ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೂಗುಗತ್ತಿ ಮೇಲೆ ಕಲಾವಿದರ ಬದುಕು!

ಪರದೆ ಹಿಂದಿನ ತೊಗಲು ಗೊಂಬೆ ಕಲಾವಿದರದು ಸಂಕಷ್ಟ ಜೀವನ
Last Updated 16 ಫೆಬ್ರುವರಿ 2017, 8:44 IST
ಅಕ್ಷರ ಗಾತ್ರ
ಚಿಕ್ಕಮಗಳೂರು: ‘ಪ್ರಾಣಿಗಳ ಚರ್ಮ ಹದಗೊಳಿಸಿ ಬಣ್ಣ, ಬಣ್ಣದ ಆಕೃತಿಯ ಚಕ್ಕಳದ ಗೊಂಬೆಗಳನ್ನು ತಯಾರಿಸುತ್ತೇವೆ. ಅಪರೂಪಕ್ಕೆ ಅವಕಾಶ ಸಿಕ್ಕಾಗ ಬಿಳಿ ಪರದೆ ಮೇಲೆ ರಾಮಾಯಣ, ಮಹಾ ಭಾರತದ ಆಯ್ದ ಭಾಗಗಳು ಹಾಗೂ ಸರ್ಕಾರದ ನೂತನ ಯೋಜನೆಗಳ ಬಗ್ಗೆ ಜನತೆಗೆ ಅರಿವು ಮೂಡಿಸುವ ಕಥೆ ಸಾದರಪಡಿಸುತ್ತೇವೆ. ಪರದೆ ಹಿಂದಿನ ನಮ್ಮ ಸಮುದಾಯದ ಬದುಕು ಮತ್ತು ಕಲೆಯ ಬಣ್ಣ ಮಾಸಿದೆ’ 
 
ಇದು ತಾಲ್ಲೂಕಿನ ಅಂಬಳೆ ಗ್ರಾಮದ ತೊಗಲು ಗೊಂಬೆಯಾಟದ ಕಲಾವಿದ ದೇವರಾಜ್‌ ಅವರ ನೋವಿನ ನುಡಿ.
 
‘ನಮ್ಮದು ಸಿಳ್ಳೆಕ್ಯಾತೆ ಜನಾಂಗ. ತೊಗಲು ಗೊಂಬೆಯಾಟಕ್ಕೆ ಸುಮಾರು 3 ಸಾವಿರ ವರ್ಷಗಳ ಇತಿಹಾಸವಿದೆ. ನಮ್ಮ ಪೂರ್ವಜರ ಕಾಲದಿಂದಲೂ ಬೊಂಬೆ ನಾಟಕವೇ ಬದುಕಿಗೆ ಆಸರೆ. ಮೂಲ ವೃತ್ತಿ ಉಳಿಸಿ ಬೆಳೆಸುವ ಉದ್ದೇಶದಿಂದ ಪೂರ್ವಜರು ಪ್ರತಿ ಹಳ್ಳಿಗಳಿಗಳಲ್ಲಿ ಗೊಂಬೆ ನಾಟಕ ಪ್ರದರ್ಶಿಸುತ್ತಿದ್ದರು.
 
ತೊಗಲು ಗೊಂಬೆ ಕುಣಿತಕ್ಕೆ ಪರದೆ ಬೆಳಕಿಗೆ ಬಳಪದ ಕಲ್ಲಿನಿಂದ ನಿರ್ಮಿಸಿದ್ದ ಅರಳೆಣ್ಣೆ ದೀಪ ಬಳಸುತ್ತಿದ್ದರು. ಅವರದು ಒಂದು ರೀತಿಯ ಅಲೆಮಾರಿ ಜೀವನವಾಗಿತ್ತು. ಬೆಳಿಗ್ಗೆ ಗ್ರಾಮದ ಪ್ರತಿ ಮನೆಯಿಂದ ನೀಡುತ್ತಿದ್ದ ದವಸ, ಧಾನ್ಯ ಸಂಗ್ರಹಿಸಿ ಜೀವನ ನಡೆಸುತ್ತಿದ್ದರು. ದಿನ ಕಳೆದಂತೆ ಸಿನಿಮಾ, ದೂರದರ್ಶನ, ರೇಡಿಯೋ, ಮೊಬೈಲ್‌, ಇಂಟರ್‌ನೆಟ್‌ ಬಳಕೆಯಿಂದ ಗೊಂಬೆ ನಾಟಕ ಹಾಗೂ ಕಲಾವಿದರು ಮೂಲೆ ಗುಂಪಾಗಿದ್ದಾರೆ’ ಎನ್ನುತ್ತಾರೆ ಅವರು.  
 
ಸರ್ಕಾರ ವಾರ್ತಾ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಆರೋಗ್ಯ ಇಲಾಖೆಗಳ ಮೂಲಕ ಸಾರ್ವಜನಿಕರಿಗೆ ಮದ್ಯಪಾನದ ದುಷ್ಪರಿ ಣಾಮ, ಎಚ್‌ಐವಿ, ಅನ್ನಭಾಗ್ಯ ಮಹತ್ವ, ಉದ್ಯೋಗ ಖಾತರಿ, ನಾಡು, ನುಡಿ ಸಂಸ್ಕೃತಿ ಅರಿವು ಮೂಡಿಸಲು  ಕೆಲವು ಗ್ರಾಮಗಳಲ್ಲಿ ಗೊಂಬೆ ಪ್ರದರ್ಶಿಸುತ್ತೇವೆ. ಸಹ ಕಲಾವಿದರು ಸೇರಿದಂತೆ 5 ಜನರ ತಂಡ ಬೊಂಬೆ ಪ್ರದರ್ಶನ ನೀಡುತ್ತಿ ದ್ದೇವೆ. ಒಂದು ಪ್ರದರ್ಶನಕ್ಕೆ ₹3ಸಾವಿರ  ಗೌರವ ಧನ ನೀಡುತ್ತಾರೆ ಎಂದು ವಿವರಿಸಿದರು.
 
ಪಾತ್ರದ ಬೊಂಬೆಗಳನ್ನು ಆಡಿನ ಚರ್ಮದಿಂದ ತಯಾರಿಸುತ್ತೇವೆ. 3 ದಿನಗಳು ಬಿಸಿಲಿನಲ್ಲಿ ಒಣಗಿಸಿ ಸ್ವಚ್ಛಗೊಳಿಸಿ ಅದರ ಮೇಲೆ ಪಾತ್ರದ ಚಿತ್ರ ಬರೆದು ಆಕಾರಕ್ಕೆ ತಕ್ಕಂತೆ ಕತ್ತರಿಸುತ್ತೇವೆ. ಬಣ್ಣದ ಲೇಪನ, ಕಿರೀಟ, ರಥದ ಚಕ್ರ, ಸೀರೆ ಅಂಚು ಹೀಗೆ ಸೂಕ್ಷ್ಮ ಕುಸುರಿ ಕೆಲಸಕ್ಕೆ ಅಧಿಕ ಸಮಯ ಹಾಗೂ ಹಣ ಬೇಕಾಗುತ್ತದೆ ಎನ್ನುತ್ತಾರೆ ದೇವರಾಜ್‌. 
 
ರಾಜ್ಯದ ಇನ್ನಿತರೆ ಪ್ರದೇಶಗಳಿಗೆ ಹೋಲಿಸಿದರೆ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಗೊಂಬೆ ಕುಣಿತ ಕಡಿಮೆ. ರಾಜ್ಯದಲ್ಲಿ ಹಾಸನ, ಬಳ್ಳಾರಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮೂಲವೃತ್ತಿ ಅನುಸರಿಸುವ ಸಿಳ್ಳೇಕ್ಯಾತ ಜನಾಂಗವಿದೆ. ದಿನ ಕಳೆದಂತೆ  ಜನಾಂಗ ದಲ್ಲೆ ತಮ್ಮ ಮಕ್ಕಳಿಗೆ ಮೂಲವೃತ್ತಿ ಕಲಿಸಲು ಆಸಕ್ತಿ ವಹಿಸುತ್ತಿಲ್ಲ. ಸರ್ಕಾರ ನೂತನ ಯೋಜನೆ ಪರಿಚಯಿಸಲು ಗೊಂಬೆ ನಾಟಕವನ್ನು ಮಾಧ್ಯಮವಾಗಿ ಬಳಸಿಕೊಳ್ಳುತ್ತಿದೆ. ಇಷ್ಟಾದರೂ ಬಿಡು ವಿನ ಸಮಯದಲ್ಲಿ ಕೈಯಲ್ಲಿ ಕಲೆಯಿ ದ್ದರೂ ಕೈಕಟ್ಟಿ ಕೂರುವ ಸ್ಥಿತಿ ಇದೆ ಎಂದು ಹತಾಶೆ ವ್ಯಕ್ತಪಡಿಸುತ್ತಾರೆ ಅವರು.
 
‘ನಮ್ಮ ಪೂರ್ವಜರು ಯಾವುದೇ ಆಸ್ತಿ ಸಂಪಾದಿಸಲಿಲ್ಲ. ಕಲೆ ಬೆಳೆಸುವ ಉದ್ದೇಶದಿಂದ ಯಾವುದೇ ಪ್ರತಿಫಲವಿಲ್ಲದೆ ಅಲೆಮಾರಿಗಳಂತೆ ಊರೂರು ಅಲೆದರು. ಗೊಂಬೆ ಕುಣಿಸುವಲ್ಲೇ ಜೀವನದ ಸಾರ್ಥಕತೆ ಕಂಡರು. ಜಿಲ್ಲೆಯ ಸಿಳ್ಳೇ ಕ್ಯಾತ ಸಮುದಾಯ ಗುರುತಿಸಿ,  ಜಿಲ್ಲಾಡಳಿತ ಜಮೀನು ಕೊಡಬೇಕು’ ಎನ್ನುವುದು ದೇವರಾಜ್‌ ಬೇಡಿಕೆ.
 
* ಮೂಲವೃತ್ತಿ  ನಂಬಿರುವ ನಮಗೆ ತುಂಡು ಭೂಮಿ ಇಲ್ಲ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಆಗುತ್ತಿಲ್ಲ. ಸರ್ಕಾರ ಗೊಂಬೆ ನಾಟಕ ಪ್ರದರ್ಶನಕ್ಕೆ  ಉತ್ತೇಜನ ನೀಡಬೇಕು
- ದೇವರಾಜ್‌, ತೊಗಲುಗೊಂಬೆ  ಕಲಾವಿದ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT