ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟರ ಶಿಕ್ಷೆಗೆ ಇದು ಮುನ್ನುಡಿ ಮಾತ್ರ!

ಸುಪ್ರೀಂ ಕೋರ್ಟ್‌ ಹೇಳಿರುವ ನ್ಯಾಯದ ಮಾತು ಭ್ರಷ್ಟಾಚಾರ ಪ್ರಕರಣಗಳಲ್ಲಿ ಮುಂದೆಯೂ ಉಲ್ಲೇಖವಾಗಲಿದೆ
Last Updated 15 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ರಾಜಕೀಯ ಮುಖಂಡ ಸುಬ್ರಮಣಿಯನ್ ಸ್ವಾಮಿ ಅವರು ಇಪ್ಪತ್ತೊಂದು ವರ್ಷಗಳ ಹಿಂದೆ, ಅಂದರೆ 1996ರ ಜೂನ್‌ 14ರಂದು, ಜೆ. ಜಯಲಲಿತಾ ವಿರುದ್ಧ ಅಂದಿನ ಮದ್ರಾಸ್‌ನ ನ್ಯಾಯಾಲಯವೊಂದರಲ್ಲಿ ಖಾಸಗಿ ದೂರು ದಾಖಲಿಸಿದರು. ಜಯಾ ಅವರು 1991ರ ಜೂನ್‌ 24ರಿಂದ 1996ರ ಮೇ 13ರ ನಡುವಣ ಅವಧಿಯಲ್ಲಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದರು.

ಸ್ವಾಮಿ ನೀಡಿದ್ದು ಭ್ರಷ್ಟಾಚಾರಕ್ಕೆ ಸಂಬಂಧಿಸಿದ ದೂರು – ಅಂದರೆ ಜನರ ಸೇವಕಿಯಾಗಿದ್ದ ಜಯಾ ಅವರು ಘೋಷಿತ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದಿಸಿದ್ದಾರೆ ಎಂದು. ಈಗ ಜಯಾ ಬದುಕಿಲ್ಲ. ಮೃತ ವ್ಯಕ್ತಿಯನ್ನು ಶಿಕ್ಷಿಸಲು ಆಗುವುದಿಲ್ಲ. ಆದರೆ ಈಗ ಸುಪ್ರೀಂ ಕೋರ್ಟ್‌, ಜಯಾ ಅವರಿಗೆ ಅಕ್ರಮವಾಗಿ ಆಸ್ತಿ ಸಂಪಾದಿಸಲು ನೆರವು ನೀಡಿದ್ದ ವಿ.ಕೆ. ಶಶಿಕಲಾ ನಟರಾಜನ್‌, ಅವರ ಸಂಬಂಧಿಗಳಾದ ಸುಧಾಕರನ್ ಮತ್ತು ಇಳವರಸಿ ಅವರಿಗೆ ಶಿಕ್ಷೆ ವಿಧಿಸಿದೆ. ಈ ಮೂವರಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಅಲ್ಲದೆ, ಇವರು ತಲಾ ₹ 10 ಕೋಟಿಯನ್ನು ರಾಜ್ಯ ಸರ್ಕಾರಕ್ಕೆ ದಂಡದ ರೂಪದಲ್ಲಿ ಪಾವತಿಸಬೇಕಿದೆ.

1989–90ರ ಅವಧಿಯಲ್ಲಿ ಜಯಾ ಅವರು ತೀರಾ ಸಾಧಾರಣ ಎನ್ನುವ ಆದಾಯ ಹೊಂದಿದ್ದರು. ಆದರೆ ಐದು ವರ್ಷಗಳ ನಂತರ, ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯುವ ಹೊತ್ತಿನಲ್ಲಿ ಅವರ ಆದಾಯ ₹ 38 ಕೋಟಿಗೆ ಏರಿಕೆಯಾಗಿತ್ತು ಎಂದು ಸ್ವಾಮಿ ಅವರು ದೂರಿನಲ್ಲಿ ಹೇಳಿದ್ದರು.
ಭ್ರಷ್ಟ ಸರ್ಕಾರಿ ಅಧಿಕಾರಿ, ಸಾರ್ವಜನಿಕ ಸೇವಕರನ್ನು ಶಿಕ್ಷಿಸಲು ‘ಘೋಷಿತ ಆದಾಯಕ್ಕಿಂತ ಹೆಚ್ಚಿನ ಆಸ್ತಿ’ ಎಂಬ ಪರಿಕಲ್ಪನೆ ಹೊಂದಿರುವ ಕೆಲವೇ ದೇಶಗಳಲ್ಲಿ ಭಾರತವೂ ಒಂದು. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಲ್ಲಿ ಇಂಥದ್ದೊಂದು ಅಂಶವನ್ನು ಸೇರಿಸಿದ್ದಕ್ಕೆ ನಾವು ಸಂಸತ್ತಿಗೆ ಕೃತಜ್ಞರಾಗಿರಬೇಕು. ಕರ್ನಾಟಕದ ಹಾಗೂ ದೇಶದ ನೂರಾರು ಭ್ರಷ್ಟ ಅಧಿಕಾರಿಗಳು, ಸಾರ್ವಜನಿಕ ಸೇವಕರು ಈ ಕಾನೂನಿನ ಅಡಿ ಮುಂದೊಂದು ದಿನ ಖಂಡಿತವಾಗಿ ಶಿಕ್ಷೆಗೆ ಗುರಿಯಾಗಲಿದ್ದಾರೆ. ಹೀಗೆ ಆಗುವುದಕ್ಕೆ ಸುಪ್ರೀಂ ಕೋರ್ಟ್‌ ಮಂಗಳವಾರ ನೀಡಿದ ತೀರ್ಪು ಮುನ್ನುಡಿ ಬರೆದಿದೆ.

ಅಧಿಕಾರ ಅವಧಿಯಲ್ಲಿ ಆಸ್ತಿ ಸಂಪಾದಿಸುವ ಸಾರ್ವಜನಿಕ ಸೇವಕ, ತನಗೆ ಆ ಸಂಪತ್ತು ಬಂದಿದ್ದು ಎಲ್ಲಿಂದ ಎಂಬುದನ್ನು ವಿವರಿಸಬೇಕಾದ ಹೊಣೆ ಹೊತ್ತಿರುತ್ತಾನೆ. ದೇಶದ ಪ್ರತಿ ಸಾರ್ವಜನಿಕ ಸೇವಕನಿಗೂ ಇದು ಅನ್ವಯವಾಗುತ್ತದೆ. ಆಸ್ತಿ ಸಂಪಾದನೆ ಬಗ್ಗೆ ಆತನಿಂದ ತೃಪ್ತಿಕರ ವಿವರಣೆ ಬಾರದಿದ್ದರೆ, ಆತನ ವಿರುದ್ಧ ಕ್ರಿಮಿನಲ್ ತನಿಖೆ ಆರಂಭಿಸಬಹುದು. ಆತ ತಪ್ಪು ಮಾಡಿದ್ದು ಸಾಬೀತಾದರೆ, ಗರಿಷ್ಠ ಏಳು ವರ್ಷ ಶಿಕ್ಷೆ ವಿಧಿಸಬಹುದು. ಅಕ್ರಮವಾಗಿ ಸಂಪಾದಿಸಿದ ಆಸ್ತಿಯನ್ನು ರಾಜ್ಯ ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬಹುದು. ಭ್ರಷ್ಟಾಚಾರ ಎಸಗಲು ಸಹಾಯ ಮಾಡಿದ ಸಾರ್ವಜನಿಕ ಸೇವೆಯಲ್ಲಿ ಇರದ ವ್ಯಕ್ತಿಯನ್ನೂ ಅಷ್ಟೇ ಅವಧಿಗೆ ಶಿಕ್ಷೆಗೆ ಗುರಿಪಡಿಸಬಹುದು.

ಸಾರ್ವಜನಿಕ ಸೇವಕನೊಬ್ಬ ಲಂಚ ಪಡೆಯುತ್ತಿದ್ದ ವೇಳೆ ಸಿಕ್ಕಿಬಿದ್ದರೆ, ಆತನನ್ನು ಬಂಧಿಸಿ ಈ ಕಾನೂನಿನ ಅಡಿ ಶಿಕ್ಷಿಸುವುದು ಕಷ್ಟವಲ್ಲ. ಆದರೆ, ಲಂಚ ಪಡೆಯುವಾಗ ಸಿಕ್ಕಿಬೀಳದೆ, ಕಾಲಕಾಲಕ್ಕೆ ಸಿಗುವ ಲಂಚದ ಹಣ ಬಳಸಿ ತನ್ನ ಹಾಗೂ ತನ್ನ ಆಪ್ತರ ಹೆಸರಿನಲ್ಲಿ ಆಸ್ತಿ ಖರೀದಿಸುವ ಸಾರ್ವಜನಿಕ ಸೇವಕನ ಕತೆ ಏನಾಗುತ್ತದೆ ಎಂಬುದನ್ನು ಗಮನಿಸೋಣ.

ವ್ಯಕ್ತಿ ಲಂಚ ಪಡೆಯುತ್ತಿದ್ದಾಗಲೇ ಆತನನ್ನು ಹಿಡಿಯಲು ಕಾನೂನಿಗೆ ಸಾಧ್ಯವಾಗದಿದ್ದರೂ, ‘ಆದಾಯಕ್ಕಿಂತ ಹೆಚ್ಚಿನ ಆಸ್ತಿ’ ಎಂಬ ಪರಿಕಲ್ಪನೆಯನ್ನು ಬಳಸಿಕೊಂಡು ನಂತರದ ಕಾಲಘಟ್ಟದಲ್ಲಿ ಆತನನ್ನು ಹಿಡಿಯಲು ಕಾನೂನು ಮುಂದಾಗುತ್ತದೆ. ಭ್ರಷ್ಟ ಮಾರ್ಗದ ಮೂಲಕ ಆಸ್ತಿ ಸಂಪಾದಿಸುವ ಸಾರ್ವಜನಿಕ ಸೇವಕ, ‘ಹಣ ಪಡೆಯುವಾಗ ನನ್ನನ್ನು ಯಾರೂ ಗಮನಿಸಲಿಲ್ಲ’ ಎಂದು ನೆಮ್ಮದಿಯಿಂದ ಇರುವಂತಿಲ್ಲ. ಅಕ್ರಮವಾಗಿ ಸಂಪಾದಿಸಿದ ಹಣ ಇಟ್ಟುಕೊಳ್ಳುವ ಅಥವಾ ಆ ಹಣ ಬಳಸಿ ಆಸ್ತಿ ಖರೀದಿಸುವ ಈ ವ್ಯಕ್ತಿ, ‘ಘೋಷಿತ ಆದಾಯವನ್ನು ಮೀರಿದ ಆಸ್ತಿ’ ಪರಿಕಲ್ಪನೆಯ ಕಾರಣದಿಂದ ಸಿಕ್ಕಿಬೀಳುತ್ತಾನೆ.

ಸುಬ್ರಮಣಿಯನ್  ಸ್ವಾಮಿ ಅವರು ನೀಡಿದ ದೂರಿನ ಬಗ್ಗೆ ಪೊಲೀಸ್ ತನಿಖೆಗೆ ಆದೇಶಿಸಿದ ನಂತರ, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಸ್ಥಾಪಿತವಾದ ಚೆನ್ನೈನ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು, ಜಯಾ ಅವರು ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದಿಸಿರುವುದನ್ನು ಹಾಗೂ ಅವರ ಜೊತೆಗಾರರಾದ ಶಶಿಕಲಾ, ಸುಧಾಕರನ್ ಮತ್ತು ಇಳವರಸಿ ಅವರು ಈ ಕೃತ್ಯಕ್ಕೆ ಸಹಕರಿಸಿರುವುದನ್ನು ವಿಚಾರಣೆಗೆ (cognisance) ತೆಗೆದುಕೊಂಡರು.

ಜಯಾ ಹಾಗೂ ಇತರ ಮೂವರ ವಿರುದ್ಧದ ಈ ಪ್ರಕರಣಕ್ಕೂ ಕರ್ನಾಟಕಕ್ಕೂ ನೇರ ಸಂಬಂಧವಿಲ್ಲ. ಆದರೆ ಜಯಾ ವಿರುದ್ಧದ ಸಾಕ್ಷಿಗಳಿಗೆ ಚೆನ್ನೈನಲ್ಲಿ ಬೆದರಿಕೆ ಒಡ್ಡಲಾಗುತ್ತಿದೆ ಎಂಬುದು ಗಮನಕ್ಕೆ ಬಂತು. ಹಾಗಾಗಿ, 2003ರ ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ ಈ ಪ್ರಕರಣದ ವಿಚಾರಣೆಯನ್ನು ತಮಿಳುನಾಡಿನಿಂದ ಕರ್ನಾಟಕಕ್ಕೆ ವರ್ಗಾವಣೆ ಮಾಡಿತು. ಆಗ, ಕರ್ನಾಟಕ ಸರ್ಕಾರವು ಪ್ರಾಸಿಕ್ಯೂಟರ್‌ (ಆರೋಪಿಯ ವಿರುದ್ಧ ಕ್ರಮ ಜರುಗಿಸುವವ) ಆಯಿತು. ವಿಚಾರಣೆ ಬೆಂಗಳೂರಿನಲ್ಲಿ ನಡೆಯಿತು.

ಇದಾದ 11 ವರ್ಷಗಳ ನಂತರ, ಅಂದರೆ 2014ರ ಸೆಪ್ಟೆಂಬರ್ 27ರಂದು, ಆರೋಪ ಸಾಬೀತಾದ ಕಾರಣ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ನಾಲ್ಕೂ ಜನ ಆರೋಪಿಗಳಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದರು. ಇದರ ಜೊತೆಯಲ್ಲೇ, ಜಯಾ ಅವರು  ₹ 100 ಕೋಟಿ ದಂಡ ಪಾವತಿಸಬೇಕು, ಇತರ ಮೂವರು ತಲಾ ₹ 10 ಕೋಟಿ ದಂಡ ಕಟ್ಟಬೇಕು ಎಂದು ಆದೇಶದಲ್ಲಿ ಹೇಳಲಾಯಿತು. ಸುಪ್ರೀಂ ಕೋರ್ಟ್‌ ಮಂಗಳವಾರ ಎತ್ತಿಹಿಡಿದಿರುವುದು ಇದೇ ಆದೇಶವನ್ನು. ಆದರೆ ಜಯಾ ಅವರಿಗೆ ಅನ್ವಯವಾಗಬೇಕಿದ್ದ ಶಿಕ್ಷೆಯ ಭಾಗಗಳನ್ನು ಕೈಬಿಡಲಾಗಿದೆ.

ವಿಶೇಷ ನ್ಯಾಯಾಲಯವು ಈ ಅಂಶಗಳನ್ನು ಹೇಳಿತ್ತು: 1) ಜಯಾ ಅವರು 1991ರಿಂದ 1996 ನಡುವಣ ಅವಧಿಯಲ್ಲಿ ₹ 9.91 ಕೋಟಿ ಆದಾಯ ಮಾತ್ರ ತೋರಿಸಲು ಸಾಧ್ಯ. 2) ಆದರೆ, ಅವರು ಈ ಅವಧಿಯಲ್ಲಿ ₹ 63.51 ಕೋಟಿ ಮೌಲ್ಯದ ಆಸ್ತಿ ಸಂಪಾದಿಸಿದ್ದಾರೆ. 3) ಅವರಿಗೆ ₹ 53.60 ಕೋಟಿ ಮೌಲ್ಯದ ಆಸ್ತಿಯ ಮೂಲವನ್ನು ವಿವರಿಸಲು ಸಾಧ್ಯವಾಗಿಲ್ಲ. ವಿಶೇಷ ನ್ಯಾಯಾಲಯ ಪ್ರಮುಖವಾಗಿ ಹೇಳಿದ್ದು ಇಷ್ಟು.
ಈ ಆದೇಶ ಪ್ರಶ್ನಿಸಿ ನಾಲ್ಕೂ ಜನ ಕರ್ನಾಟಕ ಹೈಕೋರ್ಟ್‌ಗೆ ಮನವಿ ಸಲ್ಲಿಸಿದರು. ವಿಶೇಷ ನ್ಯಾಯಾಲಯದ ಆದೇಶವನ್ನು ರದ್ದು ಮಾಡಿದ ಹೈಕೋರ್ಟ್‌, ನಾಲ್ಕೂ ಜನ ನಿರ್ದೋಷಿಗಳು ಎಂದು 2015ರ ಮೇ 11ರಂದು ಹೇಳಿತು. ಆರೋಪಿಗಳ ಆದಾಯ ಹಾಗೂ ಆಸ್ತಿಯ ಮೌಲ್ಯ ಲೆಕ್ಕ ಹಾಕುವಲ್ಲಿ ವಿಶೇಷ ನ್ಯಾಯಾಲಯ ತಪ್ಪು ಮಾಡಿದೆ ಎಂದು ಹೈಕೋರ್ಟ್‌ ಹೇಳಿತು.

1991ರಿಂದ 1996ರ ನಡುವಣ ಅವಧಿಯಲ್ಲಿ ₹ 34.76 ಕೋಟಿ ಆದಾಯವನ್ನು ಜಯಾ ಅವರು ತೋರಿಸಲು ಸಾಧ್ಯವಿತ್ತು. ಆದರೆ ಅವರಿಗೆ ₹ 9.91 ಕೋಟಿಗಿಂತ ಹೆಚ್ಚಿನ ಆದಾಯ ತೋರಿಸಲು ಆಗದು ಎಂದು ವಿಶೇಷ ನ್ಯಾಯಾಲಯ ಹೇಳಿದ್ದು ತಪ್ಪು. ವಿಶೇಷ ನ್ಯಾಯಾಲಯ ಹೇಳಿರುವಂತೆ ಜಯಾ ಅವರ ಆಸ್ತಿ ಮೌಲ್ಯ ₹ 63.51 ಕೋಟಿ ಅಲ್ಲ. ಅದರ ಮೌಲ್ಯ ₹ 37.59 ಕೋಟಿ ಮಾತ್ರ. ಹಾಗಾಗಿ, ವಿವರಣೆ ಸಿಗದ ಆಸ್ತಿಯ ಮೌಲ್ಯ ₹ 2.82 ಕೋಟಿ ಮಾತ್ರ, ₹ 53.60 ಕೋಟಿ ಅಲ್ಲ ಎಂದು ಹೈಕೋರ್ಟ್‌ ಹೇಳಿತು.

ಅಂದರೆ, ಹೈಕೋರ್ಟ್‌ ಆದೇಶದಲ್ಲಿ ಕೂಡ ಜಯಾ ಅವರಿಗೆ ಸೇರಿದ, ವಿವರಣೆಗೆ ಸಿಕ್ಕದ ₹ 2.82 ಕೋಟಿ ಮೊತ್ತದ ಆಸ್ತಿ ಬಗ್ಗೆ ಉಲ್ಲೇಖವಿತ್ತು ಎಂಬುದು ಸ್ಪಷ್ಟ. ಹಣದುಬ್ಬರ, ಆಸ್ತಿ ಮೌಲ್ಯಮಾಪನ ಮಾಡುವಲ್ಲಿ ಆಗುವ ವ್ಯತ್ಯಾಸಗಳು ಹಾಗೂ ಕಾಲಕಾಲಕ್ಕೆ ಆಸ್ತಿ ಮೌಲ್ಯ ನಿರ್ಧರಿಸದೆ ಇರುವ ಕಾರಣಗಳಿಂದಾಗಿ, ಆರೋಪಿಯ ಅಕ್ರಮ ಆಸ್ತಿಯು ಘೋಷಿತ ಆದಾಯದ ಶೇಕಡ 10ರಷ್ಟಕ್ಕಿಂತ ಕಡಿಮೆ ಇದ್ದರೆ, ಆತನಿಗೆ ಸಾಮಾನ್ಯವಾಗಿ ಶಿಕ್ಷೆಯಾಗುವುದಿಲ್ಲ. ಹಾಗಾಗಿ, ಜಯಾ ಅವರಲ್ಲಿ ಕಂಡುಬಂದ ₹ 2.82 ಕೋಟಿ ಮೌಲ್ಯದ ವಿವರಣೆಗೆ ಸಿಗದ ಆಸ್ತಿ ಪ್ರಮಾಣ, ಅವರ ಘೋಷಿತ ಆದಾಯದ ಶೇಕಡ 8.12ರಷ್ಟು ಮಾತ್ರ ಎಂದು ಹೈಕೋರ್ಟ್‌ ಹೇಳಿತು. ಈ ಎಲ್ಲ ಕಾರಣಗಳನ್ನು ಮುಂದಿಟ್ಟು ಹೈಕೋರ್ಟ್‌, ಜಯಾ ಹಾಗೂ ಇತರ ಮೂವರನ್ನು ದೋಷಮುಕ್ತಗೊಳಿಸಿತು.

ಕರ್ನಾಟಕ ಸರ್ಕಾರ ಈ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೊರೆ ಹೋಯಿತು. ಹೈಕೋರ್ಟ್‌ ಆದೇಶ ರದ್ದು ಮಾಡಿದ ಸುಪ್ರೀಂ ಕೋರ್ಟ್‌, ವಿಶೇಷ ನ್ಯಾಯಾಲಯದ ಆದೇಶಕ್ಕೆ ಮನ್ನಣೆ ನೀಡಿದೆ. ಈ ಪ್ರಕರಣದಲ್ಲಿ, ಜಯಾ ಅವರು ತಮಗೆ ಕೆಲವು ವಸ್ತುಗಳು ಉಡುಗೊರೆಯಾಗಿ ಬಂದಿವೆ ಎಂದು ಹೇಳಿಕೊಂಡಿದ್ದನ್ನು ಪರಿಗಣಿಸಲಾಗದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ‘ಇಂಥ ಉಡುಗೊರೆಗಳು ನ್ಯಾಯಬದ್ಧ ಎಂದು ಪರಿಗಣಿಸಿದರೆ, ಘೋಷಿತ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಎಂಬ ಪರಿಕಲ್ಪನೆಯೇ ನಿರುಪಯುಕ್ತ ಆಗಿಬಿಡುತ್ತದೆ’ ಎಂದು ಕೋರ್ಟ್‌ ಹೇಳಿರುವುದು ಮಹತ್ವದ್ದು. ಮುಂಬರುವ ದಿನಗಳಲ್ಲಿ ಕೂಡ, ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಈ ಅಂಶ ಉಲ್ಲೇಖವಾಗಲಿದೆ.

ಆರೋಪಿಯು ಸಲ್ಲಿಸುವ ಆದಾಯ ತೆರಿಗೆ ವಿವರಗಳನ್ನು ಪರಿಶೀಲಿಸದೆ ನಂಬಬಾರದು ಎಂದೂ ತೀರ್ಪಿನಲ್ಲಿ ಹೇಳಲಾಗಿದೆ. ಕೃಷಿ ಮೂಲದಿಂದ ಬಂದಿದ್ದು ಎಂದು ಜಯಾ ಅವರು ತೋರಿಸಿದ್ದ ಆದಾಯದ ಪ್ರಮಾಣವನ್ನು ಸುಪ್ರೀಂ ಕೋರ್ಟ್‌ ಒಪ್ಪಿಲ್ಲ. ಏಕೆಂದರೆ, ಅವರಿಗೆ ಅಷ್ಟು ಪ್ರಮಾಣದ ಆದಾಯ ಕೃಷಿ ಮೂಲದಿಂದ ಬರುವ ಸಾಧ್ಯತೆ ಇರಲೇ ಇಲ್ಲ. ಹೈಕೋರ್ಟ್‌, ಸುಧಾಕರನ್‌ ಮದುವೆಯ ಖರ್ಚುಗಳ ಮೊತ್ತವನ್ನು ಕಡಿಮೆಯಾಗಿ, ಕೆಲವು ಕಟ್ಟಡಗಳ ನಿರ್ಮಾಣ ವೆಚ್ಚವನ್ನು ಹೆಚ್ಚಿಸಿ ಅಂದಾಜಿಸಿದ್ದನ್ನು ಕೂಡ ಸುಪ್ರೀಂ ಕೋರ್ಟ್‌ ಒಪ್ಪಿಲ್ಲ. ಈ ಎರಡು ವಿಚಾರಗಳಲ್ಲಿ ಹೈಕೋರ್ಟ್‌ ಗಂಭೀರ ತಪ್ಪು ಮಾಡಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಜಯಾ ಅವರು ಮೃತರಾಗಿರುವ ಕಾರಣ, ಶಿಕ್ಷೆಗೆ ಗುರಿಯಾಗಬೇಕಿರುವುದು ಶಶಿಕಲಾ, ಸುಧಾಕರನ್ ಮತ್ತು ಇಳವರಸಿ ಮಾತ್ರ. ಜಯಾ ಅವರು ₹ 100 ಕೋಟಿ ದಂಡ ಪಾವತಿಸಬೇಕು ಎಂದು ವಿಶೇಷ ನ್ಯಾಯಾಲಯ ಹೇಳಿದ್ದರ ಬಗ್ಗೆ ಸುಪ್ರೀಂ ಕೋರ್ಟ್‌ ಏನನ್ನೂ ಹೇಳಿಲ್ಲ. ಶಶಿಕಲಾ, ಸುಧಾಕರನ್ ಮತ್ತು ಇಳವರಸಿ ಅವರು ಜಯಾ ಸಂಬಂಧಿಗಳಾಗಿರದಿದ್ದರೂ, ಅವರ ಜೊತೆ ವಾಸಿಸುತ್ತಿದ್ದರು ಎಂಬುದನ್ನು ವಿಶೇಷ ನ್ಯಾಯಾಲಯ ಹಾಗೂ ಸುಪ್ರೀಂ ಕೋರ್ಟ್‌ ಹೇಳಿವೆ. ಆಸ್ತಿ ಗುರುತಿಸಿ, ಅದನ್ನು ಖರೀದಿಸಲು ಸರ್ಕಾರಿ ಯಂತ್ರದ ದುರ್ಬಳಕೆ ಆಗಿರುವುದಕ್ಕೂ ಆಧಾರವಿದೆ. ಈ ನಾಲ್ವರು ಸೇರಿ 32 ಕಂಪೆನಿಗಳನ್ನು ಆರಂಭಿಸಿದ್ದರು. ಈ ಪೈಕಿ ಬಹುತೇಕ ಕಂಪೆನಿಗಳಿಗೆ ತಮ್ಮದೇ ಆದ ವಹಿವಾಟು ಇರಲಿಲ್ಲ. ಜಯಾ ಮತ್ತು ಅವರ ಜೊತೆಗಾರರಿಗೆ ಅಕ್ರಮವಾಗಿ ಆಸ್ತಿ ಸಂಪಾದಿಸಲು ನೆರವು ನೀಡುವುದೇ ಈ ಕಂಪೆನಿಗಳ ಕೆಲಸವಾಗಿತ್ತು.

ನ್ಯಾಯಾಂಗದ ಸಮಯವನ್ನು ಈ ಮಟ್ಟಿಗೆ ಬಳಸಿಕೊಂಡ ಮತ್ತೊಂದು ಪ್ರಕರಣ ಈಚಿನ ದಶಕಗಳಲ್ಲಿ ಬೇರೆ ಯಾವುದೂ ಇಲ್ಲ. ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಹಾಗೂ ವಿಶೇಷ ನ್ಯಾಯಾಲಯ ಹೇಳಿರುವ ನ್ಯಾಯದ ಮಾತುಗಳು ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಮುಂದೆ ಕೂಡ ಉಲ್ಲೇಖವಾಗುವ ಸಾಧ್ಯತೆ ಇದೆ. ಹೈಕೋರ್ಟ್‌ ನೀಡಿದ್ದ ಆದೇಶ ಹಾಗೂ ಅದು ನೆಚ್ಚಿಕೊಂಡಿದ್ದ ನ್ಯಾಯ ನಿರ್ಣಯದ ಮಾರ್ಗವನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿದೆ. ಈ ತೀರ್ಪು ಭ್ರಷ್ಟರಲ್ಲಿ ನಡುಕ ಹುಟ್ಟಿಸುವಂತಿದೆ.
- ಲೇಖಕ ಸುಪ್ರೀಂ ಕೋರ್ಟ್‌ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT