ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾಕ್ಕೆ ಸ್ಟಾರ್ಕ್‌ ಬಲ

ಕ್ರಿಕೆಟ್‌: ಪ್ರವಾಸಿ ತಂಡದ ಕಠಿಣ ಕಸರತ್ತು
Last Updated 15 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ನವದೆಹಲಿ/ಮುಂಬೈ: ಮುಂದಿನ ವಾರ ಆರಂಭವಾಗಲಿರುವ ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಗೆಲುವು ಯಾರಿಗೆ ಎನ್ನುವ ಕುತೂಹಲ ಒಂದೆಡೆಯಾದರೆ, ವಿರಾಟ್ ಕೊಹ್ಲಿಯನ್ನು ಕಟ್ಟಿ ಹಾಕುವುದು ಹೇಗೆ ಎನ್ನುವ  ಚರ್ಚೆ ಇನ್ನೊಂದೆಡೆ ನಡೆಯುತ್ತಿದೆ.

ಈ ಪ್ರಶ್ನೆಗೆ ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ ಮೈಕಲ್‌ ಹಸ್ಸಿ ಉತ್ತರ ನೀಡಿದ್ದಾರೆ. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ವಿರಾಟ್‌ ಕೊಹ್ಲಿ ಅವರ ಸವಾಲನ್ನು ಎದುರಿಸಲು ನಮ್ಮ ತಂಡದ ಬೌಲರ್‌ಗಳು ಸಮರ್ಥರಾಗಿದ್ದಾರೆ. ಮೈಕಲ್‌ ಸ್ಟಾರ್ಕ್‌ ಎನ್ನುವ ಅಸ್ತ್ರ ನಮ್ಮಲ್ಲಿದೆ. ನಮ್ಮ ತಂಡಕ್ಕೆ ಅವರ ಬಲವಿದೆ’ ಎಂದಿದ್ದಾರೆ.

ಬಲಗೈ ಬ್ಯಾಟ್ಸ್‌ಮನ್‌ ಕೊಹ್ಲಿ ಇತ್ತೀಚಿಗೆ ಕ್ರಿಕೆಟ್‌ ದಂತಕಥೆ ಬ್ರಾಡ್ಮನ್‌ ದಾಖಲೆ ಅಳಿಸಿ ಹಾಕಿದ್ದರು. ಸತತ ಸರಣಿಗಳಲ್ಲಿ ನಾಲ್ಕು ದ್ವಿಶತಕ ಹೊಡೆದಿದ್ದರು.

‘ಬೌಲಿಂಗ್‌ನಲ್ಲಿ ನಮ್ಮ ತಂಡ ಬಲಿಷ್ಠವಾಗಿದೆ. ಸ್ಟಾರ್ಕ್‌ ವಿದೇಶಿ ನೆಲದಲ್ಲಿ ಉತ್ತಮ ಬೌಲಿಂಗ್ ಮಾಡುತ್ತಾರೆ. ರಿವರ್ಸ್‌ ಸ್ವಿಂಗ್‌ ಎಸೆತಗಳನ್ನು ಹಾಕುವಲ್ಲಿ  ನಿಪುಣರು. ನಾಯಕ ಸ್ಟೀವನ್‌ ಸ್ಮಿತ್ ಹಿಂದೆ ಭಾರತದ ನೆಲದಲ್ಲಿ ಅನೇಕ ಪಂದ್ಯಗಳನ್ನಾಡಿದ್ದಾರೆ. ಟೆಸ್ಟ್ ಪಂದ್ಯಗಳಲ್ಲಿ ಸಾಕಷ್ಟು ತಾಳ್ಮೆಯಿಂದ ಆಡಿದರೆ ರನ್ ಬರುತ್ತವೆ’ ಎಂದು ಹಸ್ಸಿ ಅಭಿಪ್ರಾಯಪಟ್ಟಿದ್ದಾರೆ.

ಕಸರತ್ತು: ಫೆಬ್ರುವರಿ 23ರಿಂದ ಆರಂಭವಾಗಲಿರುವ ಟೆಸ್ಟ್‌ ಸರಣಿಗೆ ಆಸ್ಟ್ರೇಲಿಯಾ ತಂಡದ ಆಟಗಾರರು ಬುಧವಾರ ಮುಂಬೈನ ಬ್ರಬೋರ್ನ್‌ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿದರು. ಮೊದಲ ಟೆಸ್ಟ್‌ ಪುಣೆಯಲ್ಲಿ ಆಯೋಜನೆಯಾಗಿದೆ.ಎಡಗೈ ಬ್ಯಾಟ್ಸ್‌ಮನ್‌ ಡೇವಿಡ್‌ ವಾರ್ನರ್‌, ಸ್ಮಿತ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌ ಮತ್ತು ಉಸ್ಮಾನ್ ಕವಾಜಾ ಅವರು ನೆಟ್ಸ್‌ನಲ್ಲಿ ಹೆಚ್ಚು ಹೊತ್ತು ಬೆವರು ಹರಿಸಿದರು. ವಿಕೆಟ್‌ಗಳ ನಡುವೆ ಓಡುವ ಅಭ್ಯಾಸಕ್ಕೆ ಒತ್ತು ಕೊಟ್ಟರು. ಇನ್ನೂ ಕಲೆ ಆಟಗಾರರು ಕ್ಯಾಚ್ ಪಡೆಯುವ ಕಸರತ್ತು ನಡೆಸಿದರು.

ಭಾರತದ ಪಿಚ್‌ಗಳು ಸ್ಪಿನ್ನರ್‌ಗಳಿಗೆ ನೆರವಾಗುವ ತಂತ್ರವನ್ನು ಚೆನ್ನಾಗಿ ಅರಿತಿರುವ ಕಾಂಗರೂಗಳ ನಾಡಿನ ತಂಡದವರು ಇದಕ್ಕಾಗಿ ಯೋಜನೆಗಳನ್ನು ರೂಪಿಸುತ್ತಿದ್ದಾರೆ.

‘ಭಾರತ ಉತ್ತಮ ಸ್ಪಿನ್ನರ್‌ಗಳನ್ನು ಒಳಗೊಂಡಿದೆ. ಅವರನ್ನು ತುಂಬಾ ಗೌರವಿಸುತ್ತೇನೆ. ಅಷ್ಟೇ ಅಲ್ಲ, ಅಶ್ವಿನ್‌ ಅವರ ಸ್ಪಿನ್‌ ದಾಳಿಯನ್ನು ಎದುರಿಸಲು ಯೋಜನೆ ರೂಪಿಸಿದ್ದೇನೆ’ ಎಂದು ಡೇವಿಡ್‌ ವಾರ್ನರ್‌ ಹೇಳಿದ್ದಾರೆ.

ನಾಳೆಯಿಂದ ಅಭ್ಯಾಸ ಪಂದ್ಯ
ಟೆಸ್ಟ್‌ ಸರಣಿಗೆ ಸಜ್ಜಾಗುವ ನಿಟ್ಟಿನಲ್ಲಿ ಮಹತ್ವದ್ದೆನಿಸಿರುವ ಮೂರು ದಿನಗಳ ಅಭ್ಯಾಸ ಪಂದ್ಯ ಶುಕ್ರವಾರ ಬ್ರಬೋರ್ನ್‌ ಕ್ರೀಡಾಂಗಣದಲ್ಲಿ ಆರಂಭ
ವಾಗಲಿದೆ. ಆಸ್ಟ್ರೇಲಿಯಾ ಮತ್ತು ಭಾರತ ‘ಎ’ ತಂಡಗಳ ನಡುವೆ ಪಂದ್ಯ ನಡೆಯಲಿದೆ. ಆತಿಥೇಯ ತಂಡವನ್ನು ಹಾರ್ದಿಕ್‌ ಪಾಂಡ್ಯ ಮುನ್ನಡೆಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT