ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 114.86 ಕೋಟಿ ಪ್ರಸ್ತಾವ ಸಲ್ಲಿಕೆ

ಜಿಲ್ಲೆಯಲ್ಲಿ ಮುಂಗಾರು, ಹಿಂಗಾರು ಹಂಗಾಮಿನಲ್ಲಿ ಮಳೆ ಕೊರತೆ; 1,87,240 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆನಷ್ಟ
ಅಕ್ಷರ ಗಾತ್ರ

ದಾವಣಗೆರೆ: ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಬೆಳೆ ನಷ್ಟ ಹೊಂದಿರುವ ಜಿಲ್ಲೆಯ ಸಣ್ಣ ಹಾಗೂ ಅತಿ ಸಣ್ಣ ರೈತರು ನೀಡಬೇಕಾದ ಇನ್‌ಪುಟ್‌ ಸಬ್ಸಿಡಿ ಹಣ ಇದುವರೆಗೂ ತಮ್ಮ ಖಾತೆಗಳಿಗೆ ಜಮಾ ಆಗದೇ ಇರುವುದರಿಂದಾಗಿ ರೈತರು ಕಂಗಾಲಾಗಿದ್ದಾರೆ.

ರಾಜ್ಯ ಸರ್ಕಾರವು ಈಗಾಗಲೇ ಜಿಲ್ಲೆಯ ಆರೂ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿದೆ. ಸಕಾಲಕ್ಕೆ ಮಳೆ ಬಾರದಿದ್ದರಿಂದಾಗಿ ಬೆಳೆನಷ್ಟ ಉಂಟಾಗಿ ಬಿತ್ತನೆ ಕಾರ್ಯ, ಗೊಬ್ಬರ ಪೂರೈಕೆ ಸೇರಿದಂತೆ ಕೃಷಿ ಚಟುವಟಿಕೆಗಳಿಗೆ ಮಾಡಿದ ಸಾಲ ತೀರಿಸದೆ ಜಿಲ್ಲೆಯ ಕೆಲ ತಾಲ್ಲೂಕುಗಳಲ್ಲಿನ ರೈತರು ಬದುಕು ಅರಸಿ ಈಗಾಗಲೇ ಗುಳೆ ಹೋಗಿದ್ದಾರೆ.

‘ದಾವಣಗೆರೆ, ಹರಪನಹಳ್ಳಿ, ಜಗಳೂರು ಸೇರಿದಂತೆ ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ಮುಂಗಾರು ಹಂಗಾಮಿನಲ್ಲಿ ಮೆಕ್ಕೆಜೋಳವನ್ನು ಹೆಚ್ಚು ಬಿತ್ತನೆ ಮಾಡಲಾಗಿತ್ತು. ಆದರೆ, ಸಕಾಲಕ್ಕೆ ಮಳೆ ಬಾರದೇ ಇದ್ದ ಪರಿಣಾಮ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಸುಮಾರು 1,83,853 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ. ಹಿಂಗಾರು ಹಂಗಾಮಿನಲ್ಲಿಯೂ ಮಳೆ ಕೈಕೊಟ್ಟಿದ್ದರಿಂದಾಗಿ ಹರಪನಹಳ್ಳಿ, ಹೊನ್ನಾಳಿ ಹಾಗೂ ಜಗಳೂರು ತಾಲ್ಲೂಕಿನಲ್ಲಿ ಸುಮಾರು 3,387 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆನಷ್ಟವಾಗಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಸದಾಶಿವ ಮಾಹಿತಿ ನೀಡಿದರು.

ನಿರೀಕ್ಷಿತ ಮಳೆಯಾಗಲಿಲ್ಲ: ‘ಜಿಲ್ಲೆಯಲ್ಲಿ ಕಳೆದ ಜೂನ್‌ ಮತ್ತು ಜುಲೈನಲ್ಲಿ ಉತ್ತಮ ಮಳೆಯಾಗಿತ್ತು. ಈ ಸಮಯದಲ್ಲಿ ಜಿಲ್ಲೆಯಲ್ಲಿ ಮೆಕ್ಕೆಜೋಳ, ರಾಗಿ ಸೇರಿದಂತೆ ದ್ವಿದಳ ಧಾನ್ಯಗಳಿಗೆ ಉತ್ತಮ ನೀರು ಬಂತು. ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ನಿರೀಕ್ಷಿತ ಮಳೆ ಬೀಳಲಿಲ್ಲ. ಹೀಗಾಗಿ ಫಸಲಿಗೆ ಬಂದ ಅಷ್ಟೂ ಬೆಳೆ ನಷ್ಟವಾಯಿತು. ಅದೇ ರೀತಿಯಲ್ಲಿ ಹಿಂಗಾರು ಹಂಗಾಮಿನಲ್ಲಿಯೂ ಅಕ್ಟೋಬರ್‌, ನವೆಂಬರ್‌ ಹಾಗೂ ಡಿಸೆಂಬರ್‌ನಲ್ಲಿ ಮಳೆ ಆಗಲೇ ಇಲ್ಲ. ಇದರಿಂದಾಗಿ ದಾವಣಗೆರೆ, ಹರಿಹರ ಹಾಗೂ ಚನ್ನಗಿರಿ ತಾಲ್ಲೂಕಿನಲ್ಲಿ ಬಹುತೇಕ ಪ್ರದೇಶಗಳಲ್ಲಿ ರೈತರು ಬಿತ್ತನೆ ಮಾಡಲಿಲ್ಲ’ ಎಂದು ತಿಳಿಸಿದರು.

‘ಮುಂಗಾರು ಹಂಗಾಮಿನ ಅವಧಿಯಲ್ಲಿ 76 ಮಿಲಿ ಮೀಟರ್‌ ಮಳೆಯಾಗಬೇಕಿತ್ತು. ಆದರೆ, ಕೇವಲ 1.55 ಮಿಲಿ ಮೀಟರ್‌ ಮಳೆ ಆಯಿತು. ಹಿಂಗಾರು ಅವಧಿಯಲ್ಲಿ 172 ಮಿಲಿ ಮೀಟರ್‌ ಮಳೆಯ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆದರೆ, ಮಳೆಯಾಗಿದ್ದು ಕೇವಲ 23 ಮೀಲಿ ಮೀಟರ್‌. ಹೀಗಾಗಿ ಜಿಲ್ಲೆಯಲ್ಲಿ ಒಟ್ಟು 1,87,240 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆನಷ್ಟವಾಗಿದೆ’ ಎಂದು ಅವರು ವಿವರ ನೀಡಿದರು.

₹ 114.86 ಕೋಟಿ ಪ್ರಸ್ತಾವ:   ‘2015–16ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಒಟ್ಟು ₹ 112.63 ಕೋಟಿ ಹಾಗೂ ಹಿಂಗಾರು ಹಂಗಾಮಿನಲ್ಲಿ ₹ 2.23 ಕೋಟಿ ಬೆಳೆ ಹಾನಿಯಾಗಿದೆ. ಒಟ್ಟು ₹ 114.86 ಕೋಟಿ ಇನ್‌ಪುಟ್‌ ಸಬ್ಸಿಡಿ ಬಿಡುಗಡೆಗಾಗಿ ಈಗಾಗಲೇ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಹೇಳಿದರು. 

‘2015–16ನೇ ಸಾಲಿನಲ್ಲಿ ಬೆಳೆನಷ್ಟ ಸಂಭವಿಸಿರುವ 1.62 ಲಕ್ಷ ಫಲಾನುಭವಿ ರೈತರ ವಿವರಗಳನ್ನು ಸಂಗ್ರಹಿಸಲಾಗಿದೆ. ಕೇಂದ್ರ ಸರ್ಕಾರವು ಬೆಳೆನಷ್ಟಕ್ಕೆ ಸಂಬಂಧಿಸಿದಂತೆ ಮೊದಲ ಕಂತಿನಲ್ಲಿ ₹ 450 ಕೋಟಿ ಇನ್‌ಪುಟ್‌ ಸಬ್ಸಿಡಿ ಬಿಡುಗಡೆ ಮಾಡಿದೆ ಎನ್ನಲಾಗಿದೆ. ಶೀಘ್ರದಲ್ಲಿಯೇ ಸಂಬಂಧಪಟ್ಟ ರೈತರ ಖಾತೆಗಳಿಗೆ ನೇರವಾಗಿ ಇನ್‌ಪುಟ್‌ ಸಬ್ಸಿಡಿ ಹಣ ಸಂದಾಯವಾಗಲಿದೆ. ರೈತರ ಉಳಿತಾಯ ಖಾತೆಗೆ ಜಮಾ ಆಗುವ ಪರಿಹಾರದ ಹಣವನ್ನು ಬ್ಯಾಂಕ್‌ ಅಧಿಕಾರಿಗಳು ರೈತರ ಸಾಲದ ಕಂತಿಗೆ ಜಮಾ ಮಾಡಿಕೊಳ್ಳುವಂತಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರದ ಸ್ಪಷ್ಟ ನಿರ್ದೇಶನ ಕೂಡ ಇದೆ’ ಎಂದು ತಿಳಿಸಿದರು.

ವಿಳಂಬವಾದರೆ ಹೋರಾಟ: ‘ಈಗಾಗಲೇ ಬೆಳೆನಷ್ಟ ಹಾಗೂ ಸಾಲದ ಹೊರೆಯಿಂದಾಗಿ ರೈತರು ಊರು ಬಿಟ್ಟಿದ್ದಾರೆ. ಬೆಳೆನಷ್ಟ ಪರಿಹಾರದ ಹಣವನ್ನು ಕೂಡಲೇ ರೈತರ ಖಾತೆಗಳಿಗೆ ಜಮಾ ಮಾಡಬೇಕು. ವಿಳಂಬವಾದರೆ ರೈತರು ಮತ್ತೆ ಸಂಕಷ್ಟಕ್ಕೆ ಸಿಲುಕುತ್ತಾರೆ. ಇದಕ್ಕೆ ಅಧಿಕಾರಿಗಳು ಅವಕಾಶ ಮಾಡಿಕೊಡದೇ ಕೂಡಲೇ ಅರ್ಹ ಫಲಾನುಭವಿ ರೈತರ ಖಾತೆಗೆ ಹಣ ಜಮಾ ಮಾಡಬೇಕು. ನಿರ್ಲಕ್ಷಿಸಿದ್ದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ’ ಎಂದು ರೈತ ಮುಖಂಡ ಹೊನ್ನೂರು ಮುನಿಯಪ್ಪ ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT