ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಹಿತಿ ನೀಡದಿದ್ದರೆ ಪಿಡಿಒಗಳೇ ಹೊಣೆ

ಕುಡಿವ ನೀರಿನ ಲಭ್ಯತೆ ಪೂರ್ವಭಾವಿ ಸಭೆಯಲ್ಲಿ ವಸಂತರಾವ ಕುಲಕರ್ಣಿ ಖಡಕ್ ಎಚ್ಚರಿಕೆ
Last Updated 16 ಫೆಬ್ರುವರಿ 2017, 7:12 IST
ಅಕ್ಷರ ಗಾತ್ರ
ಯಾದಗಿರಿ: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಾವ ಗ್ರಾಮಗಳಲ್ಲಿ ಕುಡಿ ಯುವ ನೀರಿನ ಅಭಾವ ಇದೆ ಈಗಲೇ ಹೇಳಿಬಿಡಿ... ಇರುವ ಜಲಮೂಲಗಳ ಸ್ಥಿತಿ ಏನಾಗಿದೆ ಸಮರ್ಪಕ ಮಾಹಿತಿ ಒದಗಿಸಿ... ಬೇಸಿಗೆಯಲ್ಲಿ ಕುಡಿಯುವ ನೀರಿಲ್ಲ ಎಂದು ಜನರು ದೂರು ತಂದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ...
 
ಇಲ್ಲಿನ ನೂತನ ಜಿಲ್ಲಾಡಳಿತ ಭವನದಲ್ಲಿ ಬುಧವಾರ ನಡೆದ ಬೇಸಿಗೆ ಪೂರ್ವ ಯಾದಗಿರಿ ತಾಲ್ಲೂಕು ಮಟ್ಟದ ವಿವಿಧ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಅಭಿವೃದ್ಧಿ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಪಿಡಿಒಗಳಿಗೆ ಹೀಗೆ ಬಿಸಿ ಮುಟ್ಟಿಸಿದರು.
 
ಜಿಲ್ಲೆಯ ಶಹಾಪುರ, ಸುರ ಪುರಕ್ಕಿಂತಲೂ ಯಾದಗಿರಿ ತಾಲ್ಲೂಕಿನಲ್ಲಿ ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರಿನ ಅಭಾವ ಹೆಚ್ಚಿರುತ್ತದೆ. ಆದರೆ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಜಿಲ್ಲಾಡಳಿತಕ್ಕೆ ಸಮರ್ಪಕ ಮಾಹಿತಿ ನೀಡದೇ ಇರುವುದರಿಂದ ಗ್ರಾಮೀಣ ಭಾಗದ ಜನರಿಗೆ ನೀರಿನ ಬವಣೆ ಎದುರಾಗುತ್ತಿದೆ. ಸಭೆ ನಡೆಸಿದಾಗ ಅಭಾವ ಇಲ್ಲ ಎಂಬುದಾಗಿ ತಿಳಿದು ಬಂದಿರುತ್ತದೆ. ಆದರೆ, ಬೇಸಿಗೆ ಆರಂಭದಲ್ಲೇ ಕುಡಿಯುವ ನೀರಿಗಾಗಿ ಜನ ಬೀದಿಗಿಳಿದಿರುತ್ತಾರೆ. ಇಂಥ ಪರಿಸ್ಥಿತಿಗೆ ಅಧಿಕಾರಿಗಳೇ ನೇರ ಹೊಣೆಗಾರರು ಎಂದು ಅವರು ಪಿಡಿಒಗೆ ತರಾಟೆ ತೆಗೆದುಕೊಂಡರು.
 
ತಾಲ್ಲೂಕಿನ ಚಪೆಟ್ಲಾ ಗ್ರಾಮದಲ್ಲಿ ಪ್ರತಿಬಾರಿ ಬೇಸಿಗೆಯಲ್ಲಿ ನೀರಿನ ಅಭಾವ ಎದುರಾಗುತ್ತಿದೆ. ಅಲ್ಲಿನ ಪರಿಸ್ಥಿತಿ ಬಗ್ಗೆ ಅಧಿಕಾರಿಗಳು ಸಮರ್ಪಕವಾಗಿ ಮಾಹಿತಿ ನೀಡದೇ ಇರುವುದರಿಂದ ನದಿಹೊಂಡದ ತಾಂಡಾ, ಇಂದ್ರ ನಗರದ ಗ್ರಾಮಗಳಲ್ಲೂ ಇಂಥ ಸಮಸ್ಯೆ ಸೃಷ್ಟಿಗೆ ಕಾರಣವಾಗುತ್ತಿದೆ ಎಂದು ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
 
ಚಪೆಟ್ಲಾ ಪಿಡಿಒ ಗ್ರಾಮದಲ್ಲಿರುವ ಕೊಳವೆ ಬಾವಿ, ತೆರೆದ ಬಾವಿ, ವಾಟರ್‌ ಟ್ಯಾಂಕ್‌, ಪೈಪ್‌ಲೈನ್‌ ಬಗ್ಗೆ ಮಾಹಿತಿ ಇಲ್ಲದೇ ಅಸಂಬದ್ಧ ಮಾಹಿತಿ ನೀಡಿದ್ದರಿಂದ ಹೆಚ್ಚುವರಿ ಜಿಲ್ಲಾಧಿಕಾರಿ ಕೂಡ ಅಧಿಕಾರಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಸಮಗ್ರ ಮಾಹಿತಿ ನೀಡುವಂತೆ ತಾಕೀತು ಮಾಡಿದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರಾಣೇಶ್ ಅವರಿಗೆ ಚಪೆಟ್ಲಾ, ಬುರುಜನ ತಾಂಡಾ, ಕಂದಕೂರ, ರಾಮಸಮುದ್ರ, ಇಂದ್ರ ನಗರ ಗ್ರಾಮಕ್ಕೆ ಭೇಟಿ ನೀಡಿ ಕುಡಿಯುವ ನೀರಿನ ಸೌಲಭ್ಯದ ಬಗ್ಗೆ ವರದಿ ನೀಡುವಂತೆ ಸೂಚಿಸಲಾಯಿತು.
 
ಜಿಲ್ಲಾ ಪಂಚಾಯಿತಿ ಮತ್ತು ಜಿಲ್ಲಾಡಳಿತಕುಡಿಯುವ ನೀರಿಗಾಗಿಯೇ ಹೆಚ್ಚಿನ ಆದ್ಯತೆ ನೀಡಿದೆ. ಹಣದ ಕೊರತೆ ಇಲ್ಲ. ನಮಗಿರುವುದು ನಿಮ್ಮ ಮಾಹಿತಿ ಕೊರತೆ. ಪೂರ್ವಭಾವಿಯಾಗಿಯೇ ನೀರಿನ ಅಭಾವದ ಬಗ್ಗೆ ಪಿಡಿಒಗಳು ಅರಿತಿರಬೇಕು ಎಂದು ಸತೀಶ್‌ ಸಲಹೆ ನೀಡಿದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಾಷು ರಾಥೋಡ, ಜಿಲ್ಲಾ ಪಂಚಾಯಿತಿ ಎಇಇ ಮಲ್ಲಿಕಾರ್ಜುನಪ್ಪ, ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ ಇತರರು ಹಾಜರಿದ್ದರು.
 
ಖಾಸಗಿ ಒಡೆತನದ ಜಲಮೂಲ ವಶಕ್ಕೆ ಸಿ.ಎಂ. ಆದೇಶ

ಯಾದಗಿರಿ: ಬೇಸಿಗೆಯಲ್ಲಿಕುಡಿಯುವ ನೀರಿನ ತೀವ್ರ ಅಭಾವ ಇರುವ ಗ್ರಾಮಗಳಲ್ಲಿ ಸರ್ಕಾರದ ಒಡೆದತನದ ಜಲಮೂಲದಲ್ಲಿ ನೀರಿನ ಸೌಲಭ್ಯ ದೊರಕದಿದ್ದರೆ ಖಾಸಗಿ ಒಡೆತನದಲ್ಲಿನ ಜಲಮೂಲವನ್ನು ವಶಕ್ಕೆ ಪಡೆದು ಸಾರ್ವಜನಿಕರಿಗೆ ನೀರು ಪೂರೈಕೆ  ಮಾಡುವಂತೆ ಮುಖ್ಯಮಂತ್ರಿ ಎಸ್.ಸಿದ್ದರಾಮಯ್ಯ ಆದೇಶಿಸಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ತಿಳಿಸಿದರು.

ಮೊದಲು ಖಾಸಗಿ ಒಡೆತನದಲ್ಲಿರುವ ಜಲಮೂಲ ಜನರ ದಾಹ ನೀಗಿಸಲು ನೀಡುವಂತೆ ಮನವೊಲಿಸಬೇಕು. ಪರಿಸ್ಥಿತಿ ಬಿಗಡಾಯಿಸಿರುವ ಸಂದರ್ಭದಲ್ಲಿ ಖಾಸಗಿಯವರ ಜಲಮೂಲವನ್ನು ಬಲವಂತವಾಗಿ ಜಿಲ್ಲಾಡಳಿತ ವಶಕ್ಕೆ ಪಡೆಯಲಿದೆ. ಇದಕ್ಕೆ ಸರ್ಕಾರದ ಆದೇಶ, ಬೆಂಬಲ ಕೂಡ ಇದೆ. ಹಾಗಾಗಿ, ನೀರಿನ ಹಾಹಾಕಾರ ಇರುವ ಗ್ರಾಮಗಳಲ್ಲಿ ಸ್ವಪ್ರೇರಣೆಯಿಂದ ಜಲಮೂಲ ಒಪ್ಪಿಸುವ ಮಾಲೀಕರಿಗೆ ಪ್ರತಿ ತಿಂಗಳು ₹10 ಸಾವಿರ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.

ಒಂದು ವೇಳೆ ಸರ್ಕಾರ ಹಾಗೂ ಖಾಸಗಿಯವರಲ್ಲಿ ಜಲಮೂಲ ಇಲ್ಲದ ಸಂದರ್ಭ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆಗೆ ಕ್ರಮಕೈಗೊಳ್ಳಬೇಕು ಎಂದು ಅವರು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT