ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂಪಾರಣ್ಯ ಸತ್ಯಾಗ್ರಹ ಮತ್ತು ವರ್ತಮಾನ

Last Updated 15 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

1917, ದೇಶದ ಸ್ವಾತಂತ್ರ್ಯ ಆಂದೋಲನ ಬೀಜಾರ್ಪಣೆಗೊಂಡ ವರ್ಷ. ಮಹಾತ್ಮನಾಗಿರದ ಮೋಹನದಾಸ್ ಕರಮಚಂದ ಗಾಂಧಿ ಮಹಾತ್ಮನಾಗುವತ್ತ ಇಟ್ಟ ಮೊದಲ ಹೆಜ್ಜೆಯ ವರ್ಷವೂ ಹೌದು.

ನೂರು ವರ್ಷಗಳ ಹಿಂದೆ ಬಿಹಾರ ರಾಜ್ಯದ ಚಂಪಾರಣ್ಯ ಜಿಲ್ಲೆಯಲ್ಲಿ ಇಂಗ್ಲಿಷ್‌  ಭೂಮಾಲೀಕರಿಂದ ರೈತರಿಗಾಗುತ್ತಿದ್ದ ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತಲೇ ರೈತರನ್ನೂ ಮತ್ತು ಸುತ್ತಲಿನ ಜನರನ್ನೂ ಸಬಲೀಕರಣಗೊಳಿಸುತ್ತ, ಎಲ್ಲರನ್ನೂ ಸುಧಾರಣೆಯತ್ತ ಒಯ್ಯುವ ಕೆಲಸವನ್ನು ಗಾಂಧಿ ಮಾಡಿದರು. ಚಂಪಾರಣ್ಯ ಸತ್ಯಾಗ್ರಹವನ್ನು ರೈತರ ಸಮಸ್ಯೆ ನಿವಾರಣೆಯ ಹೋರಾಟದ ಯಶೋಗಾಥೆಯೆಂದಷ್ಟೇ ಪರಿಗಣಿಸದೆ, ಅದೊಂದು ದೇಶ ಕಟ್ಟುವ ಕೆಲಸದ ಮಹತ್ವದ ಪೂರ್ವಭಾವಿ ಪ್ರಕ್ರಿಯೆಯೆಂದೂ, ದೇಶ ಕಟ್ಟುವಿಕೆಯ ವರ್ತಮಾನದ ಕೆಲಸಕ್ಕೆ ಮಾದರಿಯೆಂದೂ ಭಾವಿಸಬೇಕು.

ಈ ಸತ್ಯಾಗ್ರಹವನ್ನು ಗಾಂಧೀಜಿ ಹೂಡಿದಾಗ ಯಾವ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸಮಸ್ಯೆಗಳು ದೇಶದಲ್ಲಿ ಇದ್ದವೋ ಅಂಥವೇ ಸಮಸ್ಯೆಗಳು, ಸನ್ನಿವೇಶಗಳು ವರ್ತಮಾನದಲ್ಲಿಯೂ ಇವೆ. ಆದ್ದರಿಂದ ಈ ಸತ್ಯಾಗ್ರಹದ ಹಿಂದಿದ್ದ ಗಾಂಧಿಯವರ ಮೂಲ ವಿಚಾರಗಳನ್ನು ತಿಳಿದುಕೊಂಡು, ನೂರು ವರ್ಷದ ನೆನಪಿನ ಆಚರಣೆಯನ್ನು ವರ್ತಮಾನದ ಬಿಕ್ಕಟ್ಟಿನ ಪರಿಸ್ಥಿತಿ ನಿವಾರಣೆಯ ಮಸೂರದ ಮೂಲಕ ನೋಡುವ ಪ್ರಯತ್ನ ಮಾಡಬೇಕು.

ನೂರು ವರ್ಷಗಳ ಹಿಂದೆ ಗಾಂಧೀಜಿ ಬರೆದಿದ್ದ ‘ಹಿಂದ್ ಸ್ವರಾಜ್’ ಪುಸ್ತಕದ ಸ್ಮರಣೆಯ ಆಚರಣೆಗಾಗಿ ವಿಚಾರಗೋಷ್ಠಿಗಳು ದೇಶದಾದ್ಯಂತ ನಡೆದವು. 87  ವರ್ಷಗಳ ಹಿಂದೆ ನಡೆದ ದಂಡಿಯಾತ್ರೆಯ ದಾರಿಯಲ್ಲಿ ಅಣಕು ಯಾತ್ರೆಯೂ ಅಬ್ಬರದ ಪ್ರಚಾರದೊಂದಿಗೆ ನಡೆಯಿತು. ಆದರೆ ಆ ಎರಡೂ ಆಚರಣೆಗಳಿಂದ ದೇಶದ ಜನಜೀವನದಲ್ಲಾಗಲಿ, ಜನರ ಮನೋ-ಸಾಂಸ್ಕೃತಿಕ ಕ್ಷೇತ್ರದಲ್ಲಾಗಲಿ ಮಹತ್ತರ ಪರಿವರ್ತನೆ ತರಲು ಸಾಧ್ಯವಾಗಲಿಲ್ಲ. ಇದೊಂದು ವಿಷಾದನೀಯ ಸಂಗತಿ.

ಚಂಪಾರಣ್ಯ ಸತ್ಯಾಗ್ರಹದ ಶತಮಾನೋತ್ಸವ ಆಚರಣೆ ವ್ಯರ್ಥ ಕಸರತ್ತಾಗಬಾರದು. ದೇಶದ ಆರ್ಥಿಕ ಮತ್ತು ವಿದೇಶಾಂಗ ನೀತಿಗೆ ತಿರುವು ಕೊಡುವಂತಾಗಬೇಕು. ಈ ಸತ್ಯಾಗ್ರಹ ನಡೆದ ಪ್ರದೇಶದಲ್ಲಿಯೇ ಬರುವ ಮಾರ್ಚ್‌ 23 ಹಾಗೂ 24ರಂದು ಅಖಿಲ ಭಾರತ ಸಮ್ಮೇಳನವೊಂದು ನಡೆಯಲಿದ್ದು, ಗಾಂಧೀಜಿ ಮೊಮ್ಮಗ ತುಷಾರ್ ಗಾಂಧಿ ಉದ್ಘಾಟಿಸಲಿದ್ದಾರೆ. ಸಮ್ಮೇಳನದಲ್ಲಿ ದೇಶದ ಎಲ್ಲ ಕಡೆಯಿಂದ ಜನ ಸೇರಬೇಕು.

ತದನಂತರ ಈ ಸತ್ಯಾಗ್ರಹದ ಗುಣವಿಶೇಷಗಳನ್ನು ತಮ್ಮತಮ್ಮ ಕ್ಷೇತ್ರದಲ್ಲಿ ಜಾರಿಗೆ ತರಲು ಪ್ರಯತ್ನಿಸಬೇಕು. ದೇಶದಲ್ಲಿ ಈಗ ಬೀಸುತ್ತಿರುವ ಕುರುಡು ಔದ್ಯೋಗೀಕರಣದ ಗಾಳಿಯಲ್ಲಿ ನಮ್ಮ ದೇಶ ತೂರಿಕೊಂಡು ಹೋಗದಂತೆ ಪ್ರಯತ್ನಿಸಲೇಬೇಕು. ನಮ್ಮ ಸಂಸ್ಕೃತಿ, ಜನಮಾನಸ, ಭೌಗೋಳಿಕ ಸನ್ನಿವೇಶ, ಹವಾಗುಣ, ಜನಸಂಖ್ಯೆಯಂಥ ವಿಷಯಗಳನ್ನು ಗಮನದಲ್ಲಿರಿಸಿಕೊಂಡೇ ಕೈಗಾರಿಕೀಕರಣ ಮಾಡುವಂತೆ ಸರ್ಕಾರದ ಮೇಲೆ ಒತ್ತಾಯ ತರಬೇಕು, ಸರ್ಕಾರ ಹಾಗೆ ಮಾಡದಿದ್ದಲ್ಲಿ ಸತ್ಯಾಗ್ರಹ ಮಾಡಬೇಕು.

ಇಂದು ದೇಶದಲ್ಲಿ  ಶೋಷಿತರನ್ನು ಸಂಘಟಿಸಿ ವಿವಿಧ ಸಂಘಟನೆಗಳ ಬಾವುಟಗಳಡಿ ಹೋರಾಟಗಳು ನಡೆಯುತ್ತಲೇ ಇವೆ. ಆದರೆ ಅವು ಅಯಶಸ್ಸಿನಲ್ಲಿಯೇ ಕೊನೆಗೊಳ್ಳುತ್ತಿವೆ! ಶೋಷಕರ ಅಟ್ಟಹಾಸ ನಡೆದೇ ಇದೆ. ಇದಕ್ಕೆ ಕಾರಣ ಆ ಎಲ್ಲ ಹೋರಾಟಗಳ ಮುಖಂಡರಲ್ಲಿ ಗಾಂಧಿಯವರಲ್ಲಿದ್ದ ಗುಣಗಳು ಮತ್ತು ಕ್ರಿಯಾಪದ್ಧತಿಯ ತೀವ್ರ ಅಭಾವ. ಆದ್ದರಿಂದ ಶೋಷಕರ ವಿರುದ್ಧದ ಆ ಹೋರಾಟಗಳನ್ನು ನಡೆಸುವವರು ಮೊದಲು ಗಾಂಧಿಯವರಲ್ಲಿದ್ದ ಗುಣ ಸ್ವಭಾವಗಳನ್ನು ಮತ್ತು ಕ್ರಿಯಾಪದ್ಧತಿಯನ್ನು ರೂಢಿಸಿಕೊಳ್ಳಬೇಕಾದುದು ಅಗತ್ಯ.

ಚಂಪಾರಣ್ಯದಲ್ಲಿ ಗಾಂಧೀಜಿ ಸತ್ಯಾಗ್ರಹ ಮಾಡಿದ್ದು ದೇಶಕ್ಕೆ ಸ್ವಾತಂತ್ರ್ಯ ಬರುವುದಕ್ಕೆ 30 ವರ್ಷಗಳ ಮೊದಲು. ದೇಶದ ಗ್ರಾಮೀಣ ಜನ ಎಂಥ ಶೋಚನೀಯ ಸಾಮಾಜಿಕ ಸ್ಥಿತಿಯಲ್ಲಿದ್ದರೆಂಬುದನ್ನು ಅವರು ಅರಿತುಕೊಂಡೇ ಸತ್ಯಾಗ್ರಹದ ಜೊತೆ ಜೊತೆಯಲ್ಲಿಯೇ ಸ್ವಚ್ಛತಾ ಆಂದೋಲನ, ಆರೋಗ್ಯ, ಸುರಕ್ಷೆ, ನಿರಕ್ಷರತಾ ನಿವಾರಣೆ ಮತ್ತು ಮುಖ್ಯವಾಗಿ ಜನರಲ್ಲಿ ಸರ್ಕಾರದ ಬಗ್ಗೆ ಇದ್ದ ಭಯದ ನಿವಾರಣೆಯಂಥ ಕಾರ್ಯಕ್ರಮಗಳನ್ನು ಕೈಗೊಂಡು ಸ್ವತಂತ್ರ ಭಾರತದ ಸುಯೋಗ್ಯ ಸಮಾಜದ ನಿರ್ಮಾಣಕ್ಕೆ ಅಡಿಪಾಯ ಹಾಕಿದರು. ಈ ರೀತಿ ಸವಿನಯ ಕಾಯ್ದೆ ಭಂಗದ ಪ್ರಥಮ ಪಾಠವನ್ನು ಗಾಂಧೀಜಿ ದೇಶಕ್ಕೆ ತೋರಿಸಿದರೆಂದು ಹೇಳಬೇಕು.

ಇಂದಿನ ಹೋರಾಟಗಾರರು ತಿಳಿದುಕೊಳ್ಳಬೇಕಾದ ಸಂಗತಿಯೇನೆಂದರೆ, ಗಾಂಧೀಜಿ ತಮ್ಮ ಚಂಪಾರಣ್ಯ ಸತ್ಯಾಗ್ರಹದ ಬಗ್ಗೆ ಅತಿಶಯೋಕ್ತಿಯ ವರದಿ ಬರದಂತೆ ನೋಡಿಕೊಂಡರು.  ಸತ್ಯಾಗ್ರಹದ ಸಮಯದಲ್ಲಿ ಅತ್ಯಂತ ಸಣ್ಣ ವಿಷಯದಲ್ಲಿಯೂ ಸತ್ಯವನ್ನೇ ಹೇಳಬೇಕೆಂಬ ಒತ್ತಾಯ ಅವರದಾಗಿತ್ತು. ಆದ್ದರಿಂದ ದ್ರಾಕ್ಷಿ ತೋಟದ ಮಾಲೀಕರು ರೈತರ ವಿರುದ್ಧ, ಗಾಂಧೀಜಿ ವಿರುದ್ಧ ಎತ್ತಿದ ಕತ್ತಿ ಜಮೀನ್ದಾರರ ಕಡೆಗೇ ತಿರುಗಿತು! ಹೋರಾಟವು ರಾಜಕೀಯ ಸ್ವರೂಪ ಪಡೆಯುವುದನ್ನು  ತಪ್ಪಿಸಿದುದೂ ಮತ್ತು ಹೋರಾಟಕ್ಕೆ ಹಣ ಪಡೆದುಕೊಳ್ಳದೆ ಇದ್ದುದೂ ವಿಶೇಷ ಸಂಗತಿಯಾಗಿತ್ತು.

ಏಳು ತಿಂಗಳ ಕಾಲ ನಡೆದ ಹೋರಾಟಕ್ಕೆ ಮೂರು ಸಾವಿರ ರೂಪಾಯಿಗಳಿಗಿಂತಲೂ ಹೆಚ್ಚು ಖರ್ಚಾಗಿರಲಿಲ್ಲ. ಇದಕ್ಕೆ ಕಾರಣ ಸತ್ಯಾಗ್ರಹದಲ್ಲಿ ತೊಡಗಿದ್ದವರೆಲ್ಲರೂ ಅತ್ಯಂತ ಸರಳ ಜೀವನ ನಡೆಸಿದುದೇ ಆಗಿತ್ತು. ಸತ್ಯಾಗ್ರಹದ ಸಂದರ್ಭದಲ್ಲಿ ಗ್ರಾಮಗಳಲ್ಲಿ ಗಾಂಧೀಜಿ ಪ್ರಾರಂಭಿಸಿದ್ದ ರಾತ್ರಿ ಪಾಠಶಾಲೆಗಳ ಅಧ್ಯಾಪಕರಿಗೆ ಊಟ, ವಸತಿ ವ್ಯವಸ್ಥೆಯನ್ನು ಗ್ರಾಮಸ್ಥರೇ ಒದಗಿಸಿದ್ದರು. ಆದರೆ ಇಂದು ಎಲ್ಲವನ್ನೂ ಸರ್ಕಾರವೇ ಮಾಡಬೇಕು ಎಂಬ ಮನೋಭಾವವನ್ನೂ, ಹೋರಾಟಗಾರರ ಪ್ರಾಮಾಣಿಕತೆಯನ್ನು ಶಂಕಿಸುವ ಮನೋಭಾವವನ್ನೂ ಗ್ರಾಮಸ್ಥರು ಬೆಳೆಸಿಕೊಂಡಿದ್ದಾರೆ.

ಒಂದರ್ಥದಲ್ಲಿ ತಮ್ಮ ಸ್ವಾವಲಂಬನೆಯ ಶಕ್ತಿಯನ್ನು ಕಳೆದುಕೊಂಡು ಪರಾವಲಂಬಿಗಳಾಗಿದ್ದಾರೆ. ಶಾಲೆಯಲ್ಲಿ ಅಕ್ಷರ ಜ್ಞಾನಕ್ಕಿಂತ ಚಾರಿತ್ರ್ಯ ಮತ್ತು ನೀತಿಗೆ ಹೆಚ್ಚು ಮಹತ್ವ ಕೊಡಲಾಗಿತ್ತು. ಹೀಗೆ ಚಂಪಾರಣ್ಯ ಸತ್ಯಾಗ್ರಹವು ಅಂದು ವಿದೇಶಿಯರ ಆಕ್ರಮಣಶೀಲತೆಯ ವಿರುದ್ಧ ನಡೆಯಿತು. ಅಲ್ಲಿಯ ವಿದೇಶಿಯರು ಇಂಗ್ಲೆಂಡ್‌ನಿಂದ ಮಾತ್ರ ಬಂದವರಾಗಿದ್ದರು. ಇಂದು ಭಾರತಕ್ಕೆ ಜಗತ್ತಿನ ಎಲ್ಲ ದೊಡ್ಡ ದೇಶಗಳ ಕಂಪೆನಿಗಳು ಬಂದಿವೆ. ಅವು ಇಲ್ಲಿ ಲಾಭ ಮಾಡಿಕೊಂಡು ತಮ್ಮ ದೇಶವನ್ನು ಶ್ರೀಮಂತಗೊಳಿಸಿಕೊಳ್ಳುತ್ತಿವೆ. ಭಾರತೀಯರು ತಮ್ಮ ದೇಶವಾಸಿಗಳಾದ ಕೆಲವರ ಶ್ರೀಮಂತಿಕೆಯಿಂದ ಎರಡನೇ ದರ್ಜೆಯ ಪ್ರಜೆಗಳಾಗಿದ್ದಾರೆ.

ಅಸಂಗತ ಕೈಗಾರಿಕೀಕರಣದಿಂದ ಆರ್ಥಿಕ ಅಸಮಾನತೆ ಹೆಚ್ಚುತ್ತಿದೆ. ನೂರು ವರ್ಷಗಳ ಹಿಂದೆ ಚಂಪಾರಣ್ಯದ ರೈತರಲ್ಲಿದ್ದ ಮಾನಸಿಕ ಪರಿಸ್ಥಿತಿಯೇ ಮುಂದುವರೆದಿದೆ. ಚಂಪಾರಣ್ಯ ಸತ್ಯಾಗ್ರಹ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವುದರಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿತ್ತು. ಈಗ ಪರಕೀಯ ಆರ್ಥಿಕತೆಯ ದಾಸ್ಯದಿಂದ ಸ್ವಾತಂತ್ರ್ಯ ಪಡೆಯಲು ಈ ಸತ್ಯಾಗ್ರಹ ನಮಗೆಲ್ಲಾ ಪ್ರೇರಕವಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT