ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಶಾಲಾ ಸಿಬ್ಬಂದಿಯಿಂದ ಪ್ರತಿಭಟನೆ

ಅನುದಾನ ರಹಿತ ಶಾಲೆ ಮಕ್ಕಳಿಗೂ ಸರ್ಕಾರದ ಸೌಲಭ್ಯ ಕಲ್ಪಿಸಲು ಆಗ್ರಹ
Last Updated 16 ಫೆಬ್ರುವರಿ 2017, 6:21 IST
ಅಕ್ಷರ ಗಾತ್ರ
ಬೀದರ್: ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ನೀಡುವ ಸೌಲಭ್ಯಗಳನ್ನು ಅನುದಾನ ರಹಿತ ಶಾಲೆಗಳ ವಿದ್ಯಾರ್ಥಿಗಳಿಗೂ ವಿಸ್ತರಿಸಬೇಕು ಎಂದು ಆಗ್ರಹಿಸಿ ಜಿಲ್ಲೆಯ ವಿವಿಧ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಪದಾಧಿಕಾರಿಗಳು ಹಾಗೂ ಶಿಕ್ಷಕರು ನಗರದಲ್ಲಿ ಬುಧವಾರ ಬೃಹತ್‌ ಪ್ರತಿಭಟನೆ ನಡೆಸಿದರು.
 
ಕಲ್ಯಾಣ ಕರ್ನಾಟಕ ಅನುದಾನ ರಹಿತ ಖಾಸಗಿ ಶಾಲಾ ಆಡಳಿತ ಮಂಡಳಿ ಸಂಘದ ನೇತೃತ್ವದಲ್ಲಿ ನಗರದ ನೆಹರೂ ಕ್ರೀಡಾಂಗಣ ಸಮೀಪದ ಸಾಯಿ ಆದರ್ಶ ಪ್ರೌಢ ಶಾಲೆ ಆವರಣದಲ್ಲಿ ಜಮಾಯಿಸಿ ಅಲ್ಲಿಂದ ಜಿಲ್ಲಾ ಸರ್ಕಾರಿ ಆಸ್ಪತ್ರೆ ತಿರುವು, ಡಾ. ಬಿ.ಆರ್‌. ಅಂಬೇಡ್ಕರ್‌ ವೃತ್ತ, ಮಹಾವೀರ ವೃತ್ತ, ಬಸವೇಶ್ವರ ವೃತ್ತ, ಭಗತ್‌ಸಿಂಗ್‌ ವೃತ್ತ, ಶಿವಾಜಿ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆ ನಡೆಸಿದರು. ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಸಲ್ಲಿಸಿದರು.
 
ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಒದಗಿಸುತ್ತಿರುವ ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಶೂಭಾಗ್ಯ, ಬಿಸಿಯೂಟ, ಕ್ಷೀರಭಾಗ್ಯ, ಉಚಿತ ಬೈಸಿಕಲ್‌, ಕರ್ನಾಟಕ ದರ್ಶನ ಪ್ರವಾಸ ಮತ್ತಿತರ ಸೌಲಭ್ಯಗಳನ್ನು ಅನುದಾನ ರಹಿತ ಶಾಲಾ ವಿದ್ಯಾರ್ಥಿಗಳಿಗೂ ಒದಗಿಸಬೇಕು ಎಂದು ಆಗ್ರಹಿಸಿದರು.
 
ಅನುದಾನ ರಹಿತ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ಕನಿಷ್ಠ ವೇತನ ನೀಡಬೇಕು. ಆಡಳಿತ ಮಂಡಳಿಯ ಅಧೀನದಲ್ಲಿ ಇರುವ ಕೃಷಿ ಭೂಮಿಯನ್ನು ಶಾಲೆಗಳ ನಿರ್ಮಾಣಕ್ಕಾಗಿ ಕೃಷಿಯೇತರ (ಎನ್.ಎ) ಭೂಮಿಯನ್ನಾಗಿ ಪರಿವರ್ತಿಸಿ ಕೊಡಬೇಕು. ಅನುದಾನ ರಹಿತ ಶಾಲೆಗಳಿಗೂ ಎಲ್.ಟಿ. (2) ಬಿ ವಿದ್ಯುತ್ ಸರಬರಾಜು ಮಾಡಬೇಕು ಎಂದು ಒತ್ತಾಯಿಸಿದರು.
 
ಅನುಮತಿ ಪಡೆದು 1ರಿಂದ 5ನೇ ತರಗತಿ ವರೆಗೆ ಶಾಲೆ ನಡೆಸುತ್ತಿರುವ ಆಡಳಿತ ಮಂಡಳಿಗೆ ಕೋರಿಕೆ ಅನುಸಾರ ಕೂಡಲೇ 6ರಿಂದ 8ನೇ ತರಗತಿ ವರೆಗೆ ಅನುಮತಿ ನೀಡಬೇಕು. 1995ರ ನಂತರ ಪ್ರಾರಂಭವಾದ ಎಲ್ಲ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಬೇಕು. 8 ವರ್ಷಗಳ ಹಿಂದೆ ಆರಂಭವಾದ ಶಾಲೆಗಳಿಗೆ ಹೈದರಾಬಾದ್‌ ಕರ್ನಾಟಕ ವಿಶೇಷ ಅಭಿವೃದ್ಧಿ ಮಂಡಳಿಯಿಂದ ಅನುದಾನ ಒದಗಿಸಬೇಕು ಎಂದು ಒತ್ತಾಯಿಸಿದರು.
 
ಸೌಕರ್ಯ ಒದಗಿಸಿ: ಅನುದಾನ ರಹಿತ ಶಾಲೆಗಳು ಅನೇಕ ಸಮಸ್ಯೆಗಳ ಮಧ್ಯೆಯೂ ಮಕ್ಕಳಿಗೆ ಗುಣಮಟ್ಟ ಶಿಕ್ಷಣ ಕೊಡುತ್ತಿವೆ. ಸರ್ಕಾರಿ ಶಾಲೆಗಳಿಗಿಂತ ಅನುದಾನ ರಹಿತ ಶಾಲೆಗಳೇ ಉತ್ತಮ ಫಲಿತಾಂಶ ಪಡೆಯುತ್ತಿವೆ. ಆದ್ದರಿಂದ ಅನುದಾನ ರಹಿತ ಶಾಲೆಗಳಿಗೂ ಅಗತ್ಯ ಸೌಕರ್ಯ ಕಲ್ಪಿಸಬೇಕು ಎಂದು ಭಾಲ್ಕಿ ಹಿರೇಮಠದ ಬಸವಲಿಂಗ ಪಟ್ಟದ್ದೇವರು ಆಗ್ರಹಿಸಿದರು.
 
ಪ್ರತಿಭಟನಾ ರ್‍ಯಾಲಿಗೂ ಮುನ್ನ ಸಾಯಿ ಆದರ್ಶ ಪ್ರೌಢ ಶಾಲೆ ಆವರಣದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ನಾರಾಯಣರಾವ್‌ ರಾಂಪುರೆ ಮಾತನಾಡಿ, ಶಿಕ್ಷಣ ಇಲಾಖೆ ಅಧಿಕಾರಿಗಳು ಅನುದಾನ ರಹಿತ ಶಾಲೆಗಳಿಗೆ ಕೇಳಲಾದ ಮಾಹಿತಿಗಳನ್ನೇ ಪದೇ ಪದೇ ಕೇಳಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
 
ಸರ್ಕಾರಿ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರಿಗೆ ಮಾಸಿಕ ಕೇವಲ ₹6 ಸಾವಿರ ವೇತನ ಕೊಡಲಾಗುತ್ತಿದೆ. ಆದರೆ, ಅನುದಾನ ರಹಿತ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ಸರ್ಕಾರದ ನಿಯಮಾನುಸಾರ ವೇತನ ನೀಡುವಂತೆ ಒತ್ತಡ ಹೇರುತ್ತಿರುವುದು ಸರಿಯಲ್ಲ ಎಂದು ತಿಳಿಸಿದರು.
 
ಕಲ್ಯಾಣ ಕರ್ನಾಟಕ ಅನುದಾನ ರಹಿತ ಖಾಸಗಿ ಶಾಲಾ ಆಡಳಿತ ಮಂಡಳಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಭರಶೆಟ್ಟಿ, ಉಪಾಧ್ಯಕ್ಷರಾದ ಬಾಬುಗೊಂಡ, ನಾರಾಯಣ ರಾಂಪುರೆ, ಪ್ರಧಾನ ಕಾರ್ಯದರ್ಶಿ ಗುರುನಾಥರೆಡ್ಡಿ ಚಿಂತಾಕಿ, ಖಜಾಂಚಿ ರಾಜೇಂದ್ರ ಮಣಗೇರೆ, ವಿಕಾಸ ಅಕಾಡೆಮಿ ಜಿಲ್ಲಾ ಘಟಕದ ಸಂಚಾಲಕ ರೇವಣಸಿದ್ದಪ್ಪ ಜಲಾದೆ, ಶಿವರಾಜ ಗಂದಗೆ ಪಾಲ್ಗೊಂಡಿದ್ದರು.
 
* ಅನುದಾನ ರಹಿತ ಶಾಲೆಗಳು ಮಕ್ಕಳಿಗೆ ಸರ್ಕಾರಿ ಶಾಲೆಗಳಿಗಿಂತಲೂ ಗುಣಮಟ್ಟದ ಶಿಕ್ಷಣ ಕೊಡುತ್ತಿವೆ. ಹೀಗಾಗಿ ಅನುದಾನ ರಹಿತ ಶಾಲೆಗಳನ್ನು ನಿರ್ಲಕ್ಷಿಸುವುದು ಸಲ್ಲದು.
ಬಸವಲಿಂಗ ಪಟ್ಟದ್ದೇವರು, ಭಾಲ್ಕಿ ಹಿರೇಮಠ ಸಂಸ್ಥಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT