ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಲ್ಲೂಕು ದಲಿತ ಸಾಹಿತ್ಯ ಸಮ್ಮೇಳನ ನಾಳೆ

ಕವಯತ್ರಿ ಡಾ.ಜಯದೇವಿ ಗಾಯಕವಾಡ ಸರ್ವಾಧ್ಯಕ್ಷೆ
Last Updated 16 ಫೆಬ್ರುವರಿ 2017, 6:24 IST
ಅಕ್ಷರ ಗಾತ್ರ
ಹುಮನಾಬಾದ್: ತಾಲ್ಲೂಕು ದಲಿತ ಸಾಹಿತ್ಯ ಪರಿಷತ್ತು ವತಿಯಿಂದ ಫೆ.17ರಂದು ಇಲ್ಲಿ ತಾಲ್ಲೂಕು ಪ್ರಥಮ ದಲಿತ ಸಾಹಿತ್ಯ ಸಮ್ಮೇಳನ ನಡೆಯಲಿದೆ.
 
ಸಮ್ಮೇಳನದ ಸರ್ವಾಧ್ಯಕ್ಷೆ ಹೈದರಾಬಾದ್‌ ಕರ್ನಾಟಕ ಭಾಗದ ಬರಹಗಾರ್ತಿ, ರಾಜ್ಯದ ಗಜಲ್‌ ಲೇಖಕಿಯರಲ್ಲಿ ಪ್ರಮುಖರಾದ ಡಾ.ಜಯದೇವಿ ಗಾಯಕವಾಡ ಅವರ ಬದುಕು– ಬರಹ ಕುರಿತ ಸಂಕ್ಷಿಪ್ತ ಪರಿಚಯ ಇಲ್ಲಿದೆ. ಬಸವಕಲ್ಯಾಣ ತಾಲ್ಲೂಕು ರಾಜೇಶ್ವರ ಗ್ರಾಮದ ಕಡುಬಡ ಕುಟುಂಬದ ಬಸಮ್ಮ ಮಲ್ಲಪ್ಪ ಗಾಯಕವಾಡ ದಂಪತಿಯ ದ್ವಿತೀಯ ಪುತ್ರಿಯಾಗಿ 1975ರ ಜುಲೈ 1ರಂದು  ಜಯದೇವಿ ಜನಿಸಿದರು.
 
ಪ್ರಾಥಮಿಕ ಹಂತದಿಂದ ಪದವಿಪೂರ್ವ ಕಾಲೇಜು ವರೆಗಿನ ಶಿಕ್ಷಣವನ್ನು ಸ್ವಗ್ರಾಮದಲ್ಲಿ ಪೂರೈಸಿ, ಪದವಿ ಶಿಕ್ಷಣವನ್ನು ಹುಮನಾಬಾದ್ ವೀರಭದ್ರೇಶ್ವರ ಕಾಲೇಜಿನಲ್ಲಿ, ಬಳಿಕ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಕನ್ನಡ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. 2001ರಲ್ಲಿ ‘ಪ್ರಾಚೀನ ಬೌದ್ಧ ವಿದ್ಯಾಕೇಂದ್ರ ಸನ್ನತಿ’ ಮೇಲೆ ಎಂ.ಫಿಲ್‌ ಪದವಿ ಪಡೆದಿದ್ದಾರೆ. ತದನಂತರ 2002ರಲ್ಲಿ ‘ಯಾಜ್ಞಸೇನಿಯ ಆತ್ಮಕಥನ’ ಕಾದಂಬರಿ ಮೂಲಕ ಅವರು ಸಾಹಿತ್ಯ ಕ್ಷೇತ್ರ ಪ್ರವೇಶಿಸುತ್ತಾರೆ.
 
ಜಯದೇವಿ ಅವರು ಹೆತ್ತವರೊಂದಿಗೆ ಅನುಭವಿಸಿದ ಕಷ್ಟ, ದಲಿತ ವಿದ್ಯಾರ್ಥಿನಿಯಾಗಿ ಜೀವನದಲ್ಲಿ ಕಂಡುಂಡ ಕಹಿ ಅನುಭವ, ದಲಿತರ ಒಟ್ಟಾರೆ ದಯನೀಯ ಬದುಕನ್ನು ಕಣ್ಣಾರೆ ಕಂಡು ತುಳಿತಕ್ಕೊಳಗಾದವರೆಲ್ಲ ಮೇಲಸ್ತರಕ್ಕೆ ಬರಬೇಕೆಂಬ ಅವರ ಹಂಬಲಕ್ಕೆ ಸಾಹಿತ್ಯ ಕೃಷಿ ಅತ್ಯುತ್ತಮ ವೇದಿಕೆ ಕಲ್ಪಿಸಿಕೊಟ್ಟಿತು.
 
ಪ್ರಕಟಿತ ಕೃತಿಗಳು: ಮರುಭೂಮಿ ಮಾಡದಿರಿ, ಪ್ರಜ್ಞೆ–ಶೀಲ–ಕರುಣೆ ಗಜಲ್‌, ಹೈ.ಕ ವಿಮೋಚನೆ, ಬಸವಣ್ಣ ಮತ್ತು ಅಂಬೇಡ್ಕರ್, ಕಲ್ಯಾಣದ ಬೆಳಗು, ಸಾಹಿತ್ಯ ಸಂಕ್ರಮಣ, ಮಹಿಳೆ ಜಾಗತೀಕರಣ ಹಾಗೂ ಸವಾಲು, ಸಂಸ್ಕೃತಿ ಸೊಗಡು, ವೀರರಾಣಿ ಚನ್ನಮ್ಮ, ವಚನಕಾರ್ತಿಯರ ಪರಂಪರೆ, ಅಬ್ದುಲ್‌ ಕಲಾಂ, ರಮಾಬಾಯಿ ಅಂಬೇಡ್ಕರ್ ಸೇರಿ ಈವರೆಗೆ 20ಕ್ಕೂ ಅಧಿಕ ಕೃತಿಗಳು ಲೋಕಾರ್ಪಣೆಗೊಂಡಿವೆ. ಇವರ ಕನ್ನಡ ಗಜಲ್‌ಗಳು ಸಂಪಾದನಾ ಗ್ರಂಥ ಗುಲಬರ್ಗಾ ವಿಶ್ವವಿದ್ಯಾಲಯ 2016ರ ಬಿಎ ದ್ವಿತೀಯ ಸೆಮಿಸ್ಟರ್‌ ಪಠ್ಯಕ್ಕೆ ಅಳವಡಿಸಿದೆ.
 
‘ಶೋಷಿತ ಸಮುದಾಯ ಉನ್ನತ ಶಿಕ್ಷಣ ಪಡೆದು, ಸಾಹಿತ್ಯದ ಮುಖೇನ ಸಾಮಾಜಿಕ ಮೇಲಸ್ತರಕ್ಕೇರಬೇಕು’ ಎನ್ನುವುದು ಡಾ.ಜಯದೇವಿ ಗಾಯಕವಾಡ ಅವರ ಮಾತು. ಸದ್ಯ ಹುಮನಾಬಾದ್ ತಾಲ್ಲೂಕು ಚಿಟಗುಪ್ಪ ಸರ್ಕಾರಿ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿರುವ ಅವರು ತಮ್ಮ ಈವರೆಗಿನ ಸಾಧನೆಯ ಹಿಂದೆ ಹೆತ್ತವರು ಮಾತ್ರವಲ್ಲದೆ ಕೈಹಿಡಿದ ಪತಿ ಡಾ.ಗವಿಸಿದ್ದಪ್ಪ ಪಾಟೀಲ, ಹಿರಿಯ ಸಾಹಿತಿ ಹಾಗೂ ವಿದ್ಯಾಗುರು ಎಚ್‌.ಕಾಶಿನಾಥರೆಡ್ಡಿ ಅವರ ಪ್ರೋತ್ಸಾಹ ಸ್ಮರಿಸಲು ಮರೆಯಲಿಲ್ಲ.
 
* ಮೌಢ್ಯತೆ, ಸಂಪ್ರದಾಯ ಮೀರಿ ವೈಚಾರಿಕ ನೆಲೆಗಟ್ಟಿನಲ್ಲಿ ಬುದ್ಧ–ಬಸವ–ಅಂಬೇಡ್ಕರ್‌ ತತ್ವಗಳ ಪಾಲನೆಗೆ ಸಮ್ಮೇಳನ ನಾಂದಿಯಾಗಬೇಕು.
ಡಾ.ಜಯದೇವಿ ಗಾಯಕವಾಡ, ಸರ್ವಾಧ್ಯಕ್ಷೆ, ದಲಿತ ಸಾಹಿತ್ಯ ಸಮ್ಮೇಳನ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT