ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರ ನಿದ್ದೆಗೆಡಿಸಿದ ಲೂಟಿ ಪ್ರಕರಣಗಳು

ಬೀದರ್‌ ಜಿಲ್ಲೆಯಲ್ಲಿ ಮನೆಗಳ್ಳತನ ಪ್ರಕರಣಗಳ ಸಂಖ್ಯೆ ಇಳಿಮುಖ, ಹೆಚ್ಚಿದ ಕೊಲೆ
Last Updated 16 ಫೆಬ್ರುವರಿ 2017, 6:31 IST
ಅಕ್ಷರ ಗಾತ್ರ
ಬೀದರ್: ಚಿನ್ನಾಭರಣ ವ್ಯಾಪಾರಿ, ಹಣಕಾಸು ಸಂಸ್ಥೆ ಹಾಗೂ ಒಂಟಿ ಮಹಿಳೆಯರನ್ನು ಗುರುತಿಸಿ ಹಲ್ಲೆ ನಡೆಸಿ, ಚಿನ್ನಾಭರಣ ಲೂಟಿ ಮಾಡಿದ ಪ್ರಕರಣಗಳಿಂದಾಗಿ ಜಿಲ್ಲೆಯ ಜನತೆಯಲ್ಲಿ ಆತಂಕ ಸೃಷ್ಟಿಯಾಗಿದೆ. ದುಷ್ಕರ್ಮಿಗಳು ಕೃತ್ಯ ಎಸಗಿ ನೆರೆಯ ತೆಲಂಗಾಣ ಹಾಗೂ ಮಹಾರಾಷ್ಟ್ರದ ಗಡಿಯೊಳಗೆ ನುಸುಳುತ್ತಿರುವುದು ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿದೆ.
 
ಬೀದರ್‌ನ ಕಟಕಮ್‌ ಜುವೆಲ್ಲರ್ಸ್‌, ಭಾಲ್ಕಿಯ ಪತ್ತಿನ ಸಂಸ್ಥೆ, ಚಿನ್ನಾಭರಣ ವ್ಯಾಪಾರಿ ಮನೆಯೊಳಗೆ ನುಗ್ಗಿ ದರೋಡೆ ಹಾಗೂ ಔರಾದ್‌ ತಾಲ್ಲೂಕಿನ ಬಲ್ಲೂರ ಗ್ರಾಮದ ಮನೆಯೊಂದರಲ್ಲಿ ನಿದ್ದೆಯಲ್ಲಿದ್ದ ವೃದ್ಧೆಯೊಬ್ಬರ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ಲೂಟಿ ಮಾಡಿದ ಪ್ರಕರಣಗಳು ಪೊಲೀಸರ ನಿದ್ದೆಗೆಡಿಸಿವೆ. ಅಂತರರಾಜ್ಯ ದರೋಡೆಕೋರರ ತಂಡವೇ ಈ ಕೃತ್ಯ ನಡೆಸಿರುವ ಸುಳಿವು ಪಡೆದಿರುವ ಪೊಲೀಸರು ಎರಡು ತಂಡಗಳಲ್ಲಿ ಗಡಿ ಜಿಲ್ಲೆಗಳಲ್ಲಿ ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ.
 
ಪೊಲೀಸ್ ಇಲಾಖೆಯಲ್ಲಿ ಅನೇಕ ಪ್ರಮುಖ ಹುದ್ದೆಗಳು ಖಾಲಿ ಇರುವ ಕಾರಣ ಅನೇಕ ಠಾಣೆಗಳ ಪೊಲೀಸ್‌ ಇನ್‌ಸ್ಪೆಕ್ಟರ್ ಹಾಗೂ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ಗಳಿಗೆ ಬೇರೆ ಠಾಣೆಗಳ ಹೆಚ್ಚುವರಿ ಹೊಣೆ ವಹಿಸಲಾಗಿದೆ. ಬಂದೋಬಸ್ತ್‌ನಲ್ಲೇ ಹೆಚ್ಚು ಸಮಯ ಹೋಗುತ್ತಿರುವ ಕಾರಣ ಪೊಲೀಸ್‌ ಅಧಿಕಾರಿಗಳಿಗೆ ತನಿಖಾ ಕಾರ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳುವುದು ಕಷ್ಟವಾಗುತ್ತಿದೆ. ಇದು ಅಪರಾಧ ಪ್ರಕರಣಗಳ ತನಿಖೆಯ ಮೇಲೂ ಪರಿಣಾಮ ಬೀರುತ್ತಿದೆ.
 
ಮನೆಗಳ್ಳತನ: 2014 ಹಾಗೂ 2015ನೇ ಸಾಲಿನಲ್ಲಿ ಹಗಲಿನಲ್ಲಿ ನಡೆದ ಮನೆಗಳ್ಳತನ ಪ್ರಕರಣಗಳ ಸಂಖ್ಯೆಗೆ ಹೋಲಿಸಿದರೆ 2016ರಲ್ಲಿ ಮನೆಗಳ್ಳತನ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಕಳೆದ ವರ್ಷದ ಅಂಕಿಸಂಖ್ಯೆಗಳಿಗೆ ಹೋಲಿಕೆ ಮಾಡಿದರೆ ರಾತ್ರಿ ವೇಳೆಯಲ್ಲಿ ನಡೆಯುತ್ತಿದ್ದ ಮನೆಗಳ್ಳತನಗಳೂ ಕಡಿಮೆಯಾಗಿವೆ. 2015ರಲ್ಲಿ 128 ಮನೆಗಳ್ಳತನ ಪ್ರಕರಣ ದಾಖಲಾಗಿದ್ದವು. 2016ರಲ್ಲಿ 109 ಮನೆಯ ಬೀಗ ಮುರಿದು ಚಿನ್ನಾಭರಣ ಹಾಗೂ ನಗದು ಕದ್ದೊಯ್ದ ಪ್ರಕರಣಗಳು ದಾಖಲಾಗಿವೆ. ದರೋಡೆ ಹಾಗೂ ಸರಗಳ್ಳತನ ಪ್ರಕರಣಗಳಲ್ಲಿ ಅರ್ಧದಷ್ಟು ಇಳಿಮುಖವಾಗಿದೆ.
 
ವೈಯಕ್ತಿಕ ದ್ವೇಷದಿಂದಾಗಿಯೇ 2015ರಲ್ಲಿ 48 ಕೊಲೆ ಹಾಗೂ 59 ಕೊಲೆ ಯತ್ನ ಪ್ರಕರಣಗಳು ದಾಖಲಾಗಿವೆ. 2016ರಲ್ಲಿ 50 ಕೊಲೆ ಹಾಗೂ 84 ಕೊಲೆ ಯತ್ನ ಪ್ರಕರಣ ನಡೆದಿವೆ. ಮೋಸ ವಂಚನೆಯ ಪ್ರಕರಣಗಳು 108ರಿಂದ 60ಕ್ಕೆ ಇಳಿದಿವೆ.
 
ಜಿಲ್ಲಾ ಕೇಂದ್ರದಲ್ಲಿರುವ ನ್ಯೂಟೌನ್‌ ಠಾಣೆಯು ವಿಶಾಲ ವ್ಯಾಪ್ತಿಯನ್ನು ಹೊಂದಿದೆ. ಈ ಠಾಣೆಗೆ ಕೆಲವು ಗ್ರಾಮೀಣ ಪ್ರದೇಶ, ಕೈಗಾರಿಕೆ ಅಭಿವೃದ್ಧಿ ಪ್ರದೇಶವನ್ನೂ ಸೇರಿಸಲಾಗಿದೆ. ನೌಬಾದ್, ಪ್ರತಾಪನಗರ, ಶಿವನಗರ, ಗುರುನಗರ, ಬ್ಯಾಂಕ್‌ ಕಾಲೊನಿ, ಜ್ಯೋತಿ ಕಾಲೊನಿ, ನಂದಿ ಕಾಲೊನಿ, ಲಾಡಗೇರಿ, ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಆಸ್ಪತ್ರೆ, ಅಂಬೇಡ್ಕರ್‌ ವೃತ್ತವು ನ್ಯೂ ಟೌನ್‌ ಠಾಣೆಯ ವ್ಯಾಪ್ತಿಯಲ್ಲಿವೆ. 
 
ಜಿಲ್ಲಾಧಿಕಾರಿ ಕಚೇರಿ ಆವರಣ, ಡಾ.ಅಂಬೇಡ್ಕರ್‌ ವೃತ್ತದಲ್ಲಿ ನಿತ್ಯ ಅನೇಕ ಪ್ರತಿಭಟನೆಗಳು ನಡೆಯುತ್ತವೆ. ಮಾಜಿ ಮುಖ್ಯಮಂತ್ರಿ, ಸಂಸದರು, ಮಾಜಿ ಶಾಸಕರ ಮನೆಗಳು ನ್ಯೂಟೌನ್‌ ಠಾಣೆಯ ವ್ಯಾಪ್ತಿಯಲ್ಲಿಯೇ ಇವೆ. ಆದರೆ ಈ ಠಾಣೆಯಲ್ಲಿ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಹುದ್ದೆ ಖಾಲಿ ಇದೆ. ಕಾನ್‌ಸ್ಟೆಬಲ್‌ಗಳ ಸಂಖ್ಯೆಯೂ ಕಡಿಮೆ ಇದೆ. ಕೆಲಸದ ಒತ್ತಡದಿಂದಾಗಿ ಈ ಠಾಣೆಗೆ ಪಿಎಸ್‌ಐಗಳು ವರ್ಗವಾಗಿ ಬರಲು ಹಿಂಜರಿಯುತ್ತಿದ್ದಾರೆ. ಪೊಲೀಸ್‌ ಅಧಿಕಾರಿಗಳ ಕೊರತೆಯಿಂದಾಗಿ ತನಿಖಾ ಕಾರ್ಯಗಳು ವಿಳಂಬವಾಗುತ್ತಿವೆ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಪೊಲೀಸ್‌ ಅಧಿಕಾರಿಗಳು.
 
ಜಿಲ್ಲೆಯಲ್ಲಿ ಅನೇಕ ಪಿಎಸ್‌ಐ ಹುದ್ದೆಗಳು ಖಾಲಿ ಇವೆ. ಖಾಲಿ ಹುದ್ದೆಗಳಿಗೆ ನಿಯೋಜನೆ ಮಾಡುವಂತೆ ಉನ್ನತ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಪ್ರಮುಖ ಪ್ರಕರಣಗಳ ತನಿಖೆ ಹಾಗೂ ವಿಚಾರಣೆಗಳು ಮುಂದುವರಿದಿವೆ. ಕೆಲಸದ ಒತ್ತಡದ ಮಧ್ಯೆಯೂ ಪೊಲೀಸ್‌ ಅಧಿಕಾರಿಗಳು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರಕಾಶ ನಿಕಮ್‌ ಹೇಳುತ್ತಾರೆ.
 
ಭಾಲ್ಕಿ ದರೋಡೆ ಪ್ರಕರಣಗಳ ತನಿಖೆಯನ್ನು ತೀವ್ರಗೊಳಿಸಲಾಗಿದೆ. ಆರೋಪಿಗಳ ಬಂಧನಕ್ಕೆ ಎರಡು ತಂಡಗಳನ್ನು ರಚಿಸಲಾಗಿದೆ. ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಲು ಬೆಳಗಿನ ಜಾವ ಗಸ್ತು ಆರಂಭಿಸಲಾಗಿದೆ ಎನ್ನುತ್ತಾರೆ ಅವರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT