ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕತಾನತೆ ಮೀರಿದ ಪಾತ್ರದ ಬಯಕೆ

Last Updated 15 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

*‘ತ್ರಿವೇಣಿ ಸಂಗಮ’ ಧಾರಾವಾಹಿ ಹೇಗೆ ಭಿನ್ನ?
ಇದು ಮಧ್ಯವಯಸ್ಸಿನವರ ಪ್ರೇಮಕಥೆ.   ಈ ಧಾರಾವಾಹಿಯ ಕಥೆಗೆ ಆದಿ ಅಂತ್ಯವಿದೆ. ಈಗ ಬರುವ ಎಷ್ಟೋ ಧಾರಾವಾಹಿಗಳು ಒಂದೇ ಘಟನೆಯ ಸುತ್ತ ಸುತ್ತುತ್ತಿರುತ್ತವೆ. ಆದರೆ ಈ ಧಾರಾವಾಹಿಯಲ್ಲಿ ಹೊಸತನ್ನು ನೀಡಲು ತಂಡ ಯತ್ನಿಸುತ್ತಿದೆ. ಗೊತ್ತು ಗುರಿಯಿಲ್ಲದೆ ಕಥೆ ಸಾಗುವುದು ವೈಯಕ್ತಿಕವಾಗಿ ನನಗೆ ಇಷ್ಟವಾಗುವುದಿಲ್ಲ. ಆದರೆ ಈ ಧಾರಾವಾಹಿಯ ಕಥೆ ಕೇಳಿದಾಗ ಇದಕ್ಕೊಂದು ಆದಿ ಅಂತ್ಯವಿದೆ ಎನಿಸಿತು. ಏಕತಾನತೆಯನ್ನು ಮೀರಿ ಇನ್ನೇನೊ ಹೇಳುವ ಪ್ರಯತ್ನವನ್ನು ಈ ಧಾರಾವಾಹಿಯಲ್ಲಿ ಮಾಡುತ್ತಿದ್ದಾರೆ.  ಇದೇ ಕಾರಣಕ್ಕೆ ಈ ಧಾರಾವಾಹಿ ವಿಶೇಷವೆನಿಸಿತು.

*ನಿಮ್ಮ ಪಾತ್ರದ ಬಗ್ಗೆ ತಿಳಿಸಿ?
ಕ್ಯಾಬ್‌ ಡ್ರೈವರ್‌ ಪಾತ್ರ ಮಾಡುತ್ತಿದ್ದೇನೆ. ಹಾಡುಗಾರನಾಗಬೇಕು ಎಂಬ ಕನಸು ಇಟ್ಟುಕೊಂಡಿರುವ ವ್ಯಕ್ತಿ. ಮಾಡುತ್ತಿರುವ ಕೆಲಸಕ್ಕಿಂತ ಭಿನ್ನವಾದ ಅಭಿರುಚಿ ಹೊಂದಿರುತ್ತೇನೆ. ಅದಕ್ಕೆ ಪುಷ್ಟಿ ಕೊಡುವ ಪಾತ್ರವನ್ನು ಆ ವ್ಯಕ್ತಿ ಭೇಟಿಯಾಗುತ್ತಾನೆ.  ಅವಳ ಪ್ರೀತಿಯಲ್ಲಿ ಬಂಧಿಯಾಗುತ್ತಾನೆ.  ಈ ರೀತಿಯಾಗಿ ಪಾತ್ರದ ಕಥೆ ಸಾಗುತ್ತದೆ.

*ಸಿನಿಮಾಗಳಲ್ಲಿ ನಟಿಸುತ್ತಿದ್ದಿರಿ, ಅಲ್ಲಿಂದ ಕಿರುತೆರೆಗೆ ಬರಲು ಕಾರಣ?
ನಟನಾಗಿ ನನಗೆ ಎಲ್ಲಾ ಮಾಧ್ಯಮಗಳು ಒಂದೇ. ಹೊಸ ಹುಡುಗರ ಲವ್‌ಸ್ಟೋರಿ ಇರುವ ಸಿನಿಮಾಗಳೇ ಹೆಚ್ಚು ಬರುತ್ತಿತ್ತು. ನನಗೆ ಇದು ಯಾವುದು ನಮ್ಮ ನೆಲದ ಕಥೆ ಅಲ್ಲ ಅನಿಸುತ್ತಿತ್ತು. ಬಹುಶಃ ನಾನು ವೃತ್ತಿಯಲ್ಲಿ ಬೆಳೆದು ಬಂದ ವಾತಾವರಣದ ಪರಿಣಾಮ ನನಗೆ ಹಾಗೆ ಅನಿಸಿರಬಹುದು. ಟಿ.ಎನ್‌. ಸೀತಾರಾಮ್‌, ಶೇಷಾದ್ರಿ ಅವರಂಥ ಹಲವು ಗುರುಗಳ ಅಡಿಯಲ್ಲಿ ಬೆಳೆದಿರುವ ಕಾರಣ, ಆ ರೀತಿಯ ಕಥೆಗಳು ನನಗೆ ರುಚಿಸುತ್ತಿರಲಿಲ್ಲ.

ಈ ಧಾರಾವಾಹಿಯ ಕಥೆ ಕೇಳಿದಾಗ ಇಷ್ಟವಾಯಿತು. ಧಾರಾವಾಹಿಗಳಲ್ಲಿ ಅಷ್ಟು ವರ್ಷ ಕೆಲಸ ಮಾಡಿರುವುದರಿಂದ ನನ್ನದೇ ಆದ ಅನುಭವವಿದೆ. ಅದು ನನ್ನನ್ನು ಗಟ್ಟಿಗೊಳಿಸಿದೆ. ಹೆಸರು, ದುಡ್ಡು ಎಲ್ಲವನ್ನೂ ನೀಡಿದೆ. ಅದಕ್ಕೂ ಮೀರಿ ಕೆಲಸ ಮಾಡಬೇಕು ಎಂದುಕೊಂಡಾಗ  ಬಂದ ಅವಕಾಶವಿದು. ಬೇರೆಯದೇ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅನಿಸಿ ಒಪ್ಪಿಗೆ ಸೂಚಿಸಿದೆ.

* ರಂಗಭೂಮಿ ಹಿನ್ನೆಲೆ ಉಳ್ಳವರು. ಅಲ್ಲಿ ಕಲಿತಿದ್ದು ಇಲ್ಲಿ ಎಷ್ಟು ಉಪಯೋಗವಾಯಿತು?
ತುಂಬಾ ಉಪಯೋಗವಾಗಿದೆ. ರಂಗಭೂಮಿ ನನ್ನ ಪಾಲಿಗೆ ಎಲ್ಲವೂ. ಆತ್ಮವಿಶ್ವಾಸದ ಜೊತೆಗೆ ಯಾವುದೇ ಒಂದು ಕೆಲಸಕ್ಕೆ ನಮ್ಮನ್ನು ನಾವು ಒಗ್ಗಿಸಿಕೊಳ್ಳುವ ರೀತಿಯನ್ನು ರಂಗಭೂಮಿ ಕಲಿಸುತ್ತದೆ. ಅಲ್ಲಿ ತಿಂಗಳುಗಟ್ಟಲೆ ತಾಲೀಮು ಮಾಡಿ ಪ್ರದರ್ಶನ ನೀಡಿರುತ್ತೇವೆ. ಹಾಗಾಗಿ ಆ ಪಾತ್ರದ ಒಳಹೊಕ್ಕಿ ಹೊರ ಬಂದಿರುತ್ತೇವೆ. ಅದು ತುಂಬಾ ಸಹಾಯಕ್ಕೆ ಬರುತ್ತದೆ. ಪಾತ್ರವನ್ನು ಎಷ್ಟು ಆಹ್ವಾನಿಸಿಕೊಳ್ಳಬೇಕು. ಸಂಭಾಷಣೆಯ ತೂಕ ಎಲ್ಲವನ್ನೂ ಅರಿತುಕೊಳ್ಳಲು ನೆರವಾಗುತ್ತದೆ.

*ಪಾತ್ರವನ್ನು ಯಾವ ಮಾನದಂಡದ ಮೂಲಕ ಆಯ್ಕೆ ಮಾಡಿಕೊಳ್ಳುತ್ತೀರಿ?
ಒಳ್ಳೆಯ ಪಾತ್ರದ ಜೊತೆಗೆ ಹಣಕಾಸಿನ ವಿಷಯವನ್ನು ನೋಡಿದ್ದೂ ಇದೆ. ಹಾಗಂತ ಪಾತ್ರದ ತೂಕವನ್ನು ಮರೆಯುವುದಿಲ್ಲ. ಒಳ್ಳೆಯ ಪಾತ್ರವಿದ್ದಾಗ ದುಡ್ಡು ಗೌಣವೆನಿಸುತ್ತದೆ.

*ಗುಪ್ತಗಾಮಿನಿ ಮತ್ತು ಮುಕ್ತ ಧಾರಾವಾಹಿಯ ಪಾತ್ರಗಳು ನಿಮಗೆ ಚೆನ್ನಾಗಿ ಒಪ್ಪಿತು. ಆ ರೀತಿಯ ಪಾತ್ರ ದೊರಕಿದರೆ ಪುನಃ ನಟಿಸುವಿರಾ?
ಮತ್ತೆ ಅದೇ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಬೇಸರ. ಆ ರೀತಿಯ ಪಾತ್ರ ಸಿಗುವುದಕ್ಕಿಂತ ವಿಭಿನ್ನ ಪಾತ್ರ ಸಿಗಬೇಕು ಎಂದು ಬಯಸುತ್ತೇನೆ.  ಒಂದೇ ರೀತಿಯ ಪಾತ್ರದಲ್ಲಿ ಕಾಣಿಸಿಕೊಳ್ಳುವುದಕ್ಕಿಂತ ಒಳ್ಳೆಯ ಪಾತ್ರಗಳಲ್ಲಿ ವಿಭಿನ್ನವಾಗಿ ಕಾಣಿಸಿಕೊಳ್ಳುವ ಬಯಕೆಯಿದೆ. 

*ಯಾವ ರೀತಿಯ ಪಾತ್ರಗಳಲ್ಲಿ ನಟಿಸುವ ಆಸೆಯಿದೆ?
ಈವರೆಗೂ ಮಾಡಿಲ್ಲದೆ ಇರುವ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ  ಹಂಬಲವಿದೆ. ಸಂಶೋಧಿಸಿ, ಮಾಡುವ ಪಾತ್ರಗಳು ಇಷ್ಟವಾಗುತ್ತದೆ. ಐತಿಹಾಸಿಕ, ಅಂಗವಿಕಲ... ಹೀಗೆ ನಾವು ಅಧ್ಯಯನ ಮಾಡಿ ಮಾಡುವಂತಹ ಪಾತ್ರ ವಿರಬೇಕು. ನಮ್ಮಲ್ಲಿ ಹಲವು ಅಸಂಪ್ರದಾಯಿಕ ಜನರಿದ್ದಾರೆ ಅವರನ್ನು ಪ್ರತಿನಿಧಿಸುವ ಪಾತ್ರಗಳನ್ನು ಮಾಡುವ ಆಸಕ್ತಿಯಿದೆ.

*ಸಿನಿಮಾ ಕ್ಷೇತ್ರದಲ್ಲಿರುವವರು ಫಿಟ್‌ನೆಸ್‌ಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಾರೆ. ಆದರೆ ನೀವು ಅದಕ್ಕೆ ವಿರುದ್ಧವೆನ್ನಿಸುತ್ತದೆ?
ಈಗ ಒಂದು ವರ್ಷದಿಂದ ಫಿಟ್‌ನೆಸ್‌ ಬಗ್ಗೆ ಅಷ್ಟೊಂದು ಗಮನ ನೀಡಿಲ್ಲ. ಆದರೆ ಇನ್ನು ಮುಂದೆ ಆ ಬಗ್ಗೆ ಯೋಚಿಸುವ ಆಲೋಚನೆಯಿದೆ. ಸಾಮಾನ್ಯವಾಗಿ ಆರು ತಿಂಗಳು ಫಿಟ್‌ನೆಸ್‌ ಫ್ರಿಕ್‌ ಆಗಿದ್ದರೆ ಉಳಿದ ಆರು ತಿಂಗಳು ಅದಕ್ಕೆ ವಿರಾಮ ನೀಡುತ್ತಿದ್ದೆ. ಈ ಒಂದು ವರ್ಷದಿಂದ ಸೋಮಾರಿತನ ಕಾಡಿತ್ತು. ಅದು ಯಾಕೆ ಎಂಬುದು ನನಗೂ ಅರ್ಥವಾಗಿಲ್ಲ. 

*
ಕೆಲವು ಧಾರಾವಾಹಿಗಳ ಕಥೆ ಬಗ್ಗೆ ನನಗೆ ಆಕ್ಷೇಪವಿದೆ. ಎಪಿಸೋಡ್‌ಗಳು ಸಾಗಿದರೂ, ಕಥೆ ಮಾತ್ರ ಅಲ್ಲಿಯೇ ಗಿರಕಿ ಹೊಡೆಯುವುದು ಸರಿಯಲ್ಲ. ಬದಲಾವಣೆ ಅಗತ್ಯ.
-ರಾಜೇಶ್‌, ನಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT