ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಾನ ಅಭಿವೃದ್ಧಿ: ಪಟ್ಟಿಯಲ್ಲಿ ಬದಲಿಲ್ಲ

ನಗರಸಭೆ ಸಾಮಾನ್ಯಸಭೆಗೆ ಅಧಿಕಾರಿಗಳ ಗೈರು: ಅಧ್ಯಕ್ಷರ ವಿರುದ್ಧ ಟೀಕೆ
Last Updated 16 ಫೆಬ್ರುವರಿ 2017, 9:04 IST
ಅಕ್ಷರ ಗಾತ್ರ
ಮಂಡ್ಯ:  ಅಮೃತ ಯೋಜನೆಯಡಿ ಈ ಹಿಂದೆ ಶಿಫಾರಸು ಮಾಡಿದ್ದ ಉದ್ಯಾನ ಗಳ ಪಟ್ಟಿಯನ್ನೇ ಕಳುಹಿಸಬೇಕು. ಯಾವುದೆ ಬದಲಾವಣೆ ಮಾಡಬಾರದು ಎಂದು ಬುಧವಾರ ನಡೆದ ನಗರಸಭೆ ಮುಂದುವರಿದ ಸಾಮಾನ್ಯಸಭೆಯಲ್ಲಿ ಬಹುತೇಕ ಸದಸ್ಯರು ಒತ್ತಾಯಿಸಿದರು.
 
ಇದಕ್ಕೆ ಸಮ್ಮತಿಸಿದ ಅಧ್ಯಕ್ಷ ಹೊಸಹಳ್ಳಿ ಬೋರೇಗೌಡ, ಹಿಂದಿನ ಪಟ್ಟಿಯಂತೆಯೇ ಎರಡೂ ಉದ್ಯಾನಗಳ ಹೆಸರನ್ನು ಕಳುಹಿಸಿಕೊಡಿ ಎಂದು ಸೂಚಿಸಿದರು.
 
ಸದಸ್ಯ ಮಹೇಶ್‌ ಮಾತನಾಡಿ, ‘ನನ್ನ ವಾರ್ಡ್‌ ವ್ಯಾಪ್ತಿಯ ಉದ್ಯಾನವನ್ನು ಕೈಬಿಟ್ಟಿದ್ದು, ಏಕೆ?. ಎರಡು ವರ್ಷಗಳಿಂದ ಇದಕ್ಕೆ ಪ್ರಯತ್ನಿಸುತ್ತಿದ್ದೇನೆ. ಯಾರೋ ಹೇಳಿದರು ಎಂದು ಕೈಬಿಟ್ಟಿರುವುದು ಸರಿಯಲ್ಲ. ಉದ್ಯಾನ ಅಬಿವೃದ್ಧಿ ಮಾಡದಿದ್ದರೆ ಸದಸ್ಯರಾಗಿ ಏನು ಪ್ರಯೋಜನ’ ಎಂದು ಪ್ರಶ್ನಿಸಿದರು.
 
ಆಯುಕ್ತ ನರಸಿಂಹಮೂರ್ತಿ ಮಾತನಾಡಿ, ಮುಖ್ಯರಸ್ತೆ ಬದಿಯ ಒಂದು ಉದ್ಯಾನವನ್ನು ಮಾತ್ರ ಸಮಗ್ರ ಅಭಿವೃದ್ಧಿ ಮಾಡುವಂತೆ ಸೂಚಿಸಿದ್ದರು. ಅದಕ್ಕೆ ಒಂದನ್ನು ಕೈಬಿಡಲಾಗಿದೆ. ವಿಳಂಬವಾದರೆ ತಿರಸ್ಕೃತವಾಗುತ್ತದೆ ಎಂದರು.
 
ಅದಕ್ಕೆ ಮಹೇಶ್‌ ಪ್ರತಿಕ್ರಿಯಿಸಿ, ‘ನೀವು ನಮ್ಮ ಉದ್ಯಾನವನ್ನು ಪಟ್ಟಿಯಲ್ಲಿ ಸೇರಿಸಿ,  ನಾನು ಸಚಿವರನ್ನೋ, ಮುಖ್ಯಮಂತ್ರಿ ಅವರನ್ನೋ ಹಿಡಿದು ಕೆಲಸ ಮಾಡಿಸಿಕೊಂಡು ಬರುತ್ತೇನೆ’ ಎಂದು ಹೇಳಿದರು. ಸದಸ್ಯ ಕೆರಗೋಡು ಸೋಮಶೇಖರ್‌ ಮಾತನಾಡಿ, ‘ಮುಖ್ಯರಸ್ತೆ ಪಕ್ಕದ್ದು ಅಭಿವೃದ್ಧಿ ಮಾಡಬೇಕು ಎಂಬ ನಿಯಮ ಇದೆಯೇ’ ಎಂದು ಪ್ರಶ್ನಿಸಿದರು.
 
‘ಹಾಗೆ ನಿಯಮವೇನಿಲ್ಲ. ಸಲಹೆ ಮೇರೆಗೆ ಹಾಗೆ ಮಾಡಲಾಗಿತ್ತು’ ಎಂದು ಅಧಿಕಾರಿಗಳು ಉತ್ತರಿಸಿದರು. ಮಹೇಶ್‌ ಮಾತನಾಡಿ, ಹಾಗಿದ್ದಮೇಲೆ ನಮ್ಮ ಉದ್ಯಾನವನ್ನೂ ಸೇರಿಸಿ. ಹೊಸ ಪಟ್ಟಿ ಬದಲಾಗಿ ಹಳೆಯದನ್ನೇ ಕಳುಹಿಸುವಂತೆ ಮನವಿ ಮಾಡುವ ಮೂಲಕ ಚರ್ಚೆಗೆ ತೆರೆ ಎಳೆದರು.
 
ಹೊಸ ವಿಷಯ ಚರ್ಚೆ, ಅಧಿಕಾರಿಗಳ ಗೈರು: ಮುಂದುವರಿದ ಸಭೆಯಾಗಿರುವುದರಿಂದ ಹೊಸ ವಿಷಯಗಳನ್ನು ಚರ್ಚಿಸಬಹುದೇ?. ಆಡಿಟ್‌ ವರದಿಯ ಮೇಲೆ ಚರ್ಚೆಗೆ ವಿಶೇಷ ಸಭೆ ಕರೆಯಲು ನಿರ್ಧರಿಸಲಾಗಿತ್ತು. ಏಕೆ ಕರೆದಿಲ್ಲ ಎಂದು ಸದಸ್ಯ ಸಿದ್ದರಾಜು ಪ್ರಶ್ನಿಸಿದರು.
ಆಯಕ್ತ ನರಸಿಂಹಮೂರ್ತಿ ಮಾತನಾಡಿ, ಅಧ್ಯಕ್ಷರ ಅನುಮತಿ ಮೇರೆಗೆ ಚರ್ಚಿಸಬಹುದು ಎಂದರು.
 
ಅದಕ್ಕೆ ಸಿದ್ದರಾಜು, ಹಾಗೆ ಹೊಸದಾಗಿ ಸೇರ್ಪಡೆಗೊಳಿಸಲು ಸಾಧ್ಯವಿಲ್ಲ ಎಂದರು. ಅಶೋಕ ನಗರದಲ್ಲಿಯ ಕಟ್ಟಡಗಳ ಬಗ್ಗೆ ಮಾಹಿತಿ ಕೇಳಿದ್ದೆ. ಇಲ್ಲಿಯವರೆಗೆ ಏಕೆ ನೀಡಿಲ್ಲ ಎಂದು ಪ್ರಶ್ನಿಸಿದರು.ಸದಸ್ಯ ಮಹೇಶ್‌ ಮಾತನಾಡಿ, ವಾಣಿಜ್ಯ ಕಟ್ಟಡಗಳಿಗೆ ಅನುಮತಿ ನೀಡುವಾಗ ಶೌಚಾಲಯ ನಿರ್ಮಿಸಿ ಕೊಳ್ಳುವಂತೆ ಕಡ್ಡಾಯವಾಗಿ ಸೂಚಿಸಬೇಕು ಎಂದರು.
 
ಸದಸ್ಯ ಅರುಣಕುಮಾರ್‌ ಮಾತನಾಡಿ, ಒಂದೇ ಒಂದು ಕೆಲಸ ಆಗುತ್ತಿಲ್ಲ. ನೀವು ಆಯುಕ್ತರಾದ ಮೇಲೆ ಕೆಲಸ ಪೂರ್ಣಗೊಳಿಸಿದ ವಿವರ ನೀಡಿ ಎಂದರು.ಸದಸ್ಯ ಕೆ.ಸಿ.ರವೀಂದ್ರ ಮಾತನಾಡಿ, ಅಧಿಕಾರಿಗಳಿಲ್ಲ. ಸಭೆಯನ್ನು ಮುಂದೂ ಡಬೇಕು ಎಂದರು. ಇದಕ್ಕೆ ಸದಸ್ಯರಾದ ಕೆರಗೋಡು ಸೋಮಶೇಖರ್‌, ಸಿದ್ದರಾಜು ಧ್ವನಿಗೂಡಿಸಿದರು. 
 
ಸಭೆ ಮುಂದೂಡಲು ಅಧ್ಯಕ್ಷರು ನಿರಾಕರಿಸಿದ್ದರಿಂದ ಸಿಟ್ಟಿಗೆದ್ದ ಸದಸ್ಯ ಸಿದ್ದರಾಜು ಅವರು, ಈ ಬಗ್ಗೆ ಜಿಲ್ಲಾಧಿಕಾರಿಗೆ ದೂರು ನೀಡುವುದಾಗಿ ಸಭೆಯಿಂದ ಹೊರ ನಡೆದರು. ಉಪಾಧ್ಯಕ್ಷೆ ಸುಜಾತಾಮಣಿ, ಸ್ಥಾಯಿ ಸಮಿತಿ ಅಧ್ಯಕ್ಷ ಶಿವಪ್ರಕಾಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT