ಚಿತ್ರದಲ್ಲಿರುವ ನಾಲ್ಕು ಹಾಡುಗಳು ವೀಕ್ಷಕರಿಗೆ ಮುದ ನೀಡಲಿವೆ’ ಎಂದರು. ವಿನು ಇದಕ್ಕೂ ಮುಂಚೆ, ‘ಹೊಂಬಣ್ಣ’ ಮತ್ತು ‘ಅತಿಥಿ’ ಎಂಬ ಚಿತ್ರಗಳಿಗೆ ಕೆಲಸ ಮಾಡಿದ್ದಾರಂತೆ.

ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸಂಚಾರಿ ವಿಜಯ್, ‘ಪ್ರಶಾಂತ್ ಜತೆಗಿನ ಸ್ನೇಹ ಹಳೆಯದು. ಮೊದಲ ಚಿತ್ರದಲ್ಲಿ ಕುಗ್ಗಿದ್ದ ಅವರು, ಮತ್ತೆ ಹುರಿದುಂಬಿಕೊಂಡು ಮೇಲೆ ಬಂದಿರುವುದು ಸಂತಸ ತಂದಿದೆ’ ಎಂದರು.

‘ಜೇಬಲ್ಲಿ ಕಾಸಿಲ್ಲದಿದ್ದರೂ ಪ್ರಯತ್ನ ಮಾಡೋಣ ಬನ್ನಿ ಎನ್ನುವ ಸ್ವಭಾವ ಪ್ರಶಾಂತ್ ಅವರದು. ಬ್ರ್ಯಾಂಡ್ ಹಿಂದೆ ಬಿದ್ದ ವ್ಯಕ್ತಿ, ಹೆಣ್ಣಿನ ಸಂಗದಿಂದ ಬದಲಾಗುವ ಕಥೆಯನ್ನು ಅವರು ಚೆನ್ನಾಗಿ ಹೆಣೆದಿದ್ದಾರೆ’ ಎಂದು ಮತ್ತೊಬ್ಬ ನಿರ್ದೇಶಕ ಮಂಸೋರೆ ಮೆಚ್ಚುಗೆ ವ್ಯಕ್ತಪಡಿಸಿದರು.

ನಿರ್ಮಾಪಕ ಕುಮಾರ್ ಎನ್‌. ಬಂಗೇರ ನಿರ್ದೇಶಕರ ಶ್ರಮ ಮೆಚ್ಚಿ ನಗೆಯಷ್ಟೆ ಬೀರಿದರು. ಸಂದೀಪ್ ಹೊನ್ನಾಳಿ ಮತ್ತು ರಾಜ್ ಕಡೂರು ಚಿತ್ರಕ್ಕೆ ಕ್ಯಾಮೆರಾ ಹಿಡಿದ್ದಾರೆ. ಸಿಹಿ ಮ್ಯೂಸಿಕ್ ಹೊರತಂದಿರುವ ಆಡಿಯೊ ಸಿ.ಡಿ.ಗಳನ್ನು ಮಾಜಿ ವಿಧಾನಪರಿಷತ್ ಸದಸ್ಯ ಬಿ.ಎ. ಹಸನಬ್ಬ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT