ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ವಲಯಕ್ಕೆ ಮತ್ತೆ ಸೋಲು

ಕ್ರಿಕೆಟ್‌: ವಿನಯ್‌, ಮಯಂಕ್‌ ಅರ್ಧಶತಕ ವ್ಯರ್ಥ
Last Updated 15 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಮುಂಬೈ: ಚುರುಕಿನ ಬೌಲಿಂಗ್ ಮಾಡುವಲ್ಲಿ ವಿಫಲವಾದ ದಕ್ಷಿಣ ವಲಯ ತಂಡ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟ್ವೆಂಟಿ–20 ಕ್ರಿಕೆಟ್ ಟೂರ್ನಿ
ಯಲ್ಲಿ ಮತ್ತೊಂದು ನಿರಾಸೆ ಕಂಡಿದೆ.

ವಾಂಖೆಡೆ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಪೂರ್ವ ವಲಯ ಫೀಲ್ಡಿಂಗ್ ಆಯ್ಕೆ  ಮಾಡಿಕೊಂಡಿತು. ದಕ್ಷಿಣ ವಲಯ ನಿಗದಿತ ಓವರ್‌ಗಳಲ್ಲಿ ಆರು ವಿಕೆಟ್‌ ಕಳೆದುಕೊಂಡು 178 ರನ್ ಗಳಿಸಿತ್ತು. ಸವಾಲಿನ ಗುರಿಯನ್ನು ಮನೋಜ್‌ ತಿವಾರಿ ಮುಂದಾಳತ್ವದ ಪೂರ್ವ ವಲಯ  ಎರಡು ಎಸೆತಗಳು ಬಾಕಿ ಇರುವಂತೆ  ತಲುಪಿ ನಾಲ್ಕು ಪಾಯಿಂಟ್ಸ್ ತನ್ನದಾಗಿಸಿಕೊಂಡಿತು.

ಇದು ದಕ್ಷಿಣ ವಲಯ ತಂಡಕ್ಕೆ ಎದುರಾದ ಎರಡನೇ ಸೋಲು. ಮೊದಲ ಪಂದ್ಯದಲ್ಲಿ ಉತ್ತರ ವಲಯ ವಿರುದ್ಧ ಪರಾಭವಗೊಂಡಿತ್ತು.
ಪ್ರಶಸ್ತಿ ಗೆಲ್ಲುವ ಸ್ಪರ್ಧೆಯಲ್ಲಿ ಉಳಿಯಲು  ದಕ್ಷಿಣ ವಲಯಕ್ಕೆ  ಗೆಲುವು ಅಗತ್ಯವಿತ್ತು. ತನ್ಮಯ್ ಅಗರವಾಲ್‌, ದಿನೇಶ್ ಕಾರ್ತಿಕ್, ಹನುಮ ವಿಹಾರಿ ಹೀಗೆ ಪ್ರಮುಖ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಕಂಡರು.

ಆರಂಭಿಕ ಬ್ಯಾಟ್ಸ್‌ಮನ್‌ ಕರ್ನಾಟಕದ ಮಯಂಕ್‌ ಅಗರವಾಲ್‌ ಕೇವಲ 36 ಎಸೆತಗಳಲ್ಲಿ ಒಂಬತ್ತು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳು ಸೇರಿದಂತೆ 72 ರನ್ ಗಳಿಸಿದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಆರ್‌. ವಿನಯ್ ಕುಮಾರ್‌ 47 ಎಸೆತಗಳಲ್ಲಿ 68 ರನ್ ಬಾರಿಸಿದರು. ಇವರು ಎರಡನೇ ವಿಕೆಟ್‌ಗೆ  63 ಎಸೆತಗಳಲ್ಲಿ 112 ರನ್ ಗಳಿಸಿದರು. ಕರ್ನಾಟಕದ ಇನ್ನೊಬ್ಬ ಬ್ಯಾಟ್ಸ್‌ಮನ್ ಪವನ್‌ ದೇಶಪಾಂಡೆ 21 ರನ್‌ ಗಳಿಸಿದರು. ದಕ್ಷಿಣ ವಲಯ ತಂಡ ಗಳಿಸಿದ ಒಟ್ಟು 178 ರನ್‌ಗಳ ಪೈಕಿ ಕರ್ನಾಟಕದ ಆಟಗಾರರೇ 161 ರನ್ ತಂದುಕೊಟ್ಟಿದ್ದು ವಿಶೇಷ.

ಸಂಕ್ಷಿಪ್ತ ಸ್ಕೋರು: ದಕ್ಷಿಣ ವಲಯ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 178 (ಮಯಂಕ್‌ ಅಗರವಾಲ್‌ 72, ಆರ್‌. ವಿನಯ್‌ ಕುಮಾರ್‌ 68, ಪವನ್‌ ದೇಶಪಾಂಡೆ ಔಟಾಗದೆ 21; ಶಯನ್‌ ಘೋಷ್‌ 29ಕ್ಕೆ1, ಮನೋಜ್‌ ತಿವಾರಿ 31ಕ್ಕೆ3). ಪೂರ್ವ ವಲಯ 19.4 ಓವರ್‌ಗಳಲ್ಲಿ 4 ವಿಕೆಟ್‌ಗೆ 181 (ಶ್ರೀವತ್ಸ ಗೋಸ್ವಾಮಿ 25, ಇಶಾಂಕ್‌ ಜಗ್ಗಿ 90, ಸೌರಭ್‌ ತಿವಾರಿ 33, ಮನೋಜ್‌ ತಿವಾರಿ ಔಟಾಗದೆ 14; ವಿಜಯ್‌ ಶಂಕರ್ 18ಕ್ಕೆ1). ಫಲಿತಾಂಶ: ಪೂರ್ವ ವಲಯಕ್ಕೆ 6 ವಿಕೆಟ್‌ ಗೆಲುವು ಹಾಗೂ ನಾಲ್ಕು ಪಾಯಿಂಟ್ಸ್‌.

ಕೇಂದ್ರ ವಲಯ 20  ಓವರ್‌ಗಳಲ್ಲಿ 7 ವಿಕೆಟ್‌ಗೆ 167 (ನಮನ್ ಓಜಾ 48, ಮಹೇಶ್ ರಾವತ್‌ ಔಟಾಗದೆ 57; ಆಶಿಶ್‌ ನೆಹ್ರಾ 26ಕ್ಕೆ3). ಉತ್ತರ ವಲಯ 20  ಓವರ್‌ಗಳಲ್ಲಿ 6 ವಿಕೆಟ್‌ಗೆ 163 (ಶಿಖರ್‌ ಧವನ್‌ 37, ಗೌತಮ್ ಗಂಭೀರ್‌ 20, ರಿಷಬ್‌ ಪಂಥ್‌ 25, ಯುವರಾಜ್ ಸಿಂಗ್‌ 33; ಕರಣ್ ಶರ್ಮಾ 17ಕ್ಕೆ3). ಫಲಿತಾಂಶ: ಕೇಂದ್ರ ವಲಯಕ್ಕೆ 4 ರನ್ ಗೆಲುವು ಹಾಗೂ ನಾಲ್ಕು ಪಾಯಿಂಟ್ಸ್‌.
ಇಂದಿನ ಪಂದ್ಯಗಳು
ಉತ್ತರ ವಲಯ–ಪೂರ್ವ ವಲಯ ಮತ್ತು ದಕ್ಷಿಣ ವಲಯ–ಪಶ್ಚಿಮ ವಲಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT