ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧ ಬೇಡಿಕೆ: ನಗರದಲ್ಲಿ ನಾಲ್ಕು ಪ್ರತಿಭಟನೆ

ಬೀದಿಗಿಳಿದ ವಿವಿಧ ಸಂಘಟನೆಗಳ ಕಾರ್ಯಕರ್ತರು, ಸರ್ಕಾರದ ವಿರುದ್ಧ ಅಸಮಾಧಾನ
Last Updated 16 ಫೆಬ್ರುವರಿ 2017, 6:08 IST
ಅಕ್ಷರ ಗಾತ್ರ
ಕಲಬುರ್ಗಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ವಿವಿಧ ಸಂಘಟನೆಗಳ ಸದಸ್ಯರು ಹಾಗೂ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ಮಾಡಿದರು.
 
ಅನುದಾನ ನೀಡಲು ಒತ್ತಾಯ: 371 (ಜೆ) ಕಾಯ್ದೆ ಅಡಿ ಹೈದರಾಬಾದ್ ಕರ್ನಾಟಕ ಪ್ರದೇಶದ ಖಾಸಗಿ ಶಾಲಾ–ಕಾಲೇಜುಗಳಿಗೆ ವೇತನಾನುದಾನ ನೀಡುವಂತೆ ಒತ್ತಾಯಿಸಿ ಈಶಾನ್ಯ ವಲಯದ ಶಿಕ್ಷಕರ ವೇದಿಕೆ ಸದಸ್ಯರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ಮಾಡಿದರು.
 
ಕುಡಿಯುವ ನೀರು, ಶೌಚಾಲಯ, ಕಟ್ಟಡ ನಿರ್ಮಾಣ, ಪೀಠೋಪಕರಣ ಸೇರಿದಂತೆ ಮೂಲ ಸೌಲಭ್ಯ ಕಲ್ಪಿಸಲು ಅನುದಾನ ನೀಡಬೇಕು. ಅನುದಾನರಹಿತ ಶಾಲಾ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಬಿಸಿಯೂಟ, ಸಮವಸ್ತ್ರ, ಪುಸ್ತಕ, ಬೈಸಿಕಲ್ ನೀಡಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಬೇಕು.
ಶೈಕ್ಷಣಿಕ ಉದ್ದೇಶಕ್ಕಾಗಿ ಬಳಕೆಯಾಗುವ ಭೂಮಿಯನ್ನು ಉಚಿತವಾಗಿ ನೋಂದಣಿ ಮಾಡಬೇಕು ಎಂದು ಆಗ್ರಹಿಸಿದರು.
 
ಹೊಸ ಪಿಂಚಣಿ ಯೋಜನೆ ರದ್ದುಗೊಳಿಸಿ, ಹಳೆ ಪಿಂಚಣಿ ಯೋಜನೆ ಮುಂದುವರಿಸಬೇಕು. ಕಾಲ್ಪನಿಕ ವೇತನ ಬಡ್ತಿ ಸಮಸ್ಯೆ ಬಗೆಹರಿಸಬೇಕು. 1995ರ ನಂತರ ಆರಂಭವಾದ ಎಲ್ಲ ಶಿಕ್ಷಣ ಸಂಸ್ಥೆಗಳನ್ನು ಅನುದಾನಕ್ಕೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.
ವೇದಿಕೆಯ ಪದಾಧಿಕಾರಿಗಳಾದ ಎಂ.ಬಿ.ಅಂಬಲಗಿ, ನಿತಿನ್ ಕೋಸಗಿ, ಡಾ. ಪರಮೇಶ್ವರ ಬಿ., ಶಿವನಗೌಡ ಪಾಟೀಲ, ಅಡಿವೆಪ್ಪ  ಚಿಂಚೋಳಿ, ಚನವೀರಪ್ಪ ಸಲಗರ ಇದ್ದರು.
 
ಬಾಕಿ ವೇತನ ಪಾವತಿಸಿ: ಬಾಕಿ ವೇತನ ಪಾವತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿಶಾಲಾ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಸಮಿತಿ ಸದಸ್ಯರು ನಗರದ ಸಮಾಜ ಕಲ್ಯಾಣ ಇಲಾಖೆ ಕಚೇರಿ ಎದುರು ಬುಧವಾರ ಪ್ರತಿಭಟನೆ ಮಾಡಿದರು.
 
ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಡಿಯಲ್ಲಿನ ವಸತಿ ನಿಲಯಗಳಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ನೌಕರರ 5ತಿಂಗಳ ಬಾಕಿ ವೇತನ ಬಿಡುಗಡೆ ಮಾಡಬೇಕು. ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗಳಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ನೌಕರರ  ಬಾಕಿ (ಅರಿಯರ್ಸ್) ಬಿಡುಗಡೆ ಮಾಡಬೇಕು. ನೌಕರರಿಗೆ ಕೊಡುತ್ತಿರುವ ಕಿರುಕುಳ ತಡೆಗಟ್ಟಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
 
ಸಂಘದ ಪದಾಧಿಕಾರಿಗಳಾದ ಭೀಮಶೆಟ್ಟಿ ಯಂಪಳ್ಳಿ, ಮೋಹನ ಕಟ್ಟಿಮನಿ, ಬಾಬು ಸಿಂದಗಿ, ಪರಶುರಾಮ ಹದಲಗಿ, ಭಾಗೀರಥಿ ಹೂವಿನಬಾವಿ, ಮಹಾದೇವಿ ಸಾಗರ ಇದ್ದರು.
 
ಸಾಲ ಮನ್ನಾಕ್ಕೆ ಮನವಿ: ರೈತರ ಸಾಲ ಮನ್ನಾ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ವೀರ ಕನ್ನಡಿಗರ ಸೇನೆ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ಮಾಡಿದರು.
 
ಕ್ರೀಡಾಸಕ್ತರಿಗಾಗಿ ನಗರದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಬೇಕು. ನನೆಗುದಿಗೆ ಬಿದ್ದಿರುವ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು. ಸೇನೆಯ ಪದಾಧಿಕಾರಿಗಳಾದ ಅಮೃತ ಪಾಟೀಲ ಸಿರನೂರ, ಜಗನ್ನಾಥ ಸೂರ್ಯವಂಶಿ, ರವಿ ಒಂಟಿ, ದತ್ತು ಭಾಸಗಿ, ಸಿದ್ದು ಕಂದಗಲ್, ರಾಮಾ ಪೂಜಾರಿ ಇದ್ದರು.
 
ಸಾಲ ಸೌಲಭ್ಯಕ್ಕೆ ಆಗ್ರಹ: ಮುಖ್ಯಮಂತ್ರಿ ಮತ್ತು ಪ್ರಧಾನಮಂತ್ರಿ ಸ್ವಯಂ ಉದ್ಯೋಗ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಸ್ವಯಂ ಉದ್ಯೋಗ ಪ್ರಾರಂಭಿಸಲು ಕೂಡಲೇ ಸಾಲ ಸೌಲಭ್ಯ ನೀಡುವಂತೆ ಒತ್ತಾಯಿಸಿ ಬಹುಜನ ಹೋರಾಟ ಸಮಿತಿ ನಗರ ಘಟಕದ ಕಾರ್ಯಕರ್ತರು ನಗರದ ಲೀಡ್ ಬ್ಯಾಂಕ್ ಎದುರು ಬುಧವಾರ ಪ್ರತಿಭಟನೆ ಮಾಡಿದರು.
 
ಸಾಲ ಸೌಲಭ್ಯ ನೀಡುವಲ್ಲಿ ನಿರ್ಲಕ್ಷ್ಯ ತೋರಿರುವ ಬ್ಯಾಂಕ್ ವ್ಯವಸ್ಥಾಪಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಾಲ ನೀಡಿ ಫಲಾನುಭವಿಗಳಿಗೆ ಅನುಕೂಲ ಕಲ್ಪಿಸಬೇಕು. ಯೋಜನೆ ಅರ್ಹರಿಗೆ ತಲುಪಿಸಬೇಕು ಎಂದು ಆಗ್ರಹಿಸಿದರು. ಸಮಿತಿಯ ಪದಾಧಿಕಾರಿಗಳಾದ ಲಕ್ಷ್ಮಣ ಕೋರಿ, ಮಿಲಿಂದ ಕಣಮುಸ, ಶರಣಮ್ಮ ಮಾಲಿಪಾಟೀಲ, ಶ್ರೀದೇವಿ ಪೊಲೀಸ್ ಪಾಟೀಲ, ಶರಣಬಸಪ್ಪ 
ರಾಜೋಳಕರ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT