ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೃಷಿ ಸಂತನಂತೆ ಬದುಕು ಸವೆಸಿದ ಮಲ್ಲಿಕಾರ್ಜುನಶ್ರೀ’

Last Updated 16 ಫೆಬ್ರುವರಿ 2017, 5:50 IST
ಅಕ್ಷರ ಗಾತ್ರ
ಸಿರಿಗೆರೆ: ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಚರಪಟ್ಟಾಧ್ಯಕ್ಷರಾಗಿ ಆರು ದಶಕಗಳ ಕಾಲ ಸಮಾಜದ ಶ್ರೇಯೋಭಿವೃದ್ಧಿಗಾಗಿ ಅಹರ್ನಿಶಿ ಸೇವೆ ಸಲ್ಲಿಸಿ ಕೃಷಿ ಸಂತನಂತೆ ಬದುಕು ಸವೆಸಿದವರು ಮಲ್ಲಿಕಾರ್ಜುನ ಎಂದು ವಿಶ್ರಾಂತ ಆಡಳಿತಾಧಿಕಾರಿ ಜಿ. ನಿಜಲಿಂಗಪ್ಪ ನುಡಿನಮನ ಸಲ್ಲಿಸಿದರು.
 
ಇಲ್ಲಿನ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಅಣ್ಣನ ಬಳಗದವರು ಆಯೋಜಿಸಿದ್ದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿಯ ೯ನೆಯ ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ಸಾಮೂಹಿಕ ಕಲ್ಯಾಣ ಮಹೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು. 
 
‘ಮಲ್ಲಿಕಾರ್ಜುನ ಶ್ರೀಗಳು ಆಗಿನ ಕಾಲದಲ್ಲಿ ಹಳ್ಳಿ ಹಳ್ಳಿಗೆ ಹೋಗಿ ದವಸ, ಧಾನ್ಯಗಳನ್ನು ಸಂಗ್ರಹಿಸಿ ವಿದ್ಯಾರ್ಥಿಗಳಿಗೆ ದಾಸೋಹ ಕೈಂಕರ್ಯ ನೆರವೇರಿಸಿದ್ದರು. ನಾನು ಶಿಷ್ಯನಾಗಿ ಅವರನ್ನು ಹತ್ತಿರದಿಂದ ಕಂಡಿದ್ದೇನೆ. ಅವರ ಕಾಯಕ ನಿಷ್ಠೆ, ಲಿಂಗಪೂಜೆ ನಿಷ್ಠೆ ಹಾಗೂ ಕೃಷಿ ಚಟುವಟಿಕೆಗಳು ಅವರ ಆದರ್ಶಗಳನ್ನು.  ನಮ್ಮ ಜೀವನದಲ್ಲಿ ಅಳವಡಿಸಿಕೊಂಡು  ತೃಪ್ತಿ ಕಂಡುಕೊಳ್ಳಬೇಕಾಗಿದೆ’ ಎಂದು ತಿಳಿಸಿದರು. 
 
ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯ ಗರಡಿಯಲ್ಲಿ ಪಳಗಿದ ಕೃಷಿ ಪಂಡಿತರು ಮಲ್ಲಿಕಾರ್ಜುನ ಶ್ರೀ. ಬೃಹನ್ಮಠದ ಇಂದಿನ ಅಡಿಕೆ, ತೆಂಗು ಹಾಗೂ ಬಾಳೆ ತೋಟಗಳು ಮಲ್ಲಿಕಾರ್ಜುನ ಸ್ವಾಮೀಜಿಯ ಕೊಡುಗೆಗಳು. ಬೃಹನ್ಮಠದ ವಾರ್ಷಿಕ ಆದಾಯ ಹೆಚ್ಚುವಂತೆ ಅವರು ಮಾಡಿದ್ದಾರೆ’ ಎಂದು ಶ್ಲಾಘಿಸಿದರು. ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ 16 ಜೋಡಿಗಳು ಸಾಂಸಾರಿಕ ಜೀವನಕ್ಕೆ ಕಾಲಿಟ್ಟವು. ಅವರು ನೆಮ್ಮದಿಯಿಂದ ಬದುಕಲು ಶ್ರೀಗಳ ಮಾರ್ಗದರ್ಶನ ಅವಶ್ಯ ಎಂದರು.
 
ಪ್ರಾಸ್ತಾವಿಕ ಮಾತನಾಡಿದ ಅಣ್ಣನ ಬಳಗದ ಕ್ರಿಯಾಶೀಲ ಅಧ್ಯಕ್ಷರಾದ ಪ್ರಾಚಾರ್ಯ ಐ.ಜಿ. ಚಂದ್ರಶೇಖರಯ್ಯ, ‘ಸಾಮೂಹಿಕ ಕಲ್ಯಾಣ ಮಹೋತ್ಸವದ ಪಿತಾಮಹ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ. ಪ್ರತಿ ವರ್ಷ ನಡೆಯುತ್ತಿದ್ದ ಸಾಮೂಹಿಕ ಕಲ್ಯಾಣ ಮಹೋತ್ಸವ ತಿಂಗಳಿಗೊಮ್ಮೆ ನಡೆಯುವಂತೆ ಮಾಗದರ್ಶನ ನೀಡಿದವರು’ ಎಂದು ಹೇಳಿದರು. 
 
ಬೆಳಿಗ್ಗೆ 6 ಗಂಟೆಗೆ ಮಲ್ಲಿಕಾರ್ಜುನ ಸ್ವಾಮೀಜಿ ಕರ್ತೃ ಗದ್ದುಗೆಯಲ್ಲಿ ರುದ್ರಾಭಿಷೇಕ, ಇಷ್ಟಲಿಂಗ ದೀಕ್ಷೆ ಹಾಗೂ ನೂತನ ವಧು ವರರಿಗೆ ಮಾಂಗಲ್ಯಧಾರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಆರಂಭದಲ್ಲಿ ಶ್ರೀ ತರಳಬಾಳು ಜಗದ್ಗುರು ಸಂಗೀತ ಪಾಠಶಾಲೆಯ ಮಕ್ಕಳು ವಚನ ಗೀತೆಗಳನ್ನು ಹಾಡಿದರು. ಶಿಕ್ಷಕ ಬಿ.ಎಸ್. ಮರುಳಸಿದ್ದಯ್ಯ ಕಾರ್ಯಕ್ರಮ ರೂಪಿಸಿದರು. ಎಚ್.ಎಸ್. ರವಿ ನೂತನ ವಧು ವರರ ಪರಿಚಯ ಮಾಡಿಕೊಟ್ಟರು.
 
ಮಠದ ಬಿರುದಾವಳಿಗಳೊಂದಿಗೆ ಸಿರಿಗೆರೆಯ ಪ್ರಮುಖ ಬೀದಿಗಳಲ್ಲಿ ಮಲ್ಲಿಕಾರ್ಜುನ ಶ್ರೀಗಳ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು. 
ಆಡಳಿತಾಧಿಕಾರಿ ಪ್ರೊ.ಎಸ್.ಬಿ. ರಂಗನಾಥ್, ಮುಖ್ಯ ಕಾರ್ಯನಿರ್ವಾಹಕ ಅಕಣಾಧಿಕಾರಿ ಕೆ.ಕೆಂಚಪ್ಪ, ಕೆ.ಜಿ ಶಿವಮೂರ್ತಿ ಮತ್ತಿತರರು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT