ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ವಿರುದ್ಧ ಚೀನಾ ಪ್ರತಿಭಟನೆ

ತೈವಾನ್‌ ಸಂಸದೀಯ ನಿಯೋಗಕ್ಕೆ ಆತಿಥ್ಯ ನೀಡಿದ್ದಕ್ಕೆ ಆಕ್ಷೇಪ
Last Updated 15 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಬೀಜಿಂಗ್ :ತೈವಾನ್‌ ಸಂಸದೀಯ ನಿಯೋಗಕ್ಕೆ ಆತಿಥ್ಯ ನೀಡಿದ್ದನ್ನು ವಿರೋಧಿಸಿ ಭಾರತದ ವಿರುದ್ಧ ಚೀನಾ ಬುಧವಾರ ರಾಜತಾಂತ್ರಿಕ ಪ್ರತಿಭಟನೆ ದಾಖಲಿಸಿತು.

‘ತೈವಾನ್‌ನ ಸಂಸದೀಯ ನಿಯೋಗವು ನವದೆಹಲಿಗೆ ಭೇಟಿ ನೀಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಲಾಗಿದೆ’ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಜೆಂಗ್‌ ಶುವಾಂಗ್‌ ತಿಳಿಸಿದ್ದಾರೆ.

‘ಚೀನಾದ ಆತಂಕವನ್ನು ಭಾರತ ಅರ್ಥ ಮಾಡಿಕೊಳ್ಳಲಿದೆ ಹಾಗೂ ಅಖಂಡ ಚೀನಾ ನೀತಿಯನ್ನು ಗೌರವಿಸಲಿದೆ ಎಂಬ ವಿಶ್ವಾಸವಿದೆ. ತೈವಾನ್‌ ಸಂಬಂಧಿತ ವಿಚಾರಗಳಲ್ಲಿ ಮತ್ತು ಭಾರತ–ಚೀನಾ ಸಂಬಂಧಗಳ ಸ್ಥಿರ ವೃದ್ಧಿಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ವಿವೇಕದಿಂದ ವ್ಯವಹರಿಸಲಿದೆ ಎಂಬ ಭರವಸೆ ಇದೆ’ ಎಂದು ಜೆಂಗ್‌ ಹೇಳಿದ್ದಾರೆ.

ಭಾರತದಲ್ಲಿನ ತನ್ನ ಕಚೇರಿಯನ್ನು ಮೇಲ್ದರ್ಜೆಗೇರಿಸುವ ಕುರಿತು ತೈವಾನ್‌ನ ಯೋಜನೆಗೆ ಪ್ರತಿಕ್ರಿಯಿಸಿದ ಅವರು, ‘ಚೀನಾ ಮತ್ತು ತೈವಾನ್‌ಗಳೊಂದಿಗೆ ಇತರೆ ದೇಶಗಳು ಏಕಕಾಲದಲ್ಲಿ ಯಾವುದೇ ರೀತಿಯ ಅಧಿಕೃತ ಸಂಪರ್ಕ ಮತ್ತು ವಿನಿಮಯದ ಮೂಲಕ ರಾಜತಾಂತ್ರಿಕ ಸಂಬಂಧ ಹೊಂದುವುದನ್ನು ನಾವು ಯಾವಾಗಲೂ ವಿರೋಧಿಸುತ್ತೇವೆ’ ಎಂದಿದ್ದಾರೆ.

ತೈವಾನ್‌ನ ಮೂವರು ಸದಸ್ಯರ ಮಹಿಳಾ ಸಂಸದೀಯ ನಿಯೋಗ ಫೆ. 12ರಂದು ಭಾರತಕ್ಕೆ ಭೇಟಿ ನೀಡಿದೆ.

ಮಾಧ್ಯಮಗಳ ಎಚ್ಚರಿಕೆ: ತೈವಾನ್‌ಅನ್ನು ದಾಳವಾಗಿ ಬಳಸಿಕೊಳ್ಳಬಾರದು ಎಂದು ಚೀನಾದ ಮಾಧ್ಯಮಗಳು ಭಾರತಕ್ಕೆ ಎಚ್ಚರಿಕೆ ನೀಡಿವೆ. ಸೂಕ್ಷ್ಮ ವಿಚಾರದಲ್ಲಿ ಚೀನಾಕ್ಕೆ ಸವಾಲು ಹಾಕಿದೆ ನವದೆಹಲಿ ಸೋಲು ಎದುರಿಸಬೇಕಾಗುತ್ತದೆ ಎಂದು ಹೇಳಲಾಗಿದೆ. ‘ತೈವಾನ್ ವಿಚಾರದಲ್ಲಿ ಚೀನಾವನ್ನು ಪ್ರಶ್ನಿಸುವ ಮೂಲಕ ಭಾರತ ಬೆಂಕಿಯೊಡನೆ ಸರಸವಾಡುವ ದುಸ್ಸಾಹಸಕ್ಕೆ ಇಳಿದಿದೆ’ ಎಂದು ಸರ್ಕಾರಿ ಸ್ವಾಮ್ಯದ ‘ಗ್ಲೋಬಲ್ ಟೈಮ್‌’ ಹೇಳಿದೆ.

ರಾಜಕೀಯ ಅರ್ಥ ಬೇಡ 
ನವದೆಹಲಿ:
ಚೀನಾದ ಪ್ರತಿಭಟನೆಯನ್ನು ತಳ್ಳಿಹಾಕಿರುವ ಭಾರತ, ತೈವಾನ್‌ ನಿಯೋಗದ ಭೇಟಿ ಅಸಹಜವಲ್ಲ ಮತ್ತು ಅದಕ್ಕೆ ರಾಜಕೀಯ ಅರ್ಥ ಕಲ್ಪಿಸಬೇಕಾಗಿಲ್ಲ ಎಂದು ಪ್ರತಿಕ್ರಿಯೆ ನೀಡಿದೆ.

‘ತೈವಾನ್‌ನ ಶಿಕ್ಷಣ ತಜ್ಞರು, ಉದ್ಯಮಿಗಳು ಮತ್ತು ಸಂಸದರನ್ನು ಒಳಗೊಂಡ ಗುಂಪು ಭಾರತಕ್ಕೆ ಭೇಟಿ ನೀಡಿದೆ. ವ್ಯಾವಹಾರಿಕ, ಧಾರ್ಮಿಕ ಮತ್ತು ಪ್ರವಾಸದ ಉದ್ದೇಶಗಳಿಂದ ಈ ಹಿಂದೆಯೂ ಇಂತಹ ಗುಂಪುಗಳು ಭೇಟಿ ನೀಡಿದ್ದವು’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ವಿಕಾಸ್‌ ಸ್ವರೂಪ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT