ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮದ ಗಂಧ ಉತ್ಸವ ಆಚರಣೆ

ಬಿ. ದುರ್ಗ ಗ್ರಾಮದಲ್ಲಿ ಸೈಯ್ಯದ್ ಷಾ ಅಬ್ದುಲ್ಲಾ ಷಾ ಖಾದ್ರಿ ಸ್ಮರಣೆ
Last Updated 16 ಫೆಬ್ರುವರಿ 2017, 5:53 IST
ಅಕ್ಷರ ಗಾತ್ರ
ಚಿಕ್ಕಜಾಜೂರು: ಹಿಂದೂ–ಮುಸ್ಲಿಮರ ಭಾವೈಕ್ಯದ ಸಂಕೇತವಾದ ಹಜ್ರತ್ ಸೈಯ್ಯದ್ ಷಾ ಅಬ್ದುಲ್ಲಾ ಷಾ ಖಾದ್ರಿ ಅವರ 239ನೇ ಸ್ಮರಣಾರ್ಥ ನಡೆದ ಉರುಸ್‌ನ ಅಂಗವಾಗಿ ಬುಧವಾರ ಗಂಧ ಉತ್ಸವ ಆಚರಿಸಲಾಯಿತು.
 
ಸಮೀಪದ ಬಿ. ದುರ್ಗ ಗ್ರಾಮದಲ್ಲಿ ಕ್ರಿ.ಶ. 1778ರಲ್ಲಿ ಮುಸ್ಲಿಂ ಸಂತರಾದ ಹಜ್ರತ್ ಸೈಯ್ಯದ್ ಷಾ ಅಬ್ದುಲ್ಲಾ ಷಾ ಖಾದ್ರಿ ಐಕ್ಯರಾಗಿದ್ದರು. ಅವರ ಸ್ಮರಣಾರ್ಥ ಇಂದಿಗೂ ಹಿಂದೂ ಹಾಗೂ ಮುಸ್ಲಿಮರು ಎರಡು ದಿನಗಳ ಪುಣ್ಯ ಆರಾಧನೆಯನ್ನು ನಡೆಸಿಕೊಂಡು ಬಂದಿದ್ದಾರೆ. ಮೊದಲನೇ ದಿನ ಸಂದಲ್‌ (ಗಂಧ), ಎರಡನೇ ದಿನ ಉರುಸ್‌ ನಡೆಸಿಕೊಂಡು ಬಂದಿದ್ದಾರೆ. 
 
ಖಾದ್ರಿ ಅವರು ಗ್ರಾಮಕ್ಕೆ ಬಂದಾಗ ಹಿಂದೂ ಬಾಂಧವರು ಆಶ್ರಯ ನೀಡಿದ್ದಲ್ಲದೆ, ಐಕ್ಯ ಸ್ಥಳಕ್ಕೆ ಜಾಗವನ್ನೂ ನೀಡಿದ್ದರು. ಎಲ್ಲಾ ಜನಾಂಗದವರು ಸಾಮರಸ್ಯದಿಂದ ಉರುಸ್‌ಗೆ ಬೆಂಬಲ ನೀಡುತ್ತಾ ಬಂದಿದ್ದಾರೆ. ಆದ್ದರಿಂದ ಇಂದಿಗೂ ಖಾದ್ರಿ ಅವರ ಉರುಸ್‌ಗೆ ಗ್ರಾಮದ ಮಾಜಿ ಚೇರ್ಮನ್‌, ದಿವಂಗತ ದೊಡ್ಡ ರುದ್ರಪ್ಪ ಅವರ ಮನೆಯಿಂದ ಗಂಧವನ್ನು ತರುವ ಸಂಪ್ರದಾಯವನ್ನು ನಡೆಸಿಕೊಂಡು ಬರಲಾಗಿದೆ ಎಂದು ದರ್ಗಾ ಸಮಿತಿ ಅಧ್ಯಕ್ಷ ಸೈಯ್ಯದ್‌ ಮಹಮ್ಮದ್‌ ರಿಯಾಜುದ್ದೀನ್‌ ಷಾ ಖಾದ್ರಿ ತಿಳಿಸಿದ್ದಾರೆ.
 
ದರ್ಗಾದಿಂದ ಹೊರಟ ಮುಸ್ಲಿಮರು ದೊಡ್ಡ ರುದ್ರಪ್ಪ ಅವರ ಮನೆಗೆ ತೆರಳಿ, ಅವರ ಮಗ ರಾಮಸ್ವಾಮಿ ಅವರಿಂದ ಧಾರ್ಮಿಕ ಸಂಪ್ರದಾಯದಂತೆ ಗಂಧವನ್ನು ಪಡೆದು, ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. 
 
ಗಂಧ ಮೆರವಣಿಗೆ ಗ್ರಾಮದ ಪ್ರಮುಖ ರಸ್ತೆಯ ವೃತ್ತಕ್ಕೆ ಬರುತ್ತಲೇ ಮುಸ್ಲಿಂ ಭಕ್ತರು ವಿವಿಧ ಬಗೆಯ ಸಲಾಕೆಗಳನ್ನು ಹಣೆ, ಕುತ್ತಿಗೆ, ನಾಲಿಗೆ ಹಾಗೂ ಎದೆ ಭಾಗಕ್ಕೆ ಚುಚ್ಚಿಕೊಂಡು, ಚಮತ್ಕಾರ ಪ್ರದರ್ಶಿಸಿದರು. ನಂತರ ಗಂಧ ಉತ್ಸವವನ್ನು ದರ್ಗಾಕ್ಕೆ ತಂದು ಸಂತರ ಸಮಾಧಿಗೆ ಅರ್ಪಿಸಲಾಯಿತು. ಈ ಧಾರ್ಮಿಕ ಆಚರಣೆಯಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.
 
ರಾತ್ರಿ ವಿಜಯಪುರದ ದಸ್ತಗೀರ್‌ ಬಾಷಾ, ಮುರ್ತುಜಾ ಹಾಗೂ ಸಂಗಡಿಗರಿಂದ ಕನ್ನಡದ ಖವ್ವಾಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಗುರುವಾರ ರಾತ್ರಿ ಗ್ವಾಲಿಯರ್‌ನ ಸಲೀಂ ಅಲ್ತಾಫ್‌ ಹಾಗೂ ಸಂಗಡಿಗರು, ಮುಂಬೈನ ಸುಲ್ತಾನ್ ನಾಜಾಂ ಮತ್ತು ಸಂಗಡಿಗರಿಂದ ಉರ್ದು ಕವ್ವಾಲಿ ಕಾರ್ಯಕ್ರಮ  ಆಯೋಜಿಸಲಾಗಿದೆ.  ಸಂದಲ್‌ ಹಾಗೂ ಉರುಸ್‌ನ ಅಂಗವಾಗಿ ಚಿಕ್ಕಜಾಜೂರಿನ ಪಿಎಸ್ಐ ಮಧು ಹಾಗೂ ಸಿಬ್ಬಂದಿ ಬಿಗಿ ಭದ್ರತೆ ಒದಗಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT