ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸುಪ್ರೀಂ’ಗೆ ಮೋಹನ ಶಾಂತನಗೌಡರ, ನಜೀರ್‌

Last Updated 15 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಎಸ್‌. ಅಬ್ದುಲ್‌ ನಜೀರ್‌ ಮತ್ತು ಕೇರಳ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಮೋಹನ ಎಂ. ಶಾಂತನಗೌಡರ ಸೇರಿದಂತೆ ಐವರು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾಗಿ ನೇಮಕಗೊಳ್ಳಲಿದ್ದಾರೆ.

ಹೊಸ ನ್ಯಾಯಮೂರ್ತಿಗಳ ನೇಮಕಕ್ಕೆ ಸಂಬಂಧಿಸಿದ ಕಡತಗಳಿಗೆ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಸಹಿ ಹಾಕಿದ್ದು, ಈ ಸಂಬಂಧ ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲಾಗುವುದು ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

ಮೋಹನ ಎಂ. ಶಾಂತನಗೌಡರ: ಮೋಹನ ಎಂ. ಶಾಂತನಗೌಡರ ಅವರು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ವಿ. ಪಾಟೀಲ ಅವರ ಮಾರ್ಗದರ್ಶನದಲ್ಲಿ ವಕೀಲಿ ವೃತ್ತಿ ನಡೆಸಿದವರು.

1980ರಲ್ಲಿ ವಕೀಲರಾಗಿ ಹೆಸರು ನೋಂದಾಯಿಸಿಕೊಂಡ ಶಾಂತನಗೌಡರ ಅವರು ಆರಂಭದಲ್ಲಿ ಧಾರವಾಡದಲ್ಲಿ ವಕೀಲರಾಗಿ ಕೆಲಸ ಮಾಡಿದರು. ನಂತರ, ಬೆಂಗಳೂರಿಗೆ ಬಂದ ಅವರು ಆಗ ವಕೀಲರಾಗಿದ್ದ ಪಾಟೀಲರ ಜೊತೆ ಕಿರಿಯ ವಕೀಲರಾಗಿ ಸೇರಿಕೊಂಡರು. 1984ರಲ್ಲಿ ಸ್ವತಂತ್ರವಾಗಿ ವಕೀಲಿಕೆ ಆರಂಭಿಸಿದರು.

1991ರಿಂದ 1993ರ ನಡುವಣ ಅವಧಿಯಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಉಪಾಧ್ಯಕ್ಷರಾಗಿ, 1995ರಿಂದ 1996ರವರೆಗೆ ಪರಿಷತ್ತಿನ ಅಧ್ಯಕ್ಷರಾಗಿ ಕರ್ತವ್ಯ ನಿಭಾಯಿಸಿದರು.
2003ರಲ್ಲಿ ಇವರು ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡರು.

ಎಸ್‌.ಅಬ್ದುಲ್‌ ನಜೀರ್: ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಸ್ಥಾನಕ್ಕೆ ಪದನ್ನೋತಿ ಹೊಂದುತ್ತಿರುವ ರಾಜ್ಯದ ನ್ಯಾಯಮೂರ್ತಿ ಎಸ್‌.ಅಬ್ದುಲ್‌ ನಜೀರ್ ಮೀನುಗಾರರ ದೋಣಿಗಳಲ್ಲಿ ಅಡುಗೆ ಮಾಡುವ ‘ಮಂಜಿ’ಯವರ ಪುತ್ರ.

1958ರ ಜನವರಿ 5ರಂದು ದಕ್ಷಿಣ ಕನ್ನಡದ ಕಾನ ಗ್ರಾಮದಲ್ಲಿ ಜನಿಸಿದ ನಜೀರ್‌ ಪ್ರಾಥಮಿಕ ಶಿಕ್ಷಣವನ್ನು ಮೂಡುಬಿದಿರೆಯ ಅಲಂಗಾರ್‌ ಶಾಲೆಯಲ್ಲಿ, ಪದವಿಯನ್ನು  ಮಹಾವೀರ ಜೈನ್‌ ಕಾಲೇಜಿನಲ್ಲಿ ಹಾಗೂ ಮಂಗಳೂರಿನ ಎಸ್‌ಡಿಎಂ ಕಾಲೇಜಿನಲ್ಲಿ ಕಾನೂನು ಪದವಿ ಪಡೆದರು.
1983ರಲ್ಲಿ ಕಾರ್ಕಳದಲ್ಲಿ ವಕೀಲಿಕೆ ಆರಂಭಿಸಿದ ಅವರು, 1984ರಲ್ಲಿ ಹೈಕೋರ್ಟ್‌ನಲ್ಲಿ ವೃತ್ತಿ ಮುಂದುವರಿಸಿದರು. 2003ರ ಮೇ 12ರಂದು ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿ ಆಗಿ ನೇಮಕಗೊಂಡರು.

ನಜೀರ್‌ ಅವರಿಗೆ ಗುರುವಾರ (ಫೆ.16) ಹೈಕೋರ್ಟ್‌ನಲ್ಲಿ ಬೀಳ್ಕೊಡುಗೆ ನಡೆಯಲಿದ್ದು, ಶುಕ್ರವಾರ (ಫೆ.17) ಬೆಳಿಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ  ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಗುರುವಾರ ಸಂಜೆ ಅವರು ದೆಹಲಿಗೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮದ್ರಾಸ್‌ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸಂಜಯ್‌ ಕಿಶನ್‌ ಕೌಲ್‌, ರಾಜಸ್ತಾನ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ನವೀನ್‌ ಸಿನ್ಹಾ ಮತ್ತು ಛತ್ತೀಸ್‌ಗಡ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದೀಪಕ್‌ ಗುಪ್ತಾ ಅವರಿಗೂ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾಗಿ ಬಡ್ತಿ ಲಭಿಸಲಿದೆ.
ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಜೆ.ಎಸ್‌. ಖೇಹರ್‌ ಮತ್ತು ನ್ಯಾಯಮೂರ್ತಿಗಳಾದ ಪಿನಾಕಿ ಚಂದ್ರ ಘೋಷ್‌ ಹಾಗೂ ಪ್ರಫುಲ್ಲ ಚಂದ್ರ ಪಂತ್‌  ಅವರು ಈ ವರ್ಷ ನಿವೃತ್ತಿ ಹೊಂದಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT